ಎಫ್‌ಡಿಐ ನೀತಿಯ ಸಡಿಲಿಕೆಯ ಮುನ್ಸೂಚನೆ ನೀಡಿದ ಪ್ರಧಾನಿ ಮೋದಿ
ನವದೆಹಲಿ, ಜುಲೈ 22: ಕೊವಿಡ್ 19 ರೋಗದ ನಡುವೆಯೂ ಭಾರತ 20 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಿದೆ.
ಭವಿಷ್ಯದಲ್ಲಿ ಭಾರತವು ಇನ್ನಷ್ಟು ಬಂಡವಾಳ ಹೂಡಿಕೆಗೆ ನೀತಿಯನ್ನು ಸಡಿಲಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತ-ಅಮೆರಿಕ ಉದ್ದಿಮೆ ಮಂಡಳಿಯ 45 ಶೃಂಗವನ್ನುದ್ದೇಶಿಸಿ ಮಾತನಾಡಿರುವ ಮೋದಿ, ಕೊರೊನಾ ಸೋಂಕು ನಮ್ಮ ಇತಿ ಮಿತಿಯನ್ನು ತೋರಿಸಿಕೊಟ್ಟಿದೆ.
ಪ್ರಾದೇಶಿಕ ಉತ್ಪಾದನೆ ಅಗತ್ಯತೆಯನ್ನು ಸಾರಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಉತ್ಪಾದನೆ ಅತ್ಯಗತ್ಯ. ಹೀಗಾಗಿ ಭಾರತ ಸರ್ಕಾರ ಆತ್ಮ ನಿರ್ಭರ ಯೋಜನೆಯನ್ನು ಆರಂಭಿಸಿದೆ.
ಇದಲ್ಲದೆ ಈಗಾಗಲೇ ವಿಮಾ ಕ್ಷೇತ್ರದಲ್ಲಿನ ಎಫ್‌ಡಿಐ ನೀತಿಯನ್ನು ಸಂಪೂರ್ಣ ತೆಗೆದುಹಾಕಲಾಗಿದೆ. ರಕ್ಷಣಾ ಕ್ಷೇತ್ರದಲ್ಲೂ ಶೇ.74ರವರೆಗೆ ಏರಿಸುವ ಬಗ್ಗೆ ಕಾರ್ಯಗಳು ನಡೆಯುತ್ತಿವೆ.
ಹೀಗಾಗಿ ಹೂಡಿಕೆದಾರರಿಗೆ ಭಾರತವು ಪ್ರಾಶಸ್ತ್ಯದ ಜಾಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಮೋದಿ ಭಾಷಣದ ಪ್ರಮುಖಾಂಶಗಳು
-ಕೊವಿಡ್ 19 ಜಾಗತಿಕ ಶಾಕ್‌ನಿಂದ ನಾವು ಹೊರಬರಬೇಕಿದೆ. ಈ ಆತಂಕದ ನಡುವೆಯೂ ಉಜ್ವಲ ಭವಿಷ್ಯದ ಬಗ್ಗೆ ಚಿಂತನೆ ನಡೆಯಬೇಕಿದೆ. ಮಾನವ ಕೇಂದ್ರಿತ ಭವಿಷ್ಯ ನಿರ್ಮಾಣದ ಬಗ್ಗೆ ಗಮನಹರಿಸಬೇಕಿದೆ.
-ಜಾಗತಿಕ , ಆರ್ಥಿಕ, ಸಮಸ್ಯೆಗೆ ಪ್ರಾದೇಶಿಕ ಆರ್ಥಿಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ
-ಸ್ಥಳೀಯ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಬೇಕಿದೆ, ಹೀಗಾಗಿ ಭಾರತದಲ್ಲಿ ಆತ್ಮ ನಿರ್ಭರ ಯೋಜನೆ ಜಾರಿಗೊಳಿಸಲಾಗಿದೆ. ವಿಶ್ವದೆಲ್ಲೆಡೆಯಿಂದ ಉದ್ಯಮಿಗಳನ್ನು ಆಹ್ವಾನಿಸಲಾಗುತ್ತಿದೆ.
-ಕಳೆದ 6 ವರ್ಷಗಳಲ್ಲಿ ನಮ್ಮ ಸರ್ಕಾರ ಆರ್ಥಿಕ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಮತ್ತಷ್ಟು ಸ್ಪರ್ಧಾತ್ಮಕತೆಯ ಜೊತೆಗೆ ಪಾರದರ್ಶಕತೆಯೂ ಜಾರಿಗೆ ಬಂದಿದೆ. ಸರ್ಕಾರದ ನೀತಿಗಳು ಕೂಡ ಸ್ಥಿರಗೊಂಡಿವೆ.
-ಕೃಷಿ ಕ್ಷೇತ್ರದಲ್ಲಿಯೂ ಹೂಡಿಕೆಗೆ ಇದು ಸಕಾಲವಾಗಿದ್ದು, ಭಾರತದಲ್ಲಿನ ಅವಕಾಶಗಳ ಬಗ್ಗೆ ಶೋಧ ಮಾಡುವಂತೆ ಹೂಡಿಕೆದಾರರಿಗೆ ಮೋದಿ ಕರೆ ನೀಡಿದ್ದಾರೆ
-ನಾಗರಿಕ ವಿಮಾನಯಾನ ಕೂಡ ವಿಮಾನಯಾನ ಕೂಡ ಹೂಡಿಕೆಗೆ ಸೂಕ್ತ ವೇದಿಕೆಯಾಗಿದೆ ಮುಂದಿನ 8 ವರ್ಷಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಒಂದು ಸಾವಿರ ಹೊಸ ವಿಮಾನಗಳು ಸೇರಿಕೊಳ್ಳಲಿವೆ.
-ಇಂಧನ ಕ್ಷೇತ್ರದಲ್ಲಿಯೂ ಹೂಡಿಕೆಗೆ ಸಾಕಷ್ಟು ಅವಕಾಶವಿದ್ದು, ಅನಿಲ ಹಾಗೂ ಶುದ್ಧ ಇಂಧನ ಉತ್ಪಾದನೆಗೆ ಭಾರತ ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ.












Click it and Unblock the Notifications