ಇಡೀ ಊರೇ ಹಾಳಾಗಿ ಹೋಯ್ತು, ಕೈಯಲ್ಲಿ ಉಳಿದಿದ್ದು ಏರ್ಪೋರ್ಟ್ ಮಾತ್ರ..!
'ಮಾಡಿದ್ದುಣ್ಣೋ ಮಾರಾಯ' ಅನ್ನೋ ಹಾಗೆ ಅಮೆರಿಕ ತಾನು ಮಾಡಿಕೊಂಡ ಎಡವಟ್ಟಿಗೆ ತಕ್ಕ ಬೆಲೆಯನ್ನೇ ತೆರುತ್ತಿದೆ. ಕೆಲವೇ ದಿನಗಳ ಹಿಂದೆ ಇಡೀ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಹೊಂದಿದ್ದ ಅಮೆರಿಕ ಇದೀಗ ಕೇವಲ ಒಂದೇ ಒಂದು ವಿಮಾನ ನಿಲ್ದಾಣ ಉಳಿಸಿಕೊಳ್ಳಲು ಪರದಾಡುತ್ತಿದೆ. ಹೌದು, ತಾಲಿಬಾನ್ ಪಡೆಗಳು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ಗೆ ನುಗ್ಗಿದ ಮೇಲೆ ಅಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಕ್ಷಣೆಗೆ ಅಮೆರಿಕ ಪರದಾಡುತ್ತಿದೆ. ಏಕೆಂದರೆ ಈಗಾಗಲೇ ಸಂಪೂರ್ಣ ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿದ್ದು, ಸದ್ಯ ಬಾಕಿ ಉಳಿದಿರುವುದು ಕಾಬೂಲ್ ಏರ್ಪೋರ್ಟ್ ಮಾತ್ರ.
Recommended Video
ಅಕಸ್ಮಾತ್ ತಾಲಿಬಾನ್ ಪಡೆಗಳು ಕಾಬೂಲ್‌ನ ವಿಮಾನ ನಿಲ್ದಾಣವನ್ನೂ ವಶಕ್ಕೆ ಪಡೆದರೆ ಅಮೆರಿಕ ಪರದಾಡಬೇಕಿದೆ. ಅಫ್ಘಾನಿಸ್ತಾನದಿಂದ ಹೊರಗೆ ಬರಲು ಉಳಿದಿರುವುದು ಇದೊಂದೇ ದಾರಿ. ಹೀಗಾಗಿ ಕಾಬೂಲ್ ವಿಮಾನ ನಿಲ್ದಾಣ ಉಳಿಸಿಕೊಳ್ಳಲು ದೊಡ್ಡಣ್ಣ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಈ ಜಾಗವೂ ಕೈತಪ್ಪಬಹುದು.
ತಾಲಿಬಾನ್‌ನ ನಾಯಕರು ಈಗಾಗಲೇ ಎಲ್ಲಾ ಹೆದ್ದಾರಿ, ವಿಮಾನ ನಿಲ್ದಾಣಗಳನ್ನ ಬಂದ್ ಮಾಡಿಸಿದ್ದಾರೆ. ಸುಮಾರು 5000 ಸಾವಿರ ಅಮೆರಿಕನ್ ಯೋಧರು ಹಾಗೂ ಸಾವಿರಾರು ಅಧಿಕಾರಿಗಳು ಇನ್ನೂ ಅಫ್ಘಾನ್‌ನಲ್ಲೇ ಇದ್ದಾರೆ. ಇದೇ ಕಾರಣಕ್ಕೆ ಕಾಬೂಲ್ ವಿಮಾನ ನಿಲ್ದಾಣ ಉಳಿಸಿಕೊಳ್ಳಲು ಅಮೆರಿಕ ಸರ್ಕಸ್ ಮಾಡುತ್ತಿದೆ.

ಇಡೀ ಊರಿಗೆ ಬೆಂಕಿ ಬಿದ್ದಿದೆ..!
ಈಗಾಗಲೇ ತಾಲಿಬಾನ್ ಇಡೀ ಅಫ್ಘಾನಿಸ್ತಾನವನ್ನೇ ತನ್ನ ವಶಕ್ಕೆ ಪಡೆದಿದೆ. ಇಂತಹ ಹೊತ್ತಲ್ಲಿ ಕೇವಲ ಒಂದು ವಿಮಾನ ನಿಲ್ದಾಣ ವಶಕ್ಕೆ ಪಡೆಯುವುದು ಕಷ್ಟವಾಗುತ್ತಾ..? ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಅಮೆರಿಕ ಸೂಕ್ತ ವ್ಯವಸ್ಥೆ ಮಾಡಿಕೊಂಡು ಕಾಬೂಲ್ ವಿಮಾನ ನಿಲ್ದಾಣವನ್ನ ಕಾಯುತ್ತಿದೆ. ಹೀಗಿದ್ದರು ಕೂಡ ಪರಿಸ್ಥಿತಿ ಕೈಮೀರಿ ಹೋಗಬಹುದು. ಇಂತಹ ಪರಿಸ್ಥಿತಿ ಎದುರಾದರೆ ಅನಿವಾರ್ಯವಾಗಿ ಅಮೆರಿಕ ಪಡೆಗಳು ಕಾಬೂಲ್ ವಿಮಾನ ನಿಲ್ದಾಣ ಬಿಟ್ಟು ಎಸ್ಕೇಪ್ ಆಗಬೇಕು. ಇಲ್ಲವಾದ್ರೆ ತಾಲಿಬಾನ್ ಎದುರು ಅಮೆರಿಕ ಸೈನಿಕರು ಹೋರಾಡಬೇಕು.

ಯಾಕೆ ಬೇಕಿತ್ತು ಇದೆಲ್ಲಾ..?
ಅಮೆರಿಕ ಸೂಕ್ತ ವ್ಯವಸ್ಥೆ ಮಾಡಿಕೊಂಡು ಅಫ್ಘಾನಿಸ್ತಾನ ಬಿಟ್ಟು ಹೊರಟಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದು ತಜ್ಞರ ವಾದ. ಅಮೆರಿಕ ಕೈಗೊಂಡ ಆತುರದ ನಿರ್ಧಾರ ಈಗ ಅದೇ ದೇಶಕ್ಕೆ ಮುಳುವಾಗುತ್ತಿದೆ. ಗಂಟುಮೂಟೆ ಕಟ್ಟಿಕೊಂಡು ಓಡಿ ಹೋಗಿದ್ದ ‘ದೊಡ್ಡಣ್ಣ' ವಾಪಸ್ ಬರುವಂತಾಗಿದೆ. ಇಷ್ಟೆಲ್ಲಾ ಹೈಡ್ರಾಮಾಕ್ಕೆ ಮೊದಲು ಸೂಕ್ತವಾಗಿ ಅಫ್ಘಾನ್ ಪಡೆಗಳಿಗೆ ಸೇನಾ ಸ್ಥಳಗಳನ್ನ ಹಸ್ತಾಂತರ ಮಾಡಿದ್ದರೆ ಇಂತಹ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಆದರೆ ಸುಮ್ಮನೆ ಇರದೆ ಇರುವೆ ಬಿಟ್ಟುಕೊಂಡ ಅಮೆರಿಕ ಜಗತ್ತಿನ ಎದುರು ವಿಲನ್ ಆಗುತ್ತಿದೆ. ತನ್ನದೇ ತಪ್ಪಿಗೆ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾದ ಅನಿವಾರ್ಯತೆ ಕೂಡ ಸೃಷ್ಟಿಯಾಗಬಹುದು.

ಅಮೆರಿಕ ವಶದಲ್ಲಿ ಏರ್ಪೋರ್ಟ್
ಇಡೀ ಅಫ್ಘಾನಿಸ್ತಾನವನ್ನೇ ತಾಲಿಬಾನ್ ತನ್ನ ವಶಕ್ಕೆ ಪಡೆದಾಗಿದೆ. ಆದರೆ ಅಫ್ಘಾನ್‌ನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣ ಮಾತ್ರ ಈಗಲೂ ಅಮೆರಿಕದ ವಶದಲ್ಲಿದ್ದು, ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಜನರನ್ನ ಏರ್‌ಲಿಫ್ಟ್ ಮಾಡಲಾಗುತ್ತಿದೆ. ಈಗಾಗಲೇ ಏರ್ಪೋರ್ಟ್ ಸುತ್ತಮುತ್ತ ಗುಂಡಿನ ಮೊರೆತ ಕೇಳಿಬಂದಿದ್ದು ಅಲ್ಲಿ ಕ್ಷಣಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ಆದಷ್ಟು ಬೇಗ ಜಾಗ ಖಾಲಿ ಮಾಡಲು ಅಮೆರಿಕ ಸೇನೆ ಪರದಾಡುತ್ತಿವೆ. ಯಾವ ಕ್ಷಣದಲ್ಲಿ ಬೇಕಾದರೂ ತಾಲಿಬಾನ್ ಕಾಬೂಲ್ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ವಿಮಾನ ಏರಲು ಜನರ ಫೈಟಿಂಗ್
ಒಂದು ಕಡೆ ಜನರು ಹಾಗೂ ಅಧಿಕಾರಿಗಳನ್ನು ಸ್ಥಳಾಂತರ ಮಾಡಲು ಅಮೆರಿಕ ಅವಸರ ಮಾಡುತ್ತಿದ್ದರೆ, ಇತ್ತ ವಿಮಾನ ಹತ್ತಲು ಜನರು ಕಿತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಾರು ಸಾವಿರ ಜನ ದಿಢೀರ್ ವಿಮಾನ ನಿಲ್ದಾಣಕ್ಕೆ ನುಗ್ಗಿ ಬಂದಿದ್ದು, ಕುರಿಗಳಂತೆ ತುಂಬಿ ಜನರನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ತಾಲಿಬಾನ್ ದಾಳಿಯ ಭಯದಲ್ಲಿ ಜನ ಕುಟುಂಬ ಸಮೇತ ಗಂಟುಮೂಟೆ ಕಟ್ಟಿ ತಾವು ಹುಟ್ಟಿ ಬೆಳೆದ ಜಾಗ ಖಾಲಿ ಮಾಡುತ್ತಿದ್ದಾರೆ. ಆದರೆ ಜನರ ಕಷ್ಟಗಳಿಗೆ ಸ್ಪಂದಿಸಬೇಕಿದ್ದ ಅಧ್ಯಕ್ಷ ನಾಪತ್ತೆಯಾಗಿದ್ದಾರೆ.

ಎಲ್ಲವೂ ಅಮೆರಿಕದ ಎಡವಟ್ಟು..!
ದಿಢೀರ್ ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡಿದ್ದ ಅಮೆರಿಕ ಪತರುಗುಟ್ಟಿದೆ. ಅಮೆರಿಕ ಕನಸಲ್ಲೂ ಅಂದುಕೊಳ್ಳದ ರೀತಿ ತಾಲಿಬಾನ್ ಕಮ್‌ಬ್ಯಾಕ್ ಮಾಡಿದೆ. ಸತತ 20 ವರ್ಷಗಳ ಕಾಲ ಅಫ್ಘಾನಿಸ್ತಾನ ಆಳಿದ್ದ ಅಮೆರಿಕ ದಿಢೀರ್ ಅಂತಾ ಹೊರ ಬಂದಿದ್ದೇ ತಡ, ತಾಲಿಬಾನ್ ಅಲರ್ಟ್ ಆಗಿ ಇಡೀ ಅಫ್ಘಾನಿಸ್ತಾನವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಯಾವ ಕ್ಷಣದಲ್ಲಿ ಬೇಕಾದ್ರೂ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ದಾಳಿ ನಡೆಸಿ ವಶಕ್ಕೆ ಪಡೆಯುವ ಸಾಧ್ಯತೆ ಇದ್ದು, ಅಕಸ್ಮಾತ್ ಈ ಜಾಗವೂ ಅಮೆರಿಕದ ತೆಕ್ಕೆಯಿಂದ ಬಿಟ್ಟು ಹೋದರೆ ಅಮೆರಿಕದ ಪಾಲಿಗೆ ಅಫ್ಘಾನಿಸ್ತಾನದ ಬಾಗಿಲು ಸಂಪೂರ್ಣ ಬಂದ್ ಆದಂತೆಯೇ.












Click it and Unblock the Notifications