ಹಿಜ್ಬುಲ್ ಮುಜಾಹಿದ್ದೀನ್ ಜಾಗತಿಕ ಉಗ್ರ ಸಂಘಟನೆ: ಅಮೆರಿಕ ಘೋಷಣೆ
ಪಾಕಿಸ್ತಾನದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಜಾಗತಿಕ ಉಗ್ರ ತಂಡದ ಪಟ್ಟ. ಅಮೆರಿಕ ಸರ್ಕಾರದ ಮಹತ್ವದ ಘೋಷಣೆ. ಬಹು ದಿನಗಳಿಂದ ಭಾರತ ಸಲ್ಲಿಸುತ್ತಿದ್ದ ಮನವಿಗೆ ಸಿಕ್ಕ ಸ್ಪಂದನೆ.
ವಾಷಿಂಗ್ಟನ್, ಆಗಸ್ಟ್ 16: ಪಾಕಿಸ್ತಾನದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯನ್ನು (ಎಚ್ಎಂ) ಅಮೆರಿಕ ಸರ್ಕಾರ, ವಿದೇಶಿ ಉಗ್ರವಾದಿ ಸಂಘಟನೆ ಎಂದು ಘೋಷಿಸಿದೆ. ಅಲ್ಲದೆ, ಈ ಸಂಘಟನೆಯನ್ನು ಜಾಗತಿಕ ಉಗ್ರ ಸಂಘಟನೆ (ಎಸ್ ಡಿಜಿಟಿ) ಎಂದೂ ಅದು ಘೋಷಿಸಿದೆ. ಇದು, ಭಾರತದ ಪರವಾಗಿ ಬಂದ ಘೋಷಣೆಯಾಗಿದೆ ಎಂದು ರಾಜತಂತ್ರಜ್ಞರು ವಿಶ್ಲೇಷಿಸಿದ್ದಾರೆ.
ಅಮೆರಿಕ ಸರ್ಕಾರದ ವಲಸೆ ಹಾಗೂ ರಾಷ್ಟ್ರೀಯತೆ ಕಾಯ್ದೆಯ 219ನೇ ಪರಿಚ್ಛೇದಲ್ಲಿನ ನಿಯಮಗಳ ಅನ್ವಯ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಅಮೆರಿಕದ ಆಂತರಿಕ ವ್ಯವಹಾರಗಳ ಸಚಿವಾಲಯ, ''ಎಚ್ ಎಂ ಉಗ್ರವಾದಿ ಸಂಘಟನೆಯನ್ನು ಜಾಗತಿಕ ಉಗ್ರ ಸಂಘಟನೆಯೆಂದು ಘೋಷಣೆ ಮಾಡಲಾಗಿದ್ದು, ಅಮೆರಿಕದ ಯಾವುದೇ ನಾಗರಿಕನು ಆ ಸಂಘಟನೆಯೊಂದಿಗೆ ಸಂಪರ್ಕ ಹೊಂದುವುದನ್ನು ನಿಷೇಧಿಸಲಾಗಿದೆ'' ಎಂದು ತಿಳಿಸಿದೆ.
ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯು 1989ರಲ್ಲಿ ಸ್ಥಾಪಿತವಾಗಿತ್ತು. ಕಾಶ್ಮೀರದಲ್ಲಿ ಹಲವಾರು ಬುಡಮೇಲು ಕೃತ್ಯಗಳನ್ನು ನಡೆಸುವಲ್ಲಿ ಈ ಸಂಘಟನೆ ನಿರತವಾಗಿದೆ. ಸಯ್ಯದ್ ಸಲಾವುದ್ದೀನ್ ಎಂಬ ಉಗ್ರ ಇದನ್ನು ಮುನ್ನಡೆಸುತ್ತಿದ್ದಾನೆ.












Click it and Unblock the Notifications