ಇರಾನ್‌ನ ಸರ್ವಾಧಿಕಾರಿ ಆಡಳಿತದ ಅಂತ್ಯ ಸಮೀಪಿಸಿದೆ: ಯುದ್ಧ ಸಾರಿದ ಡೊನಾಲ್ಡ್ ಟ್ರಂಪ್
ದುಬೈ/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದ್ದು, ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಭೀಕರ ವಾಯುದಾಳಿ ನಡೆಸಿವೆ. ಈ ದಾಳಿಯ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್ ವಿರುದ್ಧ "ಮಹತ್ವದ ಸೇನಾ ಕಾರ್ಯಾಚರಣೆ" ಆರಂಭಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಇದರಿಂದಾಗಿ ಇಡೀ ಜಗತ್ತು ಮತ್ತೊಂದು ಮಹಾಯುದ್ಧದ ಭೀತಿಗೆ ಸಿಲುಕಿದೆ.

ಟ್ರಂಪ್ ಘೋಷಣೆ: 'ಇದು ಅಮೆರಿಕದ ರಕ್ಷಣೆಗಾಗಿ'
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಬೃಹತ್ ಮಿಲಿಟರಿ ಕಾರ್ಯಾಚರಣೆಯನ್ನು ಅಧಿಕೃತವಾಗಿ ಘೋಷಿಸಿದ್ದು, ಅಮೆರಿಕದ ಜನತೆ ಮತ್ತು ಮಿತ್ರರಾಷ್ಟ್ರಗಳ ರಕ್ಷಣೆಗಾಗಿ ಈ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಇರಾನ್ ಮೇಲಿನ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಆಡಳಿತವನ್ನು ಕಟುವಾಗಿ ಟೀಕಿಸಿದ್ದಾರೆ. "ಇರಾನ್ ಆಡಳಿತವು ಕೇವಲ ಜನರನ್ನು ಕೊಲ್ಲಲು ಹವಣಿಸುತ್ತಿದೆ. ಆದರೆ, ನಾವು ನಮ್ಮ ಮುಂದಿನ ಭವಿಷ್ಯದ ದೃಷ್ಟಿಯಿಂದ ಈ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಇದೊಂದು ಪವಿತ್ರ ಕಾರ್ಯ" ಎಂದು ಬಣ್ಣಿಸಿದ್ದಾರೆ. "ಯಾವುದೇ ಯುದ್ಧವಾದರೂ ಅಲ್ಲಿ ಸಾವು-ನೋವುಗಳು ಸಂಭವಿಸುವುದು ಸಾಮಾನ್ಯ " ಎಂದು ಹೇಳುವ ಮೂಲಕ, ಮುಂಬರುವ ದಿನಗಳಲ್ಲಿ ನಡೆಯಬಹುದಾದ ಭಾರಿ ರಕ್ತಪಾತದ ಮುನ್ಸೂಚನೆಯನ್ನು ಟ್ರಂಪ್ ನೀಡಿದ್ದಾರೆ.
ಅಣ್ವಸ್ತ್ರಗಳ ಬಗ್ಗೆ ಖಡಕ್ ನಿರ್ಧಾರ
"ಯಾವುದೇ ಕಾರಣಕ್ಕೂ ಇರಾನ್ ಅಣ್ವಸ್ತ್ರಗಳನ್ನು ತಯಾರಿಸಲು ಸಾಧ್ಯವಿಲ್ಲ. ನಾವು ಅದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ . ಇರಾನ್‌ನ ಶಸ್ತ್ರಾಸ್ತ್ರಗಳಿಂದ ಬೆದರಿಕೆ ಎದುರಿಸುತ್ತಾ ಬದುಕಲು ನಾವು ಸಿದ್ಧರಿಲ್ಲ" ಎಂದು ಗುಡುಗಿದ್ದಾರೆ. "ಹೊರಗಿನ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದೆ. ಇಲ್ಲಿಂದ ಮುಂದಕ್ಕೆ ಇದು ಮತ್ತಷ್ಟು ಬಿಗಡಾಯಿಸಲಿದೆ. ಇದು ನಮ್ಮ ಕಾರ್ಯಾಚರಣೆಯ ನಿರ್ಣಾಯಕ ಸಮಯ, ಇದನ್ನು ನಾವು ಕೈತಪ್ಪಿ ಹೋಗಲು ಬಿಡುವುದಿಲ್ಲ" ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಇರಾನ್‌ನಿಂದ ಎದುರಾಗಿರುವ ಬೆದರಿಕೆಗಳನ್ನು ಇಲ್ಲವಾಗಿಸುವುದು ಈ ದಾಳಿಯ ಮುಖ್ಯ ಉದ್ದೇಶವಾಗಿದ್ದು, ಅಮೆರಿಕ ಮತ್ತು ಇಸ್ರೇಲ್‌ನ ಯುದ್ಧ ವಿಮಾನಗಳು ಶನಿವಾರ ಹಗಲಿನಲ್ಲೇ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಸರಣಿ ದಾಳಿಗಳನ್ನು ನಡೆಸಿವೆ.
ಈ ಭೀಕರ ದಾಳಿಯು ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಯ ಸಮೀಪವೇ ಸಂಭವಿಸಿದ್ದು, ಇಡೀ ನಗರದಲ್ಲಿ ದಟ್ಟ ಹೊಗೆ ಆವರಿಸಿದೆ. ಇರಾನ್‌ನ ಸೇನಾ ನೆಲೆಗಳು ಮತ್ತು ಗುಪ್ತಚರ ಕೇಂದ್ರಗಳನ್ನು ಗುರಿಯಾಗಿಸಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಟೆಹ್ರಾನ್‌ನಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇತ್ತ ಇರಾನ್‌ನಿಂದ ಯಾವುದೇ ಕ್ಷಣದಲ್ಲೂ ಪ್ರತಿದಾಳಿ ನಡೆಯಬಹುದು ಎಂಬ ಭೀತಿಯಿಂದ ಇಸ್ರೇಲ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಆಸ್ಪತ್ರೆಗಳನ್ನು ಭೂಗತ ಸುರಕ್ಷಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಇರಾನ್‌ನ ಸೇನಾ ನೆಲೆಗಳು ಮತ್ತು ಸರ್ಕಾರಿ ಕಟ್ಟಡಗಳನ್ನೇ ಗುರಿಯಾಗಿಸಿ ಈ ದಾಳಿ ಮಾಡಲಾಗಿದೆ. ಮುನ್ನೆಚ್ಚರಿಕೆಯಾಗಿ ಟೆಹ್ರಾನ್‌ನಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಮತ್ತು ಇರಾಕ್ ದೇಶವು ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ.
ಇರಾನ್‌ನಿಂದ ಯಾವುದೇ ಕ್ಷಣದಲ್ಲೂ ಪ್ರತಿದಾಳಿ ನಡೆಯಬಹುದು ಎಂಬ ಆತಂಕದಲ್ಲಿ ಇಸ್ರೇಲ್ ಇದೆ. ಹೀಗಾಗಿ ಅಲ್ಲಿನ ಆಸ್ಪತ್ರೆಗಳನ್ನು ಭೂಗತ ಸುರಕ್ಷಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದ್ದು, ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಇಸ್ರೇಲ್‌ನ ಭದ್ರತೆ ಮತ್ತು ಆತಂಕ
ಈ ಜಂಟಿ ಕಾರ್ಯಾಚರಣೆಯ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ (Israel Katz), "ಬೆದರಿಕೆಗಳನ್ನು ತೊಡೆದುಹಾಕಲು ಈ ಕಾರ್ಯಾಚರಣೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ. ಆದರೆ, ಇರಾನ್‌ನಿಂದ ಯಾವುದೇ ಕ್ಷಣದಲ್ಲಿ ಕಠಿಣ ಪ್ರತಿದಾಳಿ ನಡೆಯಬಹುದು ಎಂಬ ಭೀತಿಯಿಂದ ಇಸ್ರೇಲ್‌ನಾದ್ಯಂತ ವಾಯುದಾಳಿ ಎಚ್ಚರಿಕೆಯ ಸೈರನ್‌ಗಳು ನಿರಂತರವಾಗಿ ಮೊಳಗುತ್ತಿವೆ. ಇಸ್ರೇಲ್‌ನ ಬಹುತೇಕ ಆಸ್ಪತ್ರೆಗಳು ತುರ್ತು ಪರಿಸ್ಥಿತಿ ಘೋಷಿಸಿದ್ದು, ರೋಗಿಗಳನ್ನು ಮತ್ತು ಶಸ್ತ್ರಚಿಕಿತ್ಸಾ ವಿಭಾಗಗಳನ್ನು ಸುರಕ್ಷಿತವಾದ ಭೂಗತ (Underground) ವ್ಯವಸ್ಥೆಗಳಿಗೆ ಸ್ಥಳಾಂತರಿಸಿವೆ.












Click it and Unblock the Notifications