Donald Trump: ಗಾಜಾ ಪಟ್ಟಿ ವಶಪಡಿಸಿಕೊಳ್ಳಲು ಅಮೆರಿಕದ ಸ್ಕೆಚ್, ಡೊನಾಲ್ಡ್ ಟ್ರಂಪ್ ಮಾತಿನಿಂದ ಬಯಲಾಯ್ತು ಸತ್ಯ!
ಗಾಜಾ ಪಟ್ಟಿ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆಯಾಗಿ ಸರಿಯಾಗಿ ಒಂದು ತಿಂಗಳು ಕೂಡ ಕಳೆದಿಲ್ಲ, ಆಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಚಲನ ಸೃಷ್ಟಿ ಮಾಡುವ ಹೇಳಿಕೆ ಕೊಟ್ಟಿದ್ದಾರೆ. ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ವಿಚಾರದಲ್ಲಿ ಇಷ್ಟು ದಿನಗಳ ಕಾಲ ಅಮೆರಿಕ ಮುಂದುವರಿಸಿಕೊಂಡು ಬಂದಿದ್ದ ಮೌಲ್ಯಗಳನ್ನು ಗಾಳಿಗೆ ತೂರಿ ಡೊನಾಲ್ಡ್ ಟ್ರಂಪ್ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆಗಿದ್ದು ಏನಪ್ಪಾ ಅಂದ್ರೆ, ಹಮಾಸ್ ಉಗ್ರರು ಇಸ್ರೇಲ್ ವಿರುದ್ಧ ದಾಳಿ ನಡೆಸಿದ್ದು ಎನ್ನುವ ಕಾರಣಕ್ಕೆ ಗಾಜಾ ಪಟ್ಟಿ ಮತ್ತು ಇಸ್ರೇಲ್ ನಡುವೆ 2023ರ ಅಕ್ಟೋಬರ್ 7 ರಂದು ಘೋರವಾದ ಯುದ್ಧ ಆರಂಭವಾಗಿತ್ತು. ಹೀಗೆ ಶುರುವಾದ ಯುದ್ಧ ಮೊನ್ನೆ ಮೊನ್ನೆ ಅಂದ್ರೆ ಜನವರಿ 19 ರಂದು ನಿಂತು ಹೋಗಿತ್ತು. ಹೀಗೆ ಕದನ ವಿರಾಮ ಘೋಷಣೆ ಬೆನ್ನಲ್ಲೇ ಗಾಜಾ ಪಟ್ಟಿಯನ್ನು ವಶಕ್ಕೆ ಪಡೆಯುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿರುವುದು ಈಗ ಮಧ್ಯಪ್ರಾಚ್ಯ ದೇಶಗಳನ್ನು ಕೊತ ಕೊತ ಕುದಿಯುವಂತೆ ಮಾಡಿದೆ.

ಡೊನಾಲ್ಡ್ ಟ್ರಂಪ್ ಹೇಳಿದ್ದು ಏನು?
ಇಸ್ರೇಲ್ ಸೇನೆ ಯುದ್ಧ ಘೋಷಣೆ ಮಾಡಿದ ನಂತರ ಕಳೆದ ಒಂದು ವರ್ಷದಲ್ಲಿ ಗಾಜಾ ಪಟ್ಟಿ ಪ್ರದೇಶ ಭಾಗಶಃ ನಾಶವಾಗಿ ಹೋಗಿದೆ. ಹೀಗೆ ಛಿದ್ರವಾಗಿರುವ ಗಾಜಾ ಪಟ್ಟಿಯಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂಬ ಒತ್ತಾಯ ಕೂಡ ಕೇಳಿಬರುತ್ತಿದೆ. ಇಷ್ಟೆಲ್ಲಾ ಒತ್ತಡಗಳ ನಡುವೆ ಇದೀಗ ದಿಢೀರ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಯುದ್ಧದಿಂದ ಹಾನಿಗೊಳಗಾದ ಗಾಜಾ ಪಟ್ಟಿ ಭಾಗವನ್ನು ಬಿಟ್ಟು ಪ್ಯಾಲೆಸ್ತೀನ್ ನಿವಾಸಿಗಳು ಬೇರೆ ಪ್ರದೇಶಕ್ಕೆ ಶಿಫ್ಟ್ ಆಗಬೇಕು. ಆ ನಂತರ ಅಮೆರಿಕ ಗಾಜಾ ಭಾಗವನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸಿ ತನ್ನ ವಶಕ್ಕೆ ಪಡೆಯಲಿದೆ ಎಂದಿದ್ದಾರೆ ಟ್ರಂಪ್.
ಮತ್ತೊಂದು ಕಡೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಡೊನಾಲ್ಡ್ ಟ್ರಂಪ್‌ರ ಮಾತುಗಳಿಗೆ ಬೆಂಬಲ ನೀಡಿದ್ದಾರೆ. ಅಲ್ಲದೆ ಅಮೆರಿಕ ಹೀಗೆ ಗಾಜಾ ಪಟ್ಟಿ ಪ್ರದೇಶವನ್ನು ತನ್ನ ವಶಕ್ಕೆ ಪಡೆದರೆ ಅದು ಇತಿಹಾಸವಾಗಲಿದೆ ಎಂದಿದ್ದಾರೆ. ಈ ಮೂಲಕ ಗಾಜಾ ಪಟ್ಟಿಯಲ್ಲಿ ಇದೀಗ ಯುದ್ಧ ನಿಂತಿದ್ದರೂ ಹಿಂಸಾಚಾರ ನಿಲ್ಲುತ್ತಾ? ಅನ್ನೋ ಪ್ರಶ್ನೆ ಮೂಡಿದೆ. ಗಾಜಾದ ಜನರಿಗೆ ಕೂಡ ಹೊಸ ಭಯ ಶುರುವಾಗಿದೆ.
ಅರಬ್ ದೇಶಗಳ ಪ್ರತಿಕ್ರಿಯೆ ಏನು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ಮಧ್ಯಪ್ರಾಚ್ಯ ರಾಜಕೀಯದಲ್ಲೂ ತಲ್ಲಣ ಎಬ್ಬಿಸಿದ್ದು, ಅರಬ್ ದೇಶಗಳು ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡಲಿವೆ? ಎಂಬ ಪ್ರಶ್ನೆ ಮೂಡಿದೆ. ಒಟ್ನಲ್ಲಿ ಡೊನಾಲ್ಡ್ ಟ್ರಂಪ್ ಅವರು ಹೀಗೆ ಹೇಳಿಕೆ ನೀಡಿರುವುದು ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡುವ ಜೊತೆ ಮತ್ತೊಂದು ಮಹಾಯುದ್ಧದ ಬಗ್ಗೆ ಪರೋಕ್ಷವಾಗಿ ಮುನ್ಸೂಚನೆ ನೀಡುತ್ತಿದೆ ಅಂತಿದ್ದಾರೆ ನೆಟ್ಟಿಗರು.












Click it and Unblock the Notifications