ಖಲಿಸ್ತಾನ್ ಉಗ್ರರ ವಿಚಾರದಲ್ಲಿ ಮತ್ತೆ ಕಿರಿಕ್ ಶುರು!
ಖಲಿಸ್ತಾನಿ ಉಗ್ರರ ವಿಚಾರದಲ್ಲಿ ಕಿರಿಕಿರಿ ಮುಂದುವರಿದಿದ್ದು, ಅಮೆರಿಕದ ಕಡೆಯಿಂದ ಕೂಡ ಈಗ ಹೊಸ ಕಿರಿಕ್ ಶುರುವಾಗಿದೆ. ಈ ಬಾರಿ ಅಮೆರಿಕದ ಮಾಧ್ಯಮಗಳು ಈ ವಿಚಾರದಲ್ಲಿ, ಭಾರತದ ವಿರುದ್ಧ ಸ್ಫೋಟಕ ಆರೋಪ ಮಾಡಿ ಸುದ್ದಿ ಪ್ರಸಾರ ಮಾಡಿವೆ ಎಂಬ ಆರೋಪ ಕೇಳಿಬಂದಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ.
ಅಮೆರಿಕದ ಖ್ಯಾತ ದಿನಪತ್ರಿಕೆ ಇದೀಗ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಭಾರತದ ವಿರುದ್ಧ ವರದಿ ಪ್ರಕಟಿಸಿದೆ. ಅಮೆರಿಕದಲ್ಲಿ ನಡೆದಿರುವ, ಖಲಿಸ್ತಾನದ ಪ್ರತ್ಯೇಕತಾ ವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆ ಸಂಚಿನಲ್ಲಿ ರಾ ಅಧಿಕಾರಿ ವಿಕ್ರಂ ಯಾದವ್ ಭಾಗಿ ಆಗಿದ್ದರು ಎಂದು ಆರೋಪಿಸಿ ವರದಿಯನ್ನು ಪ್ರಕಟಿಸಿದೆ. ಇನ್ನು ಈ ಕೃತ್ಯಕ್ಕೆ 'ರಾ' ಮುಖ್ಯಸ್ಥರಾಗಿದ್ದ ಸಾಮಂತ್ ಗೋಯಲ್ ಅನುಮೋದನೆ ಕೂಡ ಸಿಕ್ಕಿತ್ತು ಎಂದು ಆರೋಪಿಸಿ ವರದಿ ಪ್ರಕಟಿಸಿದೆ. ಹೀಗೆ ವರದಿ ಪ್ರಕಟ ಮಾಡಿದ ನಂತರ ಭಾರಿ ಸಂಚಲನ ಸೃಷ್ಟಿಯಾಗಿದೆ.

ಖಲಿಸ್ತಾನಿಗಳ ಪರ ಇದ್ದ ಉಗ್ರ!
ಅಂದಹಾಗೆ ಭಾರತದ ವಿರುದ್ಧ ಸಂಚನ್ನು ರೂಪಿಸಿ ಖಲಿಸ್ತಾನಿ ಉಗ್ರರನ್ನು ಬೆಂಬಲಿಸುತ್ತಿದ್ದ ಆರೋಪ ಗುರುಪತ್ವಂತ್ ಸಿಂಗ್ ಪನ್ನೂ ವಿರುದ್ಧ ಇತ್ತು. ಖಾಲಿಸ್ತಾನದ ಪರ ಆಂದೋಲನದ ಪ್ರಮುಖ ವ್ಯಕ್ತಿಯಾಗಿದ್ದ ಪನ್ನೂ 'ಸಿಖ್ಸ್ ಫಾರ್ ಜಸ್ಟೀಸ್' (ಎಸ್‌ಎಫ್‌ಜೆ) ಸಂಘಟನೆ ಕಾನೂನು ಸಲಹೆಗಾರ ಮತ್ತು ವಕ್ತಾರ ಕೂಡ ಆಗಿದ್ದ ಎಂಬ ಆರೋಪ ಇತ್ತು. ಮತ್ತೊಂದು ಕಡೆಯಲ್ಲಿ ಭಾರತ ಸರ್ಕಾರ ಪನ್ನೂ ಒಬ್ಬ ಭಯೋತ್ಪಾದಕ ಎಂದು ಘೋಷಣೆ ಕೂಡ ಮಾಡಿತ್ತು. ಹೀಗೆ, ಖಲಿಸ್ತಾನಿ ಗ್ಯಾಂಗ್‌ನ ಹುಟ್ಟಡಗಿಸಲು ಭಾರತ ಕೂಡ ಕಠಿಣ ಕ್ರಮ ಕೈಗೊಂಡಿದೆ. ಹೀಗಿದ್ದಾಗ ಭಾರತದ ವಿರುದ್ಧ ಕೆಲ ದೇಶಗಳು ಸುಖಾಸುಮ್ಮನೆ ಆರೋಪ ಮಾಡುತ್ತಿವೆ ಎಂಬ ಗಂಭೀರ ಆರೋಪ ಇದೆ.
ಕೆನಡಾ ಕೂಡ ಕಿರಿಕ್ ಮಾಡಿತ್ತು!
ಮತ್ತೊಂದು ಕಡೆ ಕೆನಡಾ ಕೂಡ ಭಾರತದ ವಿರುದ್ಧ ಈ ವಿಚಾರದಲ್ಲಿ ಆರೋಪ ಮಾಡಿದೆ. ಕಳೆದ ವರ್ಷದ ಅಂದ್ರೆ 2023ರ ಜೂನ್ 18ರಂದು ಕೆನಡಾ ದೇಶದ, ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಆಗಿತ್ತು. ಇದೇ ಸಮಯದಲ್ಲಿ, ಪನ್ನೂ ಹತ್ಯೆಗೆ ಕೂಡ ಸಂಚು ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಇಷ್ಟೇ ಆಗಿದ್ದರೆ, ಅದು ದೊಡ್ಡ ವಿಚಾರ ಆಗುತ್ತಿರಲಿಲ್ಲ. ಆದರೆ ಈ ವಿಚಾರದಲ್ಲಿ ಭಾರತದ ವಿರುದ್ಧ ಭಾರಿ ಗಂಭೀರ ಆರೋಪ ಮಾಡಲಾಗಿತ್ತು. ಈ ಕಾರ್ಯಾಚರಣೆಗೂ & ವಿಕ್ರಂ ಯಾದವ್ ಅವರಿಗೂ ಸಂಪರ್ಕ ಇದೆ ಎಂದು ಇದೀಗ ಅಮೆರಿಕದ ಮಾಧ್ಯಮ ವರದಿ ಮಾಡಿದೆ. ಇದು ಸಂಚಲನ ಸೃಷ್ಟಿಸಿದೆ.












Click it and Unblock the Notifications