ಭಾರತ, ಚೀನಾ, ಅಮೆರಿಕಾ ಸೇರಿ ಜಾಗತಿಕ ಮಟ್ಟದಲ್ಲಿ ಹೆಚ್ಚಾದ ಪರಮಾಣು ಶಸ್ತ್ರಾಸ್ತ್ರ ಸಂಗ್ರಹ: SIPRI ವರದಿ
ನವದೆಹಲಿ, ಜೂನ್ 13: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ವರ್ಷ ಉರುಳಿದೆ. ಪರಿಣಾಮ ವಿಶ್ವದಾದ್ಯಂತ ಯುದ್ಧದ ವಾತಾವರಣ ಸೃಷ್ಟಿಯಾದಂತಿದೆ. ಈ ಕಾರಣದಿಂದಲೇ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವು ಏಷ್ಯಾ ದೇಶದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನ ವಿವಿಧ ದೇಶಗಳಲ್ಲಿ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ ಎಂದು ವರದಿಯೊಂದು ತಿಳಿಸಿದೆ.
ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ವಿವಿಧ ದೇಶಗಳು ಹೊಂದಿರುವ ಪರಮಾಣು, ಅಣ್ವಸ್ತ್ರಗಳ ಮಾಹಿತಿ ಹೊಂದಿದ ವರದಿಯೊಂದನ್ನು ಬಿಡುಗಡೆ ಮಾಡಿದೆ. ವರದಿಯಲ್ಲಿ ಭಾರತ, ಪಾಕಿಸ್ತಾನ, ಚೀನಾ ಸೇರಿದಂತೆ ವಿವಿಧ ದೇಶಗಳ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹ, ಹಾಲಿ ದಾಸ್ತಾನು ಹೆಚ್ಚಿಸಿಕೊಂಡಿರುವ ಅಂಶಗಳನ್ನು ತಿಳಿಸಲಾಗಿದೆ. ಈ ವರದಿಯು ವಿಶ್ವದ ಕೆಲವು ದೇಶಗಳ ಪೈಕಿ ಚೀನಾ ದೇಶ ವೇಗವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಿಕೊಳ್ಳುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಷ್ಯಾ- ಉಕ್ರೇನ್ ಯುದ್ಧ ಆರಂಭವಾದ ಬಳಿಕ ಕಳೆದ ಒಂದೇ ವರ್ಷದಲ್ಲಿ ಚೀನಾ ದೇಶವು ಪರಿಮಾಣು ಶಸ್ತ್ರಾಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಮತ್ತಷ್ಟು ಪ್ರಬಲವಾಗಲು ಹಪಾಹಪಿಸುತ್ತಿದೆ. ಇತ್ತ ಭಾರತ ಮತ್ತು ಪಾಕಿಸ್ತಾನ ದೇಶದಲ್ಲೂ ಸಹ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯಲ್ಲಿ ಏರಿಕೆ ಆಗಿದೆ. ಈ ಮೂಲಕ ಎಂತಹದ್ದೇ ಪರಿಸ್ಥಿತಿ ಬಂದರೂ ಎದುರಿಸಲು ಈ ದೇಶಗಳು ಸಜ್ಜಾಗುತ್ತಿವೆ.
ಪರಮಾಣು ಶಸ್ತ್ರಾಸ್ತ್ರ ಹೊಂದುವಲ್ಲಿ ಚೀನಾ ಮುಂದಿದೆ
ಒಟ್ಟು 86 ಹೊಸ ಶಸ್ತ್ರಾಸ್ತ್ರಗಳ ಪೈಕಿ ಪಾಕಿಸ್ತಾನದ ಬಳಿ ಐದು ಹಾಗೂ ಚೀನಾ ದೇಶದಲ್ಲಿ ಸುಮಾರು 60, ರಷ್ಯಾ ಬಳಿ 12 ಪರಮಾಣು ಮತ್ತು ಉತ್ತರ ಕೊರಿಯಾ 5 ಪರಮಾಣು ಶಸ್ತ್ರಾಸ್ತ್ರಗಳಿವೆ. ಆದರೆ ಭಾರತ ಅತೀ ಕಡಿಮೆ ಒಟ್ಟು ನಾಲ್ಕು ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಂಡಿದೆ ಎಂದು ಬಿಡುಗಡೆಗೊಂಡ SIPRI ವರದಿಯಲ್ಲಿ ತಿಳಿಸಲಾಗಿದೆ.
ಇನ್ನು ಜಾಗತಿವಾಗಿ ಅಣ್ವಸ್ತ್ರಗಳ ದಾಸ್ತಾನು ನೋಡುವುದಾದರೆ, ಕೇವಲ ಏಷ್ಯಾದಲ್ಲಿ ಅಷ್ಟೇ ಅಲ್ಲದೇ ವಿಶ್ವದ ಇತರ ದೇಶಗಳಲ್ಲಿಯೂ ಅಣ್ವಸ್ತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಅಣು ಅಸ್ತ್ರಗಳ ದಾಸ್ತಾನು ಮನುಕುಲಕ್ಕೆ ಮಾರಕವಾದ ಅಸ್ತ್ರ, ಇದೊಂದು ಅಪಾಯಕಾರಿ ಅವಧಿ ಎನ್ನಲಾಗುತ್ತಿದೆ.

ಒಂಬತ್ತು ಪರಮಾಣು ಶಕ್ತಿಗಳಾದ ಬ್ರಿಟನ್, ಚೀನಾ, ಫ್ರಾನ್ಸ್, ಭಾರತ, ಇಸ್ರೇಲ್, ಉತ್ತರ ಕೊರಿಯಾ, ಪಾಕಿಸ್ತಾನ, ರಷ್ಯಾ ಮತ್ತು ಯುಎಸ್‌ನಲ್ಲಿ ಒಟ್ಟು ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ 12,512 ಇದೆ ಎಂಬ ಮಾಹಿತಿ ವರದಿಯಿಂದ ಬಹಿರಂಗವಾಗಿದೆ.
ಜಿದ್ದಿಗೆ ಬಿದ್ದವರಂತೆ ಯುದ್ಧಾಸ್ತ್ರಗಳ ಸಂಗ್ರಹ
ಕೆಲವು ವರ್ಷಗಳ ಹಿಂದಷ್ಟೇ ವಿವಿಧ ದೇಶಗಳು ಸ್ವಯಂ ಹಿತ ದೃಷ್ಟಿಯಿಂದ ಪರಮಾಣು ಶಸ್ತ್ರಾಸ್ತ್ರಗಳನ್ನು ಜಿದ್ದಿಗೆ ಬಿದ್ದವರಂತೆ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದವು. ನಂತರದ ಕೆಲವು ಅವಧಿಯಲ್ಲಿ ಈ ದಾಸ್ತಾನು ವೇಗಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೆ ಜಾಗತಿಕವಾಗಿ ವಿವಿಧ ದೇಶಗಳ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹದ ವೇಗದಲ್ಲಿ ಏರಿಕೆ ಕಂಡು ಬಂದಿದೆ.
ರಷ್ಯಾ -ಉಕ್ರೇನ್ ಯುದ್ಧ ಆರಂಭವಾದ ಬಳಿಕ ಕಳೆದ ಒಂದು ವರ್ಷದಲ್ಲಿ ರಷ್ಯಾದ ಬಳಿ 4,477 ರಿಂದ 4,489ಕ್ಕೆ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ 3,708 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಈ ಪಟ್ಟಿಯಲ್ಲಿ ಅಮೆರಿಕ (US) ದ್ವತೀಯ ಸ್ಥಾನದಲ್ಲಿದೆ. ಒಂದು ವರ್ಷದ ಹಿಂದೆ 350 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನಾದ ಇದೀಗ 410 ಶಸ್ತ್ರಾಸ್ತ್ರ ಹೊಂದಿದೆ.
ಇನ್ನೂ ನಮ್ಮ ದೇಶ ಭಾರತವು 164ಕ್ಕೆ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ ಏರಿಕೆ ಆಗಿದೆ. ನಮಗಿಂತಲೂ ಪಾಕಿಸ್ಥಾನದಲ್ಲಿ ಒಟ್ಟು ಆರು ಅಧಿಕ 6 ಅಣ್ವಸ್ತ್ರ ಇವೆ. ವಿಶ್ವದ ಪರಮಾಣು ಶಸ್ತ್ರಾಸ್ತ್ರಗಳಲ್ಲಿ 90 ಪ್ರತಿಶತವು ರಷ್ಯಾ ಮತ್ತು ಅಮೆರಿಕದ ಬಳಿಯೇ ಇದೆ ಎಂದು ವರದಿಯ ಅಂಕಿ ಅಂಶಗಳು ತಿಳಿಸಿವೆ.












Click it and Unblock the Notifications