Greenland: ಗ್ರೀನ್‌ಲ್ಯಾಂಡ್ ಬೇಕೆ ಬೇಕು ಎಂದು ಹಠ ಹಿಡಿದ ಟ್ರಂಪ್, ಕೊಡದೇ ಇದ್ದರೆ ಏನು ಮಾಡ್ತಾರಂತೆ ಗೊತ್ತಾ?
ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಅವರ ಹಠ ಕಡಿಮೆ ಆಗಿಲ್ಲ, ಈಗಾಗಲೇ ಅಮೆರಿಕ ಅಧ್ಯಕ್ಷ ಟ್ರಂಪ್ ದಕ್ಷಿಣ ಅಮೆರಿಕದಲ್ಲಿ ಹೆಸರು ಕೆಡಿಸಿಕೊಂಡಿದ್ದಾರೆ. ಇದೀಗ ಯುರೋಪ್ ದೇಶಗಳು ಕೂಡ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಗುಡುಗುತ್ತಿವೆ. ಹೀಗಿದ್ದರೂ ಗ್ರೀನ್‌ಲ್ಯಾಂಡ್ ಬೇಕೆ, ಬೇಕು ಎಂಬ ಹಠ ಮುಂದುವರಿಸಿದ್ದಾರೆ ಟ್ರಂಪ್ ಅವರು. ಅದರಲ್ಲೂ ಗ್ರೀನ್‌ಲ್ಯಾಂಡ್ ಬಿಟ್ಟುಕೊಡದೇ ಇದ್ದರೆ ಎಂತಹ ಕ್ರಮಕ್ಕೆ ಬೇಕಾದರೂ ಸಿದ್ಧ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಇದು ಯುರೋಪ್ ಮಾತ್ರ ಅಲ್ಲದೆ ಅಕ್ಕಪಕ್ಕದ ದೇಶಗಳಿಗೂ ಆತಂಕ ಹುಟ್ಟುವಂತೆ ಮಾಡಿದೆ.
ಅಮೆರಿಕದಲ್ಲಿ 2ನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರ ಹಿಡಿದ ನಂತರ ಒಂದಲ್ಲ ಒಂದು ರೀತಿ ಟ್ರಂಪ್ ಅವರ ಕಿರಿಕ್ ನಡೆಯುತ್ತಲೇ ಇದೆ. ಮೊದಲಿಗೆ ಕೆನಡಾ ವಿಚಾರವಾಗಿ ಕಿರಿಕ್ ಆಗಿತ್ತು, ಆ ನಂತರವೇ ಮತ್ತಷ್ಟು ದೇಶಗಳ ಮೇಲೆ ಟ್ರಂಪ್ ಅವರ ಕಣ್ಣು ಬಿದ್ದಿದೆ ಎಂಬ ಆರೋಪ ಕೇಳಿ ಬಂದಿತ್ತು. ಕೊನೆಗೆ ಅದು ವೆನಿಜುವೆಲಾ ಮೇಲಿನ ದಾಳಿಯವರೆಗೂ ಬಂದು ನಿಂತಿದೆ. ಈಗ ನೋಡಿದರೆ, ಗ್ರೀನ್‌ಲ್ಯಾಂಡ್ ಅಮೆರಿಕಗೆ ಬೇಕು ಅನ್ನೋ ಹಠವನ್ನು ಟ್ರಂಪ್ ಮುಂದುವರಿಸಿದ್ದಾರೆ. ಇಡೀ ಜಗತ್ತಿನ ದೊಡ್ಡ ದ್ವೀಪ ಎಂಬ ಕೀರ್ತಿ ಪಡೆದಿರುವ ಗ್ರೀನ್‌ಲ್ಯಾಂಡ್ ಭವಿಷ್ಯದಲ್ಲಿ ದೊಡ್ಡ ಸಂಪತ್ತು ಗಳಿಸಿಕೊಡಲಿದೆ ಎನ್ನುವ ನಿರೀಕ್ಷೆ ಇದಕ್ಕೆಲ್ಲಾ ಕಾರಣ ಎನ್ನಲಾಗಿದೆ.

ಯುರೋಪ್ ಒಕ್ಕೂಟ ಹೇಳುವುದೇನು?
ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಅನ್ನ ಅಮೆರಿಕ ಒಂದಲ್ಲ ಒಂದು ರೀತಿಯಲ್ಲಿ ವಶಪಡಿಸಿಕೊಳ್ಳುತ್ತದೆ ಎಂದಿದ್ದರು. ಅಲ್ಲದೆ ವಾಷಿಂಗ್ಟನ್ ಕ್ರಮ ಕೈಗೊಳ್ಳದಿದ್ದರೆ ರಷ್ಯಾ ಮತ್ತು ಚೀನಾ ವಶಪಡಿಸಿಕೊಳ್ಳುತ್ತವೆ ಎಂದು ಎಚ್ಚರಿಸಿ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದರು. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದು ಯುರೋಪ್ ಒಕ್ಕೂಟದಲ್ಲೇ ಬಿರುಕು ಮೂಡುವಂತೆ ಮಾಡಿದೆ.
ಆರ್ಕ್ಟಿಕ್ ಭಾಗದಲ್ಲಿ ರಷ್ಯಾ ಹಾಗೂ ಚೀನಾ ಮಿಲಿಟರಿ ಚಟುವಟಿಕೆ ಹೆಚ್ಚುತ್ತಿದ್ದು, ಇದನ್ನು ಗಮನದಲ್ಲಿ ಇಟ್ಕೊಂಡು ಖನಿಜ-ಸಮೃದ್ಧ ಡ್ಯಾನಿಶ್ ಎಂದರೆ ಡೆನ್ಮಾರ್ಕ್‌ಗೆ ಸೇರಿದ ಗ್ರೀನ್‌ಲ್ಯಾಂಡ್ ನಿಯಂತ್ರಿಸುವುದು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕ ಕ್ರಮವಾಗಿದೆ, ಎಂದು ಟ್ರಂಪ್ ಹೇಳುತ್ತಿದ್ದಾರೆ. ಆದರೆ ಯುರೋಪ್ ಒಕ್ಕೂಟದ ದೇಶಗಳು ಇದನ್ನು ಬಲವಾಗಿ ವಿರೋಧಿಸುತ್ತಿವೆ.
ಸ್ವತಂತ್ರ ಆಡಳಿತ ಹೊಂದಿದ ದೇಶ
ಸುಮಾರು 72 ವರ್ಷಗಳ ಹಿಂದೆ ಡೆನ್ಮಾರ್ಕ್ ವಸಾಹತು ಪ್ರದೇಶವಾಗಿದ್ದ ಗ್ರೀನ್‌ಲ್ಯಾಂಡ್ 1953ರ ನಂತರ ಸ್ವತಂತ್ರವಾಗಿತ್ತು. ಇನ್ನು 26 ವರ್ಷಗಳ ನಂತರ ಸ್ವರಾಜ್ಯ ಸ್ಥಾಪಿಸಿಕೊಂಡು ಸ್ವಂತ ಆಳ್ವಿಕೆ ನಡೆಸುತ್ತಾ ಇದ್ದರೂ, ಪಾಶ್ಚಿಮಾತ್ಯ ದೇಶಗಳ ಹಿಡಿತದಲ್ಲೇ ಇದೆ. ಹೀಗಿದ್ದಾಗ ಟ್ರಂಪ್ ಹೊಸ ಪ್ಲಾನ್ ಮಾಡುತ್ತಾ ಇದ್ದು, ಇಡೀ ಗ್ರೀನ್‌ಲ್ಯಾಂಡ್ ತನ್ನ ಹಿಡಿತಕ್ಕೆ ಪಡೆಯಲು ರೆಡಿಯಾಗಿದ್ದಾರೆ. ಆದರೆ ಇದು ಯುರೋಪ್ ಒಕ್ಕೂಟದಲ್ಲೇ ಭಯ ಹುಟ್ಟಿಸಿದೆ. ಭವಿಷ್ಯದಲ್ಲಿ ಇದು ದೊಡ್ಡ ಎಡವಟ್ಟಿಗೆ ಕೂಡ ಕಾರಣವಾಗುತ್ತಾ? ಎಂಬ ಪ್ರಶ್ನೆ ಭುಗಿಲೇಳುವಂತೆ ಮಾಡಿದೆ. ಈವರೆಗೂ ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯಾವ ಅಂತಿಮ ನಿರ್ಧಾರ ಕೈಗೊಂಡಿಲ್ಲ, ಆದರೆ ವೆನಿಜುವೆಲಾಗೆ ಆದ ಗತಿ ಆಗುತ್ತಾ? ಎಂಬ ಚರ್ಚೆ ನಡೆಯುತ್ತಿದೆ.












Click it and Unblock the Notifications