US Election: ಅಕ್ರಮವಾಗಿ ನೆಲೆಸಿದ್ದ ಭಾರತೀಯರನ್ನು ವಾಪಸ್ ಕಳಿಸಿದ ಅಮೆರಿಕ
ಅಮೆರಿಕ ಚುನಾವಣೆ ಅಖಾಡ ರಂಗೇರಿದೆ. ಎರಡನೇ ಅಧಿಕಾರ ಹಿಡಿಯಲು ಡೊನಾಲ್ಡ್ ಟ್ರಂಪ್ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಟ್ರಂಪ್‌ಗೆ ಟೆಸ್ಲಾ, ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಬೆಂಬಲ ಕೊಟ್ಟಿರುವುದು ಅವರಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ. ಟ್ರಂಪ್‌ಗೆ ಎದುರಾಳಿಯಾಗಿ ಭಾರತೀಯ ಮೂಲಕ ಕಮಲಾ ಹ್ಯಾರಿಸ್ ಸ್ಪರ್ಧೆ ಮಾಡಿದ್ದು, ಈ ಚುನಾವಣೆಯನ್ನು ವಿಶ್ವವೇ ಗಮನಿಸುತ್ತಿದೆ. ಈ ನಡುವೆ ಯುಎಸ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತೀಯರಿಗೆ ಆಘಾತ ಎದುರಾಗಿದೆ.
ಅಕ್ರಮವಾಗಿ ಯುಎಸ್‌ನಲ್ಲಿ ನೆಲೆಸಿದ್ದ ಭಾರತೀಯ ಪ್ರಜೆಗಳನ್ನು ಗಡೀಪಾರು ಮಾಡಲು ಅಮೆರಿಕ ಚಾರ್ಟರ್ಡ್ ಫ್ಲೈಟ್ ಅನ್ನು ಬಾಡಿಗೆಗೆ ಪಡೆದಿದೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ತಿಳಿಸಿದೆ ಎಂದು ವರದಿಯಾಗಿದೆ. ಭಾರತ ಸರ್ಕಾರದ ಸಹಯೋಗದೊಂದಿಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ಅಕ್ಟೋಬರ್ 22ರಂದೇ ಈ ಚಾರ್ಟರ್ಡ್ ವಿಮಾನವನ್ನು ಭಾರತಕ್ಕೆ ಕಳಿಸಲಾಗಿದೆ. ಯುಎಸ್‌ನಲ್ಲಿ ನೆಲೆಸಲು ಕಾನೂನು ಅನುಮತಿ ಇಲ್ಲದ ಭಾರತೀಯ ಪ್ರಜೆಗಳನ್ನು ಶೀಘ್ರದಲ್ಲೇ ವಾಪಸ್ ಕಳಿಸಲು ಕ್ರಮ ತೆಗೆದುಕೊಳ್ಳಲಾಗುವುದು, ವಲಸಿಗರು ಕಳ್ಳಸಾಗಾಣಿಕೆ ಮಾಡುವವರ ಸುಳ್ಳಿನ ಬಲೆಗೆ ಬೀಳಬಾರದು ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ಎ. ಕೆನೆಗಲ್ಲೊ ಹೇಳಿದ್ದಾರೆ.
ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ (DHS) ಅಮೆರಿಕ ವಲಸೆ ಕಾನೂನುಗಳನ್ನು ಜಾರಿಗೊಳಿಸುವುದನ್ನು ಮುಂದುವರೆಸಿದೆ ಮತ್ತು ಕಾನೂನುಬಾಹಿರವಾಗಿ ದೇಶದೊಳಗೆ ಪ್ರವೇಶಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಹೇಳಿದೆ.
2024ರ ಆರ್ಥಿಕ ವರ್ಷದಲ್ಲಿ ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ 1,60,000 ಕ್ಕೂ ಅಕ್ರಮ ವಲಸಿಗರನ್ನು ಗುರುತಿಸಿ ವಾಪಸ್ ಕಳಿಸಿದೆ. ಭಾರತ ಸೇರಿದಂತೆ ಜಗತ್ತಿನ 145 ದೇಶಗಳಿಗೆ 495ಕ್ಕೂ ಹೆಚ್ಚಿನ ವಿಮಾನಗಳ ಮೂಲಕ ಇವರನ್ನು ವಾಪಸ್ ಕಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಯುಎಸ್‌ಗೆ ಅಕ್ರಮವಾಗಿ ಬಂದು ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳಲು ಡಿಎಚ್‌ಎಸ್ ವಿಶ್ವದಾದ್ಯಂತ ದೇಶಗಳ ಜೊತೆ ಕೆಲಸ ಮಾಡುತ್ತಿದ್ದು, ಉಳಿದ ಎಲ್ಲಾ ಅಕ್ರಮ ವಲಸಿಗರನ್ನು ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಅನಿಯಮಿತ ವಲಸೆಯನ್ನು ಕಡಿಮೆ ಮಾಡಲು, ಕಾನೂನು ಬದ್ಧವಾದ ಮತ್ತು ಕ್ರಮಬದ್ಧ ವಲಸೆಯನ್ನು ಉತ್ತೇಜಿಸಲು ಕ್ರಮ ವಹಿಸಲಾಗಿದೆ. ದುರ್ಬಲ ಜನರ ಕಳ್ಳಸಾಗಣೆ ಮತ್ತು ಶೋಷಣೆಯನ್ನು ಕಡಿಮೆ ಮಾಡಲು, ಅಂತಾರಾಷ್ಟ್ರೀಯ ಅಪರಾಧ ಜಾಲಗಳನ್ನು ಮಟ್ಟ ಹಾಕಲು ಯುಎಸ್ ಈ ವಿಧಾನವನ್ನು ಬಳಸಿದೆ ಎಂದು ಹೇಳಿದೆ.
ಕಳೆದ ವರ್ಷ ಡಿಎಚ್‌ಎಸ್ ಕೊಲಂಬಿಯಾ, ಈಕ್ವೆಡಾರ್, ಪೆರು, ಈಜಿಪ್ಟ್, ಮಾರಿಟಾನಿಯಾ, ಸೆನೆಗಲ್, ಉಜ್ಬೇಕಿಸ್ತಾನ್, ಚೀನಾ ಮತ್ತು ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವಾರು ದೇಶಗಳಿಂದ ಆಗಮಿಸಿ ಯುಎಸ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಸಾವಿರಾರು ಜನರನ್ನು ವಾಪಸ್ ಕಳಿಸಿದೆ.












Click it and Unblock the Notifications