ಅರ್ಧಕ್ಕೆ ಇಳಿದ ವಿಶ್ವಸಂಸ್ಥೆಯ ಧ್ವಜ, ಕಾರಣ ತಿಳಿಯಿರಿ!
ಇಸ್ರೇಲ್ ಮತ್ತು ಹಮಾಸ್ ಉಗ್ರರ ಜಗಳದಲ್ಲಿ ಹತ್ತಾರು ಸಾವಿರ ಜನರು ಬಲಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಸಿಬ್ಬಂದಿ ಕೂಡ ಈ ಯುದ್ಧದಲ್ಲಿ ಜೀವ ಬಿಟ್ಟಿದ್ದಾರೆ. ಯುದ್ಧದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಸಹಾಯ ಮಾಡಲು ಹೋದ ವಿಶ್ವಸಂಸ್ಥೆಯ ಸಿಬ್ಬಂದಿಯೇ ಮೃತಪಟ್ಟಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ತನ್ನ ಸಿಬ್ಬಂದಿ ಸಾವಿನ ಹಿನ್ನೆಲೆ ವಿಶ್ವಸಂಸ್ಥೆ ಏನು ಮಾಡಿದೆ ಗೊತ್ತಾ?
ಹೌದು, ಇಸ್ರೇಲ್ ಯುದ್ಧದಲ್ಲಿ ಗಾಜಾ ಪಟ್ಟಿಯಲ್ಲಿ ಮೃತಪಟ್ಟ ತನ್ನ ಸಹೋದ್ಯೋಗಿಗಳಿಗೆ ವಿಶ್ವಸಂಸ್ಥೆ ಗೌರವ ಸಲ್ಲಿಸಿದೆ. ವಿಶ್ವಸಂಸ್ಥೆ ಸಿಬ್ಬಂದಿ ಸಾವಿನ ಗೌರವಾರ್ಥ ಏಷ್ಯಾದಾದ್ಯಂತ ವಿಶ್ವಸಂಸ್ಥೆಯ ಕಚೇರಿಗಳ ಎದುರು ಧ್ವಜವನ್ನ ಅರ್ಧಕ್ಕೆ ಇಳಿಸಿದೆ ವಿಶ್ವಸಂಸ್ಥೆ.

ಈವರೆಗೆ 100 ಕ್ಕೂ ಹೆಚ್ಚು ವಿಶ್ವಸಂಸ್ಥೆಯ ಸಿಬ್ಬಂದಿ ಯುದ್ಧಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಹಾಗೂ, ಇಸ್ರೇಲ್ ಸೇನೆ ವಿರುದ್ಧ ಈ ಬಗ್ಗೆ ವಿಶ್ವಸಂಸ್ಥೆ ಆಕ್ರೋಶ ಹೊರಹಾಕಿತ್ತು. ಈಗ ನೋಡಿದರೆ ತನ್ನ ಕಚೇರಿ ಎದುರಿನ ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸಲ್ಲಿಸಿದೆ.
ಕಿತಾಪತಿಗೆ ಶುರುವಾಗಿತ್ತು ಭೀಕರ ಯುದ್ಧ
ಬ್ಯಾಂಕಾಕ್, ಟೊಕಿಯೊ, ಬೀಜಿಂಗ್‌ನಲ್ಲಿರುವ ಕಚೇರಿ ಎದುರು ಸ್ಥಳೀಯ ಕಾಲಮಾನ ಬೆಳಗ್ಗೆ 9.30ಕ್ಕೆ ವಿಶ್ವಸಂಸ್ಥೆ ಧ್ವಜ ಅರ್ಧಕ್ಕೆ ಇಳಿಸಿ ಗೌರವ ಸಲ್ಲಿಸಲಾಗಿದೆ. ಹಮಾಸ್ ಉಗ್ರರ ಪಡೆಯು ದಕ್ಷಿಣ ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ದಾಳಿ ನಡೆಸಿತ್ತು.
ಆಗ ಇಸ್ರೇಲ್ ಯುದ್ಧವನ್ನೇ ಸಾರಿ, ಹಮಾಸ್ ಉಗ್ರರ ಸರ್ವನಾಶಕ್ಕೆ ಮುನ್ನುಗ್ಗಿತ್ತು. ಹೀಗೆ ಸುಮಾರು ಒಂದು ತಿಂಗಳಿಗು ಹೆಚ್ಚು ಕಾಲದಿಂದ ಗಾಜಾಪಟ್ಟಿ & ಇಸ್ರೇಲ್ ಸೇನೆ ಮಧ್ಯೆ ಭೀಕರ ಕಾಳಗವು ನಡೆಯುತ್ತಿದೆ. ಹಾಗಾದರೆ ಇಲ್ಲಿಯವರೆಗೆ ಎಷ್ಟು ಜನ ಮೃತಪಟ್ಟಿದ್ದಾರೆ?

ಸತ್ತವರ ಸಂಖ್ಯೆ 12,000ಕ್ಕೂ ಹೆಚ್ಚು
ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ 11,000 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಜನ ಸೇರಿ ಇಸ್ರೇಲ್ ಕಡೆಯೂ 1,200 ಪ್ರಜೆಗಳು ಮೃತಪಟ್ಟಿದ್ದಾರೆ ಅಂತಾ ಹೇಳಲಾಗಿದೆ. ಅದರಲ್ಲೂ ಗಾಜಾ ನೆಲದಲ್ಲಿ ಮೃತಪಟ್ಟ 11,000 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಜನರ ಪೈಕಿ, ಸುಮಾರು ಅರ್ಧದಷ್ಟು ಮಕ್ಕಳೇ ಮೃತಪಟ್ಟಿದ್ದಾರೆ ಅನ್ನೊ ಆರೋಪ ಕೂಡ ಇದೆ.
ಹೀಗಿದ್ದಾಗಲೇ ಯುದ್ಧ ಮತ್ತಷ್ಟು ಭೀಕರವಾಗಿದೆ, ಈಗಾಗಲೇ ಇಸ್ರೇಲ್ ಸೇನೆ ಗಾಜಾ ಭೂಮಿಗೆ ನುಗ್ಗಿ ಹಮಾಸ್ ಉಗ್ರರ ಸುರಂಗ ಮಾರ್ಗಗಳ ಮೇಲೆ ದಾಳಿ ಆರಂಭಿಸಿದೆ. 100 ಕ್ಕೂ ಹೆಚ್ಚು ವಿಶ್ವಸಂಸ್ಥೆಯ ಸಿಬ್ಬಂದಿ ಕೂಡ ಯುದ್ಧ ಕಣದಲ್ಲಿ ಬಲಿಯಾಗಿದ್ದು ದುರಂತ.
ಹೀಗೆ ಒಂದು ಕಡೆ ರಷ್ಯಾ & ಉಕ್ರೇನ್ ನಡುವೆ ಯುದ್ಧ ನಡೆಯುವ ಸಮಯದಲ್ಲೇ ಉಗ್ರರ ಪಡೆ ಮಾಡಿದ ಕಿತಾಪತಿಗೆ ಇಸ್ರೇಲ್ & ಗಾಜಾಪಟ್ಟಿ ನಡುವೆ ಕೂಡ ಕಾಳಗ ಶುರುವಾಗಿದೆ. ಈ ಸಮಯದಲ್ಲೇ ಯುದ್ಧವನ್ನ ನಿಲ್ಲಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನೂ ಆರಂಭಿಸಿವೆ ಜಗತ್ತಿನ ಹಲವು ದೇಶಗಳು. ಹೀಗಾಗಿ ಮುಂದೆ ಏನಾಗುತ್ತೆ? ಅಂತಾ ಕಾದು ನೋಡಬೇಕಿದೆ.












Click it and Unblock the Notifications