ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಒತ್ತಡ, ಉಕ್ರೇನ್ ಅಧ್ಯಕ್ಷ ಹೇಳಿದ್ದೇನು?
ರಷ್ಯಾ & ಉಕ್ರೇನ್ ಯುದ್ಧ ಇವತ್ತು ನಿಲ್ಲುತ್ತೆ, ನಾಳೆ ನಿಲ್ಲುತ್ತೆ ಅಂತಾ ಕಾದಿದ್ದೇ ಕಾದಿದ್ದು ಆದರೆ ಯುದ್ಧ ಮಾತ್ರ ನಿಲ್ಲುತ್ತಿಲ್ಲ. ಹೀಗಾಗಿ ಜನರು ಕೂಡ ರೊಚ್ಚಿಗೆದ್ದಿದ್ದು, ಉಕ್ರೇನ್‌ನಲ್ಲಿ ನೆಮ್ಮದಿ ಸಿಗುವುದು ಯಾವಾಗ? ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಅದರಲ್ಲೂ ಖುದ್ದು ಇಡೀ ಜಗತ್ತಿನ ದೊಡ್ಡಣ್ಣ ಅಮೆರಿಕ ಯುದ್ಧ ನಿಲ್ಲಿಸಲು ಎಂಟ್ರಿ ಕೊಟ್ಟಿದ್ದರೂ ಫಲ ನೀಡುತ್ತಿಲ್ಲ. ಇಂತಹ ಸಮಯದಲ್ಲೇ ಉಕ್ರೇನ್ ಅಧ್ಯಕ್ಷ ಮಹತ್ವದ ಹೇಳಿಕೆ ನೀಡಿದ್ದಾರೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ಇದೀಗ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಡುತ್ತಿದೆ ಯುದ್ಧ. ಯಾಕಂದ್ರೆ ಯುದ್ಧದಲ್ಲಿ ಈಗಾಗಲೇ ಉಕ್ರೇನ್ ಸೇನೆ ಸೋತು ಓಡಿ ಹೋಗಿಬಿಟ್ಟಿದೆ, ಅಲ್ಲದೆ ಉಕ್ರೇನ್ ರಾಜಧಾನಿ ಕೀವ್ ರಕ್ಷಣೆ ಮಾಡುವುದು ಕೂಡ ಕಷ್ಟಕರ ಎನ್ನಲಾಗುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲೇ ನ್ಯಾಟೋ ಒಕ್ಕೂಟದ ನಾಯಕರು ಕೂಡ ಯುದ್ಧವನ್ನ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಸ್ವತಃ ಉಕ್ರೇನ್ ಅಧ್ಯಕ್ಷ ಯುದ್ಧ ನಿಲ್ಲಿಸಲು ಒತ್ತಡ ಹೇರುತ್ತಿದ್ದಾರೆ.

ಯುದ್ಧ ನಿಲ್ಲಿಸಲು ಉಕ್ರೇನ್ ಒತ್ತಡ
ಹೌದು, ಅಮೆರಿಕ ಇದೀಗ ರಷ್ಯಾ ಎದುರು ಪ್ರಸ್ತಾವನೆ ಒಂದನ್ನ ಇಟ್ಟಿದೆ. ಆ ಪ್ರಸ್ತಾವನೆಯ ಪ್ರಕಾರ ಯುದ್ಧ ನಿಲ್ಲಿಸಲು ಹಲವು ಶರತ್ತುಗಳನ್ನು ವಿಧಿಸಲಾಗಿದೆ. ಇದಕ್ಕೆಲ್ಲಾ ಒಪ್ಪಿಕೊಳ್ಳಲು ಇದೀಗ ಉಕ್ರೇನ್ ಸಜ್ಜಾಗಿದೆ. ಇಷ್ಟೆಲ್ಲದರ ನಡುವೆ ಯುರೋಪ್ ಒಕ್ಕೂಟದ ದೇಶಗಳು ಯುದ್ಧ ನಿಲ್ಲಿಸಿ ಕದನ ವಿರಾಮ ಘೋಷಣೆ ಮಾಡಲು ಕ್ರಮ ಕೈಗೊಳ್ಳಬೇಕು ಅಂತಿದ್ದಾರೆ ಉಕ್ರೇನ್‌ನ ಅಧ್ಯಕ್ಷ ಝೆಲೆನ್ಸ್ಕಿ. ಆದರೆ ರಷ್ಯಾ ಮಾತ್ರ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಯುದ್ಧ ನಿಲ್ಲಿಸಲು ರಷ್ಯಾ ರೆಡಿ ಇಲ್ಲ?
ರಷ್ಯಾ ಇದೀಗ ಕದನ ವಿರಾಮಕ್ಕೆ ಒಪ್ಪಿಕೊಳ್ಳುವ ಅಗತ್ಯತೆ ಇಲ್ಲ, ಯಾಕಂದ್ರೆ ರಷ್ಯಾ ಸೇನೆಯು ಈಗಾಗಲೇ ಉಕ್ರೇನ್‌ನ ಬಹುತೇಕ ಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇಂತಹ ಸಮಯದಲ್ಲಿ ಕದನ ವಿರಾಮ ಘೋಷಣೆ ಮಾಡಿಕೊಂಡು ಬದುಕುವ ಅವಶ್ಯಕತೆ ಇಲ್ಲವಾಗಿದೆ. ಇದೇ ಕಾರಣಕ್ಕೆ ಯುದ್ಧ ಮುಂದುವರಿಸಿ, ಸಂಪೂರ್ಣ ಉಕ್ರೇನ್ ದೇಶವನ್ನು ತನ್ನ ವಶಕ್ಕೇ ಪಡೆದುಕೊಳ್ಳುವ ಪ್ಲಾನ್ ರಷ್ಯಾ ಸೇನೆಯ ಅಧಿಕಾರಿಗಳದ್ದು.
30 ದಿನಗಳ ತಾತ್ಕಾಲಿಕ ಕದನ ವಿರಾಮ?
ಉಕ್ರೇನ್ ವಿರುದ್ಧ ಮೊದಲಿಗೆ 30 ದಿನಗಳ ತಾತ್ಕಾಲಿಕ ಕದನ ವಿರಾಮ ಘೋಷಣೆ ಆಗಲಿದ್ದು, ಆ ನಂತರ ಪೂರ್ಣ ಪ್ರಮಾಣದ ಕದನ ವಿರಾಮ ಘೋಷಣೆ ಆಗಲಿದೆ. ಹೀಗಿದ್ದಾಗ ರಷ್ಯಾದ ಅಧ್ಯಕ್ಷರು ಹಲವು ರೂಲ್ಸ್ ಹಾಕಿದ್ದು, ಈ ಪೈಕಿ ರಷ್ಯಾ ಸೇನೆ ಉಕ್ರೇನ್ ಕೈಯಿಂದ ಕಿತ್ತುಕೊಂಡ ಪ್ರದೇಶಗಳನ್ನು ವಾಪಸ್ ಕೊಡುವುದಿಲ್ಲ ಎಂದು ಪಟ್ಟು ಹಿಡಿಯಲಾಗಿದೆ. ಹೀಗಾಗಿ ಯುದ್ಧ ನಿಲ್ಲಿಸುವುದೇ ಕಗ್ಗಂಟಾಗಿ ಪರಿಣಮಿಸಿದೆ.












Click it and Unblock the Notifications