Ukraine Peace Plan: ಅರಬ್ ನೆಲದಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಮಹತ್ವದ ಮಾತುಕತೆ
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ 4 ವರ್ಷ ಮುಗಿಯುತ್ತಿದೆ, ಈ ಇಬ್ಬರ ಕದನ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಹಲವು ವಿನಾಶಕ್ಕೆ ಕೂಡ ಕಾರಣವಾಗಿದೆ. ಹೀಗಾಗಿಯೇ ರಷ್ಯಾ ಮತ್ತು ಉಕ್ರೇನ್ ಯುದ್ಧ ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದರು. ಇದೀಗ ಅಮೆರಿಕದ ಅಧ್ಯಕ್ಷರಿಗೆ ಗೆಲುವು ಸಿಗುವುದು ಬಹುತೇಕ ಖಚಿತವಾಗುತ್ತಿದೆ, ಅದರ ಮುನ್ಸೂಚನೆ ಎನ್ನುವಂತೆ ಅತ್ತ ರಷ್ಯಾ ಮತ್ತು ಇತ್ತ ಉಕ್ರೇನ್ ಅಧಿಕಾರಿಗಳು ಯುಎಇ ನೆಲದಲ್ಲಿ ಮಹತ್ವದ ಚರ್ಚೆಗೆ ಆಗಮಿಸಿದ್ದಾರೆ.
ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜೊತೆ ಅಮೆರಿಕದ ಉನ್ನತ ಅಧಿಕಾರಿಗಳ ತಂಡ ಮಹತ್ವದ ಸಭೆ ನಡೆಸಿದ ನಂತರ ಈಗ ಮತ್ತೊಂದು ಮಹತ್ವದ ಘಟನೆ ನಡೆದಿದೆ. ಉಕ್ರೇನ್ ಯುದ್ಧ ಕೊನೆಗೊಳಿಸಲು ಅಮೆರಿಕ ರೂಪಿಸಿರುವ ಯೋಜನೆ ಭಾಗವಾಗಿ ಪುಟಿನ್ ಅವರ ಜೊತೆ ಅಮೆರಿಕದ ಉನ್ನತ ಅಧಿಕಾರಿಗಳ ತಂಡ ಮಹತ್ವದ ಸಭೆ ನಡೆಸಿತ್ತು. ಈ ಮೀಟಿಂಗ್ ನಂತರ ಯುಎಇ ನೆಲದಲ್ಲಿ ರಷ್ಯಾ, ಉಕ್ರೇನ್ ಹಾಗೂ ಅಮೆರಿಕ ಅಧಿಕಾರಿಗಳು ಇಂದು ಮಹತ್ವದ ಸಭೆ ಆರಂಭಿಸಿದ್ದಾರೆ.

ಪುಟಿನ್ ಜೊತೆ ಚರ್ಚೆ ಆಗಿದ್ದೇನು?
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಈ ಮಹತ್ವದ ಸಭೆಯನ್ನು ಆಯೋಜನೆ ಮಾಡಿ, ಮಾಸ್ಕೋ ಮತ್ತು ಕೀವ್ ನಡುವೆ ಸಂಧಾನ ನಡೆಸಲಾಗುತ್ತಿದೆ. ಪ್ರಮುಖ ಭೂಪ್ರದೇಶ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೂ, ಈ ಯುದ್ಧವನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬ ಪ್ರಯತ್ನವನ್ನು ಟ್ರಂಪ್ ಆಡಳಿತದ ಅಧಿಕಾರಿಗಳು ನಡೆಸುತ್ತಿದ್ದಾರೆ. ಎರಡನೇ ಮಹಾಯುದ್ಧ ನಂತರದ ಯುರೋಪಿನ ಅತ್ಯಂತ ಮಾರಕ ಸಂಘರ್ಷ ಎಂದು ರಷ್ಯಾ ಮತ್ತು ಉಕ್ರೇನ್ ಯುದ್ಧವನ್ನು ಗುರುತಿಸಲಾಗುತ್ತಿದೆ. ಈ ಕಾರಣಕ್ಕೆ ಹೇಗಾದರೂ ಮಾಡಿ ಯುದ್ಧವನ್ನು ಕೊನೆಗೊಳಿಸಬೇಕು ಎಂದು ಒದ್ದಾಡುತ್ತಿದೆ ಅಮೆರಿಕ. ಆದರೆ ಈ ವಿಚಾರದಲ್ಲಿ ಉಕ್ರೇನ್ ಒಂದು ಕಿರಿಕ್ ತೆಗೆದರೆ, ರಷ್ಯಾ ಇನ್ನೊಂದು ರೀತಿಯ ಕಿರಿಕ್ ಮಾಡುತ್ತಿದೆ.
ಯುರೋಪ್ ಒಕ್ಕೂಟದ ದೇಶಗಳ ಬೆಂಬಲ
ರಾಯಭಾರಿ ಸ್ಟೀವ್ ವಿಟ್ಕಾಫ್ ನೇತೃತ್ವದ ಯುಎಸ್ ಸಮಾಲೋಚಕರು ವ್ಲಾದಿಮಿರ್ ಪುಟಿನ್ ಅವರ ಜೊತೆಯಲ್ಲಿ ಚರ್ಚಿಸಿದ ನಂತರ, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸಭೆ ನಡೆಯುತ್ತಿರುವುದು ಭಾರಿ ಕುತೂಹಲ ಕೆರಳಿಸಿದೆ. ಜಗತ್ತಿನ ಘಟಾನುಘಟಿ ದೇಶಗಳು ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಸಾಥ್ ನೀಡಿವೆ. ಅದರಲ್ಲೂ ಈ ಯುದ್ಧ ನಿಂತರೆ ಯುರೋಪ್ ರಾಷ್ಟ್ರಗಳಿಗೆ ಸಾಕಷ್ಟು ಉಪಯೋಗ ಆಗಲಿದೆ. 2022ರ ಫೆಬ್ರವರಿ ತಿಂಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಶುರುವಾದ ನಂತರ ಯುರೋಪ್ ದೇಶಗಳು ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುತ್ತಿವೆ.
ಪ್ರಮುಖವಾಗಿ ತೈಲ ಹಾಗೂ ಅನಿಲ ಸರಬರಾಜು ವಿಚಾರದಲ್ಲಿ, ಯುರೋಪ್ ಒಕ್ಕೂಟದ ದೇಶಗಳು ಒದ್ದಾಡುತ್ತಿವೆ. ಆದರೆ ಈ ಯುದ್ಧ ನಿಂತ ನಂತರ ಎಲ್ಲಾ ಸರಿ ಹೋಗಬಹುದು ಎನ್ನುವ ನಿರೀಕ್ಷೆಯು ಮನೆಮಾಡಿದೆ. ಉಕ್ರೇನ್ ಬೆನ್ನಿಗೆ ನಿಂತಿರುವ ಯುರೋಪ್ ಒಕ್ಕೂಟದ ದೇಶಗಳು ಒಂದಷ್ಟು ಡಿಮ್ಯಾಂಡ್ ಇಟ್ಟಿದ್ದು, ಇನ್ನೊಂದು ಕಡೆಯಲ್ಲಿ ರಷ್ಯಾ ಕೂಡ ತಾನು ವಶಕ್ಕೆ ಪಡೆದಿರುವ ಜಾಗ ವಾಪಸ್ ಕೊಡಲ್ಲ ಎನ್ನುತ್ತಿದೆ. ಇದೇ ವಿಚಾರವಾಗಿ ಅಮೆರಿಕ ಇಬ್ಬರನ್ನೂ ಒಪ್ಪಿಸಿ ಯುದ್ಧವನ್ನು ನಿಲ್ಲಿಸಬೇಕಾದ ಭಾರಿ ದೊಡ್ಡ ಅನಿವಾರ್ಯತೆ ಇದೆ. ಡೊನಾಲ್ಡ್ ಟ್ರಂಪ್ ಅವರ ಆಡಳಿತ ಇದಕ್ಕಾಗಿ ಹಲವು ಸೂತ್ರಗಳನ್ನ ರೂಪಿಸಿದ್ದು, ಅದೇ ಆಧಾರದಲ್ಲಿ ಯುದ್ಧ ನಿಲ್ಲಿಸುವ ಪ್ರಯತ್ನ ಇದೀಗ ಅಮೆರಿಕದ ಅಧಿಕಾರಿಗಳಿಂದ ಸಾಗಿದೆ.












Click it and Unblock the Notifications