8.1 ಬಿಲಿಯನ್ ಡಾಲರ್ ಸಾಲಕ್ಕಾಗಿ ಉಕ್ರೇನ್ ಪರದಾಟ, ಶೀಘ್ರದಲ್ಲೇ ಸಿಹಿಸುದ್ದಿ ಸಾಧ್ಯತೆ... | Ukraine And Russia
ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧ ಇನ್ನೇನು 5ನೇ ವರ್ಷಕ್ಕೆ ಎಂಟ್ರಿ ಕೊಟ್ಟು, ದೊಡ್ಡ ಸಮಸ್ಯೆ ಮಾಡಲು ಸಜ್ಜಾದಂತೆ ಕಾಣುತ್ತಿದೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಎದ್ದೂ ಬಿದ್ದು ಸಂಧಾನ ಮಾಡಿಸಲು ಪರದಾಡುತ್ತಿದ್ದಾರೆ. ಹೀಗಿದ್ದರೂ ಯಾವುದೇ ರೀತಿ ರಿಯಾಕ್ಷನ್ ಕೊಡದ ರಷ್ಯಾ ತನ್ನ ಪಾಡಿಗೆ ತಾನು ದಾಳಿ ಮುಂದುವರಿಸಿದೆ. ಪರಿಣಾಮ ಕೈಯಲ್ಲಿ ಕಾಸು ಇಲ್ಲದೆ ಉಕ್ರೇನ್ ಈಗ ಸಾಲಕ್ಕಾಗಿ ಹಪಹಪಿಸುವ ಸ್ಥಿತಿ ಎದುರಾಗಿದೆ. ಈಗಾಗಲೇ ತನ್ನ ಸ್ನೇಹಿತ ದೇಶಗಳಿಂದ ಸಾಲು, ಸಾಲು ಸಾಲ ಪಡೆದಿರುವ ಉಕ್ರೇನ್ ಮತ್ತೊಂದು ಬಾರಿ ಐಎಂಎಫ್ ಬಳಿ ಸಾಲಕ್ಕಾಗಿ ಬೇಡಿಕೆಯನ್ನು ಇಟ್ಟಿದೆ. ಅದಕ್ಕೆ ಪೂರಕವಾಗಿ ಇದೀಗ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಹಾಯದ ಭರವಸೆಯನ್ನ ನೀಡಿದೆ.
ಯುದ್ಧ ನಿಲ್ಲಬೇಕು ಜಗತ್ತಲ್ಲಿ ಶಾಂತಿ ನೆಲಸಬೇಕು ಎಂಬುದು ಪ್ರತಿಯೊಬ್ಬರ ಬಯಕೆ ಆಗಿದೆ. ಹೀಗಿದ್ದರೂ ಪದೇ ಪದೇ ಜಗತ್ತಿನಲ್ಲಿ ಯುದ್ಧಗಳು ನಡೆಯುತ್ತಿರುವ ಕಾರಣಕ್ಕೆ ಭಾರಿ ಆತಂಕವೂ ಶುರುವಾಗಿದೆ. ಅಲ್ಲದೆ ಯಾವ ಕ್ಷಣದಲ್ಲಿ ಮತ್ತೊಂದು ಮಹಾಯುದ್ಧ, ಅಂದ್ರೆ 3ನೇ ಮಹಾಯುದ್ಧ ಶುರುವಾಗುತ್ತೋ? ಅನ್ನೋ ಆತಂಕ ಕೂಡ ಕಾಡುತ್ತಿದೆ. ಅದರಲ್ಲೂ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾದ ನಂತರ ಸಾಲು ಸಾಲು ಯುದ್ಧ ಶುರುವಾಗಿವೆ. ಇಂತಹ ಸಮಯದಲ್ಲಿ ಹಣ ಇಲ್ಲದೆ ಆರ್ಥಿಕವಾಗಿ ಒದ್ದಾಡುವ ಸ್ಥಿತಿಗೆ ಬಂದಿರುವ ಉಕ್ರೇನ್‌ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೊಸ ಭರವಸೆ ತುಂಬಿದೆ ಈಗ.

8.1 ಬಿಲಿಯನ್ ಡಾಲರ್ ಸಾಲ
ಉಕ್ರೇನ್ ದೇಶಕ್ಕೆ 4 ವರ್ಷಗಳ ಅವಧಿಗಾಗಿ ಸುಮಾರು 8.1 ಬಿಲಿಯನ್ ಡಾಲರ್ ಸಾಲ ನೀಡುವ ಬಗ್ಗೆ ಇದೀಗ ಪ್ರಮುಖ ಸಭೆ ಆಯೋಜನೆ ಮಾಡಲಾಗಿದೆ. ಯುದ್ಧ ಪೀಡಿತ ಉಕ್ರೇನ್‌ಗೆ ಸಾಲ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಅಂತಾರಾಷ್ಟ್ರೀಯ ಹಣಕಾಸು ನಿಧಿ, ಫೆಬ್ರವರಿ 26 ಗುರುವಾರದ ದಿನ ಮೀಟಿಂಗ್ ಮಾಡಲು ನಿರ್ಧಾರ ಕೈಗೊಂಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಮೆರಿಕದ ವಾಷಿಂಗ್ಟನ್‌ನಲ್ಲಿ ಕೂತು ಸಭೆ ನಡೆಸಿ ಉಕ್ರೇನ್‌ನ ಭವಿಷ್ಯ ನಿರ್ಧರಿಸಲಿದೆ. ಮಂಡಳಿಯ ಅನುಮೋದನೆಗೆ ಅಗತ್ಯವಿರುವ ಎಲ್ಲಾ ಷರತ್ತುಗಳನ್ನು ಉಕ್ರೇನ್ ಪೂರೈಸಿದೆ ಎಂದು ಐಎಂಎಫ್ ಫೆಬ್ರವರಿ ತಿಂಗಳ ಆರಂಭದಲ್ಲಿ ಹೇಳಿದೆ.
ಈ ಹಿನ್ನೆಲೆಯಲ್ಲಿ ಉಕ್ರೇನ್‌ಗೆ ಇದೀಗ 8.1 ಬಿಲಿಯನ್ ಡಾಲರ್ ಸಾಲ ಎಂದರೆ ಸುಮಾರು 74 ಸಾವಿರ ಕೋಟಿ ರೂಪಾಯಿ ಸಾಲ ಸಿಗುವ ನಿರೀಕ್ಷೆ ಇದೆ. ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಈಗ ಉಕ್ರೇನ್ ಸಾಲಕ್ಕೆ ಸಪೋರ್ಟ್ ಮಾಡುತ್ತಿದ್ದು, ಯುರೋಪ್ ಒಕ್ಕೂಟ ಕೂಡ ಉಕ್ರೇನ್ ಬೆನ್ನಿಗೆ ನಿಂತಿದೆ. ಆದರೆ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲದ ಹೊರತು ಎಷ್ಟು ಸಹಾಯ ಮಾಡಿದರೂ ಅದರಿಂದ ಉಪಯೋಗ ಇಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಹೀಗಾಗಿ ಆದಷ್ಟು ಬೇಗ ಯುದ್ಧ ನಿಲ್ಲಿಸಿ ಎಂಬ ಒತ್ತಾಯ ಕೂಡ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೋರಾಗಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.












Click it and Unblock the Notifications