ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳಿಗೆ ತೆರಿಗೆ ಆಘಾತ ನೀಡಿದ ಅಮೆರಿಕ ಅಧ್ಯಕ್ಷ!
ಅಮೆರಿಕ ಅಧ್ಯಕ್ಷ ಮತ್ತೊಮ್ಮೆ ಇರಾನ್ ವಿರುದ್ದ ರೊಚ್ಚಿಗೆದ್ದು, ಕಠಿಣ ಕ್ರಮ ಜಾರಿಗೆ ತರಲು ಇದೀಗ ಮುಂದಾಗಿದ್ದಾರೆ. ಆದರೆ ಈ ಬಾರಿ ನೇರವಾಗಿ ಇರಾನ್ ವಿರುದ್ಧ ಕ್ರಮ ಕೈಗೊಳ್ಳದೆ, ಇರಾನ್ ಜೊತೆ ಯಾರು ವ್ಯಾಪಾರ ನಡೆಸುತ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರ ಇದೀಗ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಇರಾನ್‌ನಲ್ಲಿ ಇದೀಗ ಭಾರಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಆಡಳಿತ ವಿರೋಧಿ ಅಲೆಯ ನಡುವೆ ಹಿಂಸೆ ಜೋರಾಗಿದೆ. ಹೀಗಿದ್ದಾಗ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಕಠಿಣ ಕ್ರಮ ಜಾರಿಗಾಗಿ ಮುಂದಾಗಿದ್ದಾರೆ.
ಅಲಿ ಖಮೇನಿ ಆಡಳಿತ ವಿರೋಧಿಸಿ, ಸರ್ವಾಧಿಕಾರಿ ನೀತಿ ನಮಗೆ ಬೇಡ ಎಂದು ಇರಾನ್‌ನ ಜನಗಳು ರೊಚ್ಚಿಗೆದ್ದು ಹೋರಾಟ ನಡೆಸುತ್ತಿದ್ದಾರೆ. ಇದರ ಪರಿಣಾಮ ಇದೀಗ ಇಡೀ ಇರಾನ್ ಧಗಧಗ ಅಂತಾ ಹೊತ್ತಿ ಉರಿಯುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿ ಎಂದು ಜಗತ್ತಿನ ಹಲವು ದೇಶಗಳು ತಮ್ಮ ಅಭಿಪ್ರಾಯ ತಿಳಿಸಿವೆ. ಇಂತಹ ಸ್ಥಿತಿಯಲ್ಲಿ ಭಾರಿ ಗಂಭೀರ ಕ್ರಮ ಕೈಗೊಳ್ಳಲು ಮುಂದಾಗಿರುವ ಟ್ರಂಪ್ ಅವರು, ಖಮೇನಿ ಸರ್ಕಾರದ ಮೇಲೆ ಒತ್ತಡ ಹೇರಲು ಇದೀಗ ಇರಾನ್ ಜೊತೆಯಲ್ಲಿ ವ್ಯಾಪಾರ ನಡೆಸುವ ದೇಶಗಳ ಮೇಲೆ ಶೇಕಡಾ 25ರಷ್ಟು ಹೆಚ್ಚುವರಿ ಸುಂಕ ಘೋಷಣೆ ಮಾಡಿದ್ದಾರೆ. ಹಾಗಾದರೆ ಇದು ನಮ್ಮ ಭಾರತದ ಮೇಲೆ ಕೂಡ ಪರಿಣಾಮ ಬೀರುತ್ತಾ? ಬನ್ನಿ ತಿಳಿಯೋಣ.

ಡೊನಾಲ್ಡ್ ಟ್ರಂಪ್ ತೆರಿಗೆ ಶಾಕ್
ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಿಢೀರ್ ತೆರಿಗೆ ಬಾಣ ಪ್ರಯೋಗ ಮಾಡಿದ್ದಾರೆ. ಇದು ಇರಾನ್ ಜೊತೆಗೆ ವ್ಯಪಾರ ನಡೆಸುತ್ತಿರುವ ದೇಶಗಳಿಗೆ ಆಘಾತ ನೀಡಿದೆ. ತಕ್ಷಣ ಜಾರಿಗೆ ಬರುವಂತೆ ಇರಾನ್ ಜೊತೆ ವ್ಯಾಪಾರ ಮಾಡುವ ಯಾವುದೇ ದೇಶ ಅಮೆರಿಕದ ಜೊತೆಯಲ್ಲಿ ಮಾಡುವ ಯಾವುದೇ ವ್ಯವಹಾರದ ಮೇಲೆ ಶೇ. 25ರಷ್ಟು ಸುಂಕ ಪಾವತಿ ಮಾಡಬೇಕಿದೆ. ಅಲ್ಲದೆ ಈ ಆದೇಶ ಅಂತಿಮ ಹಾಗೂ ನಿರ್ಣಾಯಕ ಎಂದು ಹೊಸ ತೆರಿಗೆ ಬಾಂಬ್ ಪ್ರಯೋಗ ಮಾಡಿದ್ದಾರೆ.
ಭಾರತದ ಮೇಲೂ ಪರಿಣಾಮ ಬೀರಲಿದೆಯಾ?
ಇರಾನ್ ಜೊತೆಗೆ ಚೀನಾ ಅತಿದೊಡ್ಡ ಪ್ರಮಾಣದಲ್ಲಿ ವ್ಯಾಪಾರ & ವ್ಯವಹಾರ ನಡೆಸುತ್ತಾ ಬಂದಿದೆ. ಇದರ ಜೊತೆಗೆ ಭಾರತ, ಯುಎಇ ಹಾಗೂ ಟರ್ಕಿ ಕೂಡ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತಾ ಬಂದಿದ್ದು, ರಷ್ಯಾ ಕೂಡ ಈ ವಿಚಾರದಲ್ಲಿ ಮುಂಚೂಣಿ ದೇಶವಾಗಿದೆ. ಭಾರತ 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಇರಾನ್ ಜೊತೆ ಸುಮಾರು 14,000 ರಿಂದ 15,000 ಕೋಟಿ ರೂಪಾಯಿ ವ್ಯಾಪಾರ ವಹಿವಾಟು ನಡೆಸಿದೆ. ಇನ್ನೊಂದು ಕಡೆ ರಷ್ಯಾ ಕೂಡ ಯುದ್ಧ ಕಾಲದಲ್ಲಿ ಇರಾನ್ ನಂಬಿ ವ್ಯಾಪಾರ ನಡೆಸುತ್ತಿದೆ. ಇದೀಗ ಟ್ರಂಪ್ ಅವರ ನಿರ್ಧಾರ ಈ ಎಲ್ಲಾ ದೇಶಗಳ ಮೇಲೆ ಕೂಡ ಪರಿಣಾಮ ಬೀರುವ ಆತಂಕ ಮೂಡಿಸಿದೆ.












Click it and Unblock the Notifications