Tirupati Hundi: ತಿರುಪತಿ ತಿಮ್ಮಪ್ಪನಿಗೆ ಮತ್ತೊಮ್ಮೆ ಹಣದ ಮಳೆ: ಒಂದೇ ದಿನದಲ್ಲಿ ಕೋಟಿ ಕೋಟಿ ಆದಾಯ
ತಿರುಮಲ ಶ್ರೀಗಳಿಗೆ ಮತ್ತೊಮ್ಮೆ ಹಣದ ಮಳೆ ಸುರಿದಿದೆ. ತಿಮ್ಮಪ್ಪನ ಹುಂಡಿಯಲ್ಲಿ ಬಹಳ ದಿನಗಳ ನಂತರ ಒಂದೇ ದಿನದಲ್ಲಿ ದೊಡ್ಡ ಮೊತ್ತದ ಆದಾಯ ಸಂಗ್ರಹವಾಗಿದೆ.
ಹೌದು.. ತಿರುಮಲ ಶ್ರೀವಾರಿ ಹುಂಡಿಗೆ ಮಂಗಳವಾರ ಒಂದೇ ದಿನ 5.41 ಕೋಟಿ ರೂ. ಸಂಗ್ರಹವಾಗಿದೆ. ಇದು ತಿರುಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ಸಂಗ್ರಹವಾದ ದಾಖಲೆಯ ಆದಾಯವಾಗಿದೆ.

ಮಂಗಳವಾರ 75,125 ಭಕ್ತರು ಸ್ವಾಮಿಯ ದರ್ಶನ ಪಡೆದರು. 31,140 ಭಕ್ತರು ಹರಕೆಯನ್ನು ತೀರಿಸಿ ಪೂಜೆ ಸಲ್ಲಿಸಿದರು. ಮಂಗಳವಾರ ಬೆಟ್ಟದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ವಾಹನ ದಟ್ಟಣೆ ಕೂಡ ಹೆಚ್ಚಾಗಿರುವುದು ಕಂಡು ಬಂತು. ಕೃಷ್ಣ ತೇಜ ಅತಿಥಿ ಗೃಹದವರೆಗೂ ಎಲ್ಲ ಕಂಪಾರ್ಟ್ ಮೆಂಟ್‌ಗಳು ಉದ್ದನೆ ಸರತಿ ಸಾಲುಗಳಿಂದ ಭರ್ತಿಯಾಗಿದ್ದವು. ಅಲ್ಲದೆ ಶ್ರೀವಾರಿ ಸರ್ವ ದರ್ಶನಕ್ಕೆ 20 ಗಂಟೆಗಳು ಬೇಕಾಯಿತು.
ಇದರಿಂದಾಗಿ ತಿರುಮಲ ಶ್ರೀವಾರಿ ಸರ್ವದರ್ಶನದಲ್ಲಿ ನೂಕುನುಗ್ಗಲು ಕೂಡ ಕಂಡು ಬಂತು. ಕಳೆದೊಂದು ವಾರದಿಂದ ಬೆಟ್ಟದಲ್ಲಿ ಜನಸಂದಣಿ ಹೆಚ್ಚಾಗುತ್ತಲೇ ಇದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್-2 ಮತ್ತು ನಾರಾಯಣಗಿರಿ ಶೆಡ್‌ಗಳ ಕಂಪಾರ್ಟ್‌ಮೆಂಟ್‌ಗಳು ಶ್ರೀವಾರಿಯ ಉಚಿತ ಸರ್ವದರ್ಶನಕ್ಕಾಗಿ ಬಂದ ಭಕ್ತರಿಂದ ತುಂಬಿ ಹೋಗಿವೆ. ತಿರುಪತಿ ದೇವಸ್ಥಾನದ ಹೊರಗೆ ಉದ್ದನೆ ಸರತಿ ಸಾಲು ಕಂಡು ಬರುತ್ತಿದೆ.

ಕ್ಯೂ ಲೈನ್‌ನಲ್ಲಿರುವ ಭಕ್ತರಿಗೆ ಟಿಟಿಡಿ ನಿಯಮಿತವಾಗಿ ಹಾಲು, ಅಕ್ಕಿ ಮತ್ತು ಕುಡಿಯುವ ನೀರನ್ನು ವಿತರಿಸುತ್ತಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್-1ರ 7 ಕಂಪಾರ್ಟ್ ಮೆಂಟ್ ಗಳಲ್ಲಿ 300 ರೂಪಾಯಿ ವಿಶೇಷ ಪ್ರವೇಶ ಟಿಕೆಟ್ ಹೊಂದಿರುವ ಭಕ್ತರು ದರ್ಶನಕ್ಕಾಗಿ ಕಾಯುತ್ತಿರುವ ದೃಶ್ಯಗಳು ಸರ್ವೇ ಸರ್ವೇಸಾಮಾನ್ಯವಾಗಿವೆ. ವಿಶೇಷ ಪ್ರವೇಶ ಟಿಕೆಟ್ ಪಡೆದವರ ದರ್ಶನಕ್ಕೆ 3 ಗಂಟೆ ತೆಗೆದುಕೊಳ್ಳುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ
ಮತ್ತೊಂದೆಡೆ, ತಿರುಮಲ ಶ್ರೀವಾರಿ ದರ್ಶನಕ್ಕೆ ಸಂಬಂಧಿಸಿದಂತೆ ವೈರಲ್ ವದಂತಿಗಳನ್ನು ನಂಬಬೇಡಿ ಎಂದು ಟಿಟಿಡಿ ಕೇಳಿಕೊಂಡಿದೆ. ವಯೋವೃದ್ಧರ ವಿಷಯದಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪುದಾರಿಗೆಳೆಯುವ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಇದು ಸಂಪೂರ್ಣ ಸತ್ಯವಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
ಟಿಟಿಡಿಪಿ ವತಿಯಿಂದ ಒಂದು ಸಾವಿರ ವೃದ್ಧರು ಮತ್ತು ಅಂಗವಿಕಲರಿಗೆ ಪ್ರತಿ ತಿಂಗಳು ವಿಶೇಷ ಕೋಟಾದ ದರ್ಶನ ಟಿಕೆಟ್ ಬಿಡುಗಡೆ ಮಾಡಲಾಗುವುದು. ಪ್ರತಿ ತಿಂಗಳ 23 ರಂದು ಮಧ್ಯಾಹ್ನ 3 ಗಂಟೆಗೆ ಹಿರಿಯರು ಮತ್ತು ಅಂಗವಿಕಲರಿಗೆ ಮೂರು ತಿಂಗಳು ಮುಂಚಿತವಾಗಿ ಆನ್‌ಲೈನ್ ಕೋಟಾ ಬಿಡುಗಡೆ ಮಾಡಲಾಗುತ್ತಿದೆ ಎಂದು ಟಿಟಿಡಿ ಹೇಳಿದೆ.

ವೃದ್ಧರು ಮತ್ತು ಅಂಗವಿಕಲರ ಭೇಟಿಗೆ ಸಂಬಂಧಿಸಿದಂತೆ, ಆಗಸ್ಟ್ 2024 ರವರೆಗೆ ಆನ್‌ಲೈನ್ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ. ತಿರುಮಲದ ತಿರುಮಲ ನಂಬಿ ದೇವಸ್ಥಾನದ ಪಕ್ಕದಲ್ಲಿ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ಶ್ರೀವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಈ ದರ್ಶನ ಟಿಕೆಟ್ ಬುಕ್ ಮಾಡಿದ ವ್ಯಕ್ತಿಗೆ ರೂ.50/- ಮೌಲ್ಯದ ಲಡ್ಡೂ ಉಚಿತವಾಗಿ ನೀಡಲಾಗುವುದು. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರಗಳನ್ನು ನಂಬಬೇಡಿ ಎಂದು ಟಿಟಿಡಿ ಮನವಿ ಮಾಡಿದೆ.
ಇಂತಹ ಸುಳ್ಳು ಸುದ್ದಿ ಹಾಗೂ ವದಂತಿಗಳ ಬಗ್ಗೆ ಭಕ್ತರು ಎಚ್ಚರಿಕೆ ವಹಿಸುವಂತೆ ಟಿಟಿಡಿ ಮನವಿ ಮಾಡಿದೆ. ಭಕ್ತರು ಟಿಟಿಡಿ ಅಧಿಕೃತ ವೆಬ್‌ಸೈಟ್ www.tirumala.org, https://ttdevastanams.ap.in ಮೂಲಕ ತಿರುಮಲದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಂದು ಅದು ತಿಳಿಸಿದೆ.












Click it and Unblock the Notifications