ರೈನೊ ಬೇಟೆಯಾಡಲು ಹೋಗಿ ಸಿಂಹಗಳಿಗೆ ಭೋಜನವಾದರು ಮೂರು ಮಂದಿ!
ಕೆಂಟನ್, ಜುಲೈ 6: ಅಳಿವಿನಂಚಿನಲ್ಲಿರುವ ರೈನೊಗಳನ್ನು ಬೇಟೆಯಾಡಲು ಹೋಗಿದ್ದ ಬೇಟೆಗಾರರು ಹಸಿದ ಸಿಂಹಗಳ ಹೊಟ್ಟೆಗೆ ಆಹಾರವಾದ ಘಟನೆ ದಕ್ಷಿಣ ಆಫ್ರಿಕಾದ ಸಿಬುಯಾ ಗೇಮ್ ರಿಸರ್ವ್ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ದಕ್ಷಿಣ ಆಫ್ರಿಕಾದ ಪೂರ್ವ ಪ್ರಾಂತ್ಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ರೈನೊಗಳನ್ನು ಕೊಂದು, ಅವುಗಳ ಬೆಲೆಬಾಳುವ ಕೊಂಬುಗಳನ್ನು ಕತ್ತರಿಸಿ ತರಲು ಹೋಗಿದ್ದ ಮೂವರು ಬೇಟೆಗಾರರು ಸಿಂಹಗಳ ದಾಳಿಗೆ ಬಲಿಯಾಗಿದ್ದಾರೆ.
ಒಬ್ಬ ಬೇಟೆಗಾರನ ತಲೆ, ದೇಹದ ಕೆಲವು ರಕ್ತ ಸಿಕ್ತ ಭಾಗಗಳು, ಕಾಲಿನ ಭಾಗಗಳು ಮತ್ತು ಮೂರು ಜೊತೆ ಖಾಲಿ ಶೂಗಳು ಸ್ಥಳದಲ್ಲಿ ದೊರೆತಿವೆ.

ಅಲ್ಲದೆ, ಸಿಂಹಗಳು ಬೇಟೆಯಾಡಿದ ಜಾಗದಲ್ಲಿ ಸೈಲೆನ್ಸರ್ ಅಳವಡಿಸಿದ್ದ ರೈಫಲ್‌ಗಳು, ವೈರ್ ಕಟರ್‌ಗಳು ಮತ್ತು ರೈನೊಗಳ ಕೊಂಬು ಕತ್ತರಿಸಲು ಕೊಂಡೊಯ್ದಿದ್ದ ಕೊಡಲಿ ಸಹ ಸಿಕ್ಕಿವೆ.
ಇವುಗಳ ಆಧಾರದಲ್ಲಿ ಮೂವರು ಬೇಟೆಗಾರರು ಸತ್ತಿದ್ದಾರೆ ಎಂದು ಊಹಿಸಲಾಗಿದೆ. ಇನ್ನೂ ಹೆಚ್ಚು ಬೇಟೆಗಾರರು ಕಾಡಿನೊಳಗೆ ಹೋಗಿರುವ ಸಾಧ್ಯತೆ ಇರಬಹುದು ಎಂದು ಹೆಲಿಕಾಪ್ಟರ್‌ನಲ್ಲಿ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ. ಆದರೆ, ಇದುವರೆಗೂ ಯಾವುದೇ ಹೆಚ್ಚಿನ ಸುಳಿವು ದೊರೆತಿಲ್ಲ.
ಮೂರು ಜೊತೆ ಖಾಲಿ ಶೂಗಳು ಮತ್ತು ಸಾಕಷ್ಟು ದೇಹ ಭಾಗಗಳನ್ನು ಪತ್ತೆಹಚ್ಚಿದ್ದೇವೆ. ಇದರಿಂದ ಸಿಂಹಗಳು ಕನಿಷ್ಠ ಮೂವರನ್ನು ತಿಂದಿವೆ ಎಂಬುದು ಗೊತ್ತಾಗುತ್ತಿದೆ. ಆದರೆ, ಅಲ್ಲಿ ಚೆಲ್ಲಿರುವ ರಕ್ತದ ಪ್ರಮಾಣವನ್ನು ನೋಡಿದಾಗ ಇನ್ನೂ ಹೆಚ್ಚಿನವರು ಅದಕ್ಕೆ ಬಲಿಯಾಗಿರುವ ಸಂಭವ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ದಿನಗಳಿಗೆ ಸಾಲುವಷ್ಟು ಆಹಾರವನ್ನು ಹೊತ್ತುಕೊಂಡು ಅವರು ಅಲ್ಲಿಗೆ ಹೋಗಿದ್ದರು. ಬೇಟೆಗೆ ಬಳಸುವ ರೈಫಲ್ಸ್ ಮತ್ತು ಕೊಡಲಿಗಳು ದೊರಕಿದ್ದು, ಅವರು ರೈನೊಗಳ ಬೇಟೆಗೆ ತೆರಳಿದ್ದರು ಎಂಬ ಅನುಮಾನವನ್ನು ಬಲಪಡಿಸಿವೆ ಎಂದು ವಿವರಿಸಿದ್ದಾರೆ.












Click it and Unblock the Notifications