• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಹೆಯಲ್ಲಿ ಸಿಲುಕಿರುವ ಕೋಚ್‌ನ ಬದುಕು ಇನ್ನೂ ದುರಂತಮಯ

|

ಬೆಂಗಳೂರು, ಜುಲೈ 9: 'ಏನೂ ಗೊತ್ತಿಲ್ಲದ ಆ ಮಕ್ಕಳನ್ನು ಏಕೆ ಗುಹೆಯೊಳಗೆ ಕರೆದೊಯ್ಯಬೇಕಿತ್ತು?', '25 ವರ್ಷದ ಮನುಷ್ಯ ಚಿಕ್ಕವನಲ್ಲ. ಆತನಿಗೆ ಬುದ್ಧಿ ಇರಲಿಲ್ಲವೇ?', 'ಆತನಿಗೆ ಶಿಕ್ಷೆ ವಿಧಿಸಬೇಕು'...

ಸುಮಾರು ಹದಿನೈದು ದಿನಗಳಿಂದ ಗುಹೆಯೊಂದರಲ್ಲಿ ಸಿಲುಕಿರುವ ಥಾಯ್ಲೆಂಡ್‌ನ ಬಾಲಕರ ಫುಟ್ಬಾಲ್ ತಂಡದ ಕೋಚ್ ಎಕ್ಕೊಪಲ್ ಚಂಟಾವೊಂಗ್ ಕುರಿತು ಕೇಳಿಬರುತ್ತಿರುವ ಮಾತುಗಳಿವು.

ಫುಟ್ಬಾಲ್ ತಂಡದ ಮಕ್ಕಳಿಗೆ ಆಟದ ನಡುವೆ ವಿರಾಮ ನೀಡುವ ಮನರಂಜನೆಯ ಉದ್ದೇಶದಿಂದಲೋ ಅಥವಾ ಅವರಲ್ಲಿ ಸಾಹಸ ಮನೋಭಾವ ಮತ್ತು ಸ್ಥೈರ್ಯ ತುಂಬುವ ಸಲುವಾಗಿಯೂ ಅವರು ಅಲ್ಲಿಗೆ ಕರೆದೊಯ್ದಿರಬಹುದು.

ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ ಬಾಲಕರನ್ನು ರಕ್ಷಿಸಿದ್ದು ಹೇಗೆ?

ಆದರೆ ಗುಹೆಯಲ್ಲಿ ತನ್ನೊಟ್ಟಿಗೆ ಸಿಲುಕಿರುವ ತಮಗೆ ಧೈರ್ಯ ತುಂಬಿ ಅಪಾಯವಾಗದಂತೆ ವಾರಗಟ್ಟಲೆ ರಕ್ಷಿಸಿದ್ದಲ್ಲದೆ, ಅವರಿಗೆ ತನ್ನ ಪಾಲಿನ ಆಹಾರವನ್ನೂ ನೀಡಿದ 25 ವರ್ಷದ ಚಂಟಾವೊಂಗ್ ಬಗ್ಗೆ ಅದೇ ಮಕ್ಕಳು ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಈಗ ಎಲ್ಲರ ಟೀಕೆ, ಆಕ್ರೋಶಕ್ಕೆ ಗುರಿಯಾಗುತ್ತಿರುವ ಚಂಟಾವೊಂಗ್ ಬಾಲ್ಯದ ಬದುಕಿನ ಕಥೆ, ಗುಹೆಯೊಳಗೆ 12 ಪುಟ್ಟ ಮಕ್ಕಳ ಜೀವದ ಹೊಣೆ ಹೊತ್ತುಕೊಂಡಿದ್ದ ಈ ಸಮಯಕ್ಕಿಂತಲೂ ವಿಷಾದಕರ ಮತ್ತು ಯಾತನಾಮಯ.

ಥೈಲ್ಯಾಂಡ್ ಗುಹೆಯೊಳಗೆ ಸಿಲುಕಿರುವ ಕೋಚ್ ಬರೆದ ಮನಮಿಡಿಯುವ ಪತ್ರ

ಚಂಟಾವೊಂಗ್‌ನ ಜೀವನಗಾಥೆ ಎಂಥಹವರಲ್ಲಿಯೂ ಕಣ್ಣಾಲಿಗಳಲ್ಲಿ ನೀರು ಜಿನುಗುತ್ತದೆ.

ಬಾಲ್ಯದಲ್ಲೇ ವಂಚಿಸಿತ್ತು ಸಾವು

ಬಾಲ್ಯದಲ್ಲೇ ವಂಚಿಸಿತ್ತು ಸಾವು

ಥಾಯ್ಲೆಂಡ್‌ನ ಹಳ್ಳಿಯೊಂದರಲ್ಲಿ ಜನಿಸಿದ ಚಂಟಾವೊಂಗ್‌ಗೆ ಸಾವಿನ ಸಾಂಗತ್ಯ ಹೊಸತಲ್ಲ. ಅದು 2003ನೇ ಇಸವಿ. ಉತ್ತರ ಥಾಯ್ಲೆಂಡ್ ಭಾಗದ ಇಡೀ ಹಳ್ಳಿಗೆ ಹಳ್ಳಿಯೇ ಸಾಂಕ್ರಾಮಿಕ ಕಾಯಿಲೆಯೊಂದಕ್ಕೆ ತುತ್ತಾಯಿತು.

ಆಗ 10ನೇ ವಯಸ್ಸಿನಲ್ಲಿದ್ದ ಈ ದುರಂತ ನಾಯಕ ಅದು ಹೇಗೆ ಬದುಕುಳಿದನೋ ಗೊತ್ತಿಲ್ಲ. ಆದರೆ ಕಾಯಿಲೆ ಆತನ ತಂದೆ, ತಾಯಿ ಮತ್ತು ಏಳು ವರ್ಷದ ತಮ್ಮನನ್ನು ಬಲಿತೆಗೆದುಕೊಂಡಿತ್ತು. ಸಾವು ಆತನನ್ನು ವಂಚಿಸಿತ್ತು.

ಅವಿಭಕ್ತ ಕುಟುಂಬದಲ್ಲಿ ಬೆಳೆಯುತ್ತಿದ್ದ ಚಂಟಾವೊಂಗ್‌ನನ್ನು ಸಂಬಂಧಿಕರು ನೋಡಿಕೊಳ್ಳುತ್ತಿದ್ದರೂ, ಸದಾ ದುಃಖದಲ್ಲಿ ಒಂಟಿಯಾಗಿ ಇರುತ್ತಿದ್ದ ಪುಟ್ಟ ಬಾಲಕನನ್ನು ಸಂತೈಸಿ ಆಘಾತದಿಂದ ಹೊರತರುವುದು ಅವರಿಗೆ ಸಾಧ್ಯವಾಗಲಿಲ್ಲ.

ಸನ್ಯಾಸತ್ವ ದೀಕ್ಷೆ

ಸನ್ಯಾಸತ್ವ ದೀಕ್ಷೆ

ಕೊನೆಗೆ 12 ವರ್ಷದವನಾಗಿದ್ದಾಗ ಆ ಬಾಲಕನಿಗೆ ಸನ್ಯಾಸತ್ವ ದೀಕ್ಷೆ ನೀಡಲು ತರಬೇತಿ ಕೊಡಿಸುವ ಸಲುವಾಗಿ ಬೌದ್ಧ ದೇವಾಲಯಕ್ಕೆ ಕಳುಹಿಸಲು ಸಂಬಂಧಿಕರು ನಿರ್ಧರಿಸಿದರು.

ಒಂದು ದಶಕ ದೇವಸ್ಥಾನದಲ್ಲಿ ಕಳೆದ ಚಂಟಾವೊಂಗ್, ಅಲ್ಲಿ ಕೇಸರಿ ಉಡುಗೆ ಧರಿಸಿ ಧ್ಯಾನ ಕಲಿತರು.

ಹೆಚ್ಚಿನ ಸಮಯ ದೇವಸ್ಥಾನದಲ್ಲಿಯೇ ಉಳಿದುಕೊಂಡು ಇತರೆ ಸನ್ಯಾಸಿಗಳ ಜತೆ ಧ್ಯಾನ ಮಾಡುತ್ತಿದ್ದರು. ಆಗಾಗ ಮನೆಗೆ ಬಂದು ಹೋಗುತ್ತಿದ್ದರು.

ಆದರೆ, ಎಲ್ಲ ಬದಲಾದದ್ದು ಮೂರು ವರ್ಷದ ಕೆಳಗೆ.

ಹುಟ್ಟಿಕೊಂಡಿತು ಫುಟ್ಬಾಲ್ ತಂಡ

ಹುಟ್ಟಿಕೊಂಡಿತು ಫುಟ್ಬಾಲ್ ತಂಡ

ಚಿಯಾಂಗ್ ರೈ ಪ್ರಾಂತ್ಯದ ಉತ್ತರದ ಮ್ಯಾನ್ಮಾರ್‌ ಗಡಿಯನ್ನು ದಾಟುವ ಪ್ರದೇಶದ ಸಮೀಪದಲ್ಲಿ ಇರುವ ಮಾಯ್ ಸೈ ಪ್ರಸಿಟ್ಸಾರ್ಟ್ ಶಾಲೆಯಲ್ಲಿ ಫುಟ್ಬಾಲ್ ತಂಡವೊಂದು ಹುಟ್ಟಿಕೊಂಡಿತು.

ಮೂನ್ ಪಾ (ವೈಲ್ಡ್ ಬೋರ್) ಎಂದು ಹೆಸರಿಟ್ಟುಕೊಂಡ ಈ ತಂಡ ಪ್ರಾಂತ್ಯದಲ್ಲಿ ಪಂದ್ಯಗಳನ್ನು ಆಯೋಜಿಸತೊಡಗಿತು.

ಇದರಲ್ಲಿನ ಹೆಚ್ಚಿನ ಆಟಗಾರರು ಅಲ್ಪಸಂಖ್ಯಾತ ಸಮುದಾಯ ಹಾಗೂ ಬಡಕುಟುಂಬದಿಂದ ಬಂದವರಾಗಿದ್ದರು.

ಈ ತಂಡದಲ್ಲಿ ಆಡಿದ ಕೆಲವು ಬಾಲಕರು ಈಗ ಗುಹೆಯಲ್ಲಿ ಸಿಲುಕಿಬಿದ್ದಿರುವ ತಂಡದಲ್ಲಿಯೂ ಇದ್ದಾರೆ. ಅವರೆಲ್ಲ ತಮಗೆ ಎಂಟು, ಒಂಬತ್ತು ವರ್ಷ ವಯಸ್ಸು ಆದಾಗಿನಿಂದ ಜತೆಗೆ ಆಡುತ್ತಿದ್ದಾರೆ.

ಅಲ್ಲಿಯೇ ಸಮೀಪದಲ್ಲಿದ್ದ ಅನಾಥ ಯುವಕ ಚಂಟಾವೊಂಗ್, ತಂಡದ ಕೋಚ್‌ಗೆ ಸಹಾಯಕರಾಗಿ ಸೇರಿಕೊಂಡರು. ಶಾಲೆ ಮುಗಿದ ಬಳಿಕ ಮಕ್ಕಳಿಗೆ ತರಬೇತಿ ನೀಡಲು ಸಹಾಯ ಮಾಡತೊಡಗಿದರು. ಒಂದು ರೀತಿ ತಂಡಕ್ಕೆ ತಮ್ಮನ್ನು ಅರ್ಪಿಸಿಕೊಳ್ಳತೊಡಗಿದರು.

ಬಾಲ್ಯದಲ್ಲಿಯೇ ತಂದೆ ತಾಯಿ ಮತ್ತು ತಮ್ಮನನ್ನು ಕಳೆದುಕೊಂಡ ಚಂಟಾವೊಂಗ್, ಆ ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದರು.

ಪೂರ್ಣಾವಧಿ ಕೋಚ್ ಅಲ್ಲ

ಪೂರ್ಣಾವಧಿ ಕೋಚ್ ಅಲ್ಲ

ಅಂದಹಾಗೆ, ಈಗ ಬಾಲಕರು ಸಿಕ್ಕಿಕೊಂಡಿರುವ ಥಾಮ್ ಲುವಾಂಗ್ ಗುಹೆಗೂ ಡೊಯಿ ನಾಂಗ್ ನಾನ್ ಪರ್ವತದ ತಪ್ಪಲಿನಲ್ಲಿರುವ ಈ ಶಾಲೆಯ ವೈಲ್ಡ್ ಬೋರ್ ಅಕಾಡೆಮಿಗೂ ಇರುವ ದೂರು 10 ಕಿ.ಮೀ. ಮಾತ್ರ.

ತಂಡದ ಕೋಚ್ ನೊಪ್ಪರಾಟ್ ಕಥಾವೊಂಗ್ ಬೇರೆಡೆ ಹೋಗಬೇಕಾಗಿದ್ದರಿಂದ ಚಂಟಾವೊಂಗ್ ಅವರಿಗೆ ವೈಲ್ಡ್ ಬೋರ್ ತಂಡದ ತಾತ್ಕಾಲಿಕ ಹೊಣೆಗಾರಿಕೆ ನೀಡಲಾಗಿತ್ತು.

ಶಾಲೆ ಮುಗಿಸಿ ಗುಹೆಯ ಬಳಿ ಕೋಚ್ ಜತೆ ತೆರಳಿದ್ದ ಬಾಲಕರು, ಗುಹೆಯ ಪ್ರವೇಶ ಭಾಗದ ಬಳಿಯೇ ತಮ್ಮ ಶೂಗಳನ್ನು ಮತ್ತು ಚೀಲಗಳನ್ನು ಇರಿಸಿ ಹೋಗಿದ್ದರು. ಗುಹೆಯ ಗೋಡೆಯಲ್ಲಿ ತಮ್ಮ ಹೆಸರುಗಳನ್ನು ಬರೆಯುವ ಸಂಭ್ರಮದಲ್ಲಿ ತೊಡಗಿದ್ದರು.

ಅಗಾಧವಾದ ಗುಹೆಯೊಳಗೆ ಹೋದಾಗಲೇ ಹೊರಗೆ ಭಾರಿ ಮಳೆ ಬರತೊಡಗಿತು. ಅದರ ಬಗ್ಗೆ ಅರಿವಿಲ್ಲದ ಈ ತಂಡಕ್ಕೆ ಹೊರಗೆ ಬರಲು ಪ್ರಯತ್ನಿಸಿದಾಗಲೇ ತಾವು ಪ್ರವಾಹದೊಳಗೆ ಸಿಲುಕಿದ್ದು ಗೊತ್ತಾಗಿದ್ದು.

ಈ ಗುಹೆಯೊಳಗೆ ಏಕೆ ಹೋದರು, ಹೇಗೆ ಅಲ್ಲಿ ಜೀವ ಉಳಿಸಿಕೊಂಡರು ಮುಂತಾದ ಪ್ರಶ್ನೆಗಳಿಗೆಲ್ಲ ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕವಷ್ಟೇ ಉತ್ತರ ಸಿಗಬಲ್ಲದು.

ಕಲಿತ ವಿದ್ಯೆ ಜೀವ ಉಳಿಸಿದೆ

ಕಲಿತ ವಿದ್ಯೆ ಜೀವ ಉಳಿಸಿದೆ

ಆದರೆ, ತನ್ನ ಜೀವದ ಜತೆಗೆ ಈ ಮಕ್ಕಳ ಜೀವ ಉಳಿಸಲು ಚಂಟಾವೊಂಗ್ ಕಲಿತ ವಿದ್ಯೆ ನೆರವಾಗಿದೆ ಎನ್ನುತ್ತಾರೆ ಆತನ ಚಿಕ್ಕಮ್ಮ ಅಂಪೊರ್ನ್ ಶ್ರೀವಿಚೈ.

ದೇವಸ್ಥಾನದಲ್ಲಿ ಸನ್ಯಾಸಿಗಳ ಹತ್ತು ವರ್ಷದ ಒಡನಾಟದಲ್ಲಿ ಚಂಟಾವೊಂಗ್, ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತನಾಗಿರುವ ಕಲೆಯನ್ನು ಸಿದ್ಧಿಸಿಕೊಂಡಿದ್ದ.

ತಮ್ಮ ಕಲೆಯನ್ನು ಮಕ್ಕಳಿಗೂ ಹೇಳಿಕೊಟ್ಟ ಚಂಟಾವೊಂಗ್, ಆ ಜೀವಭಯದ ಸ್ಥಿತಿಯಲ್ಲಿಯೂ ಮನಸ್ಸನ್ನು ಹತೋಟಿಯಲ್ಲಿ ಇರಿಸಿಕೊಳ್ಳಲು ಹಾಗೂ ಭರವಸೆ ಉಳಿಸಿಕೊಳ್ಳಲು ನೆರವಾಗಿದ್ದಾನೆ.

ಆತನಿಗೆ ಅವರ ಬಗ್ಗೆ ಅಪಾರ ಪ್ರೀತಿ. ಏಕೆಂದರೆ ಬಾಲ್ಯದಲ್ಲಿಯೇ ತನ್ನ ಪ್ರೀತಿ ಪಾತ್ರರನ್ನು ಕಳೆದುಕೊಂಡ ನೋವಿನ ಅನುಭವ ಆತನಿಗಿತ್ತು. ಅಂತಹ ಸಂಕಟವನ್ನು ಮತ್ತೆ ನೋಡಲು ನಮಗೆ ಸಾಧ್ಯವಿಲ್ಲ ಎಂದು ಆತನ ಚಿಕ್ಕಮ್ಮ ಹೇಳಿದ್ದಾರೆ.

ಸಿಟ್ಟಿಲ್ಲ ನಿನ್ನ ಮೇಲೆ

ಸಿಟ್ಟಿಲ್ಲ ನಿನ್ನ ಮೇಲೆ

ಗುಹೆಯೊಳಗೆ ರಕ್ಷಣಾ ಕಾರ್ಯ ಪಡೆ ತಲುಪಿದಾಗ ಅಲ್ಲಿದ್ದ ಪ್ರತಿಯೊಬ್ಬರೂ ತಮ್ಮ ಪೋಷಕರಿಗೆ ತಾವು ಕ್ಷೇಮವಾಗಿರುವ ಕುರಿತು ಪತ್ರ ರವಾನಿಸಿದ್ದರು. ಆದರೆ, ಕೋಚ್ ಚಂಟಾವೊಂಗ್ ಮಾತ್ರ ಎಲ್ಲ ಪೋಷಕರ ಕ್ಷಮೆ ಕೋರಿದ್ದರು.

ಎಲ್ಲ ಮಕ್ಕಳೂ ಕ್ಷೇಮವಾಗಿದ್ದಾರೆ. ಅವರ ಎಲ್ಲ ಕಾಳಜಿ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೋಷಕರು, ಯಾವ ಪೋಷಕರೂ ನಿನ್ನ ಮೇಲೆ ಕೋಪಗೊಂಡಿಲ್ಲ. ಹೀಗಾಗಿ ಅದರ ಬಗ್ಗೆ ಚಿಂತೆ ಬೇಡ. ಆ ಮಕ್ಕಳನ್ನು ಸುರಕ್ಷಿತವಾಗಿತು ಸ್ಥಿಮಿತತೆಯಿಂದ ಇರುವಂತೆ ನೋಡಿಕೊಂಡಿದಕ್ಕೆ ನಿನ್ನನ್ನು ಅಭಿನಂದಿಸಬೇಕು ಎಂದು ಪತ್ರ ಬರೆದಿದ್ದಾರೆ.

ಕಾಡುತ್ತಿದೆ ಅಪೌಷ್ಟಿಕತೆ ಸಮಸ್ಯೆ

ಆದರೆ, ಗುಹೆಯಲ್ಲಿ ತನ್ನ ಬಳಿಯಿದ್ದ ಆಹಾರವನ್ನು ಮಕ್ಕಳಿಗೆ ನೀಡಿದ ಚಂಟಾವೊಂಗ್ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರ ಜತೆ ಇನ್ನೂ ಇಬ್ಬರು ಮಕ್ಕಳ ಸ್ಥಿತಿಯೂ ಇದೇ ರೀತಿ ಇದೆ. ಜತೆಗೆ ಕತ್ತಲೆಯಲ್ಲಿ, ಆಮ್ಲಜನಕವಿಲ್ಲದ ಗೂಡಿನೊಳಗೆ ಕಾಲ ಕಳೆದ ಅವರ ಮಾನಸಿಕ ಸ್ಥಿಮಿತತೆ ಕುರಿತೂ ಕಳವಳ ವ್ಯಕ್ತವಾಗಿದೆ.

ಅಪೌಷ್ಟಿಕತೆ ಉಂಟಾದ ಸಂದರ್ಭದಲ್ಲಿ ಆಯಾಸ, ಬಳಲಿಕೆ, ನಿತ್ರಾಣ, ಖಿನ್ನತೆ ಮುಂತಾದ ಸಮಸ್ಯೆಗಳು ಉಂಟಾಗಿ ಕೊನೆಗೆ ಉಸಿರಾಟದ ತೊಂದರೆಗೆ ಒಳಗಾಗುವ ಅಪಾಯವಿದೆ.

ಈಗ ಗುಹೆಯೊಳಗೆ ಸಿಲುಕಿರುವ ಬಾಲಕರು ಮತ್ತು ಕೋಚ್‌ಗೆ ನಾಲ್ಕು ತಿಂಗಳಿಗೆ ಸಾಕಾಗುವಷ್ಟು ಆಹಾರ ಲಭ್ಯವಾಗಿದೆ. ಆದರೆ, ಅವರು ಆ ಸ್ಥಿತಿಯಲ್ಲಿ ತಿನ್ನುವ ಆಸಕ್ತಿಯನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ.

ಮುಂಗಾರು ಮಳೆ ಮತ್ತಷ್ಟು ತೀವ್ರವಾಗುವ ಸಂಭವ ಇರುವುದರಿಂದ ಗುಹೆಯಲ್ಲಿನ ಪ್ರವಾಹದ ಮಟ್ಟ ಏರಿಕೆಯಾಗುವ ಮೊದಲು ಈ ಎಲ್ಲರನ್ನೂ ರಕ್ಷಿಸುವ ಹೊಣೆ ರಕ್ಷಣಾ ತಂಡದ ಮೇಲಿದೆ.

ತಾವು ಸಿಲುಕಿರುವ ಸ್ಥಳದಿಂದ ಆಕ್ಸಿಜನ್ ಇರುವ ಸಾಧನವನ್ನು ಹೊತ್ತುಕೊಂಡು ನೀರಿನಾಳದಲ್ಲಿ ಮೂರು ಕಿ.ಮೀ. ಸಾಗಿ ಹೊರಕ್ಕೆ ಬರಲು ನಾಲ್ಕು ಕಿ.ಮೀ. ಸಾಗಬೇಕು. ಅಷ್ಟು ದೂರ ತೆರಳುವಷ್ಟು ಶಕ್ತಿ ಆ ತಂಡದವರಲ್ಲಿ ಇಲ್ಲ.

ಕೋಚ್ ಚಂಟಾವೊಂಗ್ ಅವರನ್ನು ಸಾವು ಮತ್ತೆ ವಂಚನೆ ಮಾಡದೆ ಇರಲಿ ಎನ್ನುತ್ತಿದೆ ಜಗತ್ತು.

English summary
The Thai soccer team coach trapped in a cave had lost his entire family at the age of 10. Here is his tragedy story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more