ಡ್ರೋನ್ ದಾಳಿಯಲ್ಲಿ ಪಾಕಿಸ್ತಾನ ತಾಲಿಬಾನ್ ಮುಖ್ಯಸ್ಥನ ಹತ್ಯೆ
ಇಸ್ಲಮಾಬಾದ್, ಜೂನ್ 15: ಪಾಕಿಸ್ತಾನದ ತೆಹ್ರಿಕ್-ಇ-ತಾಲಿಬಾನ್ (ಪಾಕಿಸ್ತಾನ ತಾಲಿಬಾನ್) ಮುಖ್ಯಸ್ಥ ಮುಲ್ಲಾ ಫಜಲ್ ಉಲ್ಲಾ ಹತ್ಯೆಯಾಗಿದ್ದಾನೆ. ಅಮೆರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಈತ ಸಾವನ್ನಪ್ಪಿದ್ದಾನೆ ಎಂದು ಅಮೆರಿಕಾದ ಸೇನಾ ಅಧಿಕಾರಿಗಳು ವಾಯ್ಸ್ ಆಫ್ ಅಮೆರಿಕಾಗೆ ತಿಳಿಸಿದ್ದಾರೆ.
ಜೂನ್ 13ರಂದು ಅಫ್ಘಾನಿಸ್ತಾನ - ಪಾಕಿಸ್ತಾನ ಗಡಿಯಲ್ಲಿರುವ ಕುನಾರ್ ಪ್ರಾಂತ್ಯದಲ್ಲಿ ಅಮೆರಿಕಾ ಡ್ರೋಣ್ ದಾಳಿ ನಡೆಸಿತ್ತು. ಆದರೆ ಈ ದಾಳಿ ಯಶಸ್ವಿಯಾಗಿದೆಯೇ ಇಲ್ಲವೇ ಎಂಬ ಬಗ್ಗೆ ಅಮೆರಿಕಾದ ಸೇನೆ ಮಾತ್ರ ಅಧಿಕೃತ ಪ್ರಕಟಣೆ ನೀಡಿಲ್ಲ.
ಮುಲ್ಲಾ ಫಜಲ್ ಉಲ್ಲಾ ಅಮೆರಿಕಾ ಮತ್ತು ಪಾಕಿಸ್ತಾನದ ವಿರುದ್ಧ ಹಲವು ದಾಳಿಗಳನ್ನು ನಡೆಸಲು ಸೂಚನೆಗಳನ್ನು ನೀಡಿದ್ದ. ಪಾಕಿಸ್ತಾನದಲ್ಲಿ ಹಲವು ಭೀಕರ ದಾಳಿಯ ಕೃತ್ಯಗಳನ್ನೂ ನಡೆಸಿದ್ದ.

ಪೇಶಾವರದಲ್ಲಿರುವ ಸೇನಾ ಶಾಲೆಯ ಮೇಲೆ 2014ರ ಡಿಸೆಂಬರ್ ನಲ್ಲಿ ದಾಳಿ ನಡೆಸಿ 151 ಮಕ್ಕಳನ್ನು ಬಲಿ ಪಡೆದಿದ್ದ. 2012ರಲ್ಲಿ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ ಜಾಯ್ ಹತ್ಯೆಗೂ ಆದೇಶ ನೀಡಿದ್ದ.
ಕಳೆದ ಮಾರ್ಚ್ ನಲ್ಲಿ ಈತನ ತಲೆಗೆ ಅಮೆರಿಕಾ ಸರಕಾರ 5 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು. ಇದೇ ಸಂದರ್ಭದಲ್ಲಿ ಆತನ ಮಗನನ್ನು ಡ್ರೋನ್ ದಾಳಿಯಲ್ಲಿ ಕೊಲ್ಲಲಾಗಿತ್ತು.
ಆದರೆ ಮುಲ್ಲಾ ಫಜಲ್ ಉಲ್ಲಾ ಬದುಕಿದ್ದಾನೋ ಇಲ್ಲವೋ ಎಂಬುದರ ಬಗ್ಗೆ ಖಚಿತ ಮಾಹಿತಿಗಳು ಇಲ್ಲ ಎಂದು ಅಮೆರಿಕಾದ ಅಧಿಕಾರಿಗಳು ಹೇಳಿದ್ದಾರೆ. ಹಾಗಿದ್ದರೂ ಆತ ಸತ್ತಿದ್ದಾನೆ ಎಂದುಕೊಳ್ಳಲಾಗಿದೆ.












Click it and Unblock the Notifications