ಮೈತ್ರಿ ಪಕ್ಷಗಳ ಬಿಕ್ಕಟ್ಟು, ಶ್ರೀಲಂಕಾ ಪ್ರಧಾನಿಯಾಗಿ ಮಹಿಂದ ರಾಜಪಕ್ಸೆ ನೇಮಕ
ಕೊಲಂಬೋ (ಶ್ರೀಲಂಕಾ), ಅಕ್ಟೋಬರ್ 26: ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾರ ಪಕ್ಷವು ಆಡಳಿತಾರೂಢ ಮೈತ್ರಿ ಪಕ್ಷಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದೆ. ಈ ಬಗ್ಗೆ ಹಿರಿಯ ಸಚಿವರೊಬ್ಬರು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇನ್ನು ಅಧ್ಯಕ್ಷರು ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ಅವರನ್ನು ಪ್ರಧಾನಿ ಹುದ್ದೆಯಿಂದ ಕಿತ್ತೊಗೆದಿದ್ದು, ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ಹೊಸ ಪ್ರಧಾನಿಯಾಗಿ ನೇಮಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿ ಮೂಲಗಳು ತಿಳಿಸಿವೆ.
ರಾಜಪಕ್ಸೆ ಅವರಿಗೆ ನಿಷ್ಠವಾದ ಖಾಸಗಿ ವಾಹಿನಿ ಜಾಲವೊಂದು ಹೊಸ ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಕಾರ್ಯಕ್ರಮವನ್ನು ಪ್ರಸಾರ ಮಾಡಿದೆ.

ಶ್ರೀಲಂಕಾ ಫ್ರೀಡಮ್ ಪಾರ್ಟಿ ಹಾಗೂ ಯುನೈಟೆಡ್ ನ್ಯಾಷನಲ್ ಪಾರ್ಟಿ ಎರಡೂ ಸೇರಿ ಸರಕಾರ ರಚಿಸಿದ್ದವು. ಆದರೆ ಕಳೆದ ಫೆಬ್ರವರಿಯಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಮಹಿಂದ ರಾಜಪಕ್ಸೆ ಅವರ ಹೊಸ ಪಕ್ಷ ಅಭೂತಪೂರ್ವ ಜಯವನ್ನು ಸಾಧಿಸಿತ್ತು. ಈ ಗೆಲುವು ಆಡಳಿತಾರೂಢ ಮೈತ್ರಿ ಸರಕಾರದ ವಿರುದ್ಧದ ಜನಾದೇಶ ಎಂದು ಪರಿಗಣಿಸಲಾಗಿತ್ತು. ಹಾಗೂ ಮೈತ್ರಿ ಪಕ್ಷಗಳ ಮಧ್ಯೆ ಬಿಕ್ಕಟ್ಟಿಗೆ ಕಾರಣವಾಗಿತ್ತು.
ಯುನೈಟೆಡ್ ಪೀಪಲ್ಸ್ ಫ್ರೀಡಮ್ ಅಲಯನ್ಸ್ ಸರಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದಿದೆ ಎಂದು ಪ್ರಧಾನ ಕಾರ್ಯದರ್ಶಿ ಮಹಿಂದ ಅಮರವೀರ ತಿಳಿಸಿರುವುದಾಗಿ ವರದಿ ಆಗಿದೆ. "ಯುಪಿಎಫ್ ಎ ಮೈತ್ರಿ ಸರಕಾರದಿಂದ ಹೊರಬಂದಿದೆ" ಎಂದು ಅವರು ಹೇಳಿದ್ದಾರೆ.
ತಾವು ಹಾಗೂ ಗೊಟಭಯ ರಾಜಪಕ್ಸ (ರಕ್ಷಣಾ ಸಚಿವಾಲಯ ಮಾಜಿ ಹಿರಿಯ ಅಧಿಕಾರಿ ಹಾಗೂ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಸೋದರ) ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪಕ್ಕೆ ಸರಕಾರವು ಸರಿಯಾಗಿ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಮೈತ್ರಿಪಾಲ ಸಿರಿಸೇನಗೆ ಅಸಮಾಧಾನ ಆಗಿತ್ತು.












Click it and Unblock the Notifications