ಶ್ರೀಲಂಕಾದಲ್ಲಿ ಪ್ರತಿಭಟನಾಕಾರರನ್ನು ಕಂಡು ಓಡಿದ ಅಧ್ಯಕ್ಷ ಗೋತಬಯ ರಾಜಪಕ್ಸೆ!
ಕೊಲಂಬೋ, ಜುಲೈ 9: ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ಉದ್ವಿಗ್ನತೆಯ ಸೃಷ್ಟಿಗೆ ಕಾರಣವಾಗುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನಾಕಾರರು ಸಾವಿರಾರು ಸಂಖ್ಯೆಯಲ್ಲಿ ಸೇರಿಕೊಳ್ಳುತ್ತಿರುವುದು ಹೊಸ ಆತಂಕವನ್ನು ಹುಟ್ಟು ಹಾಕುತ್ತಿದೆ. ಇದರ ಮಧ್ಯೆ ಶನಿವಾರ ಪ್ರತಿಭಟನಾಕಾರರು ಮನೆಗೆ ಮುತ್ತಿಗೆ ಹಾಕುತ್ತಿರುವುದನ್ನು ಅರಿತ ಅಧ್ಯಕ್ಷ ಗೋತಬಯ ರಾಜಪಕ್ಸೆ ಸ್ಥಳದಿಂದ ಓಡಿ ಹೋಗಿರುವ ಘಟನೆ ನಡೆದಿದೆ.
ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ರಾಜೀನಾಮೆಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೊಳಿಸಲಾತ್ತು. ಆದಾಗ್ಯೂ ರಾತ್ರೋರಾತ್ರಿ ಅದನ್ನು ಉಲ್ಲಂಘಿಸಿದ ಸಾವಿರಾರು ಜನರು ನುಗ್ಗಿದರು.
ಶುಕ್ರವಾರ ಏಕಾಏಕಿ ರೈಲ್ವೆ ನಿಲ್ದಾಣಗಳಿಗೆ ನುಗ್ಗಿದ ಜನರು ಕೊಲಂಬೋಗೆ ತೆರಳುವುದಕ್ಕಾಗಿ ರೈಲು ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು. ಈ ಹಂತದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಸಾವಿರಾರು ಮಂದಿ ಕರ್ಫ್ಯೂ ನಿರ್ಬಂಧಗಳನ್ನು ಉಲ್ಲಂಘಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜಪಕ್ಸೆ ನಿವಾಸಕ್ಕೆ ಬಿಗಿ ಭದ್ರತೆ:
ಶ್ರೀಲಂಕಾದಲ್ಲಿ ಸಾರ್ವಜನಿಕರ ಪ್ರತಿಭಟನೆಗಳನ್ನು ಕಾನೂನುಬಾಹಿರಗೊಳಿಸುವ ಪೊಲೀಸರ ಮನವಿಯನ್ನು ನ್ಯಾಯಾಧೀಶರು ನಿರಾಕರಿಸಿದರು. ಅಧ್ಯಕ್ಷ ರಾಜಪಕ್ಸೆ ಅಧಿಕೃತ ನಿವಾಸವನ್ನು ರಕ್ಷಿಸುವ ಉದ್ದೇಶದಿಂದ ಬಿಗಿ ಭದ್ರತೆಯನ್ನು ಒದಗಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆ ಶುಕ್ರವಾರವೇ ಸಾವಿರಾರು ಯೋಧರು ಆಕ್ರಮಣಕಾರಿ ರೈಫಲ್‌ಗಳೊಂದಿಗೆ ಕೊಲಂಬೊಕ್ಕೆ ತೆರಳಿದ್ದರು.
ಆಹಾರ ಮತ್ತು ಇಂಧನ ಕೊರತೆ:
ಶ್ರೀಲಂಕಾದಲ್ಲಿ ಪ್ರಮುಖ ಸರಕುಗಳನ್ನು ಆಮದು ಮಾಡಿಕೊಳ್ಳಲು ವಿದೇಶಿ ಕರೆನ್ಸಿಯ ಕೊರತೆಯ ನಂತರದಲ್ಲಿ ಹಣಕಾಸಿನ ಬಿಕ್ಕಟ್ಟು ಸೃಷ್ಟಿಯಾಗಿದೆ. ಆಹಾರ ಮತ್ತು ಇಂಧನ ಕೊರತೆಯಿದೆ. ದೇಶದಲ್ಲಿ ಈಗಾಗಲೇ ವಿರಳವಾದ ಪೆಟ್ರೋಲ್ ಸರಬರಾಜಿನಿಂದ ಪರಿತಪಿಸುವಂತಾ ಪರಿಸ್ಥಿತಿ ಉಂಟಾಗಿದೆ. ಇದರ ಮಧ್ಯೆ ಪ್ರಮುಖ ವಿರೋಧ ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿರುವ ಪ್ರತಿಭಟನಾಕಾರರು ಖಾಸಗಿ ಬಸ್ಸುಗಳನ್ನು ಬಾಡಿಗೆ ಪಡೆದುಕೊಂಡು ರಾಜಧಾನಿ ಕೊಲಂಬೋ ಕಡೆಗೆ ಪ್ರಯಾಣಿಸುತ್ತಿದ್ದಾರೆ. ಇದು ದೇಶದಲ್ಲಿ ಇಂಧನ ಕೊರತೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡುವ ಆತಂಕವಿದೆ.

ಶ್ರೀಲಂಕಾದಲ್ಲಿ ರಾಜಪಕ್ಸೆ ರಾಜೀನಾಮೆಗೆ ಹೆಚ್ಚಿದ ಕೂಗು:
ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆ ಸರ್ಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಾಗಿ ದೂಷಿಸುತ್ತಿರುವ ಪ್ರತಿಭಟನಾಕಾರರು ರಾಜೀನಾಮೆ ಸಲ್ಲಿಸುವಂತೆ ಆಗ್ರಹಿಸಿದ ಪ್ರಧಾನಮಂತ್ರಿ ಕಚೇರಿ ಎದುರಿಗೆ ಮೊಕ್ಕಾಂ ಹೂಡಿದ್ದಾರೆ. ಇಂಧನ ಕೇಂದ್ರಗಳಲ್ಲಿ ವ್ಯಕ್ತಿಗಳು ಮತ್ತು ಪೊಲೀಸ್ ಪಡೆ ಮತ್ತು ಸಶಸ್ತ್ರ ಪಡೆಗಳ ನಡುವಿನ ಹಲವಾರು ಘರ್ಷಣೆಗಳು ಸಹ ನಡೆದಿವೆ.












Click it and Unblock the Notifications