ಪರಮಾಣು ಬಾಂಬ್ ಬಳಸಿದರೆ ಕಿಮ್ ಜಾಂಗ್ ಉನ್ ಅಂತ್ಯವಂತೆ!
ಸಿಯೋಲ್: ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ತಿಕ್ಕಾಟ ಮತ್ತಷ್ಟು ಹೆಚ್ಚಾಗಿದೆ. ಅದರಲ್ಲೂ ಇತ್ತೀಚೆಗೆ ಕಿಮ್ ಜಾಂಗ್ ಉನ್ 2 ಹೊಸ ಕ್ಷಿಪಣಿ ಪ್ರಯೋಗ ನಡೆಸಿದ ನಂತರ ಆತಂಕ ಮನೆಮಾಡಿದೆ. ಈ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ತನ್ನ ಶತ್ರು ರಾಷ್ಟ್ರ ಉತ್ತರ ಕೊರಿಯಾಗೆ ಎಚ್ಚರಿಕೆ ನೀಡಿದ್ದು, ಪರಮಾಣು ಬಾಂಬ್ ಬಳಸಿದರೆ ಕಿಮ್ ಜಾಂಗ್ ಉನ್ ಆಡಳಿತ ಮುಗಿಸುತ್ತೇವೆ ಎಂದಿದೆ.
ಹೌದು, ಇತ್ತೀಚೆಗೆ ದಕ್ಷಿಣ ಕೊರಿಯಾ ಹಾಗೂ ಅಮೆರಿಕ ನಡುವೆ ಒಪ್ಪಂದ ಏರ್ಪಟ್ಟಿತ್ತು. ಈ ಒಪ್ಪಂದದ ಪ್ರಕಾರ ದಕ್ಷಿಣ ಕೊರಿಯಾ ಸಮೀಪ ಅಮೆರಿಕ ಪರಮಾಣು ಸಬ್‌ಮರೀನ್ ನಿಯೋಜನೆ ಮಾಡಲು ಮುಂದಾಗಿದೆ ಎಂದು ಆರೋಪಿಸಲಾಗಿತ್ತು. ಹೀಗೆ ಉ.ಕೊರಿಯಾ ಖಡಕ್ ಎಚ್ಚರಿಕೆ ರವಾನಿಸಿ, ಪರಿಸ್ಥಿತಿ ಸರಿ ಇರೋದಿಲ್ಲ ಎಂದಿತ್ತು. ಅದರಲ್ಲೂ ಉತ್ತರ ಕೊರಿಯಾ ಸರ್ವಾಧಿಕಾರಿ ಪರಮಾಣು ಯುದ್ಧದ ಮಾತುಗಳನ್ನೂ ಆಡಿದ್ದ. ಹೀಗಾಗಿ ಈ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ಇದೀಗ ಉತ್ತರ ಕೊರಿಯಾಗೆ ಉತ್ತರ ನೀಡಿದ ದಕ್ಷಿಣ ಕೊರಿಯಾ, ಪರಿಮಾಣು ಬಾಂಬ್ ಬಳಕೆಯಾದರೆ ಪರಿಸ್ಥಿತಿ ಕೈಮೀರಲಿದೆ ಎಂದಿದೆ.

ಸರ್ವಾಧಿಕಾರಿಗೆ ಇಷ್ಟು ಸಿಟ್ಟು ಯಾಕೆ?
ತನ್ನ ಅಕ್ಕಪಕ್ಕದ ರಾಷ್ಟ್ರಗಳು ಅಮೆರಿಕ ಜೊತೆಗೆ ಸ್ನೇಹ ಬೆಸೆಯುವುದು ಉತ್ತರ ಕೊರಿಯಾ ಸರ್ವಾಧಿಕಾರಿಗೆ ಇಷ್ಟವಿಲ್ಲ. ಅದರಲ್ಲೂ ದಕ್ಷಿಣ ಕೊರಿಯಾ ಹಾಗೂ ಅಮೆರಿಕ ನಡುವೆ ಭಾರಿ ಒಪ್ಪಂದಗಳು ನಡೆಯುತ್ತಿವೆ. ಈ ಪೈಕಿ ರಕ್ಷಣಾ ಕ್ಷೇತ್ರದ ಒಪ್ಪಂದಗಳ ಬಗ್ಗೆ ಉತ್ತರ ಕೊರಿಯಾ ಕೆಂಡವಾಗಿದೆ. ಹೀಗಾಗಿಯೇ ತನ್ನ ಶತ್ರುಗಳಿಗೆ ಎಚ್ಚರಿಕೆ ನೀಡುತ್ತಿರುವ ಕಿಮ್ ಜಾಂಗ್ ಉನ್, ಪದೇ ಪದೆ ಹೊಸ ಹೊಸ ಕ್ಷಿಪಣಿಗಳ ಪ್ರಯೋಗ ಮಾಡುತ್ತಾ ಆತಂಕವನ್ನ ಹುಟ್ಟಿಸುತ್ತಿರುವ ಆರೋಪವಿದೆ. ಹೀಗಾಗಿ ರೊಚ್ಚಿಗೆದ್ದಿರುವ ದಕ್ಷಿಣ ಕೊರಿಯಾ, ನಾವೂ ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನ ಉತ್ತರ ಕೊರಿಯಾಗೆ ಕೊಟ್ಟಿದೆ.
ಕೈಮೀರಿ ಹೊಗುತ್ತಿದೆಯಾ ಪರಿಸ್ಥಿತಿ?
ಕಿಮ್ ಜಾಂಗ್ ಉನ್ ಮೊನ್ನೆ ಮೊನ್ನೆಯಷ್ಟೇ ಹೊಸ ಕ್ಷಿಪಣಿಯ ಪ್ರಯೋಗ ನಡೆಸಿದ್ದ. ಕ್ಷಿಪಣಿ ಹೇಗಿತ್ತು ಅಂದ್ರೆ ಅಮೆರಿಕದ ಪ್ರಮುಖ ನಗರಗಳ ಮೇಲೆಯೂ ಕ್ಷಣಮಾತ್ರದಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿತ್ತು. ಯುರೋಪ್ ದೇಶಗಳಿಗೂ ಹೊಸ ಕ್ಷಿಪಣಿಯ ಭಯ ಶುರುವಾಗಿತ್ತು. ಈ ಘಟನೆ ನಡೆದು ಕೆಲವು ದಿನ ಕಳೆಯುವ ಒಳಗಾಗಿ ಮತ್ತೆ 2 ಕ್ಷಿಪಣಿ ಹಾರಿಸಿದೆ ಉತ್ತರ ಕೊರಿಯಾ. ಸಾವಿರಾರು ಕಿಲೋ ಮೀಟರ್ ದೂರದ ಗುರಿಯನ್ನ ಅತಿ ವೇಗವಾಗಿ ತಲುಪಿ ನಾಶ ಮಾಡಬಲ್ಲ ಶಕ್ತಿ ಹೊಸ ಕ್ಷಿಪಣಿಗೆ ಇದೆ. ಆದರೆ ಇದರ ಸಾಮರ್ಥ್ಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಈ ನಡುವೆ ಪರಮಾಣು ಯುದ್ಧದ ಮಾತುಗಳು ಕೂಡ ಓಡಾಡಿ ಭಯ ಸೃಷ್ಟಿಯಾಗಿತ್ತು.
1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿರುವ ಉತ್ತರ ಕೊರಿಯಾ ಸರ್ವಾಧಿಕಾರಿ, 3 ತಿಂಗಳ ಹಿಂದಷ್ಟೇ ತನ್ನ ದೇಶದ ಮೊದಲ ಮಿಲಿಟರಿ ಉಪಗ್ರಹ ಉಡಾವಣೆ ಬಗ್ಗೆ ಮಾಹಿತಿ ನೀಡಿದ್ದ. ಈ ಮೂಲಕ ತನ್ನ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತನ್ನ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಉತ್ತರಿಸಿದ್ದ ಕಿಮ್. ಆದರೆ ಈ ಪ್ರಯೋಗ ವಿಫಲವಾಗಿ ಉತ್ತರ ಕೊರಿಯಾದ ಮಿಲಿಟರಿ ಉಪಗ್ರಹ ಸಮುದ್ರಕ್ಕೆ ಬಿದ್ದಿತ್ತು. ಈಗ ಹೊಸ ಕ್ಷಿಪಣಿ ಪ್ರಯೋಗ ಮೂಲಕ ಶತ್ರುಗಳ ವಿರುದ್ಧ ಕಿಮ್ ತೊಡೆತಟ್ಟಿದ್ದಾನೆ.

ಒಟ್ನಲ್ಲಿ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲೇ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವೆ ಕೂಡ ಕಿತ್ತಾಟ ಶುರುವಾಗಿದೆ. ಈ ಘಟನೆ ಜಗತ್ತಿಗೆ ಭಯ ಹುಟ್ಟಿಸಿದೆ. ಹೀಗೆ ಎರಡೂ ರಾಷ್ಟ್ರಗಳ ನಡುವೆ ಅಕಸ್ಮಾತ್ ಯದ್ಧ ಶುರು ಆದರೆ ಪರಿಸ್ಥಿತಿ ಕೈಮೀರಿ ಹೋಗುವುದು ಪಕ್ಕಾ. ಅತ್ತ ಅಮೆರಿಕ ದಕ್ಷಿಣ ಕೊರಿಯಾ ಪರ ನಿಂತಿದ್ದರೆ, ಉತ್ತರ ಕೊರಿಯಾಗೆ ಚೀನಾ ಮತ್ತು ರಷ್ಯಾ ಬೆಂಬಲ ನೀಡುತ್ತಾ ಬಂದಿವೆ.











Click it and Unblock the Notifications