ಚೀನಾದಲ್ಲಿ Social media ಚಾಟಿಂಗ್ ಗೆ ಪರ್ಮಿಷನ್ ತಗೋಬೇಕು!
ಬೀಜಿಂಗ್, ಮೇ 6: ಇನ್ನು ಮುಂದೆ ಚೀನಾದಲ್ಲಿರುವವರು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಮನಸ್ಸಿಗೆ ಬಂದದ್ದನ್ನು ಗೀಚುವ ಹಾಗಿಲ್ಲ. ಹೊಸ ಕಾಯ್ದೆಯ ಪ್ರಕಾರ, ಬ್ಲಾಗ್ ಬರೆಯಲಿ, ಸೋಷಿಯಲ್ ಮೀಡಿಯಾಗಳಲ್ಲಿ ಏನಾದರೂ ಪೋಸ್ಟ್ ಮಾಡಬೇಕೆಂದರೂ ಇನ್ನು ಸರ್ಕಾರದಿಂದ ಅನುಮತಿ ಪಡೆಯಬೇಕು!
ಇತ್ತೀಚೆಗೆ, ಅಲ್ಲಿನ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸುತ್ತಲೂ ನಡೆಯುವ ಘಟನೆಗಳನ್ನು ತಮ್ಮ ಮನಸೋ ಇಚ್ಛೆ ಪ್ರಕಟಿಸಿ ಕೆಲವಾರು ಗಲಭೆಗಳು ನಡೆದ ಉದಾಹರಣೆಗಳಿವೆ. ಅಲ್ಲದೆ, ಇಂಥ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದರ ಹತೋಟಿಗಾಗಿ ಚೀನಾ ಸರ್ಕಾರ ಇತ್ತೀಚೆಗೆ ಮನಸ್ಸು ಮಾಡಿತ್ತು.

ಇದಕ್ಕಾಗಿಯೇ, 2005ರಲ್ಲಿ ತಾನು ರೂಪಿಸಿದ್ದ ಅಂತರ್ಜಾಲ ಬರಹಗಳ ನಿಯಮಾವಳಿಗಳನ್ನು ತಿದ್ದುಪಡಿಗೊಳಿಸಿ, ಹೊಸ ನಿಯಮಾವಳಿಗಳನ್ನು ಪರಿಷ್ಕರಿಸುವ ಕಾರ್ಯಕ್ಕೆ ಮುಂದಾಗಿದೆ. ಅದರಂತೆ, ಪ್ರತಿಯೊಬ್ಬ ಸಾಮಾಜಿಕ ಜಾಲತಾಣಗಳ ಖಾತೆದಾರನೂ ಸರ್ಕಾರದಲ್ಲಿ ನೋಂದಾವಣಿ ಮಾಡಿಸಿಕೊಳ್ಳಬೇಕು. ಏನು ಪ್ರಕಟಿಸುತ್ತಿದ್ದೇವೆ ಎಂಬುದನ್ನು ಆನ್ ಲೈನ್ ಮುಖೇನ ಸರ್ಕಾರದ ಗಮನಕ್ಕೆ ತಂದು ಅಲ್ಲಿಂದ ಅನುಮತಿ ದೊರೆತ ನಂತರವಷ್ಟೇ ಪ್ರಕಟಿಸಬೇಕಿದೆ. ಈ ಎಲ್ಲಾ ನಿಯಮಾವಳಿಗಳೂ ಜೂನ್ ತಿಂಗಳಿಂದ ಜಾರಿಗೆ ಬರಲಿವೆ.
ಹಾಗಾಗಿ, ಅಲ್ಲಿ ಜನಪ್ರಿಯತೆ ಗಳಿಸಿರುವ ಸಾಮಾಜಿಕ ಜಾಲತಾಣಗಳಾದ ವೀ ಚಾಟ್ ಮುಂತಾದವುಗಳ ಗ್ರಾಹಕರ ಮೇಲೆ ನಿರ್ಬಂಧ ಜಾರಿಯಾಗಲಿದೆ.
ಇನ್ನು, ಆನ್ ಲೈನ್ ವೃತ್ತಪತ್ರಿಕೆಗಳಿಗೆ ಚಂದಾದಾರರಾಗುವವರು ತಮ್ಮ ಯಾವುದೇ ನಾಗರಿಕ ಗುರುತಿನ ಚೀಟಿಯ ಪ್ರತಿಯನ್ನು ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕಿದೆ.












Click it and Unblock the Notifications