2.2 ಕೆ.ಜಿ ತೂಕ, 50 ಸೆಂ.ಮೀ ಎತ್ತರದ ಬೃಹತ್ ಫಂಗಸ್‌ ಪತ್ತೆ: ಇದರ ವಯಸ್ಸು 65 ದಶಲಕ್ಷ ವರ್ಷ

ಚೀನಾದ ನೈಋತ್ಯ ಭಾಗದ ಅರಣ್ಯ ಪ್ರದೇಶದಲ್ಲಿ ವಿಜ್ಞಾನಿಗಳು ಅತ್ಯಂತ ವಿಶಿಷ್ಟವಾದ ಹಾಗೂ ಬೃಹದಾಕಾರದ ಶಿಲೀಂಧ್ರ ಅಂದರೆ ಫಂಗಸ್‌ವೊಂದನ್ನ ಪತ್ತೆಹಚ್ಚಿದ್ದಾರೆ. 'ಡಯಾಂಜುನುಸ್ ರೆಕ್ಸ್' (Dianjunus rex) ಎಂದು ಹೆಸರಿಸಲಾದ ಈ ಮಶ್ರೂಮ್ ರೀತಿಯ ಫಂಗಸ್‌ ತನ್ನ ಅಸಾಮಾನ್ಯ ಗಾತ್ರ ಮತ್ತು ಪ್ರಾಚೀನ ವಿಕಸನ ಇತಿಹಾಸದಿಂದಾಗಿ ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳ ಹಾಗೂ ಪರಿಸರ ಪ್ರೇಮಿಗಳ ಗಮನ ಸೆಳೆದಿದೆ.

ಈ ಫಂಗಸ್‌ ಮಣ್ಣಿನೊಳಗೆ ಹುದುಗಿರುವ ಕಾಂಡವನ್ನ ಒಳಗೊಂಡಂತೆ ಬರೋಬ್ಬರಿ 50 ಸೆಂಟಿಮೀಟರ್ ಎತ್ತರದವರೆಗೆ ಬೆಳೆಯುವ ಸಾಮರ್ಥ್ಯ ಹೊಂದಿದೆ. ಚೀನಾದ ಯೆನ್ನಾನ್ ಪ್ರಾಂತ್ಯದ ಉಷ್ಣವಲಯದ ಮಳೆಕಾಡುಗಳು ಹಾಗೂ ಕುನ್ಮಿಂಗ್ ಮತ್ತು ಲುಫೆಂಗ್ ಪ್ರದೇಶಗಳ ಶಂಕುದ್ರುಮ (Coniferous) ಅರಣ್ಯಗಳಲ್ಲಿ ನಡೆಸಿದ ಜೈವಿಕ ವೈವಿಧ್ಯ ಸಮೀಕ್ಷೆಯ ವೇಳೆ ಈ ಫಂಗಸ್‌ ಪತ್ತೆಯಾಗಿದೆ ಎಂದು ದಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

Scientists Discover 65-Million-Year-Old Giant Fungus Dianjunus rex Weighing 2 2 Kg In China

ಸಿಲಿಂಡರ್, ಸ್ಪಿಂಡಲ್ ಹಾಗೂ ಅಂಗೈನ ಆಕಾರದಲ್ಲಿ ಬೆಳೆಯುವ ಈ ಫಂಗಸ್‌ ಸಾಮಾನ್ಯವಾಗಿ 250 ರಿಂದ 600 ಗ್ರಾಂ ತೂಕವಿರುತ್ತದೆ. ಆದ್ರೆ ಈ ಅಧ್ಯಯನದ ವೇಳೆ ಸಂಶೋಧಕರಿಗೆ ದೊರೆತ ಅತಿ ದೊಡ್ಡ ಫಂಗಸ್‌ ಬರೋಬ್ಬರಿ 2.2 ಕೆ.ಜಿ ತೂಕವಿತ್ತು. ಇದರ ಫಲವತ್ತಾದ ಭಾಗವು 10-20 ಸೆಂ.ಮೀ ಎತ್ತರ ಹಾಗೂ 7-15 ಸೆಂ.ಮೀ ವ್ಯಾಸವನ್ನ ಹೊಂದಿದೆ.

65 ದಶಲಕ್ಷ ವರ್ಷಗಳ ಪ್ರಾಚೀನ ಇತಿಹಾಸ

'ಡಯಾಂಜುನುಸ್ ರೆಕ್ಸ್' ಫಂಗಸ್‌ನ ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ ಅದರ ಪ್ರಾಚೀನ ಇತಿಹಾಸ. ಸಂಶೋಧಕರ ಅಂದಾಜಿನ ಪ್ರಕಾರ, ಈ ಫಂಗಸ್‌ ಸುಮಾರು 65 ದಶಲಕ್ಷ (6.5 ಕೋಟಿ) ವರ್ಷಗಳ ಹಿಂದೆ, ಅಂದರೆ ಆರಂಭಿಕ ಪ್ಯಾಲಿಯೋಸಿನ್ (Paleocene) ಯುಗದಲ್ಲಿ ತನ್ನ ವಿಕಸನವನ್ನ ಆರಂಭಿಸಿದೆ.

ಭೂಮಿಯ ಮೇಲಿದ್ದ ಶೇಕಡಾ 75ರಷ್ಟು ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನ ನಾಶಪಡಿಸಿದ ಕ್ರಿಟೇಶಿಯಸ್-ಪ್ಯಾಲಿಯೋಜೀನ್ ಅಳಿವಿನ ಬಳಿಕ ಭೂಮಿಯ ಮೇಲಾದ ಪ್ರಮುಖ ಪರಿಸರ ಬದಲಾವಣೆಗಳ ಸಮಯದಲ್ಲಿ ಈ ಫಂಗಸ್‌ ವಂಶಾವಳಿ ವಿಕಸನಗೊಂಡಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಹೊಸ ಕುಟುಂಬಕ್ಕೆ ಸೇರ್ಪಡೆ

ವಿಜ್ಞಾನಿಗಳು ಈ ಫಂಗಸ್‌ನ ಭೌತಿಕ ಲಕ್ಷಣಗಳನ್ನ ತಳಿ ಅನುಕ್ರಮ ಮತ್ತು ಜೀನೋಮ್ ವಿಶ್ಲೇಷಣೆಯೊಂದಿಗೆ ಸಂಯೋಜಿಸಿ ಅತ್ಯಂತ ಆಳವಾದ ಅಧ್ಯಯನ ನಡೆಸಿದರು. ITS, LSU, RPB2 ಮತ್ತು TUB2 ಎಂಬ ನಾಲ್ಕು ಆನುವಂಶಿಕ ಪ್ರದೇಶಗಳನ್ನ ಪರೀಕ್ಷಿಸಿ, ಅದನ್ನು ಜೈಲೇರಿಯಲ್ಸ್ (Xylariales) ಕ್ರಮದ ಇತರ ಶಿಲೀಂಧ್ರಗಳೊಂದಿಗೆ ಹೋಲಿಕೆ ಮಾಡಲಾಯಿತು.

ಆಗ ಇದು 'ಗ್ರಾಫೋಸ್ಟ್ರೋಮಾಟೇಸಿ' ಕುಟುಂಬಕ್ಕೆ ನಿಕಟ ಸಂಬಂಧ ಹೊಂದಿರುವ ವಿಶಿಷ್ಟ ವಿಕಸನೀಯ ವಂಶಾವಳಿ ಎಂಬುದು ದೃಢಪಟ್ಟಿದೆ. ಇದರ ವಿಭಿನ್ನ ಲಕ್ಷಣಗಳಿಂದಾಗಿ, ಸಂಶೋಧಕರು ಇದನ್ನ 'ಡಯಾಂಜುನೇಸಿ' ಎಂಬ ಹೊಸ ಕುಟುಂಬಕ್ಕೆ ಹಾಗೂ ಡಯಾಂಜುನುಸ್ ಎಂಬ ಹೊಸ ಕುಲಕ್ಕೆ (Genus) ಸೇರ್ಪಡೆ ಮಾಡಿದ್ದಾರೆ.

ಲ್ಯಾಟಿನ್ ಭಾಷೆಯಲ್ಲಿ 'ರೆಕ್ಸ್' ಎಂದರೆ 'ರಾಜ' ಎಂದರ್ಥ. ಈ ಫಂಗಸ್‌ನ ಬೃಹತ್ ಗಾತ್ರ ಮತ್ತು ರಾಜಗಾಂಭೀರ್ಯದ ನೋಟದಿಂದಾಗಿ ಇದಕ್ಕೆ 'ಡಯಾಂಜುನುಸ್ ರೆಕ್ಸ್' ಎಂದು ಹೆಸರಿಡಲಾಗಿದೆ.

ವಿಶಿಷ್ಟ ಬೆಳವಣಿಗೆಯ ಹಿಂದಿನ ರಹಸ್ಯ

ವಿಜ್ಞಾನಿಗಳು ಈ ಫಂಗಸ್‌ನ ಅಸಾಮಾನ್ಯ ಬೆಳವಣಿಗೆಯ ಹಿಂದಿನ ಕಾರಣ ತಿಳಿಯಲು ಅದರ ಮೂರು ಮಾದರಿಗಳ ಜೀನೋಮ್ ಪರೀಕ್ಷೆ ನಡೆಸಿದ್ದಾರೆ. ಇದರಲ್ಲಿ ಕಾರ್ಬೋಹೈಡ್ರೇಟ್ ಸಂಸ್ಕರಿಸುವ 219-224 ಕಿಣ್ವಗಳ ಜೀನ್‌ಗಳು ಕಂಡುಬಂದಿವೆ. ಆಸಕ್ತಿದಾಯಕ ವಿಷಯವೆಂದರೆ, ಸಸ್ಯಕೋಶದ ಗೋಡೆಗಳನ್ನ ಒಡೆಯಲು ಸಹಾಯ ಮಾಡುವ ಪೆಕ್ಟಿನ್ ಲೈಸಸ್ (Pectin lyases) ಜೀನ್‌ಗಳು ಇದರಲ್ಲಿ ಬಹುತೇಕ ಕಂಡುಬಂದಿಲ್ಲ.

ಆದರೆ, ಫಂಗಸ್‌ಗಳ ಕೋಶ ಗೋಡೆಗಳನ್ನ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಗ್ಲೈಕೋಸಿಲ್-ಟ್ರಾನ್ಸ್‌ಫರೇಸ್ (Glycosyltransferases) ಜೀನ್‌ಗಳು ಇದರ ಕಾರ್ಬೋಹೈಡ್ರೇಟ್-ಸಕ್ರಿಯ ಕಿಣ್ವಗಳ ಭಂಡಾರದಲ್ಲಿ ಶೇಕಡಾ 25.9-26.0 ರಷ್ಟಿವೆ. ಈ ವಿಶಿಷ್ಟ ಆನುವಂಶಿಕ ಗುಣಲಕ್ಷಣಗಳೇ ಡಯಾಂಜುನುಸ್ ರೆಕ್ಸ್ ಶಿಲೀಂಧ್ರದ ಇಷ್ಟು ಬೃಹದಾಕಾರದ ಬೆಳವಣಿಗೆಗೆ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+