ಅಪ್ಪನ ಮಾತು ಕೇಳಿ ಈ ಕೆಲಸ ಮಾಡಲಿಲ್ಲವಂತೆ ಸಚಿನ್ ತೆಂಡೂಲ್ಕರ್!
ಮುಂಬೈ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ಮತ್ತು ಮರೆಯಾಗದ ಹೆಸರು ಸಚಿನ್ ತೆಂಡೂಲ್ಕರ್ ಅವರದ್ದು. ಕ್ರಿಕೆಟ್ ಆಟದಲ್ಲಿ ಮಾತ್ರವಲ್ಲ ತಮ್ಮ ವ್ಯಕ್ತಿತ್ವ ಹಾಗೂ ನಡತೆ ಮೂಲಕವೂ ಸಚಿನ್ ಇಡೀ ಜಗತ್ತಿಗೇ ಮಾದರಿ. ಇಂತಹ ಲೆಜೆಂಡ್ ತಾವು ತಂಬಾಕು ಜಾಹೀರಾತಿನಲ್ಲಿ ಏಕೆ ನಟಿಸಲಿಲ್ಲ ಎಂಬ ಕಾರಣ ಬಿಚ್ಚಿಟ್ಟಿದ್ದು ಆ ಬಗ್ಗೆ ಮಾಹಿತಿ ಇಲ್ಲಿ ತಿಳಿಯೋಣ.
ನಿಮಗೆಲ್ಲಾ ಗೊತ್ತೇ ಇರುವಂತೆ ಕ್ರಿಕೆಟ್ ಆಟಗಾರರಿಗೆ ಅದೆಷ್ಟೋ ಜಾಹೀರಾತುಗಳು ಬರುತ್ತವೆ. ಅದರಲ್ಲೂ ಕೋಟಿ ಕೋಟಿ ದುಡ್ಡು ಕೊಟ್ಟು ಜಾಹೀರಾತಿನಲ್ಲಿ ನಟಿಸುವಂತೆ ಕೇಳಿಕೊಳ್ಳುತ್ತವೆ ಕಂಪನಿಗಳು. ಆದರೆ 25-30 ವರ್ಷಗಳ ಹಿಂದೆ ಪರಿಸ್ಥಿತಿ ಹೀಗೆ ಇರಲಿಲ್ಲ, ಕ್ರಿಕೆಟರ್ ಆಗಿದ್ರೂ ಜಾಹೀರಾತು ಸಿಗ್ತಾ ಇದ್ದಿದ್ದು ಕೆಲವೇ ಕೆಲವು ಸ್ಟಾರ್ ಆಟಗಾರರಿಗೆ ಮಾತ್ರ. ಹೀಗಿದ್ದರೂ ಸಚಿನ್ ತೆಂಡೂಲ್ಕರ್ ಮಾತ್ರ ಎಂದಿಗೂ ತಂಬಾಕು ಜಾಹೀರಾತುಗಳಲ್ಲಿ ಭಾಗವಹಿಸಲೇ ಇಲ್ಲ. ಆದರೆ ಕಾರಣ ಏನು ಅನ್ನೋದನ್ನ ಸ್ವತಃ ಸಚಿನ್ (Sachin Tendulkar) ಹೇಳಿದ್ದು, ತಮ್ಮ ತಂದೆಯ ಮಾತುಗಳನ್ನ ನೆಪಿಸಿಕೊಂಡಿದ್ದಾರೆ.

ಅಪ್ಪ ಹೇಳಿದ್ದರು.. ತಂಬಾಕು ಜಾಹೀರಾತು ತಿರಸ್ಕರಿಸಿದೆ!
ಹೌದು, ತುಂಬಾ ಚಿಕ್ಕ ವಯಸ್ಸಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಸೇರಿದ್ದ ಸಚಿನ್ ತೆಂಡೂಲ್ಕರ್ ಮಾಡಿದ ಸಾಧನೆ ಬೆಟ್ಟದಷ್ಟು. ಬಹುಶಃ ಸಚಿನ್ ದಾಖಲೆಗಳನ್ನ ಭವಿಷ್ಯದಲ್ಲೂ ಅಷ್ಟು ಸುಲಭವಾಗಿ ಅಳಿಸಿ ಹಾಕಲು ಸಾಧ್ಯವೇ ಇಲ್ಲ ಎನ್ನಬಹುದು. ಏಕೆಂದರೆ ಸಚಿನ್ ದಾಖಲೆಗಳ ಪಟ್ಟಿ ಅಷ್ಟು ದೊಡ್ಡದಾಗಿದೆ. ಇಷ್ಟೆಲ್ಲಾ ಸಾಧನೆ ಮಾಡಿದ ಭಾರತೀಯ ಕ್ರಿಕೆಟರ್ ಸಚಿನ್ ನೂರಾರು ಕೋಟಿ ರೂಪಾಯಿಯನ್ನ ಜಾಹೀರಾತುಗಳ ಮೂಲಕವೇ ಸಂಪಾದನೆ ಮಾಡಿದ್ದರು. ಆದ್ರೆ ತಂಬಾಕು ಜಾಹೀರಾತುಗಳನ್ನ ತನ್ನ ತಂದೆಯ ಆದೇಶದಂತೆ ಮುಟ್ಟಲೇ ಇಲ್ಲ.
ತಂಬಾಕು ಜಾಹೀರಾತುಗಳು ರಿಜೆಕ್ಟ್!
ಸಚಿನ್ ಆಗಿನ್ನೂ ಶಾಲಾ ಜೀವನ ಮುಗಿಸಿ ಸಂಪೂರ್ಣ ಕ್ರಿಕೆಟ್ ಲೋಕದಲ್ಲಿ ಬ್ಯುಸಿ ಆಗಿರುವಾಗಲೇ ಅನೇಕ ತಂಬಾಕು ಕಂಪನಿಗಳು ಅವರ ಹಿಂದೆ ಬಿದ್ದವು. ಆದ್ರೂ ಸಚಿನ್ ಅವರಿಗೆಲ್ಲಾ ತಲೆ ಬಾಗಲೇ ಇಲ್ಲ. ಎಂದಿಗೂ ತಂಬಾಕು ಉತ್ಪನ್ನ ಉತ್ತೇಜಿಸದಂತೆ ನನಗೆ ನಮ್ಮ ಅಪ್ಪ ಹೇಳಿದ್ದರು. ಈ ಕಾರಣಕ್ಕೆ ನನಗೆ ಬಂದಿದ್ದ ಅನೇಕ ತಂಬಾಕು ಜಾಹಿರಾತು ಆಫರ್ ತಿರಸ್ಕರಿಸಿದ್ದೆ ಎಂದು ಸಚಿನ್ ಹೇಳಿದ್ದಾರೆ. ಭಾರತೀಯ ದಂತ ಸಂಘದ ಬಾಯಿ ನೈರ್ಮಲ್ಯ ಅಭಿಯಾನಕ್ಕೆ 'ನಗುವಿನ ರಾಯಭಾರಿ' ಆಗಿ ಸಚಿನ್ ನೇಮಕವಾದ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಜೀವನದ ಬಹುಮುಖ್ಯ ಘಟನೆಯನ್ನ ಹಂಚಿಕೊಂಡಿದ್ದಾರೆ.
'ನಗುವಿನ ರಾಯಭಾರಿ' ಉದ್ದೇಶ ಏನು?
ಅಷ್ಟಕ್ಕೂ ಮುಂದಿನ 5 ವರ್ಷ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ 'ನಗುವಿನ ರಾಯಭಾರಿ' ಆಗಿರುತ್ತಾರೆ. 'ಸ್ವಚ್ಛ ಮುಖ' ಅಭಿಯಾನ ಬಾಯಿ ಆರೋಗ್ಯ ಮತ್ತು ನೈರ್ಮಲ್ಯ ಸುಧಾರಿಸಲು ಹಾಗೂ ಅದರ ಪ್ರಾಮುಖ್ಯತೆ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಆಯೋಜಿಲಾಗಿದೆ. ಭಾರತೀಯ ದಂತ ಸಂಘ ಕೈಗೊಂಡಿರುವ ರಾಷ್ಟ್ರೀಯ ಅಭಿಯಾನ ಇದಾಗಿದ್ದು, ಹಲ್ಲು ಉಜ್ಜುವುದು, ಬಾಯಿ ತೊಳೆಯುವುದು, ಆರೋಗ್ಯಕರ ಆಹಾರ ಸೇವನೆ. ಸಿಗರೇಟ್ ಸೇದುವುದನ್ನು ತಪ್ಪಿಸುವುದು ಮತ್ತು ವರ್ಷಕ್ಕೆ 2 ಬಾರಿಯಾದರೂ ದಂತ ವೈದ್ಯರನ್ನು ಭೇಟಿ ಮಾಡುವುದು ಅಭಿಯಾನದ ಮುಖ್ಯ ಉದ್ದೇಶ. ಹೀಗಾಗಿ ಸಚಿನ್ ಅವರನ್ನ 'ನಗುವಿನ ರಾಯಭಾರಿ' ಎಂದು ನೇಮಿಸಲಾಗಿದೆ.
ಸಚಿನ್ ಮಾತಿನಿಂದ ಅಭಿಮಾನಿಗಳಿಗೆ ಹೆಮ್ಮೆ!
ಪುಡಿಗಾಸು ಸಿಕ್ಕರೆ ಸಾಕು ಯಾವುದೇ ಜಾಹೀರಾತು ಆಗಿದ್ರೂ ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುವ ಈಗಿನ ಬಹುತೇಕ ಕ್ರಿಕೆಟಿಗರ ನಡುವೆ ಸಚಿನ್ ಭಿನ್ನವಾಗಿ ಕಾಣುತ್ತಿದ್ದಾರೆ. ಸಚಿನ್ ಅವರಂತಹ ದಿಗ್ಗಜ ಕ್ರಿಕೆಟ್ ಆಟಗಾರರು ತಂಬಾಕು ಜಾಹೀರಾತುಗಳ ಬಗ್ಗೆ ನೀಡಿದ ಹೇಳಿಕೆ ಅಭಿಮಾನಿಗಳಿಗೆ ಹೆಮ್ಮೆ ತರಿಸಿದೆ. ಕೋಟಿ ಕೋಟಿ ಅಭಿಮಾನಿಗಳನ್ನ ಸಚಿನ್ ಜಗತ್ತಿನಾದ್ಯಂತ ಸಂಪಾದಿಸಿದ್ದಾರೆ. ಅಲ್ಲದೆ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯ ಇರುವ ವಿಚಾರಗಳನ್ನೂ ಸಚಿನ್ ಇದೇ ಸಂದರ್ಭದಲ್ಲಿ ಪ್ರಸ್ತಾಪ ಮಾಡಿರುವುದು ಸಚಿನ್ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ.

ಒಟ್ನಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಜೀವನದ ಮಹತ್ವದ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ತಂದೆಯ ಆಸೆಯನ್ನ ತಾವು ಈಡೇರಿಸಿದ್ದು ಯಾಕೆ ಎಂಬುದನ್ನೂ ತಿಳಿಸಿದ್ದಾರೆ. ಅಪ್ಪ ಹಾಕಿದ್ದ ಗೆರೆ ದಾಟದೇ, ಕ್ರಿಕೆಟ್ ಲೋಕದಲ್ಲಿ ಹೆಸರು ಮಾಡಿರುವ ಸಚಿನ್ ಈಗ ಮತ್ತಷ್ಟು ಆಟಗಾರರಿಗೆ ಮಾದರಿಯಾಗಿದ್ದಾರೆ. ತಮ್ಮ ಆಟದ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದ ಸಚಿನ್, ಇದೀಗ ತಮ್ಮ ಮೌಲ್ಯಗಳ ಮೂಲಕವೂ ಯುವ ಸಮೂಹವನ್ನ ಸೆಳೆಯುತ್ತಿರುವುದು ಸುಳ್ಳಲ್ಲ.












Click it and Unblock the Notifications