ಚಂದ್ರನ ಮೇಲೆ ನೌಕೆ ಪತನ: ವಿಜ್ಞಾನಿ ದಿಢೀರ್ ಆಸ್ಪತ್ರೆಗೆ ದಾಖಲು
ಜಗತ್ತಿನ ಮೂಲೆ ಮೂಲೆಯಲ್ಲೂ ಚಂದ್ರನ ಬಗ್ಗೆ ಮಾತುಕತೆ ನಡೆಯುತ್ತಿದೆ. ಒಂದು ಕಡೆ ಭಾರತದ 'ಚಂದ್ರಯಾನ-3' ಲ್ಯಾಂಡರ್ ಸದ್ದು ಮಾಡುತ್ತಿದ್ದರೆ, ಇನ್ನೊಂದು ಕಡೆ ರಷ್ಯಾ ಲ್ಯಾಂಡರ್ ಸೋತು ಹೋದ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ವಿಷಯ ಇದಲ್ಲ ಚಂದ್ರನ ಯೋಜನೆಗೆ ಕೈಜೋಡಿಸಿದ್ದ ವಿಜ್ಞಾನಿ ಒಬ್ಬರು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಭಾರಿ ಗೊಂದಲಕ್ಕೆ ಕಾರಣವಾಗಿದ್ದು, ಆ ವಿಜ್ಞಾನಿಗೆ ಏನಾಯ್ತು? ಬನ್ನಿ ತಿಳಿಯೋಣ.
ಚಂದ್ರನ ಮೇಲೆ ಅಧ್ಯಯನ ನಡೆಸಲು ಜಗತ್ತಿನ ಹಲವಾರು ರಾಷ್ಟ್ರಗಳು ಯೋಜನೆಗಳನ್ನು ಕೈಗೊಳ್ಳುತ್ತಿವೆ. ಅದ್ರಲ್ಲೂ ಭಾರತ, ಅಮೆರಿಕ, ರಷ್ಯಾ, ಚೀನಾ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ರೇಸ್ ಜೋರಾಗಿದೆ. ಈ ಸ್ಪರ್ಧೆಯಲ್ಲಿ ಭಾರತ ಗೆದ್ದು ಬೀಗುತ್ತಿದ್ದರೂ, ರಷ್ಯಾ ಮಾತ್ರ ಭೀಕರ ಸೋಲು ಕಂಡಿದೆ. ಇದೇ ಸಂದರ್ಭಕ್ಕೆ ವಿಜ್ಞಾನಿ ಒಬ್ಬರು ದಿಢೀರ್ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಸಂಚಲನ ಸೃಷ್ಟಿಸಿದೆ. ರಷ್ಯಾ ಕೈಗೊಂಡಿದ್ದ ಚಂದ್ರನ ಬಗೆಗಿನ ಯೋಜನೆಯಲ್ಲಿ ಇವರೇ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ರಷ್ಯಾದ ಚಂದ್ರನ ಲ್ಯಾಂಡರ್ ಬಿದ್ದು ಹೋಗುತ್ತಿದ್ದಂತೆ ರಷ್ಯಾದ ವಿಜ್ಞಾನಿ ಕೂಡ ಆಸ್ಪತ್ರೆಗೆ ಸೇರಿದ್ದಾರೆ.

ಚಂದ್ರನ ಯೋಜನೆ ಸೋಲಿಗೆ ಸೇಡು?
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ, ರಷ್ಯಾ 'ಲೂನಾ -25' ಯೋಜನೆಯನ್ನು ಕೈಗೊಂಡಿತ್ತು. ಆದ್ರೆ ಕೊನೆಯ ಹಂತದಲ್ಲಿ 'ಲೂನಾ -25' ನೌಕೆ ದಿಢೀರ್ ನೆಲಕ್ಕೆ ಬಿದ್ದು ಹೋಗಿತ್ತು. ರಷ್ಯಾ ನೌಕೆಯ ಪತನದ ಕೆಲವೇ ಗಂಟೆಗಳಲ್ಲಿ ಹಿರಿಯ ವಿಜ್ಞಾನಿ ಮಿಖಾಯಿಲ್ ಮರೋವ್ ಆರೋಗ್ಯದಲ್ಲಿ ಹೆಚ್ಚು ಕಮ್ಮಿ ಆಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಆ ವಿಜ್ಞಾನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ಆದರೆ ವಿಜ್ಞಾನಿಗೆ ದಿಢೀರ್ ಹೀಗೆ ಆಗಿದ್ದು ಯಾಕೆ? ಇದರ ಹಿಂದೆ ಬೇರೆ ಏನಾದರೂ ಉದ್ದೇಶ ಇತ್ತಾ? ಎಂಬ ಬಗ್ಗೆ ಈಗ ಚರ್ಚೆ ಶುರುವಾಗಿದೆ.
ಸೋತು ಹೋಗಿತ್ತು ರಷ್ಯಾ ನೌಕೆ
ಭಾರತದ ಚಂದ್ರನಯಾನ-3 ಯೋಜನೆ ಹೊತ್ತಲ್ಲಿ ರಷ್ಯಾ ಕೂಡ ಚಂದ್ರನ ಅಧ್ಯಯನಕ್ಕಾಗಿ ನೌಕೆ ಉಡಾಯಿಸಿತ್ತು. ಆದ್ರೆ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಮೊದಲೇ ರಷ್ಯಾ ದೇಶದ 'ಲೂನಾ -25' ಬಾಹ್ಯಾಕಾಶ ನೌಕೆ ಪತನವಾಗಿ ಛಿದ್ರವಾಗಿತ್ತು. ಈ ಘಟನೆ ನಂತರ ಚಂದ್ರನ ಅಧ್ಯಯನಕ್ಕೆ ಕೈಜೋಡಿಸಿದ್ದ ರಷ್ಯಾ ಹಿರಿಯ ವಿಜ್ಞಾನಿ ದಿಢೀರ್ ಆಸ್ಪತ್ರೆಗೆ ಪಾಲಾಗಿದ್ದಾರೆ. ರಷ್ಯಾ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡ್ ಮಾಡಲು ಲೂನಾ-25 ನೌಕೆಯನ್ನು ಆಗಸ್ಟ್ 11ರಂದು ಉಡಾವಣೆ ಮಾಡಿತ್ತು.

ಚಂದ್ರನ ಮೇಲೆ ನೀರು ಹುಡುಕುವ ಸರ್ಕಸ್
ರಷ್ಯಾ ಲುನಾ-25 ಮೂಲಕ ಮನುಷ್ಯರ ಭವಿಷ್ಯ ರೂಪಿಸುವ ಯೋಜನೆಗೆ ಸಜ್ಜಾಗಿತ್ತು. ಚಂದ್ರ ಎಂಬ ಕುತೂಹಲದ ಮೇಲೆ ನೌಕೆ ಇಳಿಸಿ, ಅಧ್ಯಯನಕ್ಕೂ ಸಿದ್ಧವಾಗಿತ್ತು. ಹೀಗಾಗಿ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿ 15 ಸೆಂಟಿಮೀಟರ್ ಆಳ ಅಗೆದು, ಚಂದ್ರನ ದಕ್ಷಿಣ ಭಾಗದಲ್ಲಿ ಇರುವ ನೀರು ಹುಡುಕಲು ಮುಂದಾಗಿತ್ತು. ಆದ್ರೆ ಎಲ್ಲವೂ ಅಂದುಕೊಂಡ ರೀತಿಯೇ ನಡೆದು, ಇನ್ನೇನು ಲ್ಯಾಂಡರ್ ಇಳಿಸುವ ಸಂದರ್ಭಕ್ಕೆ ಆಘಾತ ಎದುರಾಗಿತ್ತು. ಬರೋಬ್ಬರಿ 50 ವರ್ಷದ ಬಳಿಕ ರಷ್ಯಾ ದೇಶ ಚಂದ್ರನ ಅಧ್ಯಯನಕ್ಕೆ ಲುನಾ-25 ನೌಕೆಯನ್ನು ಕಳುಹಿಸಿತ್ತು. ಕೊನೆಗೂ ಯಶಸ್ಸು ಸಿಗಲಿಲ್ಲ, ಭವಿಷ್ಯ ರೂಪಿಸಬಹುದಾಗಿದ್ದ ಯೋಜನೆ ಸೋಲು ಕಂಡು ಮನುಷ್ಯರಿಗೆ ನಷ್ಟವಾಗಿತ್ತು.
ರಷ್ಯಾ ಗೆದ್ದಿದ್ದರೆ ಭಾರಿ ಅನುಕೂಲ
ರಷ್ಯಾ ತನ್ನ ಯೋಜನೆಯಲ್ಲಿ ಸಕ್ಸಸ್ ಆಗಿದ್ದರೆ ಲುನಾ-25 ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಕ್ರಾಂತಿಯೇ ಮಾಡಬಹುದಿತ್ತು. ಹೇಗೆಂದರೆ ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿ ಮನುಷ್ಯರನ್ನ ಅಧ್ಯಯನಕ್ಕೆ ಕಳುಹಿಸಲು ಸಾಕಷ್ಟು ಅಡೆತಡೆ ಇದೆ. ಅದ್ರಲ್ಲೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನೀರು ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯೂ ಸಮಸ್ಯೆಯಾಗಿದೆ. ನೂರಾರು ಕೋಟಿ ಖರ್ಚು ಮಾಡಿ ವಿಜ್ಞಾನಿಗಳಿಗೆ ಆಕಾಶಕ್ಕೆ ಊಟ, ನೀರು, ತಿಂಡಿ ಕಳಿಸಬೇಕಿದೆ.

ಹೀಗಿದ್ದಾಗ ರಷ್ಯಾ ಬಾಹ್ಯಾಕಾಶ ಯೋಜನೆಯಾದ ಲುನಾ-25 ಯಶಸ್ವಿಯಾಗಿದ್ದರೆ ಗಗನಯಾನ ಕೈಗೊಳ್ಳುವ ವಿಜ್ಞಾನಿಗಳಿಗೆ ಚಂದ್ರನ ಮೂಲಕ ನೀರು ಪೂರೈಸುವ ಚಿಂತನೆ ನಡೆದಿತ್ತು. ಹಾಗೇ ಮನುಷ್ಯರನ್ನು ಚಂದ್ರನ ಮೇಲೆ ಇಳಿಸಿ ಅಧ್ಯಯನವನ್ನ ನಡೆಸಲು ಕೂಡ ಯೋಜಿಸಲಾಗಿತ್ತು. ಆದರೆ ಎಲ್ಲಾ ಬುಡಮೇಲಾಗಿ ಹೋಗಿದೆ. ತಾಂತ್ರಿಕ ಸಮಸ್ಯೆ ಕಾರಣ ಈ ರೀತಿ ರಷ್ಯಾ ಲ್ಯಾಂಡರ್ ಕ್ರಾಷ್ ಆಗಿದೆ ಎನ್ನಲಾಗಿದೆ. ಇಲ್ಲಿ ತನಕ ನಿಖರವಾದ ಕಾರಣ ಮಾತ್ರ ತಿಳಿದುಬಂದಿಲ್ಲ, ತನಿಖೆ ನಡೆಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ರಷ್ಯಾ ವಿಜ್ಞಾನಿಯು ಆಸ್ಪತ್ರೆ ಸೇರಿದ್ದಾರೆ.
ಚಂದ್ರನ ದಕ್ಷಿಣ ಧ್ರುವ ಹೇಗಿದೆ ಗೊತ್ತಾ?
ವಿಜ್ಞಾನಿಗಳಿಗೆ ಕುತೂಹಲ ಕೆರಳಿಸಿದ ಚಂದ್ರನ ಭಾಗವೆಂದರೆ ಅದು ದಕ್ಷಿಣ ಧ್ರುವ. ಚಂದ್ರನ ದಕ್ಷಿಣ ಧ್ರುವ ವಿಸ್ಮಯದ ಖಜಾನೆ ಇದ್ದಂತೆ. ಈ ಭಾಗದಲ್ಲಿ ಉಷ್ಣಾಂಶ ಮೈನಸ್ 230 ಡಿಗ್ರಿಗೂ ಕಡಿಮೆ ತಾಪಮಾನ ಇರುತ್ತೆ. ಅಲ್ಲದೆ ಇಲ್ಲಿ ಬೆಳಕನ್ನ ಕಾಣದ ಅದೆಷ್ಟೋ ಪ್ರದೇಶಗಳು ಕೂಡ ಇವೆ. ಚಂದ್ರಯಾನ-1 ಯೋಜನೆ ಚಂದ್ರನ ಮೇಲೆ ನೀರಿದೆ ಎಂದು ಮೊದಲ ಬಾರಿ ತಿಳಿಸಿತ್ತು. ಹೀಗೆ ಭಾರತ 2008ರಲ್ಲಿ ಚಂದ್ರನ ಮೇಲೆ ನೀರು ಕಂಡುಹಿಡಿದ ನಂತರ, ಜಗತ್ತಿನ ಬಾಹ್ಯಾಕಾಶ ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಆರಂಭಿಸಲು ಯೋಜನೆ ರೂಪಿಸಿ ಸಿದ್ಧತೆ ನಡೆಸುತ್ತಿದ್ದಾರೆ. ಭಾರತದ ಇಸ್ರೋ ಕೂಡ ದಕ್ಷಿಣ ಧ್ರುವದಲ್ಲೇ ವಿಕ್ರಮ್ ಲ್ಯಾಂಡರ್ ಇಳಿಸಲು ತೀರ್ಮಾನಿಸಿದ್ದು, ಇನ್ನೇನು ಕ್ಷಣಗಣನೆ ಆರಂಭವಾಗಿದೆ.

ಭಾರತೀಯರಿಂದ ವಿಶೇಷ ಪೂಜೆ, ಪ್ರಾರ್ಥನೆ
ಚಂದ್ರನ ಮೇಲ್ಮೈ ಮೇಲೆ ಭಾರತದ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್‌ಗೆ ಈಗ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಹೀಗಾಗಿ ಯಶಸ್ಸಿಗಾಗಿ ಭಾರತೀಯರು ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ. ಹಾಗೇ ಜಗತ್ತು ಕೂಡ ಭಾರತದ ಈ ಯಶಸ್ಸಿಗಾಗಿ ಪ್ರಾರ್ಥನೆ ಮಾಡುತ್ತಿದ್ದು, ಇದರಿಂದ ಭಾರತಕ್ಕೆ ಮಾತ್ರವಲ್ಲ ಪ್ರಪಂಚಕ್ಕೆ ಒಳ್ಳೆಯ ಸುದ್ದಿ ಸಿಗಲಿದೆ. ಮನುಷ್ಯರ ಭವಿಷ್ಯ ಚಂದ್ರಯಾನ-3 ಯೋಜನೆ ಮೂಲಕ ಉಜ್ವಲವಾಗಲಿದೆ.
ಒಟ್ನಲ್ಲಿ ರಷ್ಯಾ ವಿಜ್ಞಾನಿ ಆಸ್ಪತ್ರೆಗೆ ಸೇರಿರುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಈ ಬಗ್ಗೆ ರಷ್ಯಾ ಮಾಧ್ಯಮಗಳು ಕೂಡ ವರದಿ ಮಾಡಿದ್ದು, ತನಿಖೆ ನಡೆಯುತ್ತಿದೆ. ಅತ್ತ ತನ್ನ ನೌಕೆಯನ್ನು ಕಳೆದುಕೊಂಡು, ಇತ್ತ ಯೋಜನೆಯಲ್ಲಿ ಭಾಗವಹಿಸಿದ್ದ ವಿಜ್ಞಾನಿ ಆಸ್ಪತ್ರೆಗೆ ದಾಖಲಾಗಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಇಷ್ಟೆಲ್ಲದರ ನಡುವೆ ರಷ್ಯಾ ಯೋಜನೆ ಸೋಲಿಗೆ ಕಾರಣ ತಿಳಿಯಲು ರಷ್ಯಾದ ಬಾಹ್ಯಾಕಾಶ ಸಂಸ್ಥೆ ತನಿಖೆ ನಡೆಸುತ್ತಿದೆ.












Click it and Unblock the Notifications