
ಉಕ್ರೇನ್ ಸಹಾಯಕ್ಕೆ ಬಂದ ಸೌದಿ ದೊರೆ: ₹ 3,200 ಕೋಟಿಗೂ ಅಧಿಕ ಮೊತ್ತದ ನೆರವು ಘೋಷಣೆ
ರಿಯಾಧ್, ಅಕ್ಟೋಬರ್ 15: ರಷ್ಯಾದ ದಾಳಿಯನ್ನು ಎದುರಿಸುತ್ತಿರುವ ಉಕ್ರೇನ್ ನಲುಗಿಹೋಗಿದೆ. ಯುದ್ಧಪೀಡಿತ ರಾಷ್ಟ್ರಕ್ಕೆ ಹೊರದೇಶಗಳಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಯುರೋಪ್ ದೇಶಗಳು ಹಾಗೂ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಉಕ್ರೇನ್ ನೆರವಿಗೆ ದಾವಿಸಿವೆ.
ಈಗ ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಉಕ್ರೇನ್ ಬೆಂಬಲಕ್ಕೆ ನಿಂತಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿಗೆ ಕರೆ ಮಾಡಿ 400 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಭಾರತದ ರೂಪಾಯಿಗಳಲ್ಲಿ ಹೇಳುವುದಾದರೆ, ₹ 3,200 ಕೋಟಿಗೂ ಅಧಿಕ ಹಣವನ್ನು ಉಕ್ರೇನ್‌ಗೆ ಸೌದಿ ಅರೇಬಿಯಾ ನೀಡಲಿದೆ.
Video: ಉಕ್ರೇನ್ ಗಡಿ ಪ್ರವೇಶಿಸಿ ಢಂ.. ಢಮಾರ್ ಎಂದ ರಷ್ಯಾದ ಯುದ್ಧ ಟ್ಯಾಂಕರ್!
ಉಕ್ರೇನ್‌ಗೆ ಎಲ್ಲ ರೀತಿಯ ಅಗತ್ಯ ನೆರವುಗಳನ್ನು ಮುಂದುವರಿಸುವುದಾಗಿ ಸೌದಿ ದೊರೆ ಹೇಳಿದ್ದಾರೆ ಎಂದು 'ಗಲ್ಫ್ ನ್ಯೂಸ್' ವರದಿ ಮಾಡಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಮಧ್ಯಸ್ಥಿಕೆ ಮುಂದುವರಿಸಲು ಮತ್ತು ಯುದ್ಧ ಉಲ್ಬಣಗೊಳ್ಳದಿರುವಂತೆ ತಡೆಯಲು ಸೌದಿ ಅರೇಬಿಯಾ ಯತ್ನಿಸಲಿದೆ ಎಂದು ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.
ಇದೇ ವೇಳೆ, ಉಕ್ರೇನ್- ರಷ್ಯಾ ನಡುವಿನ ಯುದ್ಧ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಉಕ್ರೇನ್‌ಗೆ ಹಣ, ಮೂಲಭೂತ ಸೌಕರ್ಯ, ಯುದ್ಧ ಸಾಮಗ್ರಿಗಳ ಅನಿವಾರ್ಯವಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದರು.
ರಷ್ಯಾ ವಿರುದ್ಧ ವಿಜಯದ ಪ್ರತಿಜ್ಞೆ ಮಾಡಿದ ಝೆಲೆನ್‌ಸ್ಕಿ
ಎಂಟು ತಿಂಗಳ ಹಿಂದೆ ಉಕ್ರೇನ್ ವಿರುದ್ಧ ಆರಂಭಿಸಿರುವ ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರಾಕರಿಸಿದ್ದಾರೆ. ಜಾಗತಿಕ ನಾಯಕರ ವಿರೋಧದ ನಡುವೆಯೂ ಉಕ್ರೇನ್ ಮೇಲೆ ದಾಳಿಯನ್ನು ಮುಂದುವರೆಸಿದ್ದಾರೆ. ಆದರೆ, ಉಕ್ರೇನ್ ಪುಟ್ಟ ರಾಷ್ಟ್ರವಾದರೂ ರಷ್ಯಾ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡಿದೆ.
ಈ ವಿಚಾರವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ, ರಷ್ಯಾವನ್ನು ಹಿಮ್ಮೆಟ್ಟಿಸಿ ವಿಜಯ ದಿನಾಚರಣೆಯನ್ನು ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ.
ಜಗತ್ತಿನ ಬಹುತೇಕ ರಾಷ್ಟ್ರಗಳು ನಮ್ಮ ಜೊತೆ ನಿಂತಿವೆ. ನಮಗೆ ನೆರವು ನೀಡುತ್ತಿವೆ. ಇದು ನಮಗೆ ದೊರೆತ ಮೊದಲ ಜಯ. ನಾವು ರಷ್ಯಾ ವಿರುದ್ಧ ಹೋರಾಡುತ್ತೇವೆ. ಶತ್ರುಗಳನ್ನು ಸದೆಬಡೆದು ಆಚೆಗೆ ಅಟ್ಟುತ್ತೇವೆ ಎಂದು ಝೆಲೆನ್‌ಸ್ಕಿ ತಿಳಿಸಿದ್ದಾರೆ.
ಅಮೆರಿಕದಿಂದ ಹರಿಬಂದ ಸಾವಿರಾರು ಕೋಟಿ ನೆರವು
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಟೀಕಿಸುತ್ತಲೇ ಬಂದಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಉಕ್ರೇನ್ ಪರವಾಗಿ ನಿಂತಿದ್ದಾರೆ. ಉಕ್ರೇನ್ ಬೇಕಿರುವ ಎಲ್ಲ ರೀತಿಯ ನೆರವನ್ನು ನೀಡಲು ಅಮೆರಿಕ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಯುದ್ಧ ಉಪಕರಣಗಳು ಸೇರಿದಂತೆ ಎಲ್ಲ ರೀತಿಯ ಮಾನವೀಯ ನೆರವು ನೀಡುವುದಾಗಿ ಅಮೆರಿಕ ಘೋಷಿಸಿದೆ. ಈ ಹಿನ್ನೆಲೆಯಲ್ಲಿ, 725 ಮಿಲಿಯನ್ ಡಾಲರ್ ಹಣವನ್ನು ಉಕ್ರೇನ್‌ಗೆ ನೀಡುವುದಾಗಿ ತಿಳಿಸಿದೆ. ಭಾರತದ ರೂಪಾಯಿಗಳಲ್ಲಿ ಹೇಳುವುದಾದರೆ, ಸುಮಾರು ₹5,975 ಕೋಟಿ ಮೊತ್ತವನ್ನು ಅಮೆರಿಕ ನೀಡಲಿದೆ. ಈ ಕುರಿತ ಮಾಹಿತಿಯನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹಂಚಿಕೊಂಡಿದ್ದಾರೆ.
ಒಂದು ವೇಳೆ, ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲನ್‌ಸ್ಕಿ ಸಾವಿಗೀಡಾದರೂ, ಉಕ್ರೇನ್ ಸರ್ಕಾರ ಆಡಳಿತದಲ್ಲಿ ಇರಲಿದೆ. ಅದಕ್ಕೆ ಬೇಕಾದ ನೆರವು ಹಾಗೂ ಯೋಜನೆಗಳು ಸಿದ್ಧವಾಗಿವೆ ಎಂದು ಬ್ಲಿಂಕೆನ್ ತಿಳಿಸಿದ್ದಾರೆ. ಅಮೆರಿಕದ ಈ ಹೇಳಿಕೆಯು ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಒಂದು ವೇಳೆ, ಝೆಲನ್‌ಸ್ಕಿ ಹತರಾದ ಸಂದರ್ಭದಲ್ಲಿ ಅಮೆರಿಕ ಸೈನ್ಯ ನೇರವಾಗಿ ಯುದ್ಧಭೂಮಿಗೆ ನುಗ್ಗಲಿದೆಯಾ ಎಂಬ ಅನುಮಾನಗಳೂ ಮುನ್ನೆಲೆಗೆ ಬಂದಿವೆ.
ರಷ್ಯಾ-ಚೀನಾ ಸಂಬಂಧ ಕುರಿತು ಬಿಡೆನ್ ಹೇಳಿಕೆ
ರಷ್ಯಾ ಹಾಗೂ ಚೀನಾದ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಅವರಿಬ್ಬರದ್ದೂ ಒಂದೇ ರೀತಿಯ ಮನಸ್ಥಿತಿ ಎಂದು ಹೇಳಿದ್ದಾರೆ.
ಚೀನಾ ಅಧ್ಯಕ್ಷರ ವ್ಯಕ್ತಿತ್ವದಲ್ಲಿ ಅಗಾಧವಾದ ಸಮಸ್ಯೆಗಳಿವೆ. ಆತ ತಮಗೆ ಬೇಕಿರುವುದನ್ನು ಅಷ್ಟೇ ಅರ್ಥಮಾಡಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ರಷ್ಯಾ ಅಧ್ಯಕ್ಷರೂ ಇದ್ದಾರೆ. ಇವರ ನಡುವಿನ ಸ್ನೇಹ ಚೆನ್ನಾಗಿದೆ. ಇದು ನಮಗೆ ಹೊಸ ರೀತಿಯ ಸಂಕಷ್ಟ. ಇದನ್ನು ನಾವು ಎದುರಿಸುವುದು ಹೇಗೆಂದು ಯೋಚಿಸುತ್ತಿದ್ದೇನೆ ಎಂದು ಬಿಡೆನ್ ತಿಳಿಸಿದ್ದಾರೆ.