ಬೆಲಾರಸ್ ಪ್ರದೇಶದಲ್ಲಿ ರಷ್ಯಾ-ಉಕ್ರೇನ್ 2ನೇ ಸುತ್ತಿನ ಸಂಧಾನ ಸಭೆ
ಕೀವ್, ಮಾರ್ಚ್ 3: ರಷ್ಯಾ ಮತ್ತು ಉಕ್ರೇನಿಯನ್ ಪ್ರತಿನಿಧಿಗಳ ನಡುವೆ ಎರಡನೇ ಸುತ್ತಿನ ಶಾಂತಿ ಮಾತುಕತೆಗಳು ಬೆಲಾರಸ್ ಪ್ರದೇಶದಲ್ಲಿ ನಡೆಯುತ್ತಿವೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.
"ಈ ಪರಿಸ್ಥಿತಿಯನ್ನು ಅವರು ಕೊನೆಗೊಳಿಸುತ್ತಾರೆ, ಡಾನ್‌ಬಾಸ್‌ನಲ್ಲಿ ಶಾಂತಿಯನ್ನು ಪುನಃಸ್ಥಾಪಿಸುತ್ತಾರೆ. ಉಕ್ರೇನ್‌ನಲ್ಲಿರುವ ಎಲ್ಲಾ ಜನರು ಶಾಂತಿಯುತ ಜೀವನಕ್ಕೆ ಮರಳಲು ಅನುವು ಮಾಡಿಕೊಡುತ್ತಾರೆ ಎಂದು ನಾವು ಭಾವಿಸುತ್ತೇವೆ," ಎಂದು ಸಚಿವಾಲಯ ಹೇಳಿದೆ.
ರಷ್ಯಾದ ಪ್ರತಿನಿಧಿಗಳೊಂದಿಗೆ ಸಂಧಾನ ಸಭೆ ಪ್ರಾರಂಭಿಸಲಾಗಿದ್ದು, ತಕ್ಷಣದ ಕದನ ವಿರಾಮ ಘೋಷಿಸುವುದು, ನಾಶವಾದ ಅಥವಾ ನಿರಂತರವಾಗಿ ಶೆಲ್ ದಾಳಿಗೊಳಗಾದ ಹಳ್ಳಿಗಳು/ನಗರಗಳಿಂದ ನಾಗರಿಕರನ್ನು ಸ್ಥಳಾಂತರಿಸಲು ಮಾನವೀಯ ಕಾರಿಡಾರ್ ಅನ್ನು ಪ್ರಾರಂಭಿಸುವ ಬಗ್ಗೆ ಚರ್ಚಿಸಲಾಗುತ್ತಿದೆ.
ಈ ಹಿಂದಿನ ದಿನ, ಉಕ್ರೇನಿಯನ್ ಅಧ್ಯಕ್ಷೀಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಗುರುವಾರ ಮಾತುಕತೆ ನಡೆಯಲಿದೆ ಎಂದು ರಷ್ಯಾದ ಅಧಿಕಾರಿಗಳು ಹೇಳಿದ್ದರು. ತದನಂತರ ದೇಶದ ನಿಯೋಗವು ಸಭೆಯು ನಡೆಯುವ ಸ್ಥಳಕ್ಕೆ ಪ್ರಯಾಣಿಸುತ್ತಿದೆ ಎಂದು ಟ್ವೀಟ್ ಮಾಡಿದ್ದರು.

ರಷ್ಯಾ ಮಾತುಕತೆ ಬಗ್ಗೆ ಟ್ವೀಟ್:
ರಷ್ಯಾ ಒಕ್ಕೂಟದ ಜೊತೆಗೆ ಚರ್ಚೆ ಆರಂಭಿಸುವುದಕ್ಕೂ ಮೊದಲು ಪೊಡೊಲ್ಯಾಕ್ ಆಡಳಿತ ಪಕ್ಷದ ಹಿರಿಯ ಅಧಿಕಾರಿ ಡೇವಿಡ್ ಅರಾಹಮಿಯಾ ಅವರೊಂದಿಗೆ ತಮ್ಮ ಫೋಟೋದೊಂದಿಗೆ ಟ್ವೀಟ್ ಮಾಡಿದ್ದರು. ಈಗಾಗಲೇ ನಾವು ಹೆಲಿಕಾಪ್ಟರ್ ನಲ್ಲಿದ್ದು, ಒಂದೆರೆಡು ಗಂಟೆಗಳಲ್ಲಿ ಚರ್ಚೆ ನಡೆಸುತ್ತೇವೆ ಎಂದು ಬರೆದುಕೊಂಡಿದ್ದರು.
ಇನ್ನೊಂದು ದಿಕ್ಕಿನಲ್ಲಿ "ಎರಡು ರಾಷ್ಟ್ರಗಳ ಮಧ್ಯೆ ಶಾಂತಿ ಮಾತುಕತೆಗಳು ನಡೆಯಲಿವೆ" ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಈ ಹಿಂದೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಹೇಳಿಕೆ ನೀಡಿದ್ದರು. ಉಕ್ರೇನಿಯನ್ ಭಾಗವು ಉದ್ದೇಶಪೂರ್ವಕವಾಗಿ ಅವರ ಆಗಮನವನ್ನು ವಿಳಂಬಗೊಳಿಸಿದೆ ಎಂದು ಲಾವ್ರೊವ್ ಸಮರ್ಥಿಸಿಕೊಂಡರು. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ, ಉಕ್ರೇನ್ ಯುನೈಟೆಡ್ ಸ್ಟೇಟ್ಸ್ನ ಕೈಗೊಂಬೆ ರಾಜ್ಯವಾಗಿದೆ ಎಂದು ಹೇಳಿದರು.
ರಷ್ಯಾದ ನಿಯೋಗವು ಬೆಲಾರಸ್‌ನಲ್ಲಿ ತಮ್ಮ ಉಕ್ರೇನಿಯನ್ ಪ್ರತಿನಿಧಿಗಳಿಗಾಗಿ ಕಾಯುತ್ತಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದರು. "ನಮ್ಮ ನಿಯೋಗವು ಕಳೆದ ರಾತ್ರಿಯೇ ಈ ಸ್ಥಳದಲ್ಲಿತ್ತು. ಕಳೆದ ನಿನ್ನೆಯ ರಾತ್ರಿ ಮತ್ತು ಬೆಳಗ್ಗೆ ಸೇರಿದಂತೆ ಉಕ್ರೇನಿಯನ್ ಸಂಧಾನಕಾರರನ್ನು ನಿರೀಕ್ಷಿಸುತ್ತಿದ್ದು, ಅವರು ಇನ್ನೂ ಕಾಯುತ್ತಿದ್ದಾರೆ. "ಆದರೆ ನಿಮಗೆ ತಿಳಿದಿರುವಂತೆ, ಮಾತುಕತೆಗಳು ಪ್ರಾರಂಭವಾಗಿಲ್ಲ. ಉಕ್ರೇನಿಯನ್ ಸಮಾಲೋಚಕರು ಯಾವುದೇ ಆತುರವಿಲ್ಲ ಎಂಬುದು ಸ್ಪಷ್ಟವಾಗಿದೆ. ಅವರು ಇಂದು ಆಗಮಿಸುತ್ತಾರೆ ಎಂದು ಭಾವಿಸೋಣ," ಎಂದು ಪೆಸ್ಕೋವ್ ಹೇಳಿದ್ದಾರೆ.
ಬುಧವಾರ ನಡೆಯಬೇಕಿದ್ದ 2ನೇ ಸುತ್ತಿನ ಮಾತುಕತೆ:
ರಷ್ಯಾ ಮತ್ತು ಉಕ್ರೇನ್ ನಡುವಿನ ಎರಡನೇ ಸುತ್ತಿನ ಮಾತುಕತೆಯು ಮಾರ್ಚ್ 2ರಂದು ನಡೆಯಬೇಕಿತ್ತು. ಕಳೆದ ಸೋಮವಾರ ನಡೆದ ಮೊದಲ ಸುತ್ತಿನ ಸಂಧಾನ ಮಾತುಕತೆಯಲ್ಲಿ ಯಾವುದೇ ಸ್ಪಷ್ಟ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಉಭಯ ರಾಷ್ಟ್ರಗಳು ಮತ್ತೊಮ್ಮೆ ಭೇಟಿಯಾಗಿ ಸಭೆ ನಡೆಸಲು ನಿರ್ಧರಿಸಿದ್ದವು. ಬೆಲಾರಸ್‌ನ ಗಡಿ ಪಟ್ಟಣವಾದ ಗೋಮೆಲ್‌ನಲ್ಲಿ ನಡೆದ ಮೊದಲ ಸುತ್ತಿನಲ್ಲಿ ಐದು ಗಂಟೆಗಳವರೆಗೂ ಚರ್ಚೆ ನಡೆಸಲಾಗಿತ್ತು.
ಮೊದಲ ಸುತ್ತಿನಲ್ಲಿ ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳು "ಕೆಲವು ವಿಷಯಗಳ ಬಗ್ಗೆ ಒಪ್ಪಿಕೊಂಡಿದ್ದಾರೆ" ಎಂದು ತೋರುತ್ತಿದೆ. ಈಗ, ಉಭಯ ರಾಷ್ಟ್ರಗಳ ಪ್ರತಿನಿಧಿಗಳು ಎರಡನೇ ಸುತ್ತಿನ ಚರ್ಚೆಗಾಗಿ ಆಗಮಿಸುವುದಕ್ಕೂ ಮೊದಲು ತಮ್ಮ ಸರ್ಕಾರದ ಮುಖ್ಯಸ್ಥರನ್ನು ಸಂಪರ್ಕಿಸುತ್ತಾರೆ ಎಂದು ರಷ್ಯಾ ಟುಡೆ (ಆರ್‌ಟಿ) ವರದಿ ಮಾಡಿದೆ.
ಉತ್ತರ ಉಕ್ರೇನ್‌ನಲ್ಲಿ ಗುರುವಾರ ರಷ್ಯಾದ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ 22 ಜನರು ಸಾವನ್ನಪ್ಪಿದ್ದಾರೆ ಎಂದು ಚೆರ್ನಿಹಿವ್ ಗವರ್ನರ್ ಹೇಳಿದ್ದಾರೆ. ಚೆರ್ನಿಹಿವ್‌ನಲ್ಲಿರುವ ಉಕ್ರೇನಿಯನ್ ಅಧಿಕಾರಿಗಳು ಸ್ಥಳೀಯರಿಗೆ ಸುರಕ್ಷಿತ ಮಾರ್ಗವನ್ನು ವ್ಯವಸ್ಥೆ ಮಾಡಲು ಹೆಣಗಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.












Click it and Unblock the Notifications