
ಸೂರು-ನೀರು ಕಳೆದುಕೊಂಡವರ ಕಥೆ: ರಷ್ಯಾ ದಾಳಿಗೆ 1.40 ಕೋಟಿ ಜನ ಊರು ಬಿಟ್ಟರು!
ಕೀವ್, ನವೆಂಬರ್ 03: ಉಕ್ರೇನ್ ನೆಲದ ಮೇಲೆ ರಷ್ಯಾ ನಡೆಸಿದ ಆಕ್ರಮಣದಿಂದ 1.40 ಕೋಟಿಗೂ ಅಧಿಕ ಜನರು ನೆಲೆ ಕಳೆದುಕೊಂಡು ಸ್ಥಳಾಂತರಗೊಂಡಿದ್ದಾರೆ. ಆ ಮೂಲಕ ಜಗತ್ತಿನಲ್ಲಿ ಇದುವರೆಗೂ 103 ಮಿಲಿಯನ್‌ಗಿಂತಲೂ ಹೆಚ್ಚು ಜನರು ನಿರಾಶ್ರಿತರಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಮುಖ್ಯಸ್ಥರು ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿರುವ ಯುಎನ್ ನಿರಾಶ್ರಿತರ ಹೈಕಮಿಷನರ್ ಮುಖ್ಯಸ್ಥ ಫಿಲಿಪ್ಪೋ ಗ್ರಾಂಡಿ, "ಉಕ್ರೇನಿಯನ್ನರ ಬಗ್ಗೆ ಉಲ್ಲೇಖಿಸಿದ್ದಾರೆ. ಅತ್ಯಂತ ಕಷ್ಟಕರ ಸಂದರ್ಭದಲ್ಲಿ ವಿಶ್ವದ ಕಠಿಣ ಚಳಿಗಾಲವನ್ನು ಉಕ್ರೇನ್ ಜನರು ಎದುರಿಸಲಿದ್ದಾರೆ. ನಾಗರಿಕರಿಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ನಿರಂತರವಾಗಿ ನಾಶಪಡಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.
ತಮಿಳುನಾಡಿಗೆ ಬರುವುದಕ್ಕಾಗಿ ಶ್ರೀಲಂಕಾದಲ್ಲಿ ಮನೆಯನ್ನೇ ಮಾರಿದ ಮಹಿಳೆ!
"ಜಗತ್ತಿನ ಮಾನವೀಯ ಸಂಘಟನೆಗಳು ನಾಟಕೀಯ ರೀತಿಯಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿವೆ. ಆದರೆ ಪ್ರಜ್ಞಾಹೀನ ಯುದ್ಧದ ಅಂತ್ಯದಿಂದ ಪ್ರಾರಂಭಿಸಿ ಇನ್ನೂ ಹೆಚ್ಚಿನ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ," ಎಂದು ಯುಎನ್ ನಿರಾಶ್ರಿತರ ಹೈಕಮಿಷನರ್ ಮುಖ್ಯಸ್ಥ ಫಿಲಿಪ್ಪೋ ಗ್ರಾಂಡಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆಯ ಬಗ್ಗೆ ಉಲ್ಲೇಖಿಸಿದ ಗ್ರಾಂಡಿ
ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ಆರಂಭವಾದಾಗಿನಿಂದ ಹಿಡಿದು ಕಳೆದ 12 ತಿಂಗಳಿನಲ್ಲಿ 37 ತುರ್ತು ಪರಿಸ್ಥಿತಿಗಳಿಗೆ ವಿಶ್ವಸಂಸ್ಥೆಯ ಅಂಗಸಂಸ್ಥೆ ಆಗಿರುವ ನಿರಾಶ್ರಿತರ ಸಂಸ್ಥೆಯು ಸ್ಪಂದಿಸಿದೆ. ಉಕ್ರೇನ್ ಮೇಲಿನ ಯುದ್ಧದಿಂದ ಇತ್ತೀಚಿಗೆ ವಿಶ್ವಸಂಸ್ಥೆಯ ಈ ಅಂಗಸಂಸ್ಥೆಯು ಹೆಚ್ಚು ಮುನ್ನಲೆಗೆ ಬಂದಿದೆ. "ಇತರ ಬಿಕ್ಕಟ್ಟುಗಳು ಅದೇ ಅಂತರರಾಷ್ಟ್ರೀಯ ಗಮನ, ಆಕ್ರೋಶ, ಸಂಪನ್ಮೂಲಗಳು, ಕ್ರಮವನ್ನು ಸೆಳೆಯುವಲ್ಲಿ ವಿಫಲವಾಗಿವೆ," ಎಂದು ಗ್ರಾಂಡಿ ಹೇಳಿದರು.
2022ರ ಮೊದಲಾರ್ಧದಲ್ಲಿ ಸ್ಥಳಾಂತರಗೊಂಡ 8,50,000 ಕ್ಕೂ ಹೆಚ್ಚು ಇಥಿಯೋಪಿಯನ್ನರ ಬಗ್ಗೆ ಉಲ್ಲೇಖಿಸಿದ ಗ್ರಾಂಡಿ, ಆ ರಾಷ್ಟ್ರದ ಉತ್ತರ ಟೈಗ್ರೆ ಪ್ರದೇಶದಲ್ಲಿ ಇತ್ತೀಚಿಗೆ ನಡೆದ ಸಂಘರ್ಷವು "ನಾಗರಿಕರ ಮೇಲೆ ಇನ್ನೂ ಹೆಚ್ಚು ವಿನಾಶಕಾರಿ ಪರಿಣಾಮವನ್ನು ಬೀರಿದೆ," ಎಂದರು.

ಮ್ಯಾನ್ಮಾರ್‌ನಿಂದ ಬಾಂಗ್ಲಾಗೆ ಹೋದ ರೋಹಿಂಗ್ಯಾ ಮುಸ್ಲಿಮರು
ವಿಶ್ವಸಂಸ್ಥೆಯ ಅಂಗಸಂಸ್ಥೆ ಆಗಿರುವ ನಿರಾಶ್ರಿತರ ಸಂಸ್ಥೆಯು ಮ್ಯಾನ್ಮಾರ್‌ನಲ್ಲಿಯೂ ಇದೆ. ಅಲ್ಲಿ ದೇಶದ ಮಿಲಿಟರಿ ಆಡಳಿತಗಾರರು ಸಶಸ್ತ್ರ ಪ್ರತಿರೋಧವನ್ನು ಎದುರಿಸುತ್ತಿದ್ದು, ಇದೇ ವರ್ಷದ ಮೊದಲಾರ್ಧದಲ್ಲಿ ಅಂದಾಜು 5,00,000 ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಗ್ರಾಂಡಿ ಹೇಳಿದರು. ಮಾನವೀಯತೆಯು ದೊಡ್ಡ ಸವಾಲಾಗಿದೆ. ಮ್ಯಾನ್ಮಾರ್‌ನಿಂದ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ ಸುಮಾರು 1 ಮಿಲಿಯನ್ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರು ಹಿಂದಿರುಗುವುದು ದೂರದ ಮಾತು ಎಂದಿದ್ದಾರೆ.

ಭಯದಲ್ಲೇ ಕಾಂಗೋ ತೊರೆದ ಮಹಿಳೆಯರು
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಅನೇಕ ರೀತಿ ಕ್ರೂರ ದಾಳಿಗಳನ್ನು ನಡೆಸುತ್ತಿರುವ ಹಿನ್ನೆಲೆ ಕಾಂಗೋದಿಂದಲೂ ಮಂದಿ ಸ್ಥಳಾಂತರಗೊಂಡಿದ್ದಾರೆ. ಈಗಾಗಲೇ ಸ್ಥಳಾಂತರಗೊಂಡ 5.5 ದಶಲಕ್ಷ ನಿರಾಶ್ರಿತರ ಪಟ್ಟಿಗೆ ಮತ್ತೆ 2 ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ ಎಂದು ಗ್ರಾಂಡಿ ತಿಳಿಸಿದ್ದಾರೆ. 25 ವರ್ಷಗಳ ಹಿಂದೆ ಕಾಂಗೋದಲ್ಲಿ ಕೆಲಸ ಮಾಡುವಾಗ ಕಂಡ ಭಯಾನಕ ಘಟನೆಗಳು ಪುನರಾವರ್ತನೆಯಾಗುತ್ತಿವೆ. ಸಂಘರ್ಷದ ಪರಿಣಾಮ ಮತ್ತು ಸ್ಥಳೀಯ ಮತ್ತು ಅಂತರಾಷ್ಟ್ರೀಯ ಉದ್ವಿಗ್ನತೆಯಗೆ ಸ್ಥಳಾಂತರವು ಮತ್ತೊಮ್ಮೆ ಸಾಕ್ಷಿಯಾಗಿದೆ ಎಂದರು.

ಜನರು ದೇಶ ತೊರೆಯುತ್ತಿರುವ ಕಾರಣವಾಗುತ್ತಿರುವ ಅಂಶಗಳು
ಜಾಗತಿಕ ಮಟ್ಟದಲ್ಲಿ ತೀವ್ರ ಸಮಸ್ಯೆಯನ್ನು ಎದುರಿಸುತ್ತಿರುವ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ನಾವು ಪ್ರಯತ್ನಿಸುವುದು ಉತ್ತವಾಗಿದೆ. ಅಪ್ಘಾನಿಸ್ತಾನ, ಸಿರಿಯಾದಲ್ಲಿ ದೀರ್ಘಕಾಲದ ಸಮಸ್ಯೆಯಿಂದಾಗಿ ಅಮೆರಿಕಾದ ವಲಸಿಗರ ಕೇಂದ್ರದ ಕಡೆಗೆ ಹರಿದು ಬರುತ್ತಿರುವ ನಿರಾಶ್ರಿತರ ಸಂಖ್ಯೆಯು ಹೆಚ್ಚಾಗುತ್ತಿದೆ. ಈ ಸ್ಥಳಾಂತರಕ್ಕೆ ಕಾರಣಗಳು ಸಂಕೀರ್ಣವಾಗಿದ್ದು, ಹವಾಮಾನ ತುರ್ತುಸ್ಥಿತಿಯೂ ಸಹ ಒಂದಾಗಿದೆ. ನಷ್ಟ ಮತ್ತು ಹಾನಿಗೆ ಒಬ್ಬರನ್ನು ಮನೆಯಿಂದ ಸ್ಥಳಾಂತರಿಸುವುದು ಅಥವಾ ಹೊರ ಹಾಕುವುದಕ್ಕಿಂತ ಮತ್ತೊಂದು ಉದಾಹರಣೆ ಬೇಕೇ? ಎಂದು ಗ್ರಾಂಡಿ ಪ್ರಶ್ನಿಸಿದರು.
ತಾಪಮಾನ ಏರಿಕೆಯಾಗುತ್ತಿರುವ ಗ್ರಹವನ್ನು ತಡೆಗಟ್ಟಲು ಮತ್ತು ಹೊಂದಿಕೊಳ್ಳಲು ಹೆಚ್ಚಿನ ಗಮನ ಹರಿಸಬೇಕಿದೆ. ಇಲ್ಲದಿದ್ದರೆ ಉದ್ವಿಗ್ನತೆ ಮತ್ತು ಸ್ಪರ್ಧೆಯು ಬೆಳೆಯುತ್ತದೆ ಮತ್ತು ಸ್ಥಳಾಂತರ ಸೇರಿದಂತೆ ಮಾರಕ ಪರಿಣಾಮಗಳೊಂದಿಗೆ ವ್ಯಾಪಕ ಸಂಘರ್ಷವನ್ನು ಉಂಟುಮಾಡುತ್ತದೆ ಎಂದು ಗ್ರಾಂಡಿ ಎಚ್ಚರಿಸಿದರು.