3ನೇ ಮಹಾಯುದ್ಧ?: ರಷ್ಯಾ-ಉಕ್ರೇನ್ ಹಿಂದಿರುವ ದೈತ್ಯ ರಾಷ್ಟ್ರಗಳು ಯಾವುವು?
ವಾಶಿಂಗ್ಟನ್, ಫೆಬ್ರವರಿ 24: ರಷ್ಯಾ-ಉಕ್ರೇನ್ ಬಿಕ್ಕಟ್ಟು ಯುದ್ಧದ ರೂಪಕ್ಕೆ ತಿರುಗಿದೆ. ಗುರುವಾರ ಉಕ್ರೇನ್ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸಿದರೆ ಪುಟಿನ್ ಸೈನ್ಯದ ವಿರುದ್ಧ ಉಕ್ರೇನ್ ಕೂಡ ಪ್ರತಿದಾಳಿ ನಡೆಸಿದೆ.
ರಷ್ಯಾ ನಡೆಸಿದ ದಾಳಿಯಲ್ಲಿ ಉಕ್ರೇನ್ ನೆಲದಲ್ಲಿ 7 ಮಂದಿ ಪ್ರಾಣ ಬಿಟ್ಟಿದ್ದು, 9ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನೊಂದು ದಿಕ್ಕಿನಲ್ಲಿ ರಷ್ಯಾದ ಆರು ವಿಮಾನ ಹೊಡೆದುರುಳಿಸಲಾಗಿದ್ದು, 40ಕ್ಕೂ ಹೆಚ್ಚು ಸೈನಿಕರನ್ನು ಕೊಂದು ಹಾಕಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಕಚೇರಿಯು ಮಾಹಿತಿ ನೀಡಿದೆ.
ಉಕ್ರೇನ್ ರಷ್ಯಾದ ಎದುರು ಯಾವುದೇ ಕಾರಣಕ್ಕೂ ತಲೆ ಬಾಗುವುದಿಲ್ಲ. ರಷ್ಯಾದ ಎದುರು ಶರಣಾಗುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹಾಗಿದ್ದರೆ ಬಲಿಷ್ಠ ರಷ್ಯಾಗೆ ಸೆಡ್ಡು ಹೊಡೆಯುವಷ್ಟು ಧೈರ್ಯ ಉಕ್ರೇನ್ ಅಂತ ರಾಷ್ಟ್ರಕ್ಕೆ ಬಂದಿದ್ದು ಹೇಗೆ?, ಉಕ್ರೇನ್ ಬೆನ್ನಿಗೆ ನಿಂತಿರುವ ಆ ದೈತ್ಯ ಶಕ್ತಿ ಯಾವುದು?, ರಷ್ಯಾ ವಿರುದ್ಧ ಎದೆಗಾರಿಕೆ ಪ್ರದರ್ಶಿಸಲು ನಿಂತಿರುವ ಉಕ್ರೇನ್, ಯಾವ ಯಾವ ರಾಷ್ಟ್ರಗಳಿಂದ ಬೆಂಬಲವನ್ನು ಹೊಂದಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಉಕ್ರೇನ್ ಹಿಂದಿರುವ ದೈತ್ಯ ರಾಷ್ಟ್ರಗಳು ಯಾವುವು?
ರಷ್ಯಾಗೆ ಸೆಡ್ಡು ಹೊಡೆದು ನಿಲ್ಲುವುದಕ್ಕೆ ಉಕ್ರೇನ್ ಧೈರ್ಯ ಮಾಡಲು ಅದರ ಹಿಂದಿರುವ ದೈತ್ಯ ರಾಷ್ಟ್ರಗಳೇ ಕಾರಣ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಕೇವಲ 1.96 ಲಕ್ಷ ಸೇನಾಬಲವನ್ನು ಹೊಂದಿರುವ ಉಕ್ರೇನ್ ಬೆನ್ನಿಗೆ ನಿಂತಿರುವ ರಾಷ್ಟ್ರಗಳ ಯಾವುವು ಎಂದು ಇಲ್ಲಿ ತಿಳಿಯಿರಿ.
- ಯುನೈಟೆಡ್ ಸ್ಟೇಟ್ಸ್
- ಯುರೋಪಿಯನ್ ಒಕ್ಕೂಟ
- ಯುನೈಟೆಡ್ ಕಿಂಗ್ ಡಮ್
- ಜರ್ಮನಿ
- ಕೆನಡಾ
- ಆಸ್ಟ್ರೇಲಿಯಾ
- ಜಪಾನ್

ಉಕ್ರೇನ್ ಬೆನ್ನಿಗೆ ನಿಂತ ನ್ಯಾಟೋ ರಾಷ್ಟ್ರಗಳು
2015ರ ಉಕ್ರೇನಿಯನ್ ಕ್ರಾಂತಿಯ ನಂತರ ದೇಶವು NATO ಏಕೀಕರಣಕ್ಕೆ ಹತ್ತಿರವಾಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಕಳೆದ ಏಪ್ರಿಲ್ 2021ರಲ್ಲಿ ಉಕ್ರೇನ್ ಅನ್ನು ನ್ಯಾಟೋಗೆ ಸೇರುವ ಉದ್ದೇಶವನ್ನು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಘೋಷಿಸಿದ್ದರು. ಇನ್ನೂ ನ್ಯಾಟೋ ಸದಸ್ಯತ್ವವನ್ನು ಪಡೆದುಕೊಳ್ಳಲು ಸಾಧ್ಯವಾಗದಿದ್ದರೂ ಸಹ ಉಕ್ರೇನ್‌ಗೆ ಬೆಂಬಲವಾಗಿ ನ್ಯಾಟೋ ರಾಷ್ಟ್ರಗಳು ದೃಢವಾಗಿ ನಿಂತಿವೆ.
ಜಗತ್ತಿನ ಎರಡನೇ ಮಹಾಯುದ್ಧದ ನಂತರದಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಡಲು NATO ಅನ್ನು ಸ್ಥಾಪಿಸಲಾಯಿತು. ಇದರ ಅರ್ಥ ಒಕ್ಕೂಟವು ಒಗ್ಗೂಡಿದೆ ಎಂಬುದಲ್ಲ. ಬದಲಿಗೆ ಯುಎಸ್ ಮತ್ತು ಬ್ರಿಟನ್ ಅಂತಹ ರಾಷ್ಟ್ರಗಳು ಯುದ್ಧದ ಭಯದ ಬಗ್ಗೆ ಮಾತನಾಡುತ್ತಿದ್ದವು. ಆದರೆ ಫ್ರಾನ್ಸ್ ಮತ್ತು ಜರ್ಮನಿಯಂತಹ ರಾಷ್ಟ್ರಗಳು ರಾಜತಾಂತ್ರಿಕ ಉತ್ತರದ ಹುಡುಕಾಟದಲ್ಲಿದ್ದವು.

ರಷ್ಯಾಗೆ ಮಿತ್ರರಾಷ್ಟ್ರಗಳ ಬೆಂಬಲವಿಲ್ಲ
ಉಕ್ರೇನ್ ಮೇಲೆ ಅಪ್ರಚೋದಿತ ದಾಳಿ ನಡೆಸಿದ ರಷ್ಯಾದ ನಡೆಗೆ ಹಲವು ಮಿತ್ರರಾಷ್ಟ್ರಗಳಿಂದಲೇ ಬೆಂಬಲ ಪಡೆದುಕೊಳ್ಳುವುದು ಅಸಾಧ್ಯವಾಗಿದೆ. ಆದರೆ ವಿಶ್ವಸಂಸ್ಥೆಯಲ್ಲಿ ರಷ್ಯಾದ ನಡೆಯನ್ನು ಚೀನಾ ಬೆಂಬಲಿಸುವ ಭರವಸೆಯಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇತ್ತೀಚೆಗೆ ಬೀಜಿಂಗ್ ವಿಂಟರ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿದ್ದರು. ಇದರ ಮಧ್ಯೆ ಉಕ್ರೇನ್ ಪರಿಸ್ಥಿತಿ ಕುರಿತು ಯುಎಸ್ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಆರೋಪಿಸಿತ್ತು.
ಪೂರ್ವ ಉಕ್ರೇನ್ ಭಾಗದಲ್ಲಿ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್‌ನಲ್ಲಿ ರಷ್ಯಾ ಎರಡು ಸಣ್ಣ ಮಿತ್ರರಾಷ್ಟ್ರಗಳನ್ನು ಹೊಂದಿದೆ. ಅವು ಉಕ್ರೇನ್‌ನಲ್ಲಿ ಎರಡು ಪ್ರತ್ಯೇಕ ರಾಜ್ಯಗಳಾಗಿದ್ದು, ರಷ್ಯಾದಿಂದ ಮಾತ್ರ ಗುರುತಿಸಲ್ಪಟ್ಟಿದೆ. ಇತ್ತೀಚಿಗಷ್ಟೇ ಇಬ್ಬರೂ ನಾಗರಿಕರ ಸ್ಥಳಾಂತರಿಸುವಿಕೆ ಮತ್ತು ಸೈನ್ಯದ ಸಾಮಾನ್ಯ ಸಜ್ಜುಗೊಳಿಸುವಿಕೆ ಬಗ್ಗೆ ಘೋಷಿಸಲಾಗಿತ್ತು.

ಉಕ್ರೇನ್ ವಿರುದ್ಧ ಸಮರ ಸಾರಿದ ರಷ್ಯಾ ಅಧ್ಯಕ್ಷ ಪುಟಿನ್
ಉಕ್ರೇನ್‌ನಲ್ಲಿ ಯುದ್ಧಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಕರೆ ನೀಡಿದರು. ನಿರೀಕ್ಷೆಯಂತೆ ಎರಡೂ ದೇಶಗಳ ಮಧ್ಯೆ ಯುದ್ಧ ಶುರುವಾಗಿದೆ. ಉಕ್ರೇನ್ ಸೇನೆಗೆ ಶರಣಾಗುವಂತೆ ಪುಟಿನ್ ಆಗ್ರಹಿಸಿದ್ದಾರೆ. ರಷ್ಯಾದೊಂದಿಗಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಉಕ್ರೇನ್ ಸರ್ಕಾರವು ಮಧ್ಯ ರಾತ್ರಿಯಿಂದ ಬೆಳಗ್ಗೆ 7 ಗಂಟೆವರೆಗೆ ಪೂರ್ವ ಉಕ್ರೇನ್‌ನ ವಿಮಾನ ನಿಲ್ದಾಣಗಳನ್ನು ಮುಚ್ಚಲು ಆದೇಶಿಸಿದೆ.
ಮಾಸ್ಕೋದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ವ್ಲಾಡಿಮಿರ್ ಪುಟಿನ್, "ನಾನು ಸೇನಾ ಕಾರ್ಯಾಚರಣೆ ನಡೆಸಲು ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಪ್ರಕಟಣೆ ಹೊರಡಿಸಿದರು. ಈ ಕಾರ್ಯಾಚರಣೆಯಲ್ಲಿ ಯಾರಾದರೂ ಮಧ್ಯಪ್ರವೇಶ ಮಾಡಿದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎನ್ನುವ ಮೂಲಕ ಅಮೆರಿಕ ನೇತೃತ್ವದ ನ್ಯಾಟೋ ಮಿತ್ರಕೂಟದ ದೇಶಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.












Click it and Unblock the Notifications