ಅಮೆರಿಕ ವಿರುದ್ಧ ರಷ್ಯಾ & ಉತ್ತರ ಕೊರಿಯಾ ಪರೋಕ್ಷ ಸಮರ?
ದಕ್ಷಿಣ ಚೀನಾ ಸಮುದ್ರದ ಪ್ರದೇಶದಲ್ಲಿ ಪರಿಸ್ಥಿತಿ ಸೂಕ್ಮವಾಗಿರುವ ಸಂದರ್ಭದಲ್ಲಿ ಉತ್ತರ ಕೊರಿಯಾ ಹಾಗೂ ರಷ್ಯಾ ನಡುವೆ ಮಹತ್ವದ ಮಾತುಕತೆ ನಡೆದಿದೆ. ಒಂದು ಕಡೆ ದಕ್ಷಿಣ ಕೊರಿಯಾ, ಜಪಾನ್ & ತೈವಾನ್ ಜೊತೆಗೆ ಅಮೆರಿಕ ಉತ್ತಮ ಸಂಬಂಧ ಇಟ್ಟುಕೊಂಡಿದೆ. ಹೀಗಾಗಿ ಅಮೆರಿಕ ಮತ್ತು ಈ ದೇಶಗಳು ಒಟ್ಟಾಗಿ ಜಂಟಿ ಸಮರಭ್ಯಾಸ ಮಾಡುತ್ತವೆ. ಈಗ ಅಮೆರಿಕಗೆ ತಿರುಗೇಟು ನೀಡಲು ರಷ್ಯಾ ಮತ್ತು ಉತ್ತರ ಕೊರಿಯಾ ಒಂದಾಗಿ ನಿಂತಿವೆ.
ಹೌದು ಚೀನಾ ಜೊತೆ ಸೇರಿ ಉತ್ತರ ಕೊರಿಯಾ ಹಾಗೂ ರಷ್ಯಾ ಜಂಟಿ ಸಮರಾಭ್ಯಾಸವನ್ನ ನಡೆಸಲು ಯೋಜಿಸಿವೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ. ರಷ್ಯಾ ರಕ್ಷಣಾ ಸಚಿವರು ಈ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹೀಗಾಗಿ ಉತ್ತರ ಕೊರಿಯಾ ಹಾಗೂ ಚೀನಾ ಜೊತೆಗೆ ರಷ್ಯಾದ ಸೇನೆ ಸೇರಿ ಜಂಟಿ ಸಮರಾಭ್ಯಾಸ ನಡೆಸಲಿವೆ ಎಂದು ಆರೋಪಿಸಿದೆ ದಕ್ಷಿಣ ಕೊರಿಯಾ. ಈ ಬೆಳವಣಿಗೆ ಮತ್ತೆ ದಕ್ಷಿಣ ಚೀನಾ ಸಮುದ್ರದ ಪರಿಸ್ಥಿತಿ ಹದಗೆಡಿಸುವ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಅಕಸ್ಮಾತ್ ಜಂಟಿ ಸಮರಾಭ್ಯಾಸ ನಡೆದರೆ ಪರಿಸ್ಥಿತಿ ಏನಾಗಬಹುದು?

ಅಮೆರಿಕ ವಿರುದ್ಧ ರಷ್ಯಾ ರಣತಂತ್ರ?
ರಷ್ಯಾಗೆ ಅಮೆರಿಕ ಎಂಥ ದೊಡ್ಡ ಶತ್ರುವೋ, ಉತ್ತರ ಕೊರಿಯಾಗೆ ಕೂಡ ಅಷ್ಟೇ ದೊಡ್ಡ ಶತ್ರು. ಅದ್ರಲ್ಲೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಮೆರಿಕ ಅಂದ್ರೆ ಹಲ್ಲು ಮಸೆಯುತ್ತಾನೆ. ಹೀಗಿದ್ದಾಗ ಉತ್ತರ ಕೊರಿಯಾದ ಶತ್ರು ರಾಷ್ಟ್ರಗಳಾದ ಜಪಾನ್ & ದಕ್ಷಿಣ ಕೊರಿಯಾ ಜೊತೆ ಸೇರಿ ಅಮೆರಿಕ ಪದೇ ಪದೆ ಜಂಟಿ ಸಮರಾಭ್ಯಾಸ ನಡೆಸುತ್ತಿದೆ. ಈ ಕಾರಣಕ್ಕೆ ಅಮೆರಿಕ ಮತ್ತು ಜಪಾನ್, ದ.ಕೊರಿಯಾಗೆ ತಿರುಗೇಟು ನೀಡಲು ರಷ್ಯಾದ ಕಡೆಯಿಂದ ಇಂತಹ ಆಹ್ವಾನ ಸಿಕ್ಕಿದೆ ಎನ್ನಲಾಗಿದೆ.
ಹೀಗೆ ಉತ್ತರ ಕೊರಿಯಾ, ರಷ್ಯಾ ಮತ್ತು ಚೀನಾ ಜಂಟಿ ಸಮರಾಭ್ಯಾಸ ನಡೆಸಿದರೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗಲಿದೆ ಎಂಬ ಆರೋಪ ಕೇಳಿಬಂದಿದೆ. ಏಕೆಂದರೆ ಅಮೆರಿಕ ಈ ಸಮಯದಲ್ಲಿ ಮತ್ತೆ ಜಪಾನ್, ದಕ್ಷಿಣ ಕೊರಿಯಾ ಹಾಗೂ ತೈವಾನ್ ಜೊತೆಗೆ ಸೇರಿ ಸೇನಾ ಅಭ್ಯಾಸ ಮಾಡಬಹುದು. ಹೀಗಾಗಿ ಭಯ ಮತ್ತು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮೊದಲೇ ರಷ್ಯಾ & ಉಕ್ರೇನ್ ಯುದ್ಧ ಭೀಕರವಾಗಿರುವ ಸಂದರ್ಭದಲ್ಲೇ ಇಂತಹ ಘಟನೆಗೆ ವೇದಿಕೆ ಸಿದ್ಧವಾಗುತ್ತಿದೆ.
ರಷ್ಯಾಗೆ ಸರ್ವಾಧಿಕಾರಿ ಕಿಮ್ ವಿಸಿಟ್?
ಈಗ ಇರುವ ಮಾಹಿತಿ ಪ್ರಕಾರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಷ್ಯಾಗೆ ಹೋಗುವ ಸಾಧ್ಯತೆ ಇದೆ. ರಷ್ಯಾ ಜೊತೆ ಸೇರಿ ಶಸ್ತ್ರಾಸ್ತ್ರ ಪೂರೈಕೆಗೆ ಚರ್ಚೆ ನಡೆಸಲಿದ್ದಾನೆ ಎನ್ನಲಾಗಿತ್ತು. ಉತ್ತರ ಕೊರಿಯಾ ಗಡಿ ಬಳಿ ಇರುವ ರಷ್ಯಾದ ವ್ಲಾಡಿವೋಸ್ಟೋಕ್ ಪ್ರದೇಶದಲ್ಲಿ ಪುಟಿನ್ ಜೊತೆಗೆ ಕಿಮ್ ಜಾಂಗ್ ಉನ್ ಚರ್ಚೆ ನಡೆಸುತ್ತಾನಂತೆ. ಇದೇ ಸಂದರ್ಭದಲ್ಲಿ ಜಂಟಿ ಸಮರಾಭ್ಯಾಸದ ಬಗ್ಗೆ ಕೂಡ ಅಂತಿಮ ಹಂತದ ಮಾತುಕತೆ ನಡೆಯುತ್ತಾ? ಎಂಬ ಪ್ರಶ್ನೆ ಮೂಡಿದೆ. ಅಲ್ಲದೆ ಈ ಕ್ರಮದಿಂದ ದಕ್ಷಿಣ ಚೀನಾ ಸಮುದ್ರ ಮತ್ತಷ್ಟು ಸೂಕ್ಷ್ಮವಾಗಲಿದೆ.
ಅಮೆರಿಕ ಅಂದ್ರೆ ಕೆಂಡ ಕಾರುವ ಕಿಮ್ ಜಾಂಗ್ ಉನ್ ಈಗ ಚೀನಾ & ರಷ್ಯಾ ಜೊತೆ ದಿನದಿಂದ ದಿನಕ್ಕೆ ಇನ್ನಷ್ಟು ಹತ್ತಿರವಾಗುತ್ತಿದ್ದಾನೆ. ಕಳೆದ 1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿರುವ ಉತ್ತರ ಕೊರಿಯಾ ಸರ್ವಾಧಿಕಾರಿ, ತಾನು ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನು ಪದೇ ಪದೆ ನೀಡುತ್ತಿದ್ದಾನೆ. ಇದರ ನಡುವೆ ಖುದ್ದಾಗಿ ರಷ್ಯಾ ಜಂಟಿ ಸೇನಾ ಕಾರ್ಯಾಚರಣೆಗೆ ಆಹ್ವಾನ ನೀಡಿದೆ. ಆದರೆ ಯಾವ ಜಾಗದಲ್ಲಿ ಚೀನಾ, ರಷ್ಯಾ & ಉತ್ತರ ಕೊರಿಯಾ ಜಂಟಿ ಸಮರಾಭ್ಯಾಸ ನಡೆಸಲಿವೆ ಎಂಬುದು ಇನ್ನು ಪಕ್ಕಾ ಆಗಿಲ್ಲ. ಅಕಸ್ಮಾತ್ ದ.ಚೀನಾ ಸಮುದ್ರದಲ್ಲಿ ಜಂಟಿ ಸಮರಾಭ್ಯಾಸ ನಡೆದರೆ ಪರಿಸ್ಥಿತಿ ದೀಪಾವಳಿ ಆಗೋದು ಪಕ್ಕಾ.












Click it and Unblock the Notifications