Russia & Ukraine War: ರಷ್ಯಾ ಮಿಸೈಲ್ ದಾಳಿಗೆ ಉಕ್ರೇನ್ ಧಗಧಗ!
ಒಡೆಸಾ: ಶತ್ರು ನಾಶಕ್ಕೆ ತೊಡೆತಟ್ಟಿ ನಿಂತಿರುವ ರಷ್ಯಾ, ಉಕ್ರೇನ್ ವಿರುದ್ಧದ ದಾಳಿಯನ್ನು ಮತ್ತಷ್ಟು ಭೀಕರಗೊಳಿಸಿದೆ. ಅದರಲ್ಲೂ ಉಕ್ರೇನ್ ಜೊತೆಗಿನ ಬಂದರು ಒಪ್ಪಂದಕ್ಕೆ ಎಂಡ್ ಹೇಳಿದ ನಂತರ, ಉಕ್ರೇನ್‌ನ ಬಂದರು ನಗರಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದೆ ರಷ್ಯಾ. ಈಗಲೂ ಅಷ್ಟೆ ಉಕ್ರೇನ್‌ನ ಪ್ರಮುಖ ಬಂದರು ನಗರಿ ಒಡೆಸಾ ರಷ್ಯಾ ದಾಳಿಯಲ್ಲಿ ಛಿದ್ರ ಛಿದ್ರವಾಗಿದೆ.
19 ಡ್ರೋನ್‌ಗಳು ಹಾಗೂ ಹತ್ತಾರು ಮಿಸೈಲ್‌ಗಳ ಮೂಲಕ ಉಕ್ರೇನ್ ನೆಲವನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ. ಈ ದಾಳಿಯಲ್ಲಿ ಸುಮಾರು 27 ಜನರು ಗಂಭೀರವಾದರೆ, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 2014ರ ಬಳಿಕ ರಷ್ಯಾ ವಶದಲ್ಲಿರುವ ಕ್ರಿಮಿಯಾ ಸೇರಿ, ರಷ್ಯಾ ಗಡಿ ಭಾಗದ ರಾಜ್ಯಗಳ ಮೇಲೆ ಉಕ್ರೇನ್ ದಾಳಿ ನಡೆಸಿದ ಬೆನ್ನಲ್ಲೇ ರಷ್ಯಾ ರೊಚ್ಚಿಗೆದ್ದಿದೆ. ಅತಿ ಭಯಾನಕ ಮಿಸೈಲ್‌ಗಳ ಮೂಲಕ ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿದೆ. ಅದರಲ್ಲೂ ಈ ದಾಳಿ ಪ್ರಮುಖವಾಗಿ ಉಕ್ರೇನ್‌ನ ಬಂದರು ಪ್ರದೇಶಗಳನ್ನೇ ಗುರಿಯಾಗಿಸಿಕೊಂಡಿದೆ. ಹಾಗಾದರೆ ರಷ್ಯಾದ ಈ ದಿಢೀರ್ ದಾಳಿಯ ಉದ್ದೇಶವಾದರೂ ಏನು? ಬನ್ನಿ ತಿಳಿಯೋಣ.

ಒಪ್ಪಂದ ರದ್ದು.. ಬಂದರು ಉಡೀಸ್!
ಕಪ್ಪು ಸಮುದ್ರದ ಮೂಲಕ ಉಕ್ರೇನ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಬಂದರು ಒಡೆಸಾ ಮೇಲೆ ರಣಭೀಕರ ದಾಳಿ ನಡೆಸಲಾಗಿದೆ. ರಷ್ಯಾ ಇದೇ ನಗರವನ್ನು ಟಾರ್ಗೆಟ್ ಮಾಡಲು ಪ್ರಮುಖ ಕಾರಣ ಇದೆ. ಉಕ್ರೇನ್‌ನಿಂದ ಕಪ್ಪು ಸಮುದ್ರದ ಮಾರ್ಗವಾಗಿ ಹಡುಗುಗಳ ಮೂಲಕ ಆಫ್ರಿಕಾ ಹಾಗೂ ಮಧ್ಯಪ್ರಾಚ್ಯ ಸೇರಿದಂತೆ, ಏಷ್ಯಾ ದೇಶಗಳಿಗೆ ಆಹಾರ ಧಾನ್ಯಗಳ ಸಾಗಾಟಕ್ಕೆ ನೀಡಿದ್ದ ಅನುಮತಿ ರದ್ದಾಗಿದೆ. ಉಕ್ರೇನ್ ವಿರುದ್ಧ ರಷ್ಯಾ ಇಂತಹ ಕಠಿಣ ನಿಲುವು ತೆಗೆದುಕೊಂಡಿದೆ. ಈ ನಿರ್ಧಾರದ ಬೆನ್ನಲ್ಲೇ ಉಕ್ರೇನ್‌ನ ಪ್ರತಿಯೊಂದು ಪೋರ್ಟ್‌ಗಳನ್ನ ಪುಡಿ ಪುಡಿ ಮಾಡಿದೆ ರಷ್ಯಾ. ಹೀಗೆ ರಷ್ಯಾ ನಡೆಸುತ್ತಿರುವ ಭೀಕರ ದಾಳಿ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಉಕ್ರೇನ್ ಪರವಾಗಿ ನಿಂತ ಭಾರತ
ವಿಶ್ವಸಂಸ್ಥೆಯಲ್ಲಿ ನಡೆದ ಉಕ್ರೇನ್‌ನ ತಾತ್ಕಾಲಿಕ ಆಕ್ರಮಿತ ಪ್ರದೇಶಗಳ ಸ್ಥಿತಿಗತಿ ಕುರಿತ ವಾರ್ಷಿಕ ಚರ್ಚೆಯಲ್ಲಿ ನಿನ್ನೆ ಭಾರತದ ಪ್ರತಿನಿಧಿ ಮಾತನಾಡಿದ್ರು. ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಉಕ್ರೇನ್ ಪರಿಸ್ಥಿತಿಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸುತ್ತಾ ಬಂದಿದೆ. ಈ ಯುದ್ಧದಿಂದ ಹಲವರು ಪ್ರಾಣ ಕಳೆದುಕೊಂಡಿದ್ದು ಮಕ್ಕಳು ಹಾಗೂ ವೃದ್ಧರು ಸೇರಿ ಅಸಂಖ್ಯಾತ ಜನರು ನೆರೆ ದೇಶಗಳಲ್ಲಿ ಆಶ್ರಯ ಪಡೆಯುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ಈಗ ಉದ್ಭವಿಸಿರುವ ಬಿಕ್ಕಟ್ಟಿಗೆ ಶೀಘ್ರವೇ ಪರಿಹಾರ ಸಿಗುವ ಭರವಸೆ ಕೂಡ ವ್ಯಕ್ತವಾಗಿತ್ತು. ಹಾಗೇ ವಿಶ್ವಸಂಸ್ಥೆ ಸಂಧಾನಕ್ಕೂ ಭಾರತ ಬೆಂಬಲ ಸೂಚಿಸಿತ್ತು.
ಮುಂದೆ ಪರಿಸ್ಥಿತಿ ಏನಾಗುತ್ತೋ ಗೊತ್ತಿಲ್ಲ!
ಕೋಳಿ ಜಗಳದಂತೆ ಶುರುವಾಗುವ ಅದೆಷ್ಟೋ ಕಿತ್ತಾಟಗಳೇ ಮುಂದೆ ವಿನಾಶ ತಂದುಬಿಡುತ್ತವೆ. 1ನೇ ಮಹಾಯುದ್ಧ & 2ನೇ ಮಹಾಯುದ್ಧಗಳು ಶುರುವಾಗಿದ್ದು ಕೂಡ ಹೀಗೆ. ಆದರೆ ಈ ಎರಡೂ ಯುದ್ಧಗಳಲ್ಲಿ ಕೋಟಿ ಕೋಟಿ ಜನ ಪ್ರಾಣಬಿಟ್ಟರು. ಅದ್ರಲ್ಲೂ 2ನೇ ಮಹಾಯುದ್ಧ ವಿನಾಶದಲ್ಲೇ ಅತಿ ವಿನಾಶಕ ಎನಿಸಿಕೊಂಡಿತು. ಹೀಗಾಗಿ ಮುಂದೆ ಮತ್ತೆಂದೂ ಮಹಾಯುದ್ಧ ನಡೆಯಲ್ಲ ಎಂಬ ನಂಬಿಕೆ ಇರುವಾಗಲೇ ಸಣ್ಣ ಜಗಳವಾಗಿದ್ದ ರಷ್ಯಾ & ಉಕ್ರೇನ್ ಯುದ್ಧವು ಭೀಕರವಾಗುತ್ತಿದೆ. ಅದರಲ್ಲೂ ಒಂದು ಕಡೆ ಪಾಶ್ಚಿಮಾತ್ಯರು ಹಾಗೇ ಇನ್ನೊಂದು ಕಡೆ ರಷ್ಯಾ ನಡುವೆ ಘನಘೋರ ಕಾಳಗ ಸದ್ದೇ ಇಲ್ಲದೆ ಶುರುವಾಗಿಬಿಟ್ಟಿದೆ. ಒಂದೂವರೆ ವರ್ಷ ಕಳೆದರೂ ಯುದ್ಧ ನಿಲ್ಲುತ್ತಿಲ್ಲ.

ಒಟ್ನಲ್ಲಿ ಇವರಿಬ್ಬರ ಜಗಳದಲ್ಲಿ ಇಡೀ ಜಗತ್ತಿಗೇ ಟೆನ್ಷನ್ ಶುರುವಾಗಿದೆ. ಏಕೆಂದರೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಇಡೀ ಜಗತ್ತು ನಿಧಾನವಾದಿ ಎರಡು ಬಣವಾಗಿದೆ. ಅಲ್ಲದೆ ಜಗತ್ತಿನ ಆರ್ಥಿಕ ಪರಿಸ್ಥಿತಿ ಕೂಡ ಛಿದ್ರ ಛಿದ್ರವಾಗುತ್ತಿದೆ. ಇದೇ ಸಂದರ್ಭದಲ್ಲಿ ರಷ್ಯಾ ಕೂಡ ರಣಕಹಳೆ ಮೊಳಗಿಸಿ ಉಕ್ರೇನ್ ವಿರುದ್ಧ ತೊಡೆತಟ್ಟಿದೆ. ಕೊರೊನಾ ಕೊಟ್ಟ ಆರ್ಥಿಕ ಪೆಟ್ಟನ್ನೇ ಸುಧಾರಿಸಿಕೊಳ್ಳಲು ಪರದಾಡುತ್ತಿರುವ ಸಂದರ್ಭದಲ್ಲಿ ಹೊಸ ಟೆನ್ಷನ್ ಶುರುವಾಗಿದೆ. ಹೀಗಾಗಿ ಯುದ್ಧ ನಿಲ್ಲಿಸಲು ಇಡೀ ಜಗತ್ತೇ ಪ್ರಯತ್ನಿಸುತ್ತಿದೆ.












Click it and Unblock the Notifications