Amazon River: ಮನುಷ್ಯರ ಭವಿಷ್ಯಕ್ಕೆ ಎದುರಾಯ್ತು ಮಹಾ ಕಂಟಕ? ಕೆಲವೇ ವರ್ಷದಲ್ಲಿ ಭೂಮಿ ಮೇಲೆ ಜೀವಿಗಳ ಸರ್ವನಾಶ?
ಮನುಷ್ಯನ ದುರಾಸೆಗಳೇ ಹೀಗೆ, ಇಡೀ ಪ್ರಕೃತಿ ಸರ್ವನಾಶ ಮಾಡಿ ತಾನು ಮಾತ್ರ ಭೂಮಿ ಮೇಲೆ ಬದುಕಬೇಕು ಅಂದುಕೊಳ್ಳುತ್ತಾನೆ. ಆದರೆ ಪ್ರಕೃತಿ ಮಾತೆ ಕೋಪದ ಮುಂದೆ ನಾವು & ನೀವು ಯಾವ ಲೆಕ್ಕ ಹೇಳಿ? ಮನ್ಯಷರನ್ನ ಕ್ಷಣ ಮಾತ್ರದಲ್ಲೇ ನಾಶ ಮಾಡುತ್ತದೆ ಪ್ರಕೃತಿ. ಈಗಲೂ ಅದೇ ಆಗಿದ್ದು, ಭೂಮಿ ಪಾಲಿಗೆ ಶ್ವಾಸಕೋಶ ಎಂದು ಕರೆಯುವ ಅಮೆಜಾನ್‌ನ ಮಳೆಕಾಡು ಪ್ರದೇಶದಲ್ಲಿ ಭೀಕರ ಬರಗಾಲ ಎದುರಾಗಿದೆ!
ನಿಮಗೆ ಈಗ ಬರಗಾಲದ ಕಥೆ & ವ್ಯಥೆ ಬಗ್ಗೆ ಹೇಳುವ ಮೊದ್ಲು ಅಮೆಜಾನ್ ಮಳೆ ಕಾಡಿನ ಬಗ್ಗೆ ಹೇಳಬೇಕು. ಇಡೀ ಜಗತ್ತಲ್ಲಿ ಇರುವ ಸಿಹಿ ನೀರಿನ ಪೈಕಿ ಕೇವಲ ಅಮೆಜಾನ್ ಕಾಡಿನ ಭಾಗದಲ್ಲೇ ಶೇಕಡಾ 20ರಷ್ಟು ಸಂಗ್ರಹವಾಗಿದೆ. ಅಂದರೆ ಉದಾಹರಣೆಗೆ ಇಡೀ ಜಗತ್ತಿನಲ್ಲಿ 1 ಲಕ್ಷ ಟಿಎಂಸಿ ನೀರು ಇದೆ ಎಂದರೆ, ಕೇವಲ ಅಮೆಜಾನ್ ಕಾಡಿನಲ್ಲೇ 20,000 ಟಿಎಂಸಿ ಸಿಹಿ ನೀರು ಅಥವಾ ಶುದ್ಧ ನೀರು ಸಿಗುತ್ತದೆ. ಅಂದ್ರೆ ನೀವೆ ಲೆಕ್ಕಹಾಕಿ ಅಮೆಜಾನ್ ಕಾಡು ಮನುಷ್ಯರಿಗೆ ಎಷ್ಟು ಮುಖ್ಯ ಅಂತಾ. ಆದ್ರೆ ಇಂತಹ ಮಹಾನ್ ಕಾಡಿನ ಮೇಲೆ ಮನುಷ್ಯ ಪ್ರತಿ ನಿತ್ಯ ಮತ್ತು ಪ್ರತಿ ಕ್ಷಣ ದೌರ್ಜನ್ಯ ನಡೆಸುತ್ತಿದ್ದಾನೆ. ಈಗ ತನ್ನ ತಪ್ಪುಗಳಿಗೆಲ್ಲಾ ಬೆಲೆ ತೆರುವ ಸಮಯ ಕೂಡ ಬಂದಿದೆ.

ನಾಶವಾಗುತ್ತಿದೆ ಭೂಮಿಯ ಶ್ವಾಸಕೋಶ
6,400 ಕಿಲೋ ಮೀಟರ್ ಅಥವಾ 4,000 ಮೈಲಿ ದೂರ ಹರಿಯುವ ಅಮೆಜಾನ್ ನದಿಯ ಮಹತ್ವದ ಬಗ್ಗೆ ನಮ್ಮ ಹಿರಿಯರಿಗೆ ಗೊತ್ತು. ಹೀಗಾಗಿ ಅಮೆಜಾನ್ ರಕ್ಷಣೆಗಾಗಿ ಬುಡಕಟ್ಟು ಜನರು ಜೀವವನ್ನೇ ಬಿಟ್ಟಿದ್ದಾರೆ. ಆದರೆ ಅಮೆಜಾನ್ ಕಾಡಲ್ಲಿ ಇರುವ ಬುಡಕಟ್ಟು ಜನರ ಮೇಲೆ ದಾಳಿ ಮಾಡುತ್ತಿರುವ ಡ್ರಗ್ಸ್ ಮತ್ತು ಸ್ಮಗ್ಲಿಂಗ್ ಮಾಫಿಯಾ ಗ್ಯಾಂಗ್, ಅಮೆಜಾನ್‌ನ ಕಾಡನ್ನೇ ಕಡಿಯುತ್ತಿದೆ. ಹೀಗೆ ಕಾಡು ಕಡಿದು ಕೃಷಿಗೆ ಬಳಸಿಕೊಳ್ಳುವ ನೆಪ ತೋರಿಸುತ್ತಾ, ಸಂಪೂರ್ಣ ಅಮೆಜಾನ್ ನಾಶಕ್ಕೆ ಮುಂದಾಗಿದೆ ಕಳ್ಳರ ಗ್ಯಾಂಗ್. ಹೀಗಾಗಿ ಇಡಿ ಅಮೆಜಾನ್ ಕಾಡಿನ ವಾತಾವರಣವೇ ನಾಶ ಆಗಿದ್ದು, ಈ ಬಾರಿ ಭೀಕರ ಬರಗಾಲ ಆವರಿಸಿದೆ.
ಏನಾಯ್ತು ನಮ್ಮ ಅಮೆಜಾನ್‌ಗೆ?
ದಕ್ಷಿಣ ಅಮೆರಿಕದಲ್ಲಿ ಚಾಚಿಕೊಂಡಿರುವ ಅಮೆಜಾನ್ ನದಿ, ಕೋಟ್ಯಂತರ ಜನರ ಪಾಲಿಗೆ ಅಮೃತದ ಬಟ್ಟಲು. ಬ್ರೆಜಿಲ್ ದೇಶದಲ್ಲಿ ಅಮೆಜಾನ್ ಮಳೆಕಾಡಿನ ಬಹುಭಾಗ ಆವರಿಸಿದ್ದು ಕೋಟ್ಯಂತರ ಜನರಿಗೆ ಕುಡಿಯುವ ನೀರು ಒದಗಿಸುತ್ತದೆ. ಆದರೆ ಈ ಬಾರಿ ಅಮೆಜಾನ್‌ನ ಪ್ರಮುಖ ಉಪನದಿಗಳ ಪೈಕಿ 2 ಉಪನದಿಗಳು ಸಂಪೂರ್ಣ ಬತ್ತಿ ಹೋಗಿವೆ. ರಿಯೊ ನೆಗೊ ಹಾಗೂ ಮಡೈರಾಗೆ ಈ ಪರಿಸ್ಥಿತಿ ಎದುರಾಗಿದೆ. ಸೊಲಿಮೊಸ್, ಜುರುವಾ, ಪುರಸ್ ನದಿಗಳ ನೀರಿನ ಮಟ್ಟ ಕೂಡ ಸಾರ್ವಕಾಲಿಕ ಮಟ್ಟದಲ್ಲಿ ಕುಸಿತ ಕಂಡಿದೆ. ಹೀಗಾಗಿ ವರ್ಷ ಪೂರ್ತಿ ತುಂಬಿ ಹರಿಯುವ ಅಮೆಜಾನ್ ನದಿ ಈಗ ಬರಿದಾಗಿ, ಬಿರುಕು ಬಿಟ್ಟ ನೆಲ ಕಾಣುತ್ತಿದೆ.
ನೀರು ಇಲ್ಲದೆ ಪ್ರವಾಸಿಗರು ನಾಪತ್ತೆ
ಅಮೆಜಾನ್ ಕಾಡಿನ ಸ್ಪೆಷಾಲಿಟಿ ಅಂದ್ರೆ ಅದು ನೀರು.. ನೀರು.. ನೀರು.. ಆದರೆ ನೀರೇ ಇಲ್ಲದೆ ಜನರು ಅಮೆಜಾನ್ ಕಾಡಿಗೆ ಯಾಕೆ ಬರ್ತಾರೆ ಹೇಳಿ? ಈಗ ಕೂಡ ಅಷ್ಟೇ ನದಿಯೇ ಬತ್ತಿ ಹೋಗಿ, ಅಮೆಜಾನ್ ಕಾಡಿನಲ್ಲಿ ಬರ ಆವರಿಸಿರುವ ಕಾರಣ ಪ್ರವಾಸಿಗರು ಬರುತ್ತಿಲ್ಲ. ಹೀಗಾಗಿ ಸ್ಥಳೀಯರು ತತ್ತರಿಸಿ ಹೋಗಿದ್ದಾರೆ. ಜೊತೆಗೆ ತಿನ್ನಲು ಅನ್ನ ಇಲ್ಲದೆ, ಕುಡಿಯುವ ನೀರಿಗೂ ಬರ ಎದುರಾಗಿದೆ. ಹಾಗೇ ಕಾಡಿನಲ್ಲಿ ಸಿಗುತ್ತಿದ್ದ ಹಣ್ಣು, ತರಕಾರಿ ಮಾರುತ್ತಿದ್ದ ಬುಡಕಟ್ಟು ಜನಾಂಗದವರು ಕೂಡ ಏನು ಮಾಡುವುದು ಅಂತಾ ಕಣ್ಣೀರು ಹಾಕುತ್ತಿದ್ದಾರೆ.

ಸತ್ತು ಬೀಳುತ್ತಿವೆ ವಿಶಿಷ್ಟ ಡಾಲ್ಫಿನ್‌ಗಳು
ಭಾರತದ ಗಂಗಾ ನದಿಯನ್ನು ಬಿಟ್ಟರೆ ಅಮೆಜಾನ್ ನದಿಯಲ್ಲಿ ಮಾತ್ರ ವಿಶಿಷ್ಟವಾದ ಸಿಹಿ ನೀರಿನ ಡಾಲ್ಫಿನ್‌ಗಳನ್ನು ಭೂಮಿ ಮೇಲೆ ನೋಡಲು ಸಾಧ್ಯ. ಆದರೆ ಈಗಿನ ದುರಾದೃಷ್ಟ ಹೇಗೆ ಕಾಡುತ್ತಿದೆ ಎಂದರೆ, ಏನೂ ತಪ್ಪು ಮಾಡದ ಮನುಷ್ಯ ಸ್ನೇಹಿಯಾಗಿ ಬದುಕುತ್ತಿರುವ ಅಮೆಜಾನ್ ನದಿಯ ಸಿಹಿ ನೀರಿನ ಡಾಲ್ಫಿನ್ಸ್ ಕೂಡ ಸತ್ತು ಸತ್ತು ದಡಕ್ಕೆ ಬಂದು ಬಿದ್ದಿವೆ. ಹಾಗೇ ಅಮೆಜಾನ್ ಕಾಡಿನಲ್ಲಿ ಈವರೆಗೆ ಸಾವಿರಾರು ತಳಿಯ ಸಸ್ಯಗಳು ನಾಶವಾಗಿವೆ ಅಂತಾ ಹೇಳಲಾಗಿದೆ. ಇದು ಅಮೆಜಾನ್ ಕಾಡಿನ ಭೀಕರ ಬರಗಾಲದ ಎಫೆಕ್ಟ್.
ಒಟ್ನಲ್ಲಿ ಹೀಗೆ ಎಲ್ಲವೂ ನಾಶವಾಗಿ ಹೋಗಿದೆ. ಅಮೆಜಾನ್ ಮಳೆಕಾಡು ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಜಗತ್ತು ಬೇಗ ಅಲರ್ಟ್ ಆಗಬೇಕಿದೆ. ಇಲ್ಲವಾದರೆ ಮುಂದೆ ಮನುಷ್ಯರು ಉಸಿರಾಡುವ ಗಾಳಿಗೂ ಬರ ಎದುರಾಗಿ, ನೀರಿಗೂ ಸಮಸ್ಯೆ ಉಂಟಾಗಿ ಜನರು ಸಾಯುತ್ತಾರೆ. ಅಲ್ಲದೆ ಭೂಮಿಯ ಮೇಲೆ ಜೀವಿಗಳೇ ನಾಶವಾಗುವ ಅಪಾಯ ಇದೆ. ಹೀಗೆ ನಾನಾ ಸಮಸ್ಯೆ ಎದುರಾಗಿರುವ ವೇಳೆ, ಈಗಲೂ ಅಮೆಜಾನ್ ಕಾಡನ್ನು ನಾಶ ಮಾಡುವ ಕೆಲಸ ನಡೆಯುತ್ತಿದೆ.
ಎಲ್ಲಾ ನಾಶ ಮಾಡುತ್ತಿದೆ ಕಳ್ಳರ ಗ್ಯಾಂಗ್
ಅಮೆಜಾನ್ ನದಿ ನೋಡಲು ನದಿಯಂತೆ ಕಂಡರೂ ಸಮುದ್ರದ ರೀತಿ ಯಾವಾಗಲು ನೀರು ತುಂಬಿಕೊಂಡು ನಳನಳಿಸುತ್ತದೆ. ಆದರೆ ಈ ಬಾರಿ ದೊಡ್ಡ ಸಮಸ್ಯೆ ಎದುರಾಗಿಬಿಟ್ಟಿದ್ದು, ಮತ್ತೊಂದು ಆಘಾತಕಾರಿ ಸಂಗತಿ ಏನಂದ್ರೆ ಇಲ್ಲಿರುವ 62 ಪುರಸಭೆಗಳ ಪೈಕಿ, 60 ರಲ್ಲಿ ಬರ ಅವರಿಸಿದೆ. ಹೀಗಾಗಿ ಲಕ್ಷಾಂತರ ಜನರ ಬದುಕು ಕೂಡ ಸಂಕಷ್ಟಕ್ಕೆ ಸಿಲುಕಿದೆ. ವಿಶ್ವಸಂಸ್ಥೆ ಸೇರಿ ಜಗತ್ತಿನ ಪ್ರಮುಖ ರಾಷ್ಟ್ರಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಮತ್ತಷ್ಟು ನಾಶವಾಗಿ ಹೋಗುತ್ತದೆ ಅಮೆಜಾನ್ ಪ್ರದೇಶ.

10 ವರ್ಷಕ್ಕೆ ಒಂದು ಬಾರಿ ಬರ?
ಇನ್ನು ಪ್ರತಿ 10 ವರ್ಷಕ್ಕೆ ಒಂದು ಬಾರಿ ಅಮೆಜಾನ್ ಮಳೆ ಕಾಡಲ್ಲಿ ಈ ರೀತಿ ಭೀಕರ ಬರ ಎದುರಾಗುತ್ತದೆ. ಎಲ್ ನೀನೊ ಕಾರಣಕ್ಕೆ ಹೀಗಾಗುತ್ತೆ ಎಂಬುದು ವಿಜ್ಞಾನಿಗಳ ಮಾತಾಗಿದೆ. ಆದರೆ ಈ ಬಾರಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ನವೆಂಬರ್‌ನಲ್ಲಿ ಮಳೆಯಾಗುತ್ತದೆ ಎಂಬ ಮಾಹಿತಿ ಇದ್ದರೂ, ಅಮೆಜಾನ್ ನದಿ ತುಂಬಿ ಹರಿಯಬೇಕು ಎಂದರೆ ಕನಿಷ್ಠ ಕೆಲ ತಿಂಗಳ ಕಾಲ ಜೋರಾಗಿ ಮಳೆ ಬೀಳಬೇಕು. ಆದ್ರೆ ಅಷ್ಟು ದೊಡ್ಡ ಪ್ರಮಾಣದಲ್ಲಿನ ಮಳೆ ಬೀಳುವ ಮುನ್ಸೂಚನೆ ಇಲ್ಲ. ಸಾಧಾರಣ ಮಳೆ ಮಾತ್ರ ಆಗಬಹುದು ಎನ್ನಲಾಗಿದೆ.
ಪರಿಸ್ಥಿತಿ ಹೀಗೆ ಕೈಮೀರಿ ಹೋದರೂ ಬ್ರೆಜಿಲ್ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಒಂದು ಕಡೆ ಮಾಫಿಯಾ ಕಾಟವಾದರೆ, ಇನ್ನೊಂದು ಕಡೆ ಈಗ ಪ್ರಕೃತಿ ಮಾತೆಯ ಮುನಿಸು ಅಮೆಜಾನ್ ಕಾಡಿನ ಬುಡಕಟ್ಟು ಜನರನ್ನ ಕಾಡುತ್ತಿದೆ. ಹೀಗೆ ಜಗತ್ತಿಗೂ ಅಮೆಜಾನ್ ಮಳೆ ಕಾಡು & ನದಿ ನಾಶದಿಂದ ದೊಡ್ಡ ಅಪಾಯ ಎದುರಾಗಿದೆ. ಮನುಷ್ಯ ತನ್ನ ಸ್ವಾರ್ಥ ಬುದ್ಧಿಯಿಂದ ಇನ್ನೂ ಏನೇನು ಅವಾಂತರ ಮಾಡುತ್ತಾನೋ.












Click it and Unblock the Notifications