ಪ್ರತಿಪಕ್ಷಗಳು ಒಗ್ಗೂಡಿದರೆ ಬಿಜೆಪಿ ಸೋಲು ಗ್ಯಾರಂಟಿ: ರಾಹುಲ್ ಗಾಂಧಿ!
ಕ್ಯಾಲಿಫೋರ್ನಿಯಾ: 2024ರ ಲೋಕಸಭೆ ಚುನಾವಣೆಗೆ ಮೊದಲು ವಿಪಕ್ಷಗಳ ನಡುವೆ ಒಗ್ಗಟ್ಟಿನ ವಿಚಾರಕ್ಕೆ ಭಾರಿ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತೊಮ್ಮೆ ವಿಪಕ್ಷಗಳ ನಾಯಕರ ನಡುವೆ ಸ್ನೇಹಕ್ಕಾಗಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಈ ಮಾತನ್ನ ರಾಹುಲ್ ಗಾಂಧಿ ಹೇಳಿದ್ದು ಭಾರತದಲ್ಲಿ ಅಲ್ಲ ಬದಲಾಗಿ ಅಮೆರಿಕದಲ್ಲಿ ಅನ್ನೋದೆ ವಿಶೇಷ.
ಹೌದು, ಅಮೆರಿಕದ ಕ್ಯಾಲಿಫೋರ್ನಿಯಾ ವಿವಿ ಸಿಲಿಕಾನ್ ವ್ಯಾಲಿ ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ರಾಹುಲ್ ಗಾಂಧಿ ಈ ವಿಚಾರ ಪ್ರಸ್ತಾಪ ಮಾಡಿದರು. ಪ್ರತಿಪಕ್ಷಗಳು ಸೂಕ್ತ ಹೊಂದಾಣಿಕೆ ಮಾಡಿಕೊಂಡರೆ ಬಿಜೆಪಿಯನ್ನು ಸೋಲಿಸಬಹುದು, ಕಾಂಗ್ರೆಸ್ ಪಕ್ಷ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಬಿಜೆಪಿ ದೌರ್ಬಲ್ಯ ಸ್ಪಷ್ಟವಾಗುತ್ತಿದ್ದು, ಪ್ರತಿಪಕ್ಷಗಳು ಸರಿಯಾಗಿ ಹೊಂದಾಣಿಕೆ ಮಾಡಿಕೊಂಡಿದ್ದೇ ಆದರೆ ಬಿಜೆಪಿಯನ್ನು ಸೋಲಿಸಬಹುದು ಎಂದು ರಾಹುಲ್ ಪ್ರತಿಪಾದಿಸಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಕರ್ನಾಟಕವನ್ನ ಉದಾಹರಣೆಯಾಗಿ ನೀಡಿದ್ದಾರೆ.

ದೇಶಕ್ಕೆ ಕರ್ನಾಟಕ ರಿಸಲ್ಟ್ ಮಾದರಿ!
ಅಷ್ಟಕ್ಕೂ ಕರ್ನಾಟಕ ಫಲಿತಾಂಶ ರಾಷ್ಟ್ರ ಮಟ್ಟದಲ್ಲೂ ಭಾರಿ ಪರಿಣಾಮ ಬೀರಿದೆ. ಅದ್ರಲ್ಲೂ ರಾಷ್ಟ್ರ ರಾಜಕಾರಣದಲ್ಲಿ ಕರ್ನಾಟಕ ಚುನಾವಣೆ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಕೂಡ ಇದೇ ಆಧಾರದಲ್ಲಿ 2024ರ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಇದೇ ಹೊತ್ತಲ್ಲಿ ರಾಹುಲ್ ಅಮೆರಿಕದಲ್ಲೂ ಕರ್ನಾಟಕ ಚುನಾವಣೆ ಉದಾಹರಣೆಯಾಗಿ ನೀಡಿದ್ದಾರೆ. ಕರ್ನಾಟಕ ವಿಧಾನಸಭಾ ಫಲಿತಾಂಶ ಗಮನಿಸಿದರೆ, ಬಿಜೆಪಿ ವಿರುದ್ಧ ಹೋರಾಡಬಹುದು ಎಂಬುದು ಅರಿವಿಗೆ ಬಂದಿದೆ. ಆದರೆ ಈ ತಂತ್ರ ಅರ್ಥಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ ರಾಹುಲ್ ಗಾಂಧಿ.
ಭಾರತ್ ಜೋಡೋ ಯಾತ್ರೆಯ ಪ್ರಸ್ತಾಪ!
ಅಲ್ಲದೆ ತಮ್ಮ ಭಾಷಣದಲ್ಲಿ ಭಾರತ್ ಜೋಡೋ ಯಾತ್ರೆಯ ವಿಚಾರವನ್ನೂ ರಾಹುಲ್ ಗಾಂಧಿ ಪ್ರಸ್ತಾಪ ಮಾಡಿದ್ದಾರೆ. ಚುನಾವಣೆ ಎದುರಿಸಲು ಕಾಂಗ್ರೆಸ್ ಸಂಪೂರ್ಣ ವಿಭಿನ್ನ ವಿಧಾನ ಬಳಸಿತ್ತು. ಭಾರತ್ ಜೋಡೋ ಯಾತ್ರೆ ನಂತರದಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದವು ಎಂದು ತಮ್ಮ ಪಕ್ಷದ ಗೆಲುವಿನ ಗುಟ್ಟು ಬಿಚ್ಚಿಟ್ಟಿದ್ದಾರೆ. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಮೇ 10 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗೆದ್ದರೆ, ಬಿಜೆಪಿ 66 ಮತ್ತು ಜನತಾ ದಳ (ಜಾತ್ಯತೀತ) 19 ಸ್ಥಾನ ಗಳಿಸಿತ್ತು.

ಜೂನ್ 12ರಂದು ಮಹತ್ವದ ಸಭೆ
'ಎತ್ತು ಏರಿಗೆ, ಕೋಣ ನೀರಿಗೆ' ಅನ್ನುವಂತೆ ವಿಪಕ್ಷ ನಾಯಕರ ನಡುವೆಯೇ ಒಮ್ಮತ ಮೂಡುತ್ತಿಲ್ಲ. ಪಕ್ಷಗಳ ನಡುವಿನ ಭಿನ್ನಾಭಿಪ್ರಾಯದ ಕಾರಣ ಬಿಹಾರದಲ್ಲಿ ನಡೆಸಲು ಉದ್ದೇಶಿಸಿದ್ದ ವಿಪಕ್ಷಗಳ ಜಂಟಿ ಸಭೆ ಸ್ಥಳ ಹಾಗೂ ದಿನಾಂಕ ಘೋಷಣೆ ಲೇಟ್ ಆಗುತ್ತಾ ಬಂದಿತ್ತು. ಕಿತ್ತಾಟದ ಪರಿಣಾಮ ಲೋಕಸಭಾ ಚುನಾವಣೆ ಮೇಲೆ ಆಗೋದು ಪಕ್ಕಾ ಅನ್ನೋ ಮಾತು ಕೇಳಿಬರುತ್ತಿತ್ತು. ಆದರೆ ಕೊನೆಗೆ ಮಾತುಕತೆ ಫೈನಲ್ ಆಗಿ, ಅಂತಿಮವಾಗಿ ಮಮತಾ ಬ್ಯಾನರ್ಜಿ ಬಣ ಗೆದ್ದಿದೆ. ಜೂನ್ 12ರಂದು ವಿಪಕ್ಷಗಳ ನಾಯಕರ ಮಹತ್ವದ ಸಭೆ ನಡೆಯಲಿದೆ
ಅಮೆರಿಕ ನೆಲದಲ್ಲಿ ಭಾರತದ ಚುನಾವಣೆ ಚರ್ಚೆ!
ಬಿಹಾರ ಸಿಎಂ ವಿರೋಧ ಪಕ್ಷಗಳ ನಾಯಕರನ್ನ ಒಗ್ಗೂಡಿಸುವ ಕೆಲಸ ಮಾಡುತ್ತಿದ್ರೆ, ಮತ್ತೊಂದು ಕಡೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಿತೀಶ್ ಕಾರ್ಯಕ್ಕೆ ಹೆಗಲು ನೀಡುತ್ತಿದ್ದಾರೆ. ಹೀಗೆ ವಿಪಕ್ಷ ನಾಯಕರು ತಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ಒಂದಾಗುತ್ತಿದ್ದಾರೆ. ಆ ಮೂಲಕ ಮುಂಬರುವ ದಿನಗಳಲ್ಲಿ ಒಗ್ಗಟ್ಟಿನ ಹೋರಾಟ ಪ್ರದರ್ಶಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈ ಹೊತ್ತಲ್ಲೇ ರಾಹುಲ್ ಗಾಂಧಿ ಕೂಡ ಅಮೆರಿಕದ ನೆಲದಲ್ಲಿ ನಿಂತು ಭಾರತದ ರಾಜಕೀಯದ ಕುರಿತು ಮಾತನಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಒಟ್ನಲ್ಲಿ ಲೋಕಸಭೆ ಚುನಾವಣೆಗೆ ಮೊದಲೇ ವಿರೋಧ ಪಕ್ಷಗಳು ಕಾರ್ಯತಂತ್ರ ಶುರುಮಾಡಿವೆ. ಅದರಲ್ಲೂ ವಿದೇಶಿ ನೆಲದಲ್ಲೂ ಭಾರತದ ಮುಂದಿನ ಸಾರ್ವತ್ರಿಕ ಚುನಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ರಾಹುಲ್ ಗಾಂಧಿ ಮಾತಿನ ಕುರಿತು ಪರ-ವಿರೋಧದ ಚರ್ಚೆ ಕೂಡ ಶುರುವಾಗಿದೆ. ಕಾಂಗ್ರೆಸ್ ನಾಯಕರು ರಾಹುಲ್ ಪರ ಬ್ಯಾಟ್ ಬೀಸಿದರೆ, ಬಿಜೆಪಿ ಲೀಡರ್ಸ್ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ












Click it and Unblock the Notifications