ಅಮೆರಿಕದಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ ಉಕ್ರೇನ್ ಅಧ್ಯಕ್ಷ: ಯುದ್ಧಕ್ಕೆ ಶೀಘ್ರದಲ್ಲೇ ಕೊನೇ ಮೊಳೆ?
ರಷ್ಯಾ & ಉಕ್ರೇನ್ ಯುದ್ಧ ಭೀಕರವಾಗುತ್ತಿದ್ದು, ಲಕ್ಷಾಂತರ ಜನರ ಜೀವ ಯುದ್ಧದ ಬೆಂಕಿ ಹಾಗೂ ಬಿರುಗಾಳಿಗೆ ಬಲಿಯಾಗಿ ಹೋಗಿದೆ. ಹೀಗಿದ್ದಾಗ ಕೋಟ್ಯಂತರ ಜನರು ಬೀದಿಗೆ ಬಿದ್ದು ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕಲು ಭಾರತ ಕೂಡ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಬಳಿಯೂ ಪ್ರಧಾನಿ ಮೋದಿ ಅವರು ಯುದ್ಧ ನಿಲ್ಲಿಸಿ ಎಂದು ಹೇಳಿದ್ದರು. ಹೀಗಿದ್ದಾಗಲೇ ಅಮೆರಿಕದಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ ಉಕ್ರೇನ್ ಅಧ್ಯಕ್ಷ ಹೇಳಿದ್ದೇನು?
ಅಂದಹಾಗೆ ಯುದ್ಧದ ಬೇಗೆ ನಡುವೆ ಜಗತ್ತಿನಲ್ಲಿ ತಳಮಳ ಶುರುವಾಗಿದೆ. ಯಾಕಂದ್ರೆ ಇದೇ ಸಣ್ಣಪುಟ್ಟ ಯುದ್ಧಗಳು ಮುಂದೆ ಇಡೀ ಜಗತ್ತಿಗೆ ಕಿಚ್ಚು ಹೊತ್ತಿಸುವ ಭಯ ಕೂಡ ಕಾಡ್ತಿದೆ. ಹೀಗಾಗಿ ಏನಾದರೂ ಮಾಡಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲೇಬೇಕು ಎಂಬ ಆಗ್ರಹವನ್ನ ಜಗತ್ತಿನಾದ್ಯಂತ ಎಲ್ಲರೂ ಮಾಡುತ್ತಿದ್ದಾರೆ. ಆದರೆ ಈ ಆಗ್ರಹಕ್ಕೆ ಬೆಲೆ ಸಿಗುತ್ತಿಲ್ಲ, ಹೀಗಾಗಿಯೇ ಯುದ್ಧಕ್ಕೆ ಬ್ರೇಕ್ ಕೂಡ ಬೀಳುತ್ತಿಲ್ಲ. ಪರಿಸ್ಥಿತಿ ಹೀಗಿದ್ದಾಗಲೇ ಪ್ರಧಾನಿ ಮೋದಿ ಅವರಿಂದ ಅಮೆರಿಕ ಪ್ರವಾಸ ಕೈಗೊಳ್ಳಲಾಗಿತ್ತು. ಕೆಲವು ದಿನಗಳ ಹಿಂದೆ ಅಮೆರಿಕದಲ್ಲಿದ್ದ ಪಿಎಂ ಮೋದಿ ಅವರನ್ನ ಉಕ್ರೇನ್ ಅಧ್ಯಕ್ಷರು ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಉಕ್ರೇನ್ ಅಧ್ಯಕ್ಷರ ನಡೆಯಿಂದ ಕುತೂಹಲ!
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಉಕ್ರೇನ್ ಅಧ್ಯಕ್ಷರ ನಡೆಯಿಂದ ಈಗ ಸಂಚಲನ ಸೃಷ್ಟಿಯಾಗಿದೆ. ಯಾಕಂದ್ರೆ ಈ ಹಿಂದೆ ಭಾರತದ ಬಗ್ಗೆಯೇ ಮಾತನಾಡುತ್ತಿದ್ದ ಈ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈಗ ಭಾರತದ ಜೊತೆಗೆ ಮಾತುಕತೆಗೆ ಮುಂದಾಗಿದ್ದಾರೆ. ಕೆಲವು ದಿನಗಳಿಂದ ಭಾರತದ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿ ಇರುವ ಝೆಲೆನ್ಸ್ಕಿ, ಯುದ್ಧವನ್ನ ನಿಲ್ಲಿಸುವ ಬಗ್ಗೆ ಚರ್ಚೆ ಮಾಡಿದ್ರಾ? ಹಾಗಾದ್ರೆ ರಷ್ಯಾ & ಉಕ್ರೇನ್ ತಿಕ್ಕಾಟ ಕೊನೆಯಾಗುವುದು ಯಾವಾಗ?
ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದೇನು?
ಅಷ್ಟಕ್ಕೂ ಈ ಬಗ್ಗೆ ಭಾರತವು, ಉಕ್ರೇನ್ & ರಷ್ಯಾ ಯುದ್ಧ ಕೊನೆಯಾಗಿ, ಶಾಂತಿ ನೆಲಸಬೇಕು ಎಂಬ ನಿಲುವಿಗೆ ಇಂದಿಗೂ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದೆ. ಅಲ್ಲದೆ ಶಾಂತಿ ಸ್ಥಾಪನೆ ಪ್ರಯತ್ನದಲ್ಲಿ ಭಾರತದ ಮಿತಿಯಲ್ಲಿ ಸಾಧ್ಯವಾಗುವ ಎಲ್ಲ ಸಹಕಾರವನ್ನೂ ನೀಡುತ್ತದೆ ಎಂಬ ಭರವಸೆ ಕೂಡ ನೀಡಿದೆ. ಮತ್ತೊಂದು ಕಡೆ ಉಕ್ರೇನ್ ಅಧ್ಯಕ್ಷರಾದ ಝೆಲೆನ್‌ಸ್ಕಿ ಅವರು ಈ ಭೇಟಿ ಬಗ್ಗೆ ಪ್ರತಿಕ್ರಿಯೆಯನ್ನ ನೀಡಿ, ಪ್ರಧಾನಿ ಮೋದಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಂದಹಾಗೆ ರಷ್ಯಾ & ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಭಾರತದ ಶ್ರಮ ಹಾಗೂ ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಪ್ರಯತ್ನ ಶ್ಲಾಘನೀಯ ಎಂದಿದ್ದಾರೆ ಉಕ್ರೇನ್ ಅಧ್ಯಕ್ಷ.












Click it and Unblock the Notifications