ಹಿಂದೂಗಳಿಗೆ ಶ್ರೇಷ್ಠ, ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರಿಗೆ ನೀಡಿದ ‘ದಶ ದಾನ’ ಪೆಟ್ಟಿಗೆ ಅದೆಷ್ಟು ಪವಿತ್ರ ಗೊತ್ತೇ?
ವಾಷಿಂಗ್ಟನ್: ಪ್ರಧಾನಿ ಮೋದಿ ಅವರ ಅಮೆರಿಕ ಪ್ರವಾಸ ಜಗತ್ತಿನ ಗಮನ ಸೆಳೆಯುತ್ತಿದೆ. ಅದ್ರಲ್ಲೂ ಅಮೆರಿಕದ ಪ್ರಥಮ ಮಹಿಳೆಗೆ & ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಪ್ರಧಾನಿ ನೀಡಿದ ಉಡುಗೊರೆ ಹಿಂದೂಗಳಿಗೆ ಹೆಮ್ಮೆ ತಂದಿದೆ. ಹಾಗಾದ್ರೆ ಜೋ ಬೈಡನ್‌ಗೆ ಭಾರತದ ಪ್ರಧಾನಿ ನೀಡಿದ 'ದಶ ದಾನ' ಪೆಟ್ಟಿಗೆಯಲ್ಲಿ ಏನಿತ್ತು? ಹಿಂದೂ ಸಂಪ್ರದಾಯದ ಪ್ರಕಾರ ದಶ ದಾನ ಪೆಟ್ಟಿಗೆ ಎಷ್ಟು ಪವಿತ್ರ? ತಿಳಿಯೋಣ ಬನ್ನಿ.
ಹೊರ ದೇಶಕ್ಕೆ ಹೋದರೂ ಭಾರತದ ಸಂಪ್ರದಾಯ ಮರೆಯೋದಿಲ್ಲ ಪ್ರಧಾನಿ ನರೇಂದ್ರ ಮೋದಿ. ಅದರಲ್ಲೂ ಹಿಂದೂ ಸಂಪ್ರದಾಯ ಆಚರಣೆಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಈ ಕಾರಣಕ್ಕೆ ಮತ್ತೆ ಅಮೆರಿಕ ಅಧ್ಯಕ್ಷರಿಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆ ಸಾಕಷ್ಟು ಸದ್ದು ಮಾಡುತ್ತಿದೆ. ಅಮೆರಿಕ ಅಧ್ಯಕ್ಷ ಬೈಡನ್‌ಗೆ ಉಡುಗೊರೆಯಾಗಿ ಪ್ರಧಾನಿ ನೀಡಿರುವ ಶ್ರೀಗಂಧದ ಪೆಟ್ಟಿಗೆಯನ್ನು ರಾಜಸ್ಥಾನದ ಜೈಪುರ ಮೂಲದ ಕುಶಲಕರ್ಮಿ ತಯಾರಿಸಿದ್ದಾರೆ. ಕರ್ನಾಟಕದ ಮೈಸೂರಿನ ಶ್ರೀಗಂಧವನ್ನು ಬಳಸಿ ಪೆಟ್ಟಿಗೆ ಕೆತ್ತಲಾಗಿದ್ದು, ಭಾರತದ ಪರಿಸರ ಹಾಗೂ ಅರಣ್ಯ ಸಂಪತ್ತನ್ನು ಪಸರಿಸುವ ಕಾರ್ಯವೂ ನಡೆದಿದೆ. ಹಾಗಾದರೆ ಪೆಟ್ಟಿಗೆಯಲ್ಲಿ ಪ್ರಧಾನಿ ಕೊಟ್ಟ ಉಡುಗೊರೆ ಏನು? ಮುಂದೆ ಓದಿ (modi gifts diamond).

'ದಶ ದಾನ' ಎಂದರೆ ಏನೆಲ್ಲಾ ನೀಡಲಾಗುತ್ತೆ?
ಹೌದು, ಹಿಂದೂ ಸಂಪ್ರದಾಯದ ಪ್ರಕಾರ ಯಾವುದೇ ವ್ಯಕ್ತಿ 80 ವರ್ಷ ಪೂರೈಸಿದ ಬಳಿಕ, ಆ ವ್ಯಕ್ತಿಯನ್ನು ಮಾನವ ಜೀವನದ ಸಂಪೂರ್ಣ ಅನುಭವಕ್ಕಾಗಿ ಗೌರವಿಸಲಾಗುತ್ತದೆ. ಅಂದರೆ 1 ಸಾವಿರ ಹುಣ್ಣಿಮೆಗಳನ್ನು ನೋಡಿದ ವ್ಯಕ್ತಿ ಎಂದು ಗೌರವಿಸಲಾಗುತ್ತದೆ. ಇದೀಗ ಈ ವರ್ಷ ನವೆಂಬರ್‌ನಲ್ಲಿ 81ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬೈಡನ್. ಇದೇ ಕಾರಣಕ್ಕೆ ಪ್ರಧಾನಿ ಉಡುಗೊರೆಯಾಗಿ ನೀಡಿದ ಶ್ರೀಗಂಧದ ಪೆಟ್ಟಿಗೆಯಲ್ಲಿ 10 ಗಿಫ್ಟ್ ಕೂಡ ಸೇರಿವೆ. ಹಾಗಾದರೆ ಪೆಟ್ಟಿಗೆಯಲ್ಲಿ ನೀಡಿದ್ದ ವಸ್ತುಗಳು ಯಾವುವು? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ಮೋದಿ ಉಡುಗೊರೆಗೆ ಬೈಡನ್ ಫಿದಾ!
ಅಂದಹಾಗೆ ಅಮೆರಿಕ ಅಧ್ಯಕ್ಷರಿಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಪ್ರಧಾನಿ ಮೋದಿ ನೀಡಿರುವ ಉಡುಗೊರೆಯಲ್ಲಿ, ಹಸು ದಾನ, ಭೂ ದಾನ, ಎಳ್ಳು ದಾನ, ಚಿನ್ನ, ತುಪ್ಪ ಅಥವಾ ಬೆಣ್ಣೆ, ಆಹಾರ ಧಾನ್ಯ, ವಸ್ತ್ರದಾನ ಅಥವಾ ಬಟ್ಟೆ ದಾನ, ಬೆಲ್ಲ ದಾನ, ಬೆಳ್ಳಿ ಮತ್ತು ಉಪ್ಪು ದಾನವನ್ನು ಪೆಟ್ಟಿಗೆ ಒಳಗೊಂಡಿದೆ. ಸಣ್ಣ ಸಣ್ಣ ಬೆಳ್ಳಿಯ ಬಟ್ಟಲಲ್ಲಿ ಎಲ್ಲಾ ದಾನದ ವಸ್ತುಗಳನ್ನ ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು. ಈ ಮೂಲಕ 80 ವರ್ಷ ಪೂರೈಸುತ್ತಿರುವ ಅಮೆರಿಕದ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಹಿಂದೂ ಧರ್ಮ ಪ್ರಕಾರ ಮಹತ್ವದ ಉಡುಗೊರೆ ನೀಡಿದ್ದಾರೆ.

ವಿಶೇಷ ಉಡುಗೊರೆ ತಯಾರಿಸಿದ್ದು ಯಾರು?
ಸಹಸ್ರ ಪೂರ್ಣ ಚಂದ್ರೋದಯದ ಆಚರಣೆ ಸಂದರ್ಭದಲ್ಲಿ 10 ವಿವಿಧ ರೀತಿ ದಾನ ನೀಡುವ, ದಶ ದಾನ ಪದ್ಧತಿಯನ್ನ ಸಾವಿರಾರು ವರ್ಷದಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಆದರೆ ಈಗ ಭಾರತದ ಹೊರಗೂ ಪ್ರಧಾನಿ ಮೋದಿ ಹಿಂದೂಗಳ ಈ ಸಂಪ್ರದಾಯ ಪಸರಿಸಿದ್ದಾರೆ. ಇನ್ನು ಈ ಪೆಟ್ಟಿಗೆಯಲ್ಲಿ ಇನ್ನೂ ಹಲವು ವಸ್ತುಗಳು ಗಮನ ಸೆಳೆದಿವೆ. ಈ ಪೆಟ್ಟಿಗೆಯಲ್ಲಿ ವಿಘ್ನನಿವಾರಕ ಗಣೇಶನ ಬೆಳ್ಳಿಯ ವಿಗ್ರಹವಿದೆ. ಕೋಲ್ಕತ್ತಾದ 5ನೇ ತಲೆಮಾರಿನ ಅಕ್ಕಸಾಲಿಗರ ಕುಟುಂಬ ವಿಗ್ರಹ ತಯಾರಿಸಿದ್ದಾರೆ. ಇಷ್ಟಲ್ಲದೆ ಪೆಟ್ಟಿಗೆಯಲ್ಲಿ ಹಿಂದೂಗಳ ಮನೆಯ ಪವಿತ್ರ ಸ್ಥಳ, ಎಣ್ಣೆ ದೀಪ ಸಂಕೇತಿಸುವ ವಸ್ತುಗಳಿವೆ. ತಾಮ್ರಪತ್ರ ಎಂದೂ ಕರೆಯಲ್ಪಡುವ ತಾಮ್ರ ಫಲಕವನ್ನು ಉತ್ತರ ಪ್ರದೇಶದಿಂದ ತರಲಾಗಿದೆ. ಅದರ ಮೇಲೆ ಶ್ಲೋಕವನ್ನು ಕೆತ್ತಲಾಗಿದೆ.
ವಿವಿಧ ರಾಜ್ಯಗಳಿಂದ ತಂದ ವಸ್ತುಗಳು!
ವಿಶೇಷ ಶ್ರೀಗಂಧದ ಪೆಟ್ಟಿಗೆಯಲ್ಲಿ ತಮಿಳುನಾಡಿನಿಂದ ಪಡೆದ ಬಿಳಿ ಎಳ್ಳು ಬೀಜಗಳನ್ನ ಎಳ್ಳಿನ ದಾನವಾಗಿ ನೀಡಲಾಗಿದೆ. ರಾಜಸ್ಥಾನದಲ್ಲಿ 24 ಕ್ಯಾರೆಟ್ ಶುದ್ಧ ಮತ್ತು ಹಾಲ್‌ಮಾರ್ಕ್ ಚಿನ್ನದ ನಾಣ್ಯ, ಪಂಜಾಬ್‌ನಿಂದ ತುಪ್ಪ ಅಥವಾ ಬೆಣ್ಣೆಯ ದಾನವನ್ನು, ಜಾರ್ಖಂಡ್‌ನಿಂದ ಪಡೆದ ಕೈಯಿಂದ ನೇಯ್ದ ರೇಷ್ಮೆ ಬಟ್ಟೆ, ಮಹಾರಾಷ್ಟ್ರದಿಂದ ಬಂದ ಬೆಲ್ಲವನ್ನು ಬೆಲ್ಲ ದಾನವಾಗಿ ನೀಡಲಾಗಿದೆ. ಹೀಗೆ ದೇಶದ ವಿವಿಧ ರಾಜ್ಯದಿಂದ ಬಂದ ವಸ್ತುಗಳನ್ನ ಅಮೆರಿಕ ಅಧ್ಯಕ್ಷರಿಗೆ 'ದಶ ದಾನ'ವಾಗಿ ನೀಡಿದ್ದಾರೆ ಪ್ರಧಾನಿ ಮೋದಿ. ಒಟ್ನಲ್ಲಿ ಪ್ರಧಾನಿ ಮೋದಿ ನೀಡಿರುವ ಉಡುಗೊರೆ ಅಮೆರಿಕ ಮಾತ್ರವಲ್ಲ ಜಗತ್ತಿನ ಗಮನ ಸೆಳೆದಿದೆ.
7.5 ಕ್ಯಾರೆಟ್ ಹಸಿರು ವಜ್ರ ಗಿಫ್ಟ್
ಈ ಉಡುಗೊರೆಯ ಜೊತೆಗೆ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೂ ಪ್ರಧಾನಿ ಮೋದಿ ಭರ್ಜರಿ ಉಡುಗೊರೆ ನೀಡಿದ್ದಾರೆ. 7.5 ಕ್ಯಾರೆಟ್ ಹಸಿರು ವಜ್ರ ಉಡುಗೊರೆಯಾಗಿ ನೀಡಿದ್ದಾರೆ. ಈ ವಜ್ರದ ವಿಶೇಷತೆ ಏನೆಂದರೆ ರಾಸಾಯನಿಕ ಹಾಗೂ ಆಪ್ಟಿಕಲ್ ಗುಣಲಕ್ಷಣ ಪ್ರತಿಬಿಂಬಿಸುತ್ತದೆ. ಅಲ್ಲದೆ ವಿಶೇಷ ಮತ್ತು ಆಧುನಿಕ ತಂತ್ರಜ್ಞಾನ ಬಳಸಿ ಈ ವಜ್ರವನ್ನ ಕೆತ್ತಲಾಗಿದೆ. ಬೈಡನ್‌ಗೆ ಹಿಂದೂ ಸಂಪ್ರದಾಯದ ಪ್ರಕಾರ ದಶ ದಾನ ನೀಡಿರುವ ಪ್ರಧಾನಿ ಮೋದಿ, ಜಿಲ್ ಬೈಡನ್ ಅವರಿಗೆ 7.5 ಕ್ಯಾರೆಟ್ ಹಸಿರು ವಜ್ರ ನೀಡಿದ್ದಾರೆ. ಇದರ ಜೊತೆಗೆ ಅಮೂಲ್ಯ ವಸ್ತುಗಳನ್ನು ಇಡುವ ಬಾಕ್ಸ್ ಅನ್ನ ಕೂಡ ಉರುಗೊರೆಯಾಗಿ ನೀಡಿದ್ದಾರೆ.
ಪ್ರಧಾನಿ ಮೋದಿಗೆ ಬೈಡನ್ ಗಿಫ್ಟ್
ಅಂದಹಾಗೆ ನಿನ್ನೆ ಅಮೆರಿಕದ ಶಕ್ತಿ ಕೇಂದ್ರ ಶ್ವೇತಭವನದಲ್ಲಿ ಪ್ರಧಾನಿ ಮೋದಿ ಅವರಿಗಾಗಿ ಜೋ ಬೈಡನ್ ಮತ್ತು ಜಿಲ್ ಬೈಡನ್ ಆಯೋಜಿಸಿದ್ದ ವಿಶೇಷ ಖಾಸಗಿ ಔತಣಕೂಟದ ನಂತರ ಈ ಉಡುಗೊರೆಗಳನ್ನ ನೀಡಲಾಯಿತು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೂ ಅನೇಕ ಉಡುಗೊರೆ ನೀಡಿದ್ದಾರೆ ಅಮೆರಿಕ ಅಧ್ಯಕ್ಷರು ಹಾಗೂ ಅವರ ಪತ್ನಿ. ಮಹತ್ವದ ಪುಸ್ತಕಗಳು ಸೇರಿದಂತೆ ಪುರಾತನ ಅಮೂಲ್ಯ ವಸ್ತುಗಳನ್ನ ಉಡುಗೊರೆಯಾಗಿ ಈ ವೇಳೆ ಬೈಡನ್ ದಂಪತಿ ಪ್ರಧಾನಿ ಮೋದಿ ಅವರಿಗೆ ನೀಡಿದ್ದಾರೆ.
ಈಗ ಪ್ರಧಾನಿಯಾಗಿ 2ನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ ಪ್ರಧಾನಿ ಮೋದಿ. ಅಲ್ಲದೆ ಅಮೆರಿಕನ್ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ 2ನೇ ಬಾರಿಗೆ ಮಾತನಾಡಲಿದ್ದಾರೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ ಪ್ರಧಾನಿ ಮೋದಿ. ಹಾಗೂ ಪ್ರಧಾನಿ ಮೋದಿ ಭೇಟಿಯ ಸಂದರ್ಭದಲ್ಲಿ ಅಮೆರಿಕ ಮತ್ತು ಭಾರತದ ನಡುವೆ ಪ್ರಮುಖವಾದ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಅಂತಿಮ ಸಹಿ ಬೀಳುವ ಸಾಧ್ಯತೆ ಇದೆ.












Click it and Unblock the Notifications