ಬ್ರಿಟನ್ನಿಗೆ ಬನ್ನಿ ಮೋದಿಯವರೆ ಎಂದ ಕ್ಯಾಮರೂನ್
ಲಂಡನ್, ಅ 29: ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ತಮ್ಮ ದೇಶಕ್ಕೆ ಬರುವಂತೆ ಮತ್ತೊಮ್ಮೆ ಆಹ್ವಾನ ರವಾನಿಸಿದ್ದಾರೆ.
CNN-IBN ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಕ್ಯಾಮರೂನ್, ಕಾಶ್ಮೀರ ವಿವಾದ ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ್ದು. ಬ್ರಿಟನ್ ಈ ವಿವಾದದಲ್ಲಿ ಮೂಗು ತೂರಿಸುವುದಿಲ್ಲ. ಮೋದಿ ಭೇಟಿಯ ವೇಳೆ ಈ ವಿಚಾರ ಚರ್ಚೆಗೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ಮೋದಿಯವರಿಗೆ ಬ್ರಿಟನ್ ಭೇಟಿ ನೀಡಲು ಮುಕ್ತ ಆಹ್ವಾನ ನೀಡಲಾಗಿದೆ. ಈ ಸಂದರ್ಶನದ ಮೂಲಕ ಮತ್ತೊಮ್ಮೆ ಆಹ್ವಾನ ನೀಡುತ್ತಿದ್ದೇವೆ. ಉಪ ಪ್ರಧಾನಿ ಮತ್ತು ವಿದೇಶಾಂಗ ಕಾರ್ಯದರ್ಶಿ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮೋದಿ ಭೇಟಿಯನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಕ್ಯಾಮರೂನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಮೋದಿ ಪ್ರಧಾನಿಯಾಗಿ ಆಯ್ಕೆಯಾದಾಗ ಅವರನ್ನು ಅಭಿನಂದಿಸಿದ ವಿಶ್ವದ ನಾಯಕರಲ್ಲಿ ಮೊದಲಿಗರಾಗಿದ್ದ ಕ್ಯಾಮರೂನ್, ಪ್ರಧಾನಿಯಾಗಿ ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದೇನೆ. ಮೋದಿ ಯುಕೆಗೆ ಭೇಟಿ ನೀಡಿದಾಗ ಅವರಿಗೆ ಹೃತ್ಪೂರ್ವಕ ಸ್ವಾಗತ ನೀಡಲಾಗುವುದು ಎಂದು ಕ್ಯಾಮರೂನ್ ತಿಳಿಸಿದ್ದಾರೆ.
ಭಾರತ ಮತ್ತು ಬ್ರಿಟನ್ ವಿಶ್ವದ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರಗಳು. ಕೆಲವೊಂದು ಸಮಸ್ಯೆಗಳನ್ನು ಎರಡೂ ದೇಶಗಳು ಎದುರಿಸುತ್ತಿವೆ. ಕೈಗಾರಿಕಾ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯಾಗಬೇಕಾಗಿದೆ ಎಂದು ಕ್ಯಾಮರೂನ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಕಾಶ್ಮೀರ ಸಮಸ್ಯೆಯನ್ನು ದ್ವಿಪಕ್ಷೀಯ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಪರಿಹರಿಸಿ ಕೊಳ್ಳಬೇಕು ಎನ್ನುವುದು ನಮ್ಮ ಆಶಯ. ಆದರೆ ಬ್ರಿಟನ್ ಸರಕಾರ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಪ್ರಧಾನಿ ಕ್ಯಾಮರೂನ್ ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.











Click it and Unblock the Notifications