ಚೀನಾದಲ್ಲೂ ಜನರ ದಂಗೆಯಾ? ಹಣಕ್ಕಾಗಿ ಜನರ ಹಾಹಾಕಾರ
ಬೀಜಿಂಗ್, ಜುಲೈ 12: ಪಾಕಿಸ್ತಾನ, ಶ್ರೀಲಂಕಾ ಮೊದಲಾದ ದೇಶಗಳಿಗೆ ಸಾಲದ ಮೇಲೆ ಸಾಲಗಳನ್ನು ಕೊಟ್ಟು ಶೂಲಕ್ಕೆ ಏರಿಸುವ ಚೀನಾ ವರ್ತನೆ ಜಗಜ್ಜಾಹೀರಾಗಿರುವುದು ಹೌದು. ಹಾಗಂತ ಚೀನಾ ಆರ್ಥಿಕವಾಗಿ ತೀರಾ ಬಲಿಷ್ಠವಾಗಿದೆ ಎನ್ನುವಂಥದ್ದೇನು ಇಲ್ಲ ಎನ್ನುತ್ತವೆ ಹಲವು ವಿಮರ್ಶೆಗಳು. ಚೀನಾದಲ್ಲೂ ಆರ್ಥಿಕ ಪರಿಸ್ಥಿತಿ ಉತ್ತಮ ಇಲ್ಲವಂತೆ. ಇದಕ್ಕೆ ಇಂಬು ಕೊಡುವಂತೆ ಚೀನಾದಲ್ಲಿ ಜನರು ಪ್ರತಿಭಟನೆ ನಡೆಸುತ್ತಿರುವ ಸಂಗತಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಚೀನಾದ ಹೆನಾನ್ ಪ್ರಾಂತ್ಯದ ಝೆಂಗ್‌ಝಾವ್ ನಗರದಲ್ಲಿ ಜನರು ಸೆಂಟ್ರಲ್ ಬ್ಯಾಂಕ್ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಬ್ಯಾಂಕುಗಳಲ್ಲಿ ಹಣ ಸಿಗದ ಕಾರಣ ಈ ಪ್ರಾಂತ್ಯದ ಜನರು ಹಾಹಾಕಾರ ನಡೆಸುತ್ತಿದ್ದಾರೆನ್ನಲಾಗಿದೆ.
ಕಳೆದ ಎರಡು ತಿಂಗಳಿಂದಲೂ ಈ ಪರಿಸ್ಥಿತಿ ಇದೆ. ಬ್ಯಾಂಕುಗಳಲ್ಲಿ ಹಣ ಇಲ್ಲದ ಕಾರಣ ಗ್ರಾಹಕ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದು ಹೆನಾನ್ ಪ್ರಾಂತ್ಯದಲ್ಲಿ ವ್ಯಾಪಕವಾಗಿದೆ. ಅನುಯ್ ಪ್ರಾಂತ್ಯದ ಕೆಲ ನಗರಗಳಲ್ಲೂ ಈ ಪರಿಸ್ಥಿತಿ ಇರುವುದು ತಿಳಿದುಬಂದಿದೆ.
ಹೆನಾನ್ ಸರಕಾರದ ಆರ್ಥಿಕ ವೈಫಲ್ಯ ಮೇಲ್ನೋಟಕ್ಕೆ ಕಾಣುವ ಸಂಗತಿ. ಆದರೆ ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನಾ ಸರಕಾರದ ವೈಫಲ್ಯವೂ ಇದರಲ್ಲಿ ಅಡಗಿದೆ ಎನ್ನಲಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಕ್ಸಿ ಜಿನ್‌ಪಿಂಗ್ ಅಧ್ಯಕ್ಷರಾಗಿ ಪುನರಾಯ್ಕೆಗೆ ಪ್ರಯತ್ನಿಸಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವದ್ದಾಗಿದೆ.
|
ಏಪ್ರಿಲ್‌ನಿಂದಲೂ ಫ್ರೀಜ್ ಅದ ಅಕೌಂಟ್ಸ್
ಹೆನಾನ್ ಪ್ರಾಂತ್ಯದಲ್ಲಿರುವ ನಾಲ್ಕು ಗ್ರಾಮೀಣ ಬ್ಯಾಂಕುಗಳು ತಮ್ಮ ಗ್ರಾಹಕ ಖಾತೆಗಳನ್ನು ನಿರ್ಬಂಧಿಸಿವೆ. ಗ್ರಾಹಕರು ಹಣ ವಿತ್‌ಡ್ರಾ ಮಾಡಿಕೊಳ್ಳಲು ಸಾಧ್ಯವಾಗದೇ ಹೋಗಿದೆ. ಹಣ ಹಿಂಪಡೆಯಲು ಅವಕಾಶ ನಿರಾಕರಿಸಲಾಗಿದ್ದೂ ಹಣವನ್ನು ಖಾತೆಗೆ ಜಮೆ ಮಾಡಲು ಅವಕಾಶ ಕೊಡಲಾಗಿದೆಯಂತೆ.
ಏಪ್ರಿಲ್ ತಿಂಗಳಿಂದಲೂ ಇಲ್ಲಿ ಈ ಪರಿಸ್ಥಿತಿ ಇದೆ. ಹಣ ಖಾಲಿಯಾದ ಮೇಲೆ ಜನರು ಏನು ಮಾಡಿಯಾರು? ಅಂತೆಯೇ, ಹೆನಾನ್ ಪ್ರಾಂತ್ಯದ ರಾಜಧಾನಿ ಝೆಂಗ್‌ಝಾವ್ ನಗರದಲ್ಲಿ ಸಾವಿರಾರು ಬ್ಯಾಂಕ್ ಗ್ರಾಹಕರು ಪೀಪಲ್ಸ್ ಬ್ಯಾಂಕ್ ಆಫ್ ಚೀನಾದ ಕಚೇರಿಯೊಂದರ ಎದುರು ಸೇರಿ ಮೊನ್ನೆ ಭಾನುವಾರ ಪ್ರತಿಭಟನೆ ನಡೆಸಿರುವುದು ತಿಳಿದುಬಂದಿದೆ.

ಪ್ರತಿಭಟನೆಯ ಸುಳಿವು ಪಡೆದಿದ್ದ ಆಡಳಿತ
ಬ್ಯಾಂಕ್ ಗ್ರಾಹಕರು ಪ್ರತಿಭಟನೆ ನಡೆಸುವ ಸುಳಿವು ಮೊದಲೇ ಗ್ರಹಿಸಿದ್ದ ಝೆಂಗ್‌ಝಾವ್ ನಗರದ ಆಡಳಿತ ಕೆಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಕೆಲ ದಿನಗಳ ಹಿಂದಿನಿಂದಲೂ ಕೋವಿಡ್ ನೆಪದಲ್ಲಿ ಜನರ ಓಡಾಟಗಳಿಗೆ ನಿರ್ಬಂಧ ಹೇರಲಾಗಿತ್ತು, ನಿಗಾ ಇರಿಸಲಾಗಿತ್ತು. ಹೀಗಾಗಿ, ಸಾವಿರ ಸಂಖ್ಯೆಯಲ್ಲಿ ಮಾತ್ರ ಜನರು ಪ್ರತಿಭಟನೆಗೆ ಸೇರಲು ಸಾಧ್ಯವಾಯಿತು ಎಂದು ಹೇಳಲಾಗುತ್ತಿದೆ.
ಚೀನಾದ ರಾಷ್ಟ್ರೀಯ ಬಾವುಟಗಳನ್ನು ಇಟ್ಟುಕೊಂಡು, ಘೋಷಣೆಗಳನ್ನು ಕೂಗುತ್ತಾ ಜನರು ಪ್ರತಿಭಟನೆ ನಡೆಸಿದ್ದಾರೆ. ಹೆನಾನ್ ಸರಕಾರದ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಪ್ರತಿಭಟನೆ ನಿಲ್ಲಿಸಲು ಬಂದ ಭದ್ರತಾ ಸಿಬ್ಬಂದಿ ವಿರುದ್ಧ ಜನರು ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯುತ್ತಿರುವ ದೃಶ್ಯ ಇರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದೆ.

ಒಂದೂವರೆ ಬಿಲಿಯನ್ ಡಾಲರ್ ಹಣ
ಚೀನಾದ ಮಾಧ್ಯಮಗಳಲ್ಲೇ ಬಂದಿರುವ ವರದಿಗಳ ಪ್ರಕಾರ ಚೀನಾದಲ್ಲಿ ಫ್ರೀಜ್ ಆಗಿರುವ ಖಾತೆಗಳಲ್ಲಿರುವ ಹಣ 1.5 ಬಿಲಿಯನ್ ಡಾಲರ್ (ಸುಮಾರು 12 ಸಾವಿರ ಕೋಟಿ ರೂಪಾಯಿ) ಎನ್ನಲಾಗಿದೆ.
ಏಪ್ರಿಲ್‌ನಲ್ಲಿ ಮೊದಲು ಫ್ರೀಜ್ ಮಾಡಿದಾಗ ಬ್ಯಾಂಕುಗಳು ಇಂಟರ್ನಲ್ ಸಿಸ್ಟಂ ಅಪ್‌ಗ್ರೇಡ್ ಮಾಡಲಾಗುತ್ತಿರುವುದರಿಂದ ಸ್ವಲ್ಪ ಕಾಲ ಹಣ ವಿತ್‌ಡ್ರಾ ಮಾಡಲು ಆಗುವುದಿಲ್ಲ ಎಂದು ಸಬೂಬು ಹೇಳಿದ್ದವಂತೆ. ಆದರೆ 2-3 ತಿಂಗಳಾದರೂ ಅದೇ ಪರಿಸ್ಥಿತಿ ಮುಂದುವರಿದಿದ್ದರಿಂದ ಜನರು ಪ್ರತಿಭಟನೆಯ ಹಾದಿ ತುಳಿದಿದ್ದಾರೆ.

ಕ್ಸಿ ಜಿನ್‌ಪಿಂಗ್‌ಗೆ ಹಿನ್ನಡೆ
ಈಗ ನಡೆದಿರುವ ಪ್ರತಿಭಟನೆ ಕೇವಲ ಹೆನಾನ್ ಪ್ರಾಂತ್ಯಕ್ಕೆ ಸೀಮಿತವಾದಂತೆ ವರದಿಗಳು ಬಂದಿವೆ. ಆದರೆ, ಬೇರೆ ಪ್ರಾಂತ್ಯಗಳಲ್ಲೂ ಇದೇ ಪರಿಸ್ಥಿತಿ ಇರುವ ಶಂಕೆ ಇದೆ. ಆದರೆ, ಅಲ್ಲೆಲ್ಲಾ ಪ್ರತಿಭಟನೆಗಳು ವ್ಯಕ್ತವಾದಂತಿಲ್ಲ.
ಇದೇ ವೇಳೆ, ಇನ್ನು ಕೆಲವೇ ತಿಂಗಳಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮರು ಆಯ್ಕೆಗೆ ಪ್ರಯತ್ನಿಸಲಿದ್ದಾರೆ. ಸತತ ಮೂರನೇ ಅವಧಿಗೆ ಅಧ್ಯಕ್ಷರಾಗ ಹೊರಟಿರುವ ಜಿನ್‌ಪಿಂಗ್ ಅವರಿಗೆ ಈ ಸಂದರ್ಭದಲ್ಲಿ ಜನರ ಪ್ರತಿಭಟನೆಗಳು ಹಿನ್ನಡೆ ಎನಿಸಬಹುದು.
(ಒನ್ಇಂಡಿಯಾ ಸುದ್ದಿ)












Click it and Unblock the Notifications