ಪಾಕ್ ಮಾಜಿ ಪ್ರಧಾನಿಗೆ ಕೊರೊನಾ, ಒಟ್ಟು ಕೊವಿಡ್‌ಗೆ ಬಲಿಯಾದವರೆಷ್ಟು?
ಇಸ್ಲಾಮಾಬಾದ್, ಜೂನ್ 8: ಜಗತ್ತಿನಾದ್ಯಂತ 71 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿದೆ. ಯೂರೋಪ್ ದೇಶಗಳಲ್ಲಿ ಅಬ್ಬರಿಸಿದ್ದ ಕೊರೊನಾ ಈಗ ಏಷ್ಯಾ ರಾಷ್ಟ್ರಗಳಲ್ಲಿ ಭೀಕರತೆ ಸೃಷ್ಟಿಸಿದೆ.
ಏಷ್ಯಾ ಪೈಕಿ ಭಾರತದಲ್ಲಿ ಅತಿ ಹೆಚ್ಚು ವರದಿಯಾಗಿದೆ. ಭಾರತ ಬಿಟ್ಟರೆ ಇರಾನ್, ಟರ್ಕಿ, ಸೌದಿ ಅರೆಬಿಯಾ ಹಾಗೂ ಪಾಕಿಸ್ತಾನದಲ್ಲಿ ಹೆಚ್ಚು ಸೋಂಕು ವರದಿಯಾಗಿದೆ. ಪಾಕ್ ದೇಶದಲ್ಲಿ ನಿಧಾನವಾಗಿ ಕೊರೊನಾ ಬೇಟೆ ಶುರು ಮಾಡಿದೆ. ಹೊಸ ಕೇಸ್‌ಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
ಲಾಕ್ಡೌನ್: ಭಾರತದಿಂದ ಪಾಕಿಸ್ತಾನಕ್ಕೆ ಹೋದವರೆಷ್ಟು?
ಮತ್ತೊಂದೆಡೆ ಪಾಕಿಸ್ತಾನದ ಮಾಜಿ ಪ್ರಧಾನಿಯೊಬ್ಬರಿಗೆ ಕೊವಿಡ್ ಸೋಂಕು ತಗುಲಿದೆ. ವಿಶ್ವದ ಅತಿ ಹೆಚ್ಚು ಸೋಂಕು ಕಂಡಿರುವ ದೇಶಗಳ ಪಟ್ಟಿಯಲ್ಲೂ ಪಾಕಿಸ್ತಾನ ಮುಂದೆ ಸಾಗುತ್ತಿದೆ. ಅಷ್ಟಕ್ಕೂ, ಪಾಕ್‌ನಲ್ಲಿ ಒಟ್ಟು ಸೋಂಕು ಎಷ್ಟಾಗಿದೆ? ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಮುಂದೆ ಓದಿ....

ಪಾಕ್ ಮಾಜಿ ಪ್ರಧಾನಿಗೆ ಕೊರೊನಾ
ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಶಾಹಿದ್ ಖಾಕಾನ್ ಅಬ್ಬಾಸಿಗೆ ಕೊರೊನಾ ವೈರಸ್ ತಗುಲಿರುವುದು ಸೋಮವಾರ ದೃಢವಾಗಿದೆ. 2017 ರಿಂದ 2018ರವರೆಗೂ ಪಾಕ್ ಪ್ರಧಾನಿಯಾಗಿದ್ದ 61 ವರ್ಷದ ಶಾಹಿದ್ ಖಾಕಾನ್ ಅಬ್ಬಾಸಿಗೆ, ಸೋಂಕಿನ ಲಕ್ಷಣ ಗೋಚರವಾಗುತ್ತಿದ್ದಂತೆ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಒಂದು ಲಕ್ಷ ಕೊರೊನಾ ಕೇಸ್ ದಾಖಲು
ಭಾನುವಾರ ವರದಿ ಬಂದ ಬಳಿಕ ಪಾಕಿಸ್ತಾನದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ (1,03,671) ಗಡಿ ದಾಟಿದೆ. ಭಾನುವಾರ ಪಾಕ್ ದೇಶದಲ್ಲಿ 4,960 ಜನರಿಗೆ ಮಹಾಮಾರಿ ವಕ್ಕರಿಸಿದೆ. ಈ ಮೂಲಕ ಒಂದು ಲಕ್ಷ ಗಡಿದಾಟಿದ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಜಗತ್ತಿನಲ್ಲಿ ಒಂದು ಲಕ್ಷ ಕೊರೊನಾ ಕೇಸ್ ವರದಿ ಮಾಡಿದ 16ನೇ ದೇಶ ಪಾಕಿಸ್ತಾನ. ಏಷ್ಯಾದ ನಾಲ್ಕನೇ ದೇಶವಾಗಿದೆ.
ಪಾಕಿಸ್ತಾನದಲ್ಲಿ ಮಹಿಳಾ ರಾಜಕಾರಣಿ ಕೊರೊನಾ ವೈರಸ್ನಿಂದ ಸಾವು

ಪಾಕ್ ದೇಶದಲ್ಲಿ 2000 ಸಾವು
ಇದುವರೆಗೂ ಪಾಕಿಸ್ತಾನದಲ್ಲಿ 2067 ಮಂದಿ ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ವರದಿ ಲಭ್ಯವಾಗಿದೆ. ಭಾನುವಾರ 65 ಜನರು ಸಾವನ್ನಪ್ಪಿದ್ದಾರೆ. ಒಂದು ಲಕ್ಷ ಸೋಂಕಿತರ ಪೈಕಿ 34,355 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೂ 7,05,833 ಪರೀಕ್ಷೆ ಮಾಡಲಾಗಿದೆ. ಕಳೆದ 24 ಗಂಟೆಯಲ್ಲಿ 22,650 ಕೊರೊನಾ ಪರೀಕ್ಷೆ ಮಾಡಲಾಗಿದೆ.

ರಾಜ್ಯವಾರು ನೋಡುವುದಾದರೆ
ಪಾಕಿಸ್ತಾನದಲ್ಲಿ ವರದಿಯಾದ ಒಟ್ಟು ಕೊವಿಡ್ ಪ್ರಕರಣಗಳ ಪೈಕಿ ಪಂಜಾಬ್ 38,903 ಕೇಸ್, ಸಿಂಧ್ 38,108 ಮಂದಿಗೆ ಸೋಂಕು, ಖೈಬರ್-ಪಖ್ತುನ್ಖ್ವಾ 13,487 ಪ್ರಕರಣ, ಬಲೂಚಿಸ್ತಾನ್ 6,516 ಕೇಸ್, ಇಸ್ಲಾಮಾಬಾದ್ 5,329 ಜನರಿಗೆ ಸೋಂಕು, ಗಿಲ್ಗಿಟ್-ಬಾಲ್ಟಿಸ್ತಾನ್ 932 ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ 396 ಪ್ರಕರಣಗಳನ್ನು ದಾಖಲಿಸಿದೆ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ವರದಿ ಮಾಡಿದೆ.