Pak Independence Day: ಪಾಕಿಸ್ತಾನದಲ್ಲಿ ಒಗ್ಗಟ್ಟಿಗೆ ಕರೆ ನೀಡಿದ ಅಧ್ಯಕ್ಷ!
ಇಸ್ಲಾಮಾಬಾದ್: ಸಂಸತ್ ವಿಸರ್ಜಿಸಿ ಇನ್ನೇನು ಚುನಾವಣೆಗೆ ಸಜ್ಜಾಗಿರುವ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ನೆರವೇರಿದೆ. ಪಾಕಿಸ್ತಾನ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಹಿನ್ನೆಲೆಯಲ್ಲಿ ಅಲ್ಲಿನ ಅಧ್ಯಕ್ಷರು ಶಾಂತಿ ಸಂದೇಶ ರವಾನಿಸಿದ್ದು, ಒಗ್ಗಟ್ಟಿನ ಮಂತ್ರವನ್ನು ಜಪಿಸಿದ್ದಾರೆ. ಹಾಗಾದರೆ ಪಾಕ್ ರಾಷ್ಟ್ರಪತಿಯ ಮನವಿ ಏನಾಗಿತ್ತು? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ಜಗತ್ತು ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದ್ದರೆ ಪಾಕಿಸ್ತಾನ ಮಾತ್ರ ಉಲ್ಟಾ, ಉಗ್ರರ ಜೊತೆಗೆ ಕೈಜೋಡಿಸಿ & ಅಲ್ಲಿನ ಸೇನೆ ಕೈಗೆ ಪರೋಕ್ಷವಾಗಿ ಅಧಿಕಾರ ಕೊಟ್ಟಿರುವ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಾನು ಉದ್ಧಾರ ಆಗುತ್ತಿಲ್ಲ, ತನ್ನ ಜೊತೆಗಿರುವ ದೇಶವನ್ನು ಉದ್ಧಾರ ಆಗಲು ಬಿಡಲ್ಲ. ಅದ್ರಲ್ಲೂ ಪಾಕ್ ರಾಜಕೀಯ ದ್ವೇಷ ಎಲ್ಲೆಡೆ ಚರ್ಚೆಯಾಗಿದೆ. ಹೀಗಾಗಿ ಪಾಕಿಸ್ತಾನದ ಅಧ್ಯಕ್ಷರು ಮಹತ್ವದ ಹೇಳಿಕೆ ನೀಡಿದ್ದು, ದೇಶದ ರಾಜಕಾರಣಿಗಳು ಭಿನ್ನಾಭಿಪ್ರಾಯ ಮತ್ತು ಹಗೆತನ ಬದಿಗಿಡಬೇಕು ಎಂದಿದ್ದಾರೆ. ಈ ಮೂಲಕ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಪರೋಕ್ಷವಾಗಿ ಪಾಕ್ ರಾಜಕಾರಣಿಗಳಿಗೆ ಬುದ್ಧಿ ಮಾತು ಹೇಳಿದ್ದಾರೆ.

ಚೀನಾ, ಸೌದಿ, ಟರ್ಕಿಗೆ ಧನ್ಯವಾದ!
ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿಇಸ್ಲಾಮಾಬಾದ್‌ನ ಜಿನ್ಹಾ ಕನ್ವೆನ್ಷನ್ ಸೆಂಟರ್‌ನಲ್ಲಿ ಧ್ವಜಾರೋಹಣ ನೆರವೇರಿಸಿ ಅಧ್ಯಕ್ಷ ಆರಿಫ್ ಅಲ್ವಿ ಮಾತನಾಡಿದರು. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ನೆರವು ನೀಡಿದ್ದಕ್ಕಾಗಿ ಚೀನಾ, ಸೌದಿ ಅರೇಬಿಯಾ, ಅರಬ್, ಇರಾನ್ & ಟರ್ಕಿಗೆ ಧನ್ಯವಾದ ಸಲ್ಲಿಸಿದರು ಅಧ್ಯಕ್ಷ ಅಲ್ವಿ. ಪಾಕಿಸ್ತಾನ ಕೆಲವೇ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಸಾಲಿಗೆ ಸೇರಲಿದೆ, ಆರ್ಥಿಕ ಸಂಕಷ್ಟದಿಂದ ಹೊರಗೆ ಬರಲಿದೆ ಎಂದು ಅಭಿಪ್ರಾಯಪಟ್ಟು. ಈ ವೇಳೆ ವಿವಿಧ ಕ್ಷೇತ್ರಗಳ ಗಣ್ಯರು ಹಾಜರಿದ್ದರು.
2.70 ಕೋಟಿ ಮಕ್ಕಳಿಗೆ ಶಿಕ್ಷಣವಿಲ್ಲ
ಇದೇ ವೇಳೆ ಪಾಕ್ ರಾಜಕಾರಣಿಗಳಿಗೆ ಪಾಕಿಸ್ತಾನ ರಾಷ್ಟ್ರಪತಿ ಆರಿಫ್ ಅಲ್ವಿ ಬುದ್ಧಿಮಾತು ಹೇಳಿದ್ದು, ಕ್ಷಮಿಸುವ ಗುಣ ಕಲಿಯಿರಿ ಎಂದು ಸಲಹೆ ನೀಡಿದ್ದಾರೆ. ಒಗ್ಗಟ್ಟಿನಿಂದ ಇರಲು ದೇಶದ ನಾಯಕರಲ್ಲಿ ನಾನು ಮನವಿ ಮಾಡುತ್ತೇನೆ. ಹಾಗೇ ಪಾಕಿಸ್ತಾನದಲ್ಲಿ 2.70 ಕೋಟಿ ಮಕ್ಕಳು ಶಾಲೆಯಿಂದ ಹೊರಬಿದ್ದಿದ್ದಾರೆ. ಶ್ರೀಮಂತರು ಮುಂದೆ ಬಂದು ಆ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲಿ. ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಕೂಡ ಮುಖ್ಯವಾಗಿ ಎಂದಿದ್ದಾರೆ. ಈ ಮೂಲಕ ಪಾಕ್‌ನಲ್ಲಿ ಮಕ್ಕಳ ಪರಿಸ್ಥಿತಿಯನ್ನ ಸ್ವತಃ ಪಾಕಿಸ್ತಾನದ ರಾಷ್ಟ್ರಪತಿಯೇ ಬಿಡಿಸಿಟ್ಟಿದ್ದಾರೆ.

ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಬ್ರೇಕ್?
ಉಗ್ರರ ಭೀತಿಯಲ್ಲಿ ಪಾಕಿಸ್ತಾನದ ಜನರು ನಲುಗಿ ಹೋಗಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಭಯೋತ್ಪಾದಕರು ನಡೆಸಿದ ದಾಳಿಗೆ 50ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಈ ಕಾರಣ ಮುಂದಿಟ್ಟುಕೊಂಡು ಪಾಕ್ ವಿರುದ್ಧ ಜಗತ್ತು ವಾಗ್ದಾಳಿ ನಡೆಸುತ್ತಿದೆ. ಈಗ ಪಾಕ್ ಅಧ್ಯಕ್ಷ ಕೂಡ ಭಯೋತ್ಪಾದನೆ ಬಗ್ಗೆ ಮಾತನಾಡಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ 1 ಲಕ್ಷಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕಿಸ್ತಾನ ಬದ್ಧತೆ ಮುಂದುವರೆಸುತ್ತದೆ ಎಂದಿದ್ದಾರೆ. ಆದರೆ ಪಾಕಿಸ್ತಾನ ಈ ವಿಚಾರದಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂಬ ಆರೋಪವಿದೆ.
ಹೊಸ ಪ್ರಧಾನಿ ಅಧಿಕಾರ ಸ್ವೀಕಾರ
ಒಂದು ಕಡೆ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ, ಮತ್ತೊಂದ್ಕಡೆ ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಕಾಕರ್ ಅಧಿಕಾರ ಸ್ವೀಕರಿಸಿದ್ದಾರೆ. ಬಲೂಚಿಸ್ತಾನದ ಪುಶ್ತುನ್ ಜನಾಂಗದ ನಾಯಕ ಅನ್ವರುಲ್ ಹಖ್ ಕಾಕರ್ ಪಾಕಿಸ್ತಾನ ಹಂಗಾಮಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವಧಿಗೆ ಮುನ್ನ ಪಾಕಿಸ್ತಾನ ಸಂಸತ್ ವಿಸರ್ಜನೆಯಾಗಿದ್ದ ಹಿನ್ನೆಲೆ ಅನ್ವರುಲ್ ಹಖ್ ಕಾಕರ್ ಪಾಕಿಸ್ತಾನ ಹಂಗಾಮಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.
ಇನ್ನು ಪಾಕ್‌ನಲ್ಲಿ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬರುವ ತನಕ ಹಂಗಾಮಿ ಪ್ರಧಾನಿಯಾಗಿ ಕಾಕರ್ ಆಡಳಿತ ನಡೆಸಲಿದ್ದಾರೆ. ಪಾಕಿಸ್ತಾನ ನಿರ್ಗಮಿತ ಪ್ರಧಾನಿ ಶೆಹಬಾಜ್ ಷರೀಫ್ ಸೇರಿ ಹಲವರು ಈ ವೇಳೆ ಹಾಜರಿದ್ದರು. ಪಾಕಿಸ್ತಾನದ ಸಂಸತ್ ವಿಸರ್ಜನೆಯಾದ ಹಿನ್ನೆಲೆ 90 ದಿನಗಳ ಒಳಗಾಗಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಆದರೆ ಮತ್ತೊಂದು ಕಡೆ ಇನ್ನೂ 6 ತಿಂಗಳ ಕಾಲ ಚುನಾವಣೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.












Click it and Unblock the Notifications