ನಮ್ಮವರ ಪ್ರತಿ ಹನಿ ರಕ್ತಕ್ಕೂ ಸೇಡು ತೀರಿಸಿಕೊಳ್ಳುತ್ತೇವೆ: ಭಾರತಕ್ಕೆ ಸವಾಲೆಸೆದ ಪಾಕ್ ಪ್ರಧಾನಿ
ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ನಡೆಸಿ ತಕ್ಕ ಉತ್ತರ ನೀಡಿದೆ. ಈ ಆಪರೇಷನ್ ಸಿಂಧೂರ್‌ಗೆ ಪಾಕ್ ಪತರಗುಟ್ಟಿದೆ. ಭಾರತವು ಉಗ್ರ ನೆಲೆಗಳ ಮೇಲೆ ನಡೆಸಿದ ದಾಳಿಯಲ್ಲಿ ರಕ್ತಾಬೀಜಾಸುರರ ಹುಟ್ಟಡಗಿಸಿದೆ. ಇದಕ್ಕೆ ಪ್ರತಿಯಾಗಿ ಪಾಕ್ ಕೂಡ ಭಾರತದ ಮೇಲೆ ಸವಾಲೆಸೆದಿದೆ. ಈ ಹುತಾತ್ಮರ ಪ್ರತಿ ಹನಿ ರಕ್ತಕ್ಕೂ ನಾವು ಸೇಡು ತೀರಿಸಿಕೊಳ್ಳುತ್ತೇವೆ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾರತಕ್ಕೆ ಸೂಕ್ತ ಉತ್ತರ ನೀಡುವುದು ಹೇಗೆಂದು ಪಾಕಿಸ್ತಾನಕ್ಕೆ ತಿಳಿದಿದೆ. ಇಡೀ ರಾಷ್ಟ್ರವು ತನ್ನ ಕೆಚ್ಚೆದೆಯ ಸಶಸ್ತ್ರ ಪಡೆಗಳಿಗೆ ವಂದಿಸುತ್ತದೆ ಎಂದು ಶರೀಫ್ ಬೀಗಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಂಜಾಬ್ ಪ್ರಾಂತ್ಯದಲ್ಲಿನ ಭಯೋತ್ಪಾದಕ ಗುರಿಗಳ ಮೇಲೆ ಭಾರತ ನಡೆಸಿದ ಕ್ಷಿಪಣಿ ದಾಳಿಯನ್ನು ಯುದ್ಧದ ಕೃತ್ಯ ಎಂದು ಶೆಹಬಾಜ್ ಷರೀಫ್ ಕರೆದಿದ್ದಾರೆ. ಅಲ್ಲದೆ ಭಾರತಕ್ಕೆ "ಸೂಕ್ತ ಪ್ರತ್ಯುತ್ತರ" ನೀಡುವ ಹಕ್ಕು ತಮ್ಮ ದೇಶಕ್ಕೆ ಇದೆ ಎಂದು ಹೇಳಿದ್ದಾರೆ.

ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ
ಪಾಕಿಸ್ತಾನ ಸೇನೆಯ ಕದನ ವಿರಾಮ ಉಲ್ಲಂಘನೆಯನ್ನು ಭಾರತೀಯ ಸೇನೆಯು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪಾಕಿಸ್ತಾನ ಸೇನೆಯ ಕಾರ್ಯಾಚರಣೆಗಳ ಕುರಿತು ಭಾರತೀಯ ಸೇನಾ ಮುಖ್ಯಸ್ಥರು ಸ್ಥಳೀಯ ರಚನೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ನಿಯಂತ್ರಣ ರೇಖೆಯುದ್ದಕ್ಕೂ ಭಾರತೀಯ ನಾಗರಿಕರನ್ನು ಗುರಿಯಾಗಿಸಲು ಪಾಕಿಸ್ತಾನ ಸೇನೆಯು ಯತ್ನಿಸುತ್ತಿದೆ. ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಲು ಕಾರ್ಯಾಚರಣೆಯ ಸ್ವಾತಂತ್ರ್ಯ ನೀಡಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಕಿಸ್ತಾನ ಮತ್ತು ನೇಪಾಳಕ್ಕೆ ಹೊಂದಿಕೊಂಡಿರುವ ಗಡಿ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳೊಂದಿಗೆ ಸಭೆ ನಡೆಸಿದ್ದಾರೆ. ಅಗತ್ಯ ಸರಕುಗಳು ಮತ್ತು ಸೇವೆಗಳ ಲಭ್ಯತೆಯನ್ನು ಕಾಯ್ದುಕೊಳ್ಳಲು ಮತ್ತು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಎಸ್‌ಡಿಆರ್‌ಎಫ್, ನಾಗರಿಕ ರಕ್ಷಣಾ, ಗೃಹರಕ್ಷಕ ದಳ ಮತ್ತು ಎನ್‌ಸಿಸಿಯಂತಹ ಪರಿಹಾರ ಮತ್ತು ರಕ್ಷಣಾ ಪಡೆಗಳನ್ನು ಸನ್ನದ್ಧವಾಗಿರಿಸಲು ರಾಜ್ಯಗಳಿಗೆ ಸೂಚಿಸಿದ್ದಾರೆ.

ಸ್ಥಳ ತೊರೆದ ಗಡಿ ಗ್ರಾಮಸ್ಥರು
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಕೆಲವು ಗಡಿ ಗ್ರಾಮಗಳ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಅಮೃತಸರ ಮತ್ತು ತರಣ್ ಗಡಿ ಜಿಲ್ಲೆಗಳಲ್ಲಿ ಪಾಕಿಸ್ತಾನದೊಂದಿಗಿನ ಅಂತರರಾಷ್ಟ್ರೀಯ ಗಡಿ ಬಳಿಯ ಇತರ ಗ್ರಾಮಸ್ಥರು ಯುದ್ಧಭೀತಿಯಲ್ಲಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಇದರಲ್ಲಿ ಜೈಶ್-ಎ-ಮೊಹಮ್ಮದ್ ಭದ್ರಕೋಟೆಯಾದ ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ನೆಲೆ ಉಡೀಸ್ ಆಗಿವೆ.
ಈ ದಾಳಿ ಬೆನ್ನಲ್ಲೇ ಪಾಕ್ ಕೂಡ ಗಡಿಯಲ್ಲಿ ಬಾಲ ಬಿಚ್ಚಿದ್ದು, ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಮೃತಸರ ಮತ್ತು ಬಟಾಲಾದ ಹಲವಾರು ನಿವಾಸಿಗಳು ಬೇಳೆಕಾಳುಗಳು, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಸಕ್ಕರೆ ಮತ್ತು ಉಪ್ಪಿನಂತಹ ದಿನಸಿ ವಸ್ತುಗಳನ್ನು ಖರೀದಿಸಲು ಕೂಡ ಭಯಭೀತರಾಗಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications