ಭಾರತಕ್ಕೆ ತೆರಳುವ ವಾಯುಮಾರ್ಗ ಮುಚ್ಚಿಲ್ಲ, ವರಸೆ ಬದಲಿಸಿದ ಪಾಕಿಸ್ತಾನ
ಇಸ್ಲಾಮಾಬಾದ್, ಆಗಸ್ಟ್ 29: "ಭಾರತ ಮತ್ತು ಪಾಕಿಸ್ತಾನದ ನಡುವಿನ ವಾಯುಮಾರ್ಗವನ್ನು ಮುಚ್ಚುವ ಬಗ್ಗೆ ಪಾಕಿಸ್ತಾನ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಪಾಕ್ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಪಾಕ್ ಸಚಿವ ಫವಾದ್ ಹುಸೇನ್ ಟ್ವೀಟ್ ಮಾಡಿ, "ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ವಾಯುಮಾರ್ಗಗಳನ್ನೂ ಮುಚ್ಚುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದಿದ್ದರು. ಆದರೆ ಇದೀಗ ವರಸೆ ಬದಲಿಸಿರುವ ಪಾಕಿಸ್ತಾನ ಈ ಬಗ್ಗೆ ಪ್ರಧಾನಿ ಇಮ್ರಾನ್ ಖಾನ್ ಅವರ ನಿರ್ಣಯವೇ ಅಂತಿಮ ಎಂದಿದೆ.
ಒಳನುಗ್ಗಲಿದ್ದಾರೆ ಪಾಕಿಸ್ತಾನಿ ಕಮಾಂಡೋಗಳು: ಗುಜರಾತ್ನಲ್ಲಿ ಹೈಅಲರ್ಟ್
ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇವಲ ವಾಯುಮಾರ್ಗ ಮಾತ್ರವಲ್ಲದೆ, ಭಾರತದಿಂದ ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನಕ್ಕೆ ತೆರಳುವ ಭೂ ಮಾರ್ಗವನ್ನೂ ಮುಚ್ಚುವ ಬಗ್ಗೆ ಇಮ್ರಾನ ಖಾನ್ ಯೋಚಿಸುತ್ತಿದ್ದಾರೆ ಎಂದು ಹುಸೇನ್ ಟ್ವೀಟ್ ಮಾಡಿದ್ದರು.
ಆದರೆ ಇದೀಗ ಪಾಕ್ ವಿದೇಶಾಂಗ ಸಚಿವ ಖುರೇಶಿ, ಈ ಬಗ್ಗೆ ಇದುವರೆಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಈ ಕುರಿತು ಪ್ರಧಾನಿ ಇಮ್ರಾನ್ ಖಾನ್ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಮದಿದ್ದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಆಗಸ್ಟ್ 5 ರಂದು ಭಾರತ ರದ್ದುಗೊಳಿಸಿದೆ. ಇದರಿಂದ ರೊಚ್ಚಿಗೆದ್ದಿರುವ ಪಾಕಿಸ್ತಾನ, ಭಾರತದ ವಿರುದ್ಧ ಒಂದಿಲ್ಲೊಂದು ವಿಷಯಕ್ಕಾಗಿ ಕಿತ್ತಾಟ ನಡೆಸುತ್ತಿದೆ.
ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ ಪಾಕಿಸ್ತಾನ
ಬುಧವಾರ ಮಾತನಾಡಿದ್ದ ಪಾಕ್ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್, "ಭಾರತ ಮತ್ತು ಪಾಕಿಸ್ತಾನದ ನಡುವೆ ಅಕ್ಟೋಬರ್ ನಲ್ಲಿ ಪೂರ್ಣ ಪ್ರಮಾಣದ ಯುದ್ಧ ನಡೆಯಲಿದೆ" ಎಂದಿದ್ದಾರೆ.