ಕೋರ್ಟ್ ಸೂಚನೆ ಮೇರೆಗೆ ಟಿಕ್ ಟಾಕ್ ಆ್ಯಪ್ ನಿರ್ಬಂಧಿಸಿದ ಪಾಕಿಸ್ತಾನ
ಇಸ್ಲಾಮಾಬಾದ್, ಮಾರ್ಚ್.11: ಪಾಕಿಸ್ತಾನ ಕೋರ್ಟ್ ಆದೇಶದ ಬೆನ್ನಲ್ಲೇ ಜನಪ್ರಿಯ ಸೋಷಿಯಲ್ ಮೀಡಿಯಾ ಆ್ಯಪ್ ಟಿಕ್‌ಟಾಕ್ ಅನ್ನು ನಿರ್ಬಂಧಿಸಲಾಗುವುದು ಎಂದು ದೇಶದ ಟೆಲಿಕಾಂ ನಿಯಂತ್ರಕದ ವಕ್ತಾರ ಖುರ್ರಮ್ ಮೆಹ್ರಾನ್ ತಿಳಿಸಿದ್ದಾರೆ.
ಟಿಕ್-ಟಾಕ್ ಅಪ್ಲಿಕೇಷನ್ ಬಳಕೆಯನ್ನು ನಿರ್ಬಂಧಿಸುವಂತೆ ಪಾಕಿಸ್ತಾನ ಟೆಲಿಕಾಂ ಪ್ರಾಧಿಕಾರಕ್ಕೆ ಕೋರ್ಟ್ ಸೂಚನೆ ನೀಡಿತ್ತು. ಕೋರ್ಟ್ ಸೂಚನೆಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಖುರ್ರಮ್ ಮೆಹ್ರಾನ್ ಹೇಳಿದ್ದಾರೆ.
ಈ ಸೋಷಿಯಲ್ ಮೀಡಿಯಾ ಅಪ್ಲಿಕೇಷನ್ ಅಸಭ್ಯ ವಿಷಯವನ್ನು ಹರಡುತ್ತಿದೆ ಎಂದು ಖಾಸಗಿ ದೂರು ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ವಾಯುವ್ಯ ನಗರ ಪೇಶಾವರದ ಹೈಕೋರ್ಟ್ ಟಿಕ್ ಟಾಕ್ ನಿಷೇಧಕ್ಕೆ ಆದೇಶ ನೀಡುವುದಾಗಿ ಹೇಳಿದೆ ಎಂದು ಪಿಟಿಎ ಪ್ರತಿನಿಧಿಸಿದ ವಕೀಲ ಜೆಹಂಜೆಬ್ ಮೆಹ್ಸೂದ್ ಮಾಹಿತಿ ನೀಡಿದ್ದಾರೆ.

ಮೊದಲೇ ಟಿಕ್-ಟಾಕ್ ಅಪ್ಲಿಕೇಷನ್ ನಿರ್ಬಂಧ:
ದಕ್ಷಿಣ ಏಷ್ಯಾದ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರ ಪಾಕಿಸ್ತಾನದಲ್ಲಿ ಈ ಹಿಂದೆ ಅಕ್ಟೋಬರ್‌ನಲ್ಲಿ ಟಿಕ್ ಟಾಕ್ ಅಪ್ಲಿಕೇಶನ್ ಅನ್ನು ನಿಷೇಧಿಸಲಾಗಿತ್ತು. ಆದರೆ ಅದೇ ಕಂಪನಿಯು "ಅಶ್ಲೀಲತೆ ಮತ್ತು ಅನೈತಿಕತೆಯನ್ನು" ಹರಡುವ ಎಲ್ಲಾ ಖಾತೆಗಳನ್ನು ನಿರ್ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದ ನಂತರ 10 ದಿನಗಳಲ್ಲಿ ಟಿಕ್ ಟಾಕ್ ಮರುಬಳಕೆಗೆ ಅವಕಾಶ ನೀಡಲಾಗಿತ್ತು. ಪಾಕಿಸ್ತಾನದಲ್ಲಿ ವಾಟ್ಸಾಪ್ ಮತ್ತು ಫೇಸ್‌ಬುಕ್‌ನ ಹೊರತಾಗಿ ಅತಿಹೆಚ್ಚು ಡೌನ್‌ಲೋಡ್ ಮಾಡಲಾಗಿರುವ ಅಪ್ಲಿಕೇಶನ್‌ಗಳಲ್ಲಿ ಟಿಕ್‌ಟಾಕ್ ಒಂದಾಗಿದೆ.












Click it and Unblock the Notifications