ಭ್ರಷ್ಟಾಚಾರ ಆರೋಪಿ ಮಾಜಿ ಪ್ರಧಾನಿ ಅಕ್ಟೋಬರ್ 21ಕ್ಕೆ ದೇಶಕ್ಕೆ ವಾಪಸ್
ರಾಜಕಾರಣಿಗಳು ಅಂದ್ರೆ ಭ್ರಷ್ಟಾಚಾರ ಆರೋಪ ಬಂದೇ ಬರುತ್ತೆ. ಆದ್ರೆ ಅದೊಂದು ದೇಶ ಮಾತ್ರ ಭ್ರಷ್ಟರ ಕೂಪದಲ್ಲೇ ಮುಳುಗಿ ಹೋಗಿದೆ. ಇಂಥ ದೇಶದಲ್ಲಿ ಭ್ರಷ್ಟಾಚಾರ ಆರೋಪ ಹೊತ್ತು ಮಾಜಿ ಪ್ರಧಾನಿಗಳು ಜೈಲಿಗೆ ಹೋಗೋದು, ದೇಶ ಬಿಟ್ಟು ಓಡಿ ಹೋಗುವುದೆಲ್ಲಾ ಮಾಮೂಲು. ಹೀಗೆ ಭ್ರಷ್ಟಾಚಾರದ ಆರೋಪದಡಿ ಶಿಕ್ಷೆಗೆ ಗುರಿಯಾಗಿ, ದೇಶವನ್ನೇ ಬಿಟ್ಟು ಎಸ್ಕೇಪ್ ಆಗಿದ್ದ ಮಾಜಿ ಪ್ರಧಾನಿ ದೇಶಕ್ಕೆ ವಾಪಸ್ ಆಗ್ತಿದ್ದಾರೆ.
ಅಂದಹಾಗೆ ಭಾರತದ ಪಕ್ಕದಲ್ಲಿ ಒಂದು ದೇಶವಿದೆ, ಸದಾ ಭಾರತದ ಜೊತೆ ಕಿರಿಕ್ ಮಾಡಿ ಜಗಳ ತೆಗೆಯುತ್ತದೆ. ಅಲ್ಲದೆ ಭಾರತದ ನೆಮ್ಮದಿ ಕೆಡಿಸಿ, ಭಯೋತ್ಪಾದಕರ ತವರು ಮನೆ ಅಂತಾ ಕರೆಸಿಕೊಳ್ಳುತ್ತದೆ. ಈ ದೇಶದಲ್ಲಿ ಭ್ರಷ್ಟ ರಾಜಕಾರಣಿಗಳು ಕೂಡ ನೆಮ್ಮದಿ ಹಾಗೂ ಸುಖವಾಗಿ ಜೀವನ ಮಾಡಬಹದು. ಈ ಮಾತು ಮತ್ತೆ ಮತ್ತೆ ಸಾಬೀತಾಗಿದ್ದು, ಈಗ ಮತ್ತೆ ಅದೇ ಪರಿಸ್ಥಿತಿ ಸೃಷ್ಟಿಯಾಗಿದೆ. ನಾವು ಯಾವ ದೇಶದ ಬಗ್ಗೆ ಹೇಳ್ತಾ ಇದ್ದೀವಿ ಅನ್ನೋದು ನಿಮಗೆ ಗೊತ್ತಾಗಿರಬಹುದು ಅಲ್ವಾ? ಹಾಗಾದರೆ ಆ ದೇಶದಲ್ಲಿ ಭ್ರಷ್ಟರು ಎಷ್ಟು ಸುಖವಾಗಿ ಇದ್ದಾರೆ ತಿಳಿಯೋಣ ಬನ್ನಿ.

ಅಂದು ಭ್ರಷ್ಟಾಚಾರ ಆರೋಪಿ, ಇಂದು?
ಪನಾಮಾ ಪೇಪರ್ಸ್ ಪ್ರಕರಣದಲ್ಲಿ ದೇಶ ಬಿಟ್ಟು ಹೋಗಿದ್ದ ಪಾಕಿಸ್ತಾನ ಮಾಜಿ ಪಿಎಂ ನವಾಜ್ ಷರೀಫ್ ವಾಪಸ್ ಪಾಕಿಸ್ತಾನಕ್ಕೆ ಬರ್ತಿದ್ದಾರೆ. ಲಂಡನ್‌ನಲ್ಲಿ ಇರುವ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಅಕ್ಟೋಬರ್ 21ರಂದು ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಲಂಡನ್‌ನಲ್ಲಿರುವ ಶೆಹಬಾಜ್ ಷರೀಫ್ ಘೋಷಿಸಿದ್ದಾರೆ. ಶೆಹಬಾಜ್ ಷರೀಫ್ & ನವಾಜ್ ಷರೀಫ್ ಸಹೋದರರು ಹೌದು. ಹೀಗೆ ನವಾಜ್ ಷರೀಫ್‌ಗೆ ಗ್ರ್ಯಾಂಡ್ ವೆಲ್‌ಕಂ ಹೇಳಿ, ಬರಮಾಡಿಕೊಳ್ಳಲು ವೇದಿಕೆ ಕೂಡ ಸಿದ್ಧವಾಗಿದೆ. ಇದು ಪಾಕಿಸ್ತಾನದ ಪರಿಸ್ಥಿತಿ & ಭ್ರಷ್ಟ ವ್ಯವಸ್ಥೆಯನ್ನು ಇಡೀ ಜಗತ್ತಿಗೆ ತೋರಿಸಿದಂತಿದೆ.
ವಾಪಸ್ ಬಂದರೂ ಉಪಯೋಗ ಇಲ್ಲ
ಸದಾ ಭಾರತದ ವಿರುದ್ಧ ದ್ವೇಷ ಕಾರುವ ಪಾಕಿಸ್ತಾನದಲ್ಲಿ ಭ್ರಷ್ಟರಿಗೆ ರಾಜ ಮರ್ಯಾದೆ ಇದೆ. ಅದ್ರಲ್ಲೂ ಪಾಕ್ ರಾಜಕಾರಣಿಗಳು ಅದೆಷ್ಟು ಭ್ರಷ್ಟರು ಅಂದರೆ, ಪಾಕ್‌ನಲ್ಲಿ ಬಹುತೇಕ ಮಾಜಿ ಪ್ರಧಾನಿಗಳಿಗೆ ಜೈಲಿನ ದರ್ಶನ ಆಗಿದೆ. ನವಾಜ್ ಶರೀಫ್ ಕೂಡ ಪಾಕ್‌ನಲ್ಲಿ ಜೈಲೂಟ ತಿಂದು, ಬೇರೆ ದೇಶಕ್ಕೆ ಎಸ್ಕೇಪ್ ಆಗಿದ್ದರು. ಪನಾಮಾ ಪೇಪರ್ಸ್ ಹಗರಣ ಹಿನ್ನೆಲೆಯಲ್ಲಿ 2019ರಿಂದ ಲಂಡನ್‌ನಲ್ಲೇ ಇರುವ ಮಾಜಿ ಪ್ರಧಾನಿ ನವಾಜ್, ಪಾಕ್‌ಗೆ ಮರಳಿದರೂ ರಾಜಕೀಯ ಪಕ್ಷಗಳ ನೇತೃತ್ವ ವಹಿಸಲು ಆಗುವುದಿಲ್ಲ.

ನವಾಜ್ ಜೈಲಿಗೆ ಹೋಗಿದ್ದು ಏಕೆ?
ಇಮ್ರಾನ್ ಅಧಿಕಾರಕ್ಕೆ ಬರುತ್ತಿದ್ದಂತೆ ನವಾಜ್ ಷರೀಫ್‌ಗೆ ಜೈಲೂಟ ಪಕ್ಕಾ ಆಗಿತ್ತು. 71 ವರ್ಷ ವಯಸ್ಸಿನ ನವಾಜ್ ಷರೀಫ್ 2018ರಲ್ಲಿ ಪಾಕಿಸ್ತಾನದಲ್ಲಿ 2 ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಜೈಲು ಸೇರುತ್ತಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಾ ಹೇಳಿದ್ದರು. ಲಾಹೋರ್ ಹೈಕೋರ್ಟ್ ಅನುಮತಿ ಪಡೆದು, 2019ರಿಂದ ಚಿಕಿತ್ಸೆಗಾಗಿ ಲಂಡನ್‌ನಲ್ಲಿ ವಾಸ ಮಾಡ್ತಿದ್ದೀನಿ ಅಂತಾ ನವಾಜ್ ಷರೀಫ್ ಹೇಳಿದ್ದರು. ಆದರೆ ಈಗ ದಿಢೀರ್ ಅವರ ಆರೋಗ್ಯ ಸುಧಾರಿಸಿದೆ. ಹೀಗಾಗಿ ಪಾಕಿಸ್ತಾನಕ್ಕೆ ವಾಪಸ್ ಬರಲು ಸಿದ್ಧರಾಗಿದ್ದಾರೆ.
ಈ ಬೆಳವಣಿಗೆ ನೋಡಿ ಹೇಳುವುದಾದ್ರೆ ಪಾಕಿಸ್ತಾನ ಬದಲಾಗಲ್ಲ, ಪಾಕಿಸ್ತಾನದ ರಾಜಕೀಯ ಪರಿಸ್ಥಿತಿ ಕೂಡ ಬದಲಾಗಲ್ಲ ಅನ್ನೋದು ಪಕ್ಕಾ ಆಗಿದೆ. ಆದ್ರೆ ನವಾಜ್ ಷರೀಫ್ ವಾಪಸ್ ಪಾಕಿಸ್ತಾನಕ್ಕೆ ಬಂದ ನಂತರ ಇಮ್ರಾನ್ ಖಾನ್ ಬೆಂಬಲಿಗರು ಗಲಾಟೆ ಶುರು ಮಾಡುತ್ತಾರೆ ಎಂಬ ಆತಂಕ ಕೂಡ ಮನೆ ಮಾಡಿದೆ. ಹೀಗಾಗಿ ಪಾಕಿಸ್ತಾನ ನವಾಜ್ ಷರೀಫ್ ರೀ ಎಂಟ್ರಿ ಜೊತೆ ಹಿಂಸೆ ನಿಯಂತ್ರಣಕ್ಕೂ ಸಜ್ಜಾಗಿದೆ. ಮೇ ತಿಂಗಳಲ್ಲಿ ಈಗಾಗಲೇ ಇಡೀ ಪಾಕಿಸ್ತಾನವು ಹೊತ್ತಿ ಉರಿದು, ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಈ ಹಿನ್ನೆಲೆ ನವಾಜ್ ವಾಪಸ್ ಬಂದ ನಂತರ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೋ, ಕಾದು ನೋಡಬೇಕಿದೆ.












Click it and Unblock the Notifications