ಉಡುಗೊರೆ ಮಾರಾಟ: ಇಮ್ರಾನ್ ಅನರ್ಹಗೊಳಸಿದ ಪಾಕಿಸ್ತಾನ ಚುನಾವಣಾ ಆಯೋಗ
ಇಸ್ಲಾಮಾಬಾದ್, ಅಕ್ಟೋಬರ್ 21: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಐದು ವರ್ಷಗಳ ಕಾಲ ಅನರ್ಹಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ವಿದೇಶಗಳಿಂದ ಬಂದಿದ್ದ ಉಡುಗೊರೆಗಳನ್ನು ಮಾರಾಟ ಮಾಡಿರುವ ಆರೋಪವನ್ನು ಇಮ್ರಾನ್ ಖಾನ್ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಯಾವುದೇ ಸರ್ಕಾರಿ ಹುದ್ದೆಗಳನ್ನು ಅಲಂಕರಿಸದಂತೆ ಇಮ್ರಾನ್ ಅವರಿಗೆ ಚುನಾವಣಾ ಆಯೋಗ ಆದೇಶಿಸಿದೆ.
ಆಸ್ತಿ ಘೋಷಣೆ ವೇಳೆ, ಸರ್ಕಾರಿ ಖಚಾನೆ ಮೂಲಕ ಸ್ವೀಕರಿಸಿರುವ ಉಡುಗೊರೆಗಳ ಕುರಿತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾಹಿತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸಂವಿಧಾನದ 62(1)(ಎಫ್) ವಿಧಿ ಅಡಿಯಲ್ಲಿ ಅವರನ್ನು ಅನರ್ಗಗೊಳಿಸಬೇಕು ಅಥವಾ ಬದುಕಿರುವವರೆಗೂ ಅವರ ಮೇಲೆ ನಿರ್ಬಂಧ ಹೇರಬೇಕು ಎಂದು ಚುನಾವಣಾ ಆಯೋಗಕ್ಕೆ ಆಡಳಿತಾರೂಢ ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ಪಕ್ಷವು ಬೇಡಿಕೆ ಇಟ್ಟಿತ್ತು.

ಆಡಳಿತಾರೂಢ ಪಕ್ಷದ ಮನವಿಯನ್ನು ವಿಚಾರಣೆ ಮಾಡಿದ ಪಾಕಿಸ್ತಾನ ಚುನಾವಣಾ ಆಯೋಗ ಇಮ್ರಾನ್ ಖಾನ್ ಮೇಲೆ ಐದು ವರ್ಷಗಳ ಕಾಲ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.
ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷವು 34 ದೇಶಗಳಿಂದ ಉಡುಗೊರೆ ಸ್ವೀಕರಿಸಿದೆ. ಅಂದಿನ ಪ್ರಧಾನಿ ಆಗಿದ್ದ ಇಮ್ರಾನ್ ಖಾನ್ ಉಡುಗೊರೆಗಳನ್ನು ಅಕ್ರಮವಾಗಿ ಮಾರಿದ್ದಾರೆ. ಸರ್ಕಾರಿ ಖಚಾನೆಗೆ ಸೇರಬೇಕಿದ್ದ ಉಡುಗೊರೆಗಳನ್ನು ಮಾರಲು ಅವರಿಗೆ ಯಾವುದೇ ಹಕ್ಕಿಲ್ಲ. ಸಂವಿಧಾನದ ನಿಯಮಗಳನ್ನು ಇಮ್ರಾನ್ ಖಾನ್ ಗಾಳಿಗೆ ತೂರಿದ್ದಾರೆ' ಎಂದು ಚುನಾವಣಾ ಆಯೋಗ ತಿಳಿಸಿದೆ.
ನನ್ನ ಉಡುಗೊರೆ, ನನ್ನ ಹಕ್ಕು: ಇಮ್ರಾನ್ ಪ್ರತಿಪಾದನೆ
ನನಗೆ ಬಂದ ಉಡುಗೊರೆಗಳ ಮೇಲೆ ನನಗೆ ಹಕ್ಕಿದೆ. ಮಾರಾಟ ಮಾಡುವುದು ಬಿಡುವುದು ನನಗೆ ಬಿಟ್ಟಿದ್ದು ಎಂದು ಇಮ್ರಾನ್ ಖಾನ್ ಪ್ರತಿಪಾದನೆ ಮಾಡಿದ್ದರು.
ನನಗೆ ಬಂದ ಉಡುಗೊರೆಗಳನ್ನು ನಾನು ಮಾರಾಟ ಮಾಡಿದ್ದೇನೆ. ಆದರೆ, ಸರ್ಕಾರಕ್ಕೆ ಬಂದ ದೇಣಿಗೆಯನ್ನು ನಾನು ಮಾರಾಟ ಮಾಡಿಲ್ಲ. ಸರ್ಕಾರದ ಖಜಾನೆಯಿಂದ ಏನೇನು ಪಡೆದಿದ್ದೇನೆ ಎಂಬುದಕ್ಕೆ ದಾಖಲೆ ಇದೆ. ಪ್ರತಿಪಕ್ಷಗಳ ಈ ಆರೋಪವು ಆಧಾರ ರಹಿತವಾಗಿದೆ ಎಂದು ಇಮ್ರಾನ್ ಹೇಳಿದ್ದರು.












Click it and Unblock the Notifications