
Breaking: ಪಾಕಿಸ್ತಾನ; ಇಮ್ರಾನ್ ಖಾನ್‌ಗೆ ಮಧ್ಯಂತರ ಜಾಮೀನು
ಇಸ್ಲಾಮಾಬಾದ್, ಆಗಸ್ಟ್ 25: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನಿ ಪೊಲೀಸರು ದಾಖಲಿಸಿದ್ದ ಭಯೋತ್ಪಾದನೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ದೊರೆತಿದೆ.
ಕಳೆದ ವಾರ ರಾಜಧಾನಿಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪೊಲೀಸ್, ನ್ಯಾಯಾಂಗ ಮತ್ತು ಇತರ ರಾಜ್ಯ ಸಂಸ್ಥೆಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ಪಾಕಿಸ್ತಾನದ ಪೊಲಿಸರು ಭಯೋತ್ಪಾದನೆ ಪ್ರಕರಣ ದಾಖಲಿಸಿದ್ದರು.
Breaking: ಪಾಕ್ ಮಾಜಿ ಪ್ರಧಾನಿ ಮೇಲೆ ಭಯೋತ್ಪಾದನೆ ಪ್ರಕರಣ ದಾಖಲು
ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್‌ಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಗುರುವಾರ ಸೆಪ್ಟೆಂಬರ್ 1 ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ರಾಜಾ ಜವಾದ್ ಅಬ್ಬಾಸ್ ಹಸನ್ ಅವರು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥರಿಗೆ 1,00,000 ರೂಪಾಯಿಗಳ ಶ್ಯೂರಿಟಿ ತೆಗೆದುಕೊಂಡು ಸೆಪ್ಟೆಂಬರ್ 1 ರವರೆಗೆ ಜಾಮೀನು ಮಂಜೂರು ಮಾಡಿದರು.
ಇಮ್ರಾನ್ ಖಾನ್ ನ್ಯಾಯಾಲಯಕ್ಕೆ ಆಗಮಿಸುವ ಮೊದಲು ಗುರುವಾರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಯಿತು, ಅರ್ಜಿದಾರರು ತಮ್ಮ ವಿರುದ್ಧದ ಭಯೋತ್ಪಾದನೆ ಪ್ರಕರಣವನ್ನು ಪ್ರತೀಕಾರವಾಗಿ ಪೊಲೀಸರು ದಾಖಲಿಸಿದ್ದಾರೆ ಎಂದು ವಾದಿಸಿದರು.
ಅವರನ್ನು ಬಂಧಿಸುವ ಸಾಧ್ಯತೆ ಇರುವುದರಿಂದ, ಖಾನ್ ಅವರ ಪಕ್ಷವು ಬೆಂಬಲಿಗರನ್ನು ಬೀದಿಗೆ ಬಂದು ಪ್ರತಿಭಟನೆ ನಡೆಸುವಂತೆ ಕರೆ ನೀಡಿತ್ತು. ಇಮ್ರಾನ್ ಖಾನ್ ಅವರನ್ನು ಕಸ್ಟಡಿಗೆ ತೆಗೆದುಕೊಂಡರೆ ಮರುದಿನ ಇಸ್ಲಾಮಾಬಾದ್‌ಗೆ ಮೆರವಣಿಗೆ ಹೊರಡಲು ಸೂಚಿಸಿತ್ತು.

ವಿಚಾರಣೆ ನಡೆದ ಫೆಡರಲ್ ಜುಡಿಷಿಯಲ್ ಕಾಂಪ್ಲೆಕ್ಸ್ ಸುತ್ತಲೂ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು, ಸ್ಥಳದಲ್ಲಿ ಪೊಲೀಸರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಂಕೀರ್ಣದ ಸುತ್ತಮುತ್ತಲಿನ ರಸ್ತೆಗಳನ್ನು ಸಹ ನಿರ್ಬಂಧಿಸಲಾಗಿದೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಮಹಿಳಾ ನ್ಯಾಯಾಧೀಶರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ 69 ವರ್ಷದ ಖಾನ್ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆಯ (ಭಯೋತ್ಪಾದನಾ ಕೃತ್ಯಗಳಿಗೆ ಶಿಕ್ಷೆ) ಸೆಕ್ಷನ್ 7 ರ ಅಡಿಯಲ್ಲಿ ಭಾನುವಾರ ಪ್ರಕರಣ ದಾಖಲಿಸಲಾಗಿದೆ.
ದೇಶದ್ರೋಹದ ಆರೋಪದ ಮೇಲೆ ಬಂಧಿತನಾದ ತನ್ನ ಸಹಾಯಕ ಶಹಬಾಜ್ ಗಿಲ್‌ಗೆ ಹಿಂಸೆ ನೀಡಲಾಗಿದೆ ಎಂದು ಅರೋಪಿಸಿದ್ದ ಅವರು, ಉನ್ನತ ಪೊಲೀಸ್ ಅಧಿಕಾರಿಗಳು, ಮಹಿಳಾ ಮ್ಯಾಜಿಸ್ಟ್ರೇಟ್, ಪಾಕಿಸ್ತಾನದ ಚುನಾವಣಾ ಆಯೋಗ ಮತ್ತು ರಾಜಕೀಯ ವಿರೋಧಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದಾಗಿ ತಮ್ಮ ಭಾಷಣದಲ್ಲಿ ಬೆದರಿಕೆ ಹಾಕಿದ್ದರು. ರ‍್ಯಾಲಿಯಲ್ಲಿ, ಅವರು ತಮ್ಮ ಪಕ್ಷದ ಬಗ್ಗೆ ಪಕ್ಷಪಾತ ಧೋರಣೆ ವಿರುದ್ಧ ನ್ಯಾಯಾಂಗಕ್ಕೆ ಎಚ್ಚರಿಕೆ ನೀಡಿದ್ದರು.
ದೇಶದ್ರೋಹ ಪ್ರಕರಣದಲ್ಲಿ ರಾಜಧಾನಿ ಪೊಲೀಸರ ಕೋರಿಕೆಯ ಮೇರೆಗೆ ತನ್ನ ಸಹಾಯಕ ಗಿಲ್‌ಗೆ ಎರಡು ದಿನಗಳ ನ್ಯಾಯಾಂಗ ಬಂಧನವನ್ನು ಅನುಮೋದಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಝೆಬಾ ಚೌಧರಿ ಅವರು ಸಹ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್ಚರಿಕೆ ನೀಡಿದ್ದರು.
ಇಸ್ಲಾಮಾಬಾದ್‌ನ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಮತ್ತು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. "ನಾವು ನಿಮ್ಮನ್ನು ಬಿಡುವುದಿಲ್ಲ" ಎಂದು ಘೋಷಿಸಿದ್ದರು.
ಸೋಮವಾರ, ಇಸ್ಲಾಮಾಬಾದ್ ಹೈಕೋರ್ಟ್ ಅವರಿಗೆ ಮೂರು ದಿನಗಳ ಕಾಲ ರಕ್ಷಣಾತ್ಮಕ ಜಾಮೀನು ನೀಡಿದ್ದು, ಮೂರು ದಿನಗಳ ಅವಧಿ ಮುಗಿಯುವ ಮೊದಲು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಪಡೆಯಲು ನಿರ್ದೇಶನ ನೀಡಿತ್ತು.
ವಿಚಾರಣೆಯ ನಂತರ ನ್ಯಾಯಾಲಯದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಖಾನ್, ಪಾಕಿಸ್ತಾನವು ವಿಶ್ವದಲ್ಲೇ ನಗೆಪಾಟಲಿಗೀಡಾಗಿದೆ ಎಂದು ಹೇಳಿದರು, ಈ ಪ್ರಕರಣವು ಪ್ರಪಂಚದಾದ್ಯಂತ ವರದಿಯಾಗುತ್ತಿದೆ, ಪಾಕಿಸ್ತಾನವನ್ನು ಬನಾನಾ ರಿಪಬ್ಲಿಕ್ ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು.
"ನಮ್ಮ ಪಕ್ಷದ ಸದಸ್ಯ ಶಹಬಾಜ್ ಗಿಲ್ ಚಿತ್ರಹಿಂಸೆ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು. ಚಿತ್ರಹಿಂಸೆ ಸಾಬೀತಾಗಿದ್ದರೂ ಅವರನ್ನು ಮತ್ತೆ ಪೊಲೀಸ್ ವಶಕ್ಕೆ ಕಳುಹಿಸಿದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಮತ್ತು ಮ್ಯಾಜಿಸ್ಟ್ರೇಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ನಾನು ಹೇಳಿದೆ. ಆದರೆ, ವಿಪರ್ಯಾಸವೆಂದರೆ ನನ್ನ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲಿಸಲಾಗಿದೆ" ಎಂದು ಹೇಳಿದರು.