Pakistan Church Attack: ಚರ್ಚ್ ದಾಳಿ, ಪಾಕಿಸ್ತಾನ ಪ್ರಧಾನಿ ಗರಂ!
ಪಾಕಿಸ್ತಾನದಲ್ಲಿ ಉದ್ರಿಕ್ತರ ಗುಂಪು ಕಂಡ ಕಂಡ ಕಡೆ ಚರ್ಚ್ ಮೇಲೆ ದಾಳಿ ನಡೆಸಿದೆ. ಈ ಹಿನ್ನೆಲೆ ಪಾಕಿಸ್ತಾನದ ಮಾನ ಜಾಗತಿಕ ಮಟ್ಟದಲ್ಲಿ ಹರಾಜಾಗಿದೆ. ಹಾಗೇ ಅಮೆರಿಕ ಕೂಡ ಘಟನೆ ಖಂಡಿಸಿ ವಾರ್ನಿಂಗ್ ಕೊಟ್ಟಿತ್ತು. ಈಗ ಖುದ್ದು ಪಾಕಿಸ್ತಾನ ಪ್ರಧಾನಿ ಮಾತಾಡಿದ್ದು ಚರ್ಚ್ ಮೇಲೆ ದಾಳಿ ಮಾಡಿದವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ಕ್ರೈಸ್ತರು ಅಲ್ಪಸಂಖ್ಯಾತರು, ಹೀಗಾಗಿ ಚರ್ಚ್‌ಗಳ ಮೇಲೆ ನಡೆದ ದಾಳಿಯ ಹಿನ್ನೆಲೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪಾಕ್‌ನ ಪಂಜಾಬ್ ಪ್ರಾಂತ್ಯದಲ್ಲಿ ಚರ್ಚ್ ಮೇಲಿನ ದಾಳಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಅದರಲ್ಲೂ ಜಾಗತಿಕ ಮಟ್ಟದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಜೋರಾಗಿತ್ತು. ಅಮೆರಿಕ ಸೇರಿ ಪ್ರಪಂಚದ ಘಟಾನುಘಟಿ ರಾಷ್ಟ್ರಗಳು ತಮ್ಮ ಆಕ್ರೋಶ ಹೊರಹಾಕಿದ್ದವು. ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಈಗ ಬಾಯಿ ಬಿಟ್ಟಿರುವ ಪಾಕ್ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಖ್ ಕಾಕರ್, ಸಮಾಜದಲ್ಲಿ ದುಷ್ಟ ಶಕ್ತಿಗಳನ್ನು ನಾವು ಬೆಂಬಲಿಸಲ್ಲ ಎಂದಿದ್ದಾರೆ. ಈ ಮೂಲಕ ಚರ್ಚ್ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ.

ಅಲ್ಪಸಂಖ್ಯಾತರ ಬಗ್ಗೆ ಪಾಕ್ ಪ್ರಧಾನಿ ಮಾತು
ಇನ್ನು ಇದೇ ವೇಳೆ ಅಲ್ಪಸಂಖ್ಯಾತ ವರ್ಗಕ್ಕೆ ಸಮಾಧಾನ ನೀಡುವ ಸಂದೇಶ ಕೊಟ್ಟಿರುವ ಪಾಕಿಸ್ತಾನದ ಹಂಗಾಮಿ ಪ್ರಧಾನಿ, ದೇಶದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲಾಗಿದೆ. ಕೆಲ ಗುಂಪುಗಳು ಹಾನಿ ಮಾಡುವ ಯತ್ನ ಮಾಡಬಹುದು. ಆದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದಿದ್ದಾರೆ. ಪಾಕಿಸ್ತಾನ ಹಂಗಾಮಿ ಪ್ರಧಾನಿ ಕಾಕರ್ ತಮ್ಮ ಚೊಚ್ಚಲ ಸಂಪುಟ ಸಭೆಯಲ್ಲಿ ಹೀಗೆ ಚರ್ಚ್ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. ಅಲ್ಲದೆ ಪಾಕಿಸ್ತಾನ ಅಂತಹ ಶಕ್ತಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಜಾತ್ಯತೀತತೆ ಮತ್ತು ಧಾರ್ಮಿಕ ಮನೋಭಾವ ಇರುವ ವಿಪರೀತ ವರ್ತನೆ ಸ್ವಾಗತಾರ್ಹ ಅಲ್ಲ, ಕಾನೂನು ಕ್ರಮ ಗ್ಯಾರಂಟಿ ಎಂದಿದ್ದಾರೆ.
ಹಂಗಾಮಿ ಪ್ರಧಾನಿ ಖಡಕ್ ವಾರ್ನಿಂಗ್
ಭಾರತದ ನೆರೆ ದೇಶದಲ್ಲಿ ರಾಜಕೀಯ ಅಸ್ತಿರತೆ ಮಧ್ಯೆ ಕಳೆದ ವಾರ ಮಹತ್ವದ ಬೆಳವಣಿಗೆ ಕೂಡ ನಡೆದಿತ್ತು. ಆಗಸ್ಟ್ 12ಕ್ಕೆ ಪಾಕ್ ಸಂಸತ್ ಅವಧಿ ಮುಗಿಯಲಿದ್ದ ಹಿನ್ನೆಲೆ ಆಗಸ್ಟ್ 9ಕ್ಕೇ ಸಂಸತ್ ವಿಸರ್ಜನೆ ಆಗಿತ್ತು. ಈಗ ಚುನಾವಣೆಗೆ ಪಾಕ್ ಸಿದ್ಧವಾಗುತ್ತಿದೆ. ಆದರೆ ಮುಂದಿನ ಆರು ತಿಂಗಳ ಕಾಲ ಚುನಾವಣೆ ನಡೆಯುವ ನಿರೀಕ್ಷೆ ಇಲ್ಲ. ಪಾಕ್ ಲೋಕಸಭೆ ಸದಸ್ಯ ಬಲ 342, ಭಾರತದ ರೀತಿ ಪಾಕಿಸ್ತಾನದಲ್ಲೂ 5 ವರ್ಷಗಳ ಅಧಿಕಾರವಧಿ ಇರುತ್ತದೆ. ಇದೀಗ ಮಧ್ಯಂತರ ಸರ್ಕಾರ ಜವಾಬ್ದಾರಿ ವಹಿಸಿಕೊಂಡಿದ್ದು, ಚುನಾವಣೆ ಬಳಿಕ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಆದ್ರೆ ಹಂಗಾಮಿ ಪ್ರಧಾನಿ ಚರ್ಚ್ ದಾಳಿ ವಿರುದ್ಧ ಗುಡುಗಿದ್ದು, ಇದು ಸರಿಯಲ್ಲ ಎಂದಿದ್ದಾರೆ.

ಪಾಕಿಸ್ತಾನಕ್ಕೆ ಭಾರತದ ಜೊತೆ ಸ್ನೇಹ ಬೇಕು
ಭಯೋತ್ಪಾದನೆ & ಆರ್ಥಿಕ ದಿವಾಳಿತನ ಪಾಕಿಸ್ತಾನದ ನಿದ್ದೆಗೆಡಿಸಿದೆ. ಈ ಸಂದರ್ಭಕ್ಕೆ ಸರ್ಕಾರ ಕೂಡ ವಿಸರ್ಜನೆಯಾಗಿ ಹಂಗಾಮಿ ಸರ್ಕಾರ ಆಡಳಿತಕ್ಕೆ ಬಂದಿದೆ. ಹೀಗೆ ಪಾಕ್‌ನ ಹಂಗಾಮಿ ಸರ್ಕಾರದ ಹಂಗಾಂಇ ವಿದೇಶಾಂಗ ಸಚಿವರು ಹೇಳಿಕೆಯೊಂದನ್ನ ನೀಡಿ ಅಮೆರಿಕ & ಚೀನಾ ಸೇರಿದಂತೆ ಪ್ರಮುಖ ದೇಶಗಳ ಜೊತೆ ನಿಕಟ ಸಂಬಂಧ ಮುಂದುವರಿಸುತ್ತೇವೆ. ಹಾಗೇ ಭಾರತದ ಜೊತೆ ಕೂಡ ಉತ್ತಮ ಬಾಂಧವ್ಯ ಬಯಸುತ್ತೇವೆ ಎಂದಿದ್ದರು. ಹೀಗೆ ಹಂಗಾಮಿ ಸರ್ಕಾರವು ನೆರೆ ದೇಶದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದೆ.

ಹಂಗಾಮಿ ಸರ್ಕಾರ ಪಾಕಿಸ್ತಾನದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ತರಲು ಯತ್ನಿಸುತ್ತಿದೆ. ಈ ನಡುವೆ, ಮಧ್ಯಂತರ ಸರ್ಕಾರಕ್ಕೆ ರಾಷ್ಟ್ರದ ಸೇವೆ ಸಲ್ಲಿಸಲು ಶಾಶ್ವತ ಜನಾದೇಶವಿಲ್ಲ. ಆದರೆ, ದೇಶದ ಪ್ರಗತಿಗೆ ಕೈಗೊಳ್ಳುವ ಹೊಸ ಕ್ರಮ ಬೆಂಬಲಿಸಲು ಪ್ರಯತ್ನಿಸುತ್ತೇನೆ ಎಂದು ಹಂಗಾಮಿ ಪ್ರಧಾನಿ ಪಾಕಿಸ್ತಾನದ ಜನರನ್ನ ಉದ್ದೇಶಿಸಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಾಕಿಸ್ತಾನ ಆಂತರಿಕ ಪರಿಸ್ಥಿತಿ ಬಗ್ಗೆ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಖ್ ಕಾಕರ್, ಪರೋಕ್ಷವಾಗಿ ವಿವರಣೆ ನೀಡಿದ್ದಾರೆ.












Click it and Unblock the Notifications