Pakistan Army: ಪಾಕಿಸ್ತಾನಕ್ಕೆ ಆಘಾತ ನೀಡಿದ ಬಲೂಚ್ ಬಂಡುಕೋರರು, 177 ಜೀವ ಹಾನಿ ವರದಿ
ಪಾಕಿಸ್ತಾನ ತನ್ನ ನಿಜರೂಪ ತೋರಿಸುತ್ತಾ, ಉಗ್ರರಿಗೆ ಪದೇ ಪದೇ ಬೆಂಬಲ ನೀಡುತ್ತಾ ಬಂದಿದೆ. ಅಲ್ಲದೆ ತಾನು ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಕೂಡ ಅನುಭವಿಸುತ್ತಿದೆ ಪಾಕಿಸ್ತಾನ. ಉಗ್ರರಿಗೆ ಬೆಂಬಲ ಕೊಟ್ಟ ಕಾರಣಕ್ಕೆ ಅದೇ ಉಗ್ರರಿಂದ ನಾಶವಾಗಿ ಹೋಗುವ ಹಂತಕ್ಕೆ ಬಂದಿದೆ ಭಾರತದ ಶತ್ರು ದೇಶ. ಇಂತಹ ಪರಿಸ್ಥಿತಿಯಲ್ಲೇ ಪಾಕಿಸ್ತಾನ ಸೇನೆ ದಂಗೆ ಪೀಡಿತ ಅಫ್ಘಾನಿಸ್ತಾನ ನೈಋತ್ಯ ಗಡಿಯಲ್ಲಿ ದೊಡ್ಡ ಹಿಂಸಾಚಾರ ನಡೆಸಿದೆ. ಬಂಡುಕೋರರು ಹಾಗೂ ಸೇನೆ ನಡುವೆ ಭಾರಿ ದೊಡ್ಡ ಹಿಂಸಾಚಾರ ಆರಂಭವಾಗಿದ್ದು, ಪಾಕಿಸ್ತಾನ ನಲುಗಿ ಹೋಗುವ ವಾತಾವರಣ ಸೃಷ್ಟಿಯಾಗಿದೆ.
ಕಳೆದ 48 ಗಂಟೆಗಳಲ್ಲಿ ಭೀಕರ ಹಿಂಸಾಚಾರಕ್ಕೆ ಪಾಕಿಸ್ತಾನದ ಗಡಿ ಭಾಗ ಸಾಕ್ಷಿಯಾಗಿದ್ದು, ಇಲ್ಲಿ ಸುಮಾರು 177 ಬಲೂಚ್ ಬಂಡುಕೋರರನ್ನು ಹತ್ಯೆ ಮಾಡಿರುವ ಆರೋಪ ಮಾಡಲಾಗಿದೆ. ಹೀಗೆ ಒಂದು ಕಡೆ ಆರ್ಥಿಕವಾಗಿ ಬೀದಿಗೆ ಬಿದ್ದಿರುವ ಪಾಕಿಸ್ತಾನ ಊರೆಲ್ಲಾ ಭಿಕ್ಷೆ ಬೇಡಿ ಹಣ ತಂದು, ಸರ್ಕಾರ ನಡೆಸುವ & ದೇಶ ನಡೆಸುವ ಪರಿಸ್ಥಿತಿ ಇದೆ. ಹೀಗಿದ್ದರೂ ಉಗ್ರರಿಗೆ ಬೆಂಬಲ ನೀಡುತ್ತಾ ತನ್ನ ಗುಂಡಿ ತಾನೇ ತೋಡಿಕೊಳ್ಳುತ್ತಿದ್ದು, ಬಲೂಚ್ ಲಿಬರೇಶನ್ ಆರ್ಮಿ ಬಂಡುಕೋರರು ಈಗ ದೊಡ್ಡ ತಲೆನೋವು ತಂದಿದ್ದಾರೆ ಪಾಕಿಸ್ತಾನಕ್ಕೆ.

ಪಾಕಿಸ್ತಾನದ ಗಡಿ ಬೂದಿ ಮುಚ್ಚಿದ ಕೆಂಡ
ಮೊದಲಿಗೆ ಬಲೂಚ್ ಬಂಡುಕೋರರು ಆತ್ಮಹತ್ಯಾ ಬಾಂಬ್ ದಾಳಿ ಮತ್ತು ಗುಂಡಿನ ದಾಳಿ ಶುರು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆ ನಂತರ ಪಾಕಿಸ್ತಾನ ಸೇನೆ ಕಾರ್ಯಾಚರಣೆ ಆರಂಭ ಮಾಡಿದ್ದು, ಕೊನೆಗೆ ನೋಡ ನೋಡುತ್ತಲೇ ರಕ್ತಪಾತ ಆಗಿದೆ. ಬಂಡುಕೋರರ ಜೊತೆಗೆ ಸಾಮಾನ್ಯ ಜನರ ಜೀವಕ್ಕೆ ಕೂಡ ಹಾನಿಯಾಗಿದ್ದು, 18 ಅಮಾಯಕರ ಪ್ರಾಣಪಕ್ಷಿ ಕೂಡ ಈ ಹಿಂಸಾಚಾರ ಸಮಯದಲ್ಲಿ ಹಾರಿ ಹೋಗಿದೆ. ಪಾಕಿಸ್ತಾನ ಸೇನೆ (Pakistan Army)ಯ ಜೊತೆಗೆ ಪಾಕಿಸ್ತಾನ ಪೊಲೀಸರು ಕೂಡ ಈ ಕಾರ್ಯಾಚರಣೆಗೆ ಸಾಥ್ ನೀಡಿದ್ದು, ಪಾಕಿಸ್ತಾನದ ಗಡಿ ಭಾಗ ಈಗ ಬೂದಿ ಮುಚ್ಚಿದ ಕೆಂಡವಾಗಿದೆ.
ಮೈ ಪರಚಿಕೊಂಡ ಪಾಕಿಸ್ತಾನ ಸರ್ಕಾರ
ಬಲೂಚಿಸ್ತಾನ ಪ್ರದೇಶದಲ್ಲಿ ನೂರಾರು ಸಮಸ್ಯೆಗಳು ಇದ್ದು, ದೀರ್ಘಕಾಲದ ರಾಜಕೀಯ ಮತ್ತು ಆರ್ಥಿಕ ಕುಂದುಕೊರತೆ ಈ ರೀತಿಯ ಘಟನೆಗಳಿಗೆ ಕಾರಣವಾಗುತ್ತಿದೆ. ಆದರೆ ಈ ಸಮಸ್ಯೆ ಬಗೆಹರಿಸಿ, ಶಾಂತಿ ಸ್ಥಾಪನೆ ಮಾಡುವ ಬದಲು ಪಾಕಿಸ್ತಾನದ ರಾಜಕಾರಣಿಗಳು ಇಲ್ಲೂ ತಮ್ಮ ಬೆಳೆ ಬೆಯಿಸಿ ಲಾಭ ಮಾಡಿಕೊಳ್ಳಲು ಮುಂದಾಗಿರುವ ಆರೋಪ ಇದೆ. ಆದರೆ ಇಂತಹ ಘಟನೆಗಳ ಬಗ್ಗೆಯೂ ಭಾರತದ ವಿರುದ್ಧ ಆರೋಪ ಮಾಡುತ್ತಿರುವ ಪಾಕಿಸ್ತಾನ, ಮತ್ತಷ್ಟು ತಲ್ಲಣ ಸೃಷ್ಟಿಸಿದೆ. ಭಾರತ ಈ ಬಗ್ಗೆ ಖಡಕ್ ತಿರುಗೇಟು ನೀಡಿದ್ದು, ನಿಮ್ಮ ನೆಲದಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ಅದು ಬಿಟ್ಟು ನೆರೆ ದೇಶಗಳ ಮೇಲೆ ಆರೋಪ ಹೊರಿಡಬೇಡಿ ಎಂದು ಎಚ್ಚರಿಸಿದೆ.
ಜಗತ್ತಿನಲ್ಲೇ ಉಗ್ರರ ಕಾರ್ಖಾನೆ ಪಾಕಿಸ್ತಾನ
ಮತ್ತೊಂದು ಕಡೆ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ತನ್ನ ನಾಲಿಗೆ ಹರಿಬಿಟ್ಟಿದ್ದು, ಈ ಘಟನೆಗೂ & ಭಾರತಕ್ಕೂ ಸಂಬಂಧ ತಳುಕು ಹಾಕಿದ್ದು ಸಂಚಲನಕ್ಕೆ ಕಾರಣವಾಗಿತ್ತು. ತನ್ನ ನೆಲದಲ್ಲಿ ಇರುವ ಸಮಸ್ಯೆ ಸರಿ ಮಾಡಿಕೊಳ್ಳಲು ಪರದಾಡುತ್ತಿರುವ ಪಾಕಿಸ್ತಾನಕ್ಕೆ ಈ ರೀತಿ ಆರೋಪ ಹೊರಿಸುವುದು ಸುಲಭವಾಗಿದೆ. ಪಾಕಿಸ್ತಾನ ಭವಿಷ್ಯದಲ್ಲೂ ಇದೇ ರೀತಿ ವರ್ತಿಸುತ್ತಾ ಹೋದರೆ, ಮುಂದೆ ಇನ್ನಷ್ಟು ಭಾಗದಲ್ಲಿ ಇದೇ ರೀತಿಯ ದಂಗೆಗಳು ಏಳುವುದು ಖಚಿತ. ಪಾಕಿಸ್ತಾನ ಉಗ್ರರ ಕಾರ್ಖಾನೆಯಾಗಿದ್ದು, ಹಿಂಸೆ ಮಾಡುವವರಿಗೆ ಬೆಂಬಲ ನೀಡುತ್ತಾ ಬಂದು ಈಗ ಅವರಿಂದಲೇ ಈ ರೀತಿ ಪೆಟ್ಟು ತಿನ್ನುವಂತೆ ಆಗಿದೆ. ಇಷ್ಟಾದರೂ ಅಲ್ಲಿನ ರಾಜಕೀಯ ನಾಯಕರಿಗೆ ಮಾತ್ರ ಬುದ್ಧಿ ಬರುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.












Click it and Unblock the Notifications