ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯಲ್ಲಿ ಪಾಕಿಸ್ತಾನ ಸೇನಾಧಿಕಾರಿ ನಿಯೋಜನೆ!
ಇಸ್ಲಮಾಬಾದ್, ಅಕ್ಟೋಬರ್ 1: ಚೀನಾದ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಪ್ರಧಾನ ಕಚೇರಿಯಲ್ಲಿ ಎರಡು ದೇಶಗಳ ನಡುವೆ ಗುಪ್ತಚರ ಹಂಚಿಕೆ ವ್ಯವಸ್ಥೆಯ ಉದ್ದೇಶವಾಗಿ ಪಾಕಿಸ್ತಾನದ ಸೇನಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಮೂಲಗಳ ಪ್ರಕಾರ, ಚೀನಾದ ಪಶ್ಚಿಮ ಥಿಯೇಟರ್ ಕಮಾಂಡ್ ಮತ್ತು ದಕ್ಷಿಣ ಥಿಯೇಟರ್ ಕಮಾಂಡ್ ಪ್ರಧಾನ ಕಛೇರಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳನ್ನು ನೇಮಿಸಲಾಗಿದೆ. ಪೀಪಲ್ಸ್ ಲಿಬರೇಷನ್ ಆರ್ಮಿ ನಿರ್ಣಾಯಕ ಪಶ್ಚಿಮ ಥಿಯೇಟರ್ ಕಮಾಂಡ್ ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದೊಂದಿಗೆ ಭಾರತದ ಗಡಿಗಳನ್ನು ನೋಡಿಕೊಳ್ಳುತ್ತದೆ. ಕಳೆದ ತಿಂಗಳಷ್ಟೇ ಚೀನಾ ಸರ್ಕಾರವು ಪಶ್ಚಿಮ ಥಿಯೇಟರ್ ಕಮಾಂಡ್‌ನ ಹೊಸ ಕಮಾಂಡರ್ ಆಗಿ ಜನರಲ್ ವಾಂಗ್ ಹೈಜಿಯಾಂಗ್ ಅವರನ್ನು ನೇಮಿಸಿತ್ತು.
ಭಾರತ ಮತ್ತು ಚೀನಾ ಯೋಧರ ನಡುವೆ ಗಡಿ ನಿಯಂತ್ರಣ ರೇಖೆಯಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ ಹೊರಡಿಸಲಾದ ಆದೇಶದಿಂದ ಚೀನಾದ ಹೆಚ್ಚಿನ ಯೋಧರು ಪೂರ್ವ ಲಡಾಖ್ ಪ್ರದೇಶದಲ್ಲಿ ನಿಯೋಜನೆಯಾಗುತ್ತಿದ್ದಾರೆ ಎಂದು ಸರ್ಕಾರಿ ಮೂಲಗಳಿಂದ ತಿಳಿದು ಬಂದಿರುವುದಾಗಿ ನ್ಯೂಸ್ 18 ವರದಿ ಮಾಡಿದೆ. ಹಾಂಗ್ ಕಾಂಗ್, ಮಕಾವು ಇತರ ವಿಶೇಷ ಆಡಳಿತ ಪ್ರದೇಶಗಳನ್ನು ಪೀಪಲ್ಸ್ ಲಿಬರೇಷನ್ ಆರ್ಮಿಯ ದಕ್ಷಿಣ ಥಿಯೇಟರ್ ಕಮಾಂಡ್ ನೋಡಿಕೊಳ್ಳುತ್ತದೆ.

ಚೀನಾ ಸೇನಾ ಕಚೇರಿಯಲ್ಲಿ ಪಾಕ್ ಸೇನಾಧಿಕಾರಿ ನೇಮಕ?:
ಪಾಕಿಸ್ತಾನದ ಸೇನೆಯ ಕರ್ನಲ್ ದರ್ಜೆಯ ಅಧಿಕಾರಿಗಳನ್ನು ಕೇಂದ್ರ ಸೇನಾ ಆಯೋಗದ ಜಂಟಿ ಸಿಬ್ಬಂದಿ ವಿಭಾಗದಲ್ಲಿ ನೇಮಿಸಲಾಗಿದೆ. ಇದು ಚೀನಾದ ಸಶಸ್ತ್ರ ಪಡೆಗಳ ಯುದ್ಧ ಯೋಜನೆ, ತರಬೇತಿ ಮತ್ತು ಕಾರ್ಯತಂತ್ರದ ಜವಾಬ್ದಾರಿ ಮತ್ತು ರಾಜ್ಯ ಭದ್ರತಾ ಸಚಿವಾಲಯದಲ್ಲಿ ಎಂದು ಇತ್ತೀಚಿನ ಗುಪ್ತಚರ ಮಾಹಿತಿಗಳು ತಿಳಿಸಿವೆ. ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಹೇಳುವಂತೆ, ರಾಜ್ಯ ಕೌನ್ಸಿಲ್ ಆಫ್ ಚೀನಾ ಅಡಿಯಲ್ಲಿ ರಾಜ್ಯ ಭದ್ರತಾ ಸಚಿವಾಲಯವು ಪ್ರತಿ-ಬೇಹುಗಾರಿಕೆ ಮತ್ತು ರಾಜಕೀಯ ಭದ್ರತೆಯ ಜವಾಬ್ದಾರಿ ಹೊತ್ತಿರುತ್ತದೆ.
ಇದರ ಹೊರತಾಗಿಯೂ ರಕ್ಷಣಾ ನಿಯೋಜನೆಗಳ ಜೊತೆಗೆ ಖರೀದಿಗೆ ಸಂಬಂಧಿಸಿದ ಯೋಜನೆಗಳಿಗಾಗಿ ಬೀಜಿಂಗ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಸುಮಾರು 10 ಹೆಚ್ಚುವರಿ ಪಾಕಿಸ್ತಾನಿ ಸೇನಾ ಅಧಿಕಾರಿಗಳು ನಿಯೋಜಿಸಲಾಗಿದೆ, ಎಂದು ಮೂಲಗಳು ತಿಳಿಸಿವೆ. ಭದ್ರತಾ ಮೂಲಗಳ ಪ್ರಕಾರ, ಪೀಪಲ್ಸ್ ಲಿಬರೇಷನ್ ಆರ್ಮಿಯೊಂದಿಗೆ ಪಾಕಿಸ್ತಾನದ ಸೇನಾ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದೆ. ಇದು ಎರಡು ದೇಶಗಳ ನಡುವಿನ ನಿಕಟ ಸಂಬಂಧ ಮತ್ತು ಸಮನ್ವಯದ ಬಗ್ಗೆ ಸ್ಪಷ್ಟಪಡಿಸುತ್ತದೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್:
ಕಳೆದ 2016ರಲ್ಲಿ ಪಾಕಿಸ್ತಾನದ ಡಾನ್ ಪತ್ರಿಕೆಯ ವರದಿಯ ಪ್ರಕಾರ, ಪಾಕಿಸ್ತಾನವು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಮತ್ತು ಕೆಲಸದಲ್ಲಿ ತೊಡಗಿರುವವರ ಭದ್ರತೆಗಾಗಿ ತನ್ನ ಅರೆಸೇನಾ ಪಡೆಗಳ 9,000 ಸೈನಿಕರು ಮತ್ತು 6,000 ಸಿಬ್ಬಂದಿಯೊಂದಿಗೆ ವಿಶೇಷ ಭದ್ರತಾ ವಿಭಾಗವನ್ನು ಸ್ಥಾಪಿಸಿತ್ತು. ತದನಂತರ 2019ರಲ್ಲಿ ಪಾಕಿಸ್ತಾನ ಸೇನೆಯು ಚೀನಾದ ನಾಗರಿಕರನ್ನು ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳನ್ನು ರಕ್ಷಿಸಲು ವಿಶೇಷ ಸೇನೆಯ ವಿಭಾಗೀಯ ಬಲವನ್ನು ಹೆಚ್ಚಿಸುವುದಾಗಿ ಹೇಳಿತ್ತು, ಈ ಯೋಜನೆ ಉಭಯ ರಾಷ್ಟ್ರಗಳ ನಡುವಿನ ಸ್ನೇಹಕ್ಕೆ ಸಾಕ್ಷಿ ಎಂದು ಹೇಳಲಾಗಿತ್ತು.
ಭಾರತೀಯ ಸೇನಾಧಿಕಾರಿ ಮಾತು:
ಭಾರತವು ಎಲ್ಲ ಬೆಳವಣಿಗೆಗಳ ಮೇಲೆ ಸೂಕ್ಷ್ಮವಾಗಿ ನಿಗಾ ಇಟ್ಟಿದೆ. "ಪಾಕಿಸ್ತಾನ ಸೇನೆಯು ಸಿಪಿಇಸಿ ಮತ್ತು ಚೀನಾದ ಪ್ರಜೆಗಳಿಗೆ ನಿಯಮಿತವಾಗಿ ನೆರವು ನೀಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಪಾಕ್ ಎಲ್ ಒ ಅನ್ನು ನಿಯೋಜನೆ ಮಾಡುವುದರಿಂದ ಎರಡು ದೇಶಗಳ ನಡುವೆ ಉಂಟಾಗಬಹುದಾದ ಸಮಸ್ಯೆಗಳನ್ನು ನಿವಾರಿಸಲು ಸಹಾಯವಾಗುತ್ತದೆ" ಎಂದು ಭಾರತೀಯ ಸೇನೆ ಹಿರಿಯ ಅಧಿಕಾರಿಯೊಬ್ಬರು ನ್ಯೂಸ್ 18 ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications