"2022ರವರೆಗೂ ವಿಶ್ವದ ಐದನೇ ಒಂದು ಭಾಗಕ್ಕೆ ಕೊರೊನಾ ಲಸಿಕೆ ಸಿಗೋದು ಡೌಟ್"
ನವದೆಹಲಿ, ಡಿಸೆಂಬರ್ 16: ಒಂದೆಡೆ, ಇಡೀ ವಿಶ್ವವನ್ನೇ ನಲುಗಿಸಿದ ಕೊರೊನಾ ಸೋಂಕಿನ ನಿವಾರಣೆಗೆ ಲಸಿಕೆಗಳು ಅಭಿವೃದ್ಧಿಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ. ವಿಶ್ವದ ಹಲವು ದೇಶಗಳು ಸಾಮೂಹಿಕ ಲಸಿಕಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುತ್ತಿವೆ. ಆದರೆ ಮತ್ತೊಂದೆಡೆ ವಿಶ್ವದ ಕೆಲವು ದೇಶಗಳಿಗೆ ಲಸಿಕೆ ಸಿಗುವುದು ಮತ್ತಷ್ಟು ತಡವಾಗುವ ಸೂಚನೆ ದೊರೆತಿದೆ.
2022ರ ಕೊನೆವರೆಗೂ ವಿಶ್ವದ ಜನಸಂಖ್ಯೆಯ ಐದನೇ ಒಂದು ಭಾಗಕ್ಕೆ ಲಸಿಕೆ ದೊರೆಯುವುದು ಅನುಮಾನ ಎಂದು ಅಧ್ಯಯನವೊಂದು ತಿಳಿಸಿದೆ. ಮುಂದಿನ ವರ್ಷ ದೊರೆಯಲಿರುವ ಲಸಿಕೆಗಳ ಅರ್ಧ ಭಾಗವನ್ನು ಶ್ರೀಮಂತ ರಾಷ್ಟ್ರಗಳು ಈಗಾಗಲೇ ಮೀಸಲಿರಿಸಿದ್ದು, ಎಲ್ಲರಿಗೂ ಆದಷ್ಟು ಬೇಗ ಲಸಿಕೆ ಸಿಗುವುದು ಅನುಮಾನ ಎಂದು ಅಧ್ಯಯನ ವರದಿ ಮಾಡಿದೆ. ಮುಂದೆ ಓದಿ...

ಲಸಿಕೆ ಮೀಸಲಿರಿಸಿರುವ ಶ್ರೀಮಂತ ರಾಷ್ಟ್ರಗಳು
ಇಡೀ ವಿಶ್ವವನ್ನೇ ನಡುಗಿಸಿರುವ ಕೊರೊನಾಗೆ ಲಸಿಕೆ ಅಭಿವೃದ್ಧಿಯಾಗುತ್ತಿರುವುದು ಸದ್ಯಕ್ಕೆ ಸಮಾಧಾನಕರ ವಿಷಯವಾಗಿದೆ. ಈ ಲಸಿಕೆಯಿಂದ ಸೋಂಕನ್ನು ಕೊನೆಗಾಣಿಸುವ ನಿರೀಕ್ಷೆ ಎಲ್ಲೆಡೆಯಿದೆ. ಅಮೆರಿಕ, ಬ್ರಿಟನ್, ಅರಬ್ ದೇಶಗಳಲ್ಲಿ ಈಗಾಗಲೇ ಸಾಮೂಹಿಕ ಲಸಿಕಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಶ್ರೀಮಂತ ರಾಷ್ಟ್ರಗಳು ಈಗಾಗಲೇ ಲಸಿಕೆಗಳನ್ನು ಮೀಸಲಿರಿಸಿವೆ.

13 ಲಸಿಕಾ ಅಭಿವೃದ್ಧಿ ಸಂಸ್ಥೆಗಳಿಗೆ ಬೇಡಿಕೆ
ವಿಶ್ವದ ಜನಸಂಖ್ಯೆಯ 14% ರಷ್ಟು ಇರುವ ಶ್ರೀಮಂತ ರಾಷ್ಟ್ರಗಳು ಮುಂದಿನ ವರ್ಷದಲ್ಲಿ ಅಭಿವೃದ್ಧಿಯಾಗುತ್ತಿರುವ ಲಸಿಕೆಗಳಲ್ಲಿ ಅರ್ಧದಷ್ಟು ಭಾಗಕ್ಕೆ ಈಗಾಗಲೇ ಬೇಡಿಕೆ ಮುಂದಿಟ್ಟಿವೆ. ಸುಮಾರು 13 ಲಸಿಕಾ ಅಭಿವೃದ್ಧಿ ಸಂಸ್ಥೆಗಳಿಗೆ ಈಗಾಗಲೇ ಬಹು ಮಟ್ಟದ ಬೇಡಿಕೆ ಬಂದಿರುವುದಾಗಿ ಜಾನ್ ಹಾಪ್ ಕಿನ್ಸ್ ಬ್ಲೂಂಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಅಧ್ಯಯನ ವರದಿ ತಿಳಿಸಿದೆ.

ಬಡ ರಾಷ್ಟ್ರಗಳಿಗೆ ಸಮಸ್ಯೆಯಾಗಲಿದೆಯೇ?
ಶ್ರೀಮಂತ ರಾಷ್ಟ್ರಗಳು ಲಸಿಕೆಯನ್ನು ಮೀಸಲಿರಿಸಲು ಹೀಗೆ ಮುನ್ನುಗ್ಗುತ್ತಿರುವುದು ಬಡ ರಾಷ್ಟ್ರಗಳಿಗೆ ಸಮಸ್ಯೆಯಾಗಲಿದೆಯೇ ಎಂಬ ಆತಂಕ ವ್ಯಕ್ತವಾಗಿದೆ. ಜನಸಂಖ್ಯೆಯ ಬೇಡಿಕೆಗೆ ಅಗತ್ಯವಾಗಿ ಎಷ್ಟೇ ಪರಿಣಾಮಕಾರಿಯಾಗಿ ಲಸಿಕೆ ಬೇಡಿಕೆ ಪೂರೈಸಲು ಶ್ರಮ ಪಡುತ್ತಿದ್ದರೂ, ವಿಶ್ವದ ಜನಸಂಖ್ಯೆಯ ಐದರಲ್ಲಿ ಒಂದು ಭಾಗಕ್ಕೆ 2022ರವರೆಗೂ ಲಸಿಕೆ ಸಿಗುವುದು ಅನುಮಾನ ಎಂದು ವರದಿ ತಿಳಿಸಿದೆ. 2021 ನವೆಂಬರ್ ವರೆಗೂ 7.8 ಬಿಲಿಯನ್ ಡೋಸ್ ಗಳನ್ನು ಮೀಸಲು ಇರಿಸಿರುವುದಾಗಿ ತಿಳಿದುಬಂದಿದೆ. ಬಿಎಂಜಿ ಮೆಡಿಕಲ್ ಜರ್ನಲ್ ನಲ್ಲಿ ಈ ಸಂಶೋಧನಾ ವರದಿಯನ್ನು ಪ್ರಕಟಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಅಡಿಯಲ್ಲಿ ಒಟ್ಟು ಖರೀದಿ ವ್ಯವಸ್ಥೆ
ಸದ್ಯಕ್ಕೆ ಇರುವ ಪ್ರಮುಖ ಲಸಿಕಾ ಅಭಿವೃದ್ಧಿ ಉತ್ಪಾದಕರಲ್ಲಿ 40%ರಷ್ಟು ಸಂಸ್ಥೆಗಳು ಕಡಿಮೆ ಹಾಗೂ ಮಧ್ಯಮ ಆದಾಯ ದೇಶಗಳಿಗೆ ಲಸಿಕೆ ಪೂರೈಸುವ ಆಲೋಚನೆಯಲ್ಲಿವೆ. ಆದರೆ ಶ್ರೀಮಂತ ರಾಷ್ಟ್ರಗಳು ತಾವು ಖರೀದಿಸಿದ್ದನ್ನು ಹೇಗೆ ಹಂಚಿಕೊಳ್ಳುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಶ್ರೀಮಂತಿಕೆ ಹೊರತಾಗಿ ಎಲ್ಲರಿಗೂ ಲಸಿಕೆ ದೊರಕಿಸಲು ವಿಶ್ವ ಆರೋಗ್ಯ ಸಂಸ್ಥೆ ಅಡಿಯಲ್ಲಿ ಒಟ್ಟು ಖರೀದಿ ವ್ಯವಸ್ಥೆ (ಪೂಲ್ ಪರ್ಚೇಸ್ ಮೆಕಾನಿಸಂ) ಯನ್ನು ಮಾಡಲಾಗಿದ್ದು, ಇದರ ಯಶಸ್ಸನ್ನು ಕಾದುನೋಡಬೇಕಿದೆ.

ಲಸಿಕೆ ಶೇಖರಣೆಯೂ ಸವಾಲು
ಹಲವು ದೇಶಗಳಲ್ಲಿ ಕೊರೊನಾ ಲಸಿಕೆ ಶೇಖರಣೆಗೆ ಸೂಕ್ತ ಜಾಗದ ಕೊರತೆಯೂ ತೊಂದರೆಯಾಗಬಹುದು ಎಂದು ಸಂಶೋಧನೆಯ ಜೇಸನ್ ಶೆವಾರ್ಟ್ ಎಚ್ಚರಿಸಿದ್ದಾರೆ. ಕೊರೊನಾ ಲಸಿಕೆ ಅಭಿವೃದ್ಧಿ ವೈದ್ಯಕೀಯ ಕ್ಷೇತ್ರಕ್ಕೆ ಎಷ್ಟು ಸವಾಲೆನಿಸಿತ್ತೋ, ಅದರ ವಿತರಣಾ ಕಾರ್ಯವೂ ಸವಾಲಾಗಲಿದೆ ಎಂದು ಹೇಳಿದ್ದಾರೆ.












Click it and Unblock the Notifications