ಮುಕ್ವೇಜ್ ಆಸ್ಪತ್ರೆಗೆ ಬರುತ್ತಿದ್ದವರ ಮೈ ಮೇಲೆ ಬಟ್ಟೆಯೇ ಇರ್ತಿರಲಿಲ್ಲ
ಈ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿರುವ ಇಬ್ಬರು ವ್ಯಕ್ತಿಗಳು ಮನುಕುಲದ ವಿರುದ್ಧದ ಮಹಾನ್ 'ಯುದ್ಧ'ಗಳನ್ನೇ ಎದುರಿಸಿದವರು. ಯಾಜಿದಿ ಸಮುದಾಯದ ನೋವಿಗೆ ಕೊರಳಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಮಾಡಿದ ನಾದಿಯಾ ಮುರಾದ್ ಭಯಂಕರವಾದ ಹೋರಾಟದ ಹಾದಿಯಲ್ಲಿ ನಡೆದುಬಂದವರು.
ಇನ್ನು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಡೆನಿಸ್ ಮುಕ್ವೇಜ್ ಅವರದು ಅದೆಷ್ಟೋ ನಾದಿಯಾ ಮುರಾದ್ ರಂಥ ಹೆಣ್ಣುಮಕ್ಕಳ ಕಣ್ಣೀರೊರೆಸಿದ ಅಮ್ಮನ ಕೈ. ಇಬ್ಬರೂ ಯುದ್ಧಗಳ ವಿರುದ್ಧ ಯುದ್ಧ ಸಾರಿದವರು. ಯುದ್ಧದಲ್ಲಿ ಶಸ್ತ್ರದಂತೆ ಬಳಕೆ ಆಗುವ ಲೈಂಗಿಕ ಹಿಂಸೆಯನ್ನು ಪ್ರಬಲವಾಗಿ ವಿರೋಧಿಸಿದವರು.
ಯುದ್ಧ ಅಪರಾಧಗಳು ಎಷ್ಟು ಕ್ರೂರವಾಗಿರುತ್ತವೆ ಎಂಬುದನ್ನು ಇವರಿಬ್ಬರ ಮಾತುಗಳಲ್ಲಿ ಕೇಳಿದರೆ, ನೊಬೆಲ್ ಶಾಂತಿ ಪುರಸ್ಕಾರ ತೂಕದ ಬಟ್ಟು ಹೇಗೆ ತೂಗಿದೆ ಅನ್ನೋದು ಸ್ಫುಟವಾಗುತ್ತದೆ. ಇರಲಿ, ಈ ಲೇಖನದಲ್ಲಿ ಡೆನಿಸ್ ಮುಕ್ವೇಜ್ ಬಗ್ಗೆ ಒಂದಿಷ್ಟು ತಿಳಿಸುವ ಹಾಗೂ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗುವುದು.

ಐವತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಚಿಕಿತ್ಸೆ
ಯುದ್ಧಪೀಡಿತ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಲೈಂಗಿಕ ಹಿಂಸಾಚಾರಗಳೂ ವಿಪರೀತ. ಅಂಥ ಹಿಂಸಾಚಾರಗಳಲ್ಲಿ ಬಲಿಪಶುಗಳಾದ ಸಂತ್ರಸ್ತರ ಸಂತೈಕೆಯಲ್ಲಿ ದಶಕಗಳ ಕಾಲ ತಮ್ಮನ್ನು ತೊಡಗಿಸಿಕೊಂಡ ವ್ಯಕ್ತಿ ಡೆನಿಸ್ ಮುಕ್ವೇಜ್. ತುಂಬ ದೀರ್ಘ ಕಾಲದಿಂದ ಕಾಂಗೋದಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಒಂದು ಅಂದಾಜಿನ ಅರವತ್ತು ಲಕ್ಷ ಮಂದಿ ಮೃತಪಟ್ಟಿದ್ದಾರೆ. 1999ರಲ್ಲಿ ಬುಕಾವುನಲ್ಲಿರುವ ಪಂಜಿ ಆಸ್ಪತ್ರೆಯಲ್ಲಿ ಮುಕ್ವೇಜ್ ಹಾಗೂ ಅವರ ತಂಡ ಐವತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಚಿಕಿತ್ಸೆ ನೀಡಿತು. ಇವರೆಲ್ಲರೂ ಲೈಂಗಿಕ ಹಿಂಸಾಚಾರದ ಸಂತ್ರಸ್ತೆಯರಾಗಿದ್ದರು.

ವಿಶ್ವದ ಅತ್ಯಾಚಾರಗಳ ರಾಜಧಾನಿ ಎಂಬ ಕುಖ್ಯಾತಿ
ಯುದ್ಧಪೀಡಿತ ಕಾಂಗೋದಲ್ಲಿ ಲೈಂಗಿಕ ಹಿಂಸಾಚಾರ ವಿಪರೀತ ಎಂಬ ಮಟ್ಟ ತಲುಪಿತ್ತು. ಅದು ಯಾವ ಪರಿ ಅಂದರೆ 'ವಿಶ್ವದ ಅತ್ಯಾಚಾರಗಳ ರಾಜಧಾನಿ' ಕಾಂಗೋ ಎಂದೇ ಕುಖ್ಯಾತಿ ಪಡೆದಿತ್ತು. 2011ರಲ್ಲಿ ಅಮೆರಿಕನ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ ಬಿಡುಗಡೆ ಮಾಡಿದ ವರದಿ ಪ್ರಕಾರ, ಕಾಂಗೋ ದೇಶದಲ್ಲಿ ಪ್ರತಿ ಒಂದು ಗಂಟೆಗೆ 48 ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತಿತ್ತು. ಅಂಥ ಭೀಕರ ಪರಿಸ್ಥಿತಿಯ ಕಾಂಗೋ ದೇಶದಲ್ಲಿ ಲೈಂಗಿಕ ದೌರ್ಜನ್ಯ ನಡೆದ ಮಹಿಳೆಯರಿಗೆ ಚಿಕಿತ್ಸೆ ಮಾಡುವ ಪ್ರಸೂತಿ ತಜ್ಞ ಡೆನಿಸ್ ಮುಕ್ವೇಜ್ ಸೇವೆಗೆ ನೊಬೆಲ್ ಶಾಂತಿ ಪುರಸ್ಕಾರವೇ ಹುಡುಕಿಕೊಂಡು ಹೋಗಿದೆ.

ಮಗಳನ್ನು ಒತ್ತೆಯಾಳಾಗಿ ಇರಿಸಿಕೊಂಡು, ಕೊಲ್ಲುವುದಕ್ಕಾಗಿ ಕಾದಿದ್ದರು
ಯುದ್ಧದಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುವುದನ್ನು ಯುದ್ಧ ತಂತ್ರದ ಭಾಗವಾಗಿ ಮಾಡಿಕೊಂಡಿರುವುದಕ್ಕೆ ಜಾಗತಿಕ ಮಟ್ಟದಲ್ಲಿ ವಿರೋಧಿಸುತ್ತಿರುವವರು ಮುಕ್ವೇಜ್. ಮಹಿಳೆಯರ ವಿರುದ್ಧ ನಡೆಯುವ ಲೈಂಗಿಕ ದೌರ್ಜನ್ಯವನ್ನು ತಡೆಯುವಲ್ಲಿ ವಿಫಲವಾದ ಸರಕಾರದ ವಿರುದ್ಧವೂ ಕಿಡಿ ಕಾರುತ್ತಲೇ ಇರುವ ವ್ಯಕ್ತಿ ಅವರು. 2012ರಲ್ಲಿ ಮುಕ್ವೇಜ್ ಮನೆ ಮೇಲೆ ಕೂಡ ಶಸ್ತ್ರಸಜ್ಜಿತ ವ್ಯಕ್ತಿಗಳು ದಾಳಿ ನಡೆಸಿದ್ದರು. ಆ ವೇಳೆಯಲ್ಲಿ ಮನೆಯಲ್ಲಿ ಇಲ್ಲದ ಕಾರಣ, ಅವರ ಮಗಳನ್ನು ಒತ್ತೆಯಾಳಾಗಿ ಇರಿಸಿಕೊಂಡು, ಕೊಲ್ಲುವುದಕ್ಕಾಗಿ ಮುಕ್ವೇಜ್ ಬರುವುದನ್ನೇ ಕಾದಿದ್ದರು. ವಾಪಸ್ ಬಂದ ಮೇಲೆ ಮುಕ್ವೇಜ್ ನನ್ನು ಕೊಲ್ಲಲು ಬಂದಾಗ ಅಂಗರಕ್ಷಕ ಅಡ್ಡ ಬಂದು, ತನ್ನ ಪ್ರಾಣ ಕೊಟ್ಟು, ಆ ಪ್ರಯತ್ನವನ್ನು ತಡೆದ. ಆ ನಂತರ ಅವರು ಯುರೋಪ್ ಗೆ ಹೋದರು.

ವಾಪಸು ಬರುವ ವಿಮಾನದ ಟಿಕೆಟ್ ಮಾಡಿಸಿದ್ದರು
ಆ ನಂತರ ಮುಕ್ವೇಜ್ ಜನವರಿ 14, 2013ರಂದು ಬುಕಾವುಗೆ ವಾಪಸ್ ಬಂದ ದಿನ ಯಾರೂ ಮರೆಯಲು ಸಾಧ್ಯವಿಲ್ಲ. ಮುಕ್ವೇಜ್ ರಿಂದ ಚಿಕಿತ್ಸೆ ಪಡೆದಿದ್ದವರು ಪೈನಾಪಲ್, ಈರುಳ್ಳಿಯಂಥದ್ದು ಮಾರಿ, ದುಡಿದ ದುಡ್ಡಿನಲ್ಲಿ ವಾಪಸ್ ಬರಲು ಟಿಕೆಟ್ ಮಾಡಿಸಿದ್ದರು. ಕವುಮು ವಿಮಾನ ನಿಲ್ದಾಣದಿಂದ ಆ ನಗರದ ತನಕ ಇಪ್ಪತ್ತು ಮೈಲು ಉದ್ದಕ್ಕೂ ಹೃದಯಸ್ಪರ್ಶಿ ಸ್ವಾಗತವನ್ನು ಕೋರಿದರು. ಮುಕ್ವೇಜ್ ರನ್ನು ಹೆಣ್ಣುಮಕ್ಕಳು ದೇವರಂತೆ ಕಾಣಲು ಕಾರಣಗಳಿವೆ. ಅವರು ಸ್ಥಾಪಿಸಿದ ಪಂಜಿ ಫೌಂಡೇಷನ್ ಎಂಬತ್ತೈದು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಚಿಕಿತ್ಸೆ ನೀಡಿದೆ. ಆ ಪೈಕಿ ಶೇಕಡಾ ಅರವತ್ತರಷ್ಟು ಮಹಿಳೆಯರು ಲೈಂಗಿಕ ಹಿಂಸಾಚಾರದಲ್ಲಿ ನಲುಗಿ, ಗರ್ಭಕೋಶಕ್ಕೆ ಹಾನಿ ಅನುಭವಿಸಿದವರು. ಬಹಳ ಮಹಿಳೆಯರ ಮೈ ಮೇಲೆ ಬಟ್ಟೆ ಸಹ ಇರದೆ, ಬೆತ್ತಲೆ ಸ್ಥಿತಿಯಲ್ಲೇ ಬರುತ್ತಿದ್ದರು ಎಂದು ತಮ್ಮ ಆಸ್ಪತ್ರೆಗೆ ಬರುತ್ತಿದ್ದ ಮಹಿಳಾ ರೋಗಿಗಳ ಸ್ಥಿತಿ ಹೇಗಿತ್ತು ಅನ್ನೋದನ್ನು ಮುಕ್ವೇಜ್ ಹೇಳಿಕೊಂಡಿದ್ದಾರೆ.

ಕಾಂಗೋ ದೇಶದಲ್ಲಿ ಆರೋಗ್ಯ ವ್ಯವಸ್ಥೆ ಅಸಮರ್ಪಕತೆ
ತನ್ನ ತಂದೆಯ ಕಷ್ಟ ಇನ್ಯಾರೂ ಅನುಭವಿಸಬಾರದು ಎಂದುಕೊಂಡು ವೈದ್ಯರಾಗಬೇಕು ಅಂದುಕೊಂಡವರು ಮುಕ್ವೇಜ್. ಮಹಿಳೆಯೊಬ್ಬಳ ಹೆರಿಗೆ ಸಂದರ್ಭದಲ್ಲಿ ಅನುಭವಿಸಿದ ನೋವು, ಕಾಂಗೋ ದೇಶದಲ್ಲಿ ಆರೋಗ್ಯ ವ್ಯವಸ್ಥೆ ಅಸಮರ್ಪಕತೆಯನ್ನು ಕಂಡು ತಮ್ಮ ಉದ್ದೇಶವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ. ಮುಕ್ವೇಜ್ ತಮ್ಮ ವೈದ್ಯ ವೃತ್ತಿ ಆರಂಭಿಸಿದ ನಂತರ ಆ ದೇಶದ ಹೆಣ್ಣುಮಕ್ಕಳು ಹೆರಿಗೆ ಸಂದರ್ಭದಲ್ಲಿ ಅನುಭವಿಸುವ ಕಷ್ಟ, ಹೆರಿಗೆ ನಂತರದಲ್ಲಿ ಜನನಾಂಗದ ಸಮಸ್ಯೆ ಇವುಗಳನ್ನೆಲ್ಲ ಕಣ್ಣಾರೆ ಕಂಡ ನಂತರ ಫ್ರಾನ್ಸ್ ಗೆ ತೆರಳಿ ಗೈನಕಾಲಜಿಯನ್ನು ವ್ಯಾಸಂಗ ಮಾಡಿಕೊಂಡು ಬಂದರು. ಅತ್ಯಾಚಾರಕ್ಕೆ ಗುರಿಯಾದ ಹೆಣ್ಣುಮಕ್ಕಳ ಗಾಯಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಜಗತ್ತಿನ ಮುಂಚೂಣಿಯಲ್ಲಿರುವ ತಜ್ಞ ವೈದ್ಯ ಮುಕ್ವೇಜ್ ಎಂದು ದ ಗ್ಲೋಬ್ ಅಂಡ್ ಮೇಲ್ ಹೇಳಿದೆ. ಅರವತ್ಮೂರು ವರ್ಷದ ಮುಕ್ವೇಜ್ ಬಗ್ಗೆ ಇನ್ನೇನು ಬರೆದರೂ ಹೇಳಿದರೂ ಕಡಿಮೆಯೇ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications